ಕರ್ನಾಟಕಕ್ಕೆ ಎರಡು ತಿಂಗಳ ಅವಧಿಯಲ್ಲಿ ಎರಡು ಬಾರಿ ನೆರೆ ಅಪ್ಪಳಿಸಿದೆ. ಅರ್ಧ ಕರ್ನಾಟಕ ಪ್ರವಾಹದಿಂದಾಗಿ ತತ್ತರಿಸಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮರ್ಪಕ ಪರಿಹಾರ ಕೊಟ್ಟಿಲ್ಲ ಎಂಬ ದೂರು ಕೇಳಿಬಂದಿದೆ. ಈ ಕುರಿತು ರಾಜ್ಯ ಸರ್ಕಾರದ ವಿರುದ್ಧ ಸಾಕಷ್ಟು ಟೀಕೆಗಳು ಎದುರಾಗಿವೆ.
ಇಂತಹ ಸಂದರ್ಭದಲ್ಲಿ ನೆರೆ ಪರಿಹಾರ ಕೊಡಲಾಗದ ಬಿಜೆಪಿ ಜನರನ್ನು ಡೈವರ್ಟ್ ಮಾಡಲು ಟಿಪ್ಪು ವಿಷಯ ಮುನ್ನಲೆಗೆ ತಂದಿದೆಯೇ? ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ನೆರೆ ಪರಿಹಾರ ಕೊಡದವರು ಟಿಪ್ಪು ಬಗ್ಗೆ ಮಾತಾಡುತ್ತಾರೆ ಎಂದು ನಾಗರಾಜೇಗೌಡ ನಾಗೇಗೌಡರವರು ಅಭಿಪ್ರಾಯಪಟ್ಟಿದ್ದಾರೆ.
“ಸಾವರ್ಕರ್ ಮನೆಗೆ ಟಿಪ್ಪು ಮುನ್ನಲೆಗೆ. ಇದು ಕಣ್ರೋ ರಾಜಕೀಯ ಅಂದ್ರೆ ನಾವು ಕಲಿಯೋದು ಇನ್ನೂ ಬಾಳ ಇದೆ.” ಎಂದು ರಾಮಚಂದ್ರ ಕಲ್ಲೇರ್‌ರವರು ಸಿಡಿಮಿಡಿಗೊಂಡಿದ್ದಾರೆ.
ನೆರೆ ಸಂತ್ರಸ್ತರಿಗೆ ಪರಿಹಾರ ಹಾಗೂ ಅನರ್ಹ ಶಾಸಕರ ಸ್ಥಾನಕ್ಕೆ ನಡೆಯುವ ಉಪಚುನಾವಣೆ ಗೆಲ್ಲಲು ಟಿಪ್ಪು ಸುಲ್ತಾನ್ ಬರಬೇಕಾಯ್ತು ನೊಡಿ ಎಂದು ಜುಬೈರ್ ಎಂಬುವವರು ವ್ಯಂಗ್ಯವಾಡಿದ್ದಾರೆ.
ನವೆಂಬರ್ 10 ಟಿಪ್ಪು ಜನ್ಮದಿನ ಹತ್ತಿರ ಬರುತ್ತಿದ್ದಂತೆಯೇ ಬಿಜೆಪಿ ಎಚ್ಚೆತ್ತುಕೊಂಡಿದೆ. ಒಂದು ಕಾಲದಲ್ಲಿ ಯಡಿಯೂರಪ್ಪ, ಜಗಧೀಶ್ ಶೆಟ್ಟರ್, ಆರ್ ಆಶೋಕ್ ಸೇರಿದಂತೆ ಬಿಜೆಪಿ ಘಟಾನುಘಟಿ ನಾಯಕರು ಟಿಪ್ಪು ಜಯಂತಿ ಮಾಡಿ, ಟಿಪ್ಪು ಥರ ವೇಷ ಹಾಕಿ ಖಡ್ಗ ಹಿಡಿದು ಪೋಸು ಕೊಟ್ಟಿದ್ದವರು ಇಂದು ಟಿಪ್ಪು ಹೆಸರೇಳಿದರೆ ಮುನಿಸಿಕೊಳ್ಳುತ್ತಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ಶಾಲಾ ಪಠ್ಯಗಳಲ್ಲಿ ಟಿಪ್ಪು ಪಠ್ಯಗಳನ್ನು ಕೈಬಿಡುತ್ತೇವೆ. ಒಂದು ಸಾಲು ಸಹ ಟಿಪ್ಪು ಬಗ್ಗೆ ಇರುವುದಿಲ್ಲ. ಟಿಪ್ಪು ಇತಿಹಾಸ ತೆಗೆದುಹಾಕುವುದು 101% ಖಾತ್ರಿ ಎಂದು ಘೋಷಿಸಿದ್ದಾರೆ.
ಈಗಾಗಲೇ ಈ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಆದರೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಮಾತ್ರ ಮೊದಲು ನೆರೆ ಪರಿಹಾರ ಕೊಡಿ ನಂತರ ಸಾವರ್ಕರ್, ಟಿಪ್ಪು ವಿಚಾರ ಮಾತಾಡೋಣ ಎಂಬ ಜಾಣತನ ಪ್ರದರ್ಶಿಸಿದ್ದಾರೆ.
ಮತ್ತಷ್ಟು ಜನ ಬಿಜೆಪಿ ತೋಡಿರುವ ಟ್ರಾಪ್‌ಗೆ ಬೀಳಬೇಡಿ. ಟಿಪ್ಪು ವಿಚಾರ ಮುನ್ನಲೆಗೆ ತಂದು ಅಸಲಿ ಸಮಸ್ಯೆಗಳನ್ನು ಮರೆಮಾಚುವುದರಲ್ಲಿ ಬಿಜೆಪಿಗರು ನಿಸ್ಸೀಮರು ಎಂದು ಬುದ್ದಿವಾದ ಹೇಳುತ್ತಿದ್ದಾರೆ.
ಆದರೂ ಸಾಕಷ್ಟು ಜನ ಟಿಪ್ಪುವಿನ ಸಾಧನೆಗಳು, ಟಿಪ್ಪುವಿನ ಇತಿಹಾಸ, ಟಿಪ್ಪುವಿನ ಕೊಡುಗೆಗಳ ಬಗ್ಗೆ, ಬಿಜೆಪಿಯವರ ಇಬ್ಬಗೆ ನೀತಿಯ ಬಗ್ಗೆ ಬರೆಯತೊಡಗಿದ್ದಾರೆ.
ಇನ್ನು ನವೆಂಬರ್ 17ರಂದು ಬಾಬ್ರೀ ಮಸೀದಿ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಹೊರಬರಲಿದೆ. ಆಗಲೂ ಕೋಮುಗಳ ನಡುವೆ ದ್ವೇಷ ಬಿತ್ತುವ ಕೆಲಸ ಆರಂಭವಾಗಲಿದೆ ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಬಹುತೇಕ ಪ್ರಜ್ಞಾವಂತರು ಮನವಿ ಮಾಡಿದ್ದಾರೆ.


