ಅಸ್ಸಾಂನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ 24 ಜನರು ಸಾವನ್ನಪ್ಪಿದ್ದಾರೆ. ರಾಜ್ಯದ ಹಲವಾರು ಭಾಗಗಳಲ್ಲಿ ಸೋಮವಾರ ಮಳೆ ಮುಂದುವರಿದ ಕಾರಣ ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳ ಸಂಖ್ಯೆ ಒಟ್ಟು 33 ರಲ್ಲಿ 25 ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಋತುವಿನಲ್ಲಿ ಪ್ರವಾಹದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 24 ಕ್ಕೆ ಏರಿದ್ದು, ಸೋಮವಾರದ ಪ್ರವಾಹದಿಂದಾಗಿ ಮತ್ತೆ ನಾಲ್ವರು ಅಸುನೀಗಿದ್ದಾರೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ಪ್ರಕಾರ, ಬರಾಕ್ ಕಣಿವೆ ಹೊರತುಪಡಿಸಿ ರಾಜ್ಯದ ಹೆಚ್ಚಿನ ಭಾಗಗಳು 2,402 ಗ್ರಾಮಗಳು ಪ್ರವಾಹದಿಂದ ಹಾನಿಗೊಳಗಾಗಿವೆ. ಪ್ರವಾಹದಿಂದಾಗಿ ರಾಜ್ಯದಲ್ಲಿ 83,168 ಹೆಕ್ಟೇರ್ ಬೆಳೆ ಪ್ರದೇಶ ಮುಳುಗಡೆಯಾಗಿದೆ ಎನ್ನಲಾಗಿದೆ.
ಪ್ರವಾಹವು ರಾಜ್ಯದ ಎರಡು ರಾಷ್ಟ್ರೀಯ ಉದ್ಯಾನವನಗಳ ಮೇಲೂ ಪರಿಣಾಮ ಬೀರಿದೆ. ಕಾಜಿರಂಗದಲ್ಲಿ ಅರಣ್ಯ ಸಿಬ್ಬಂದಿ ಬಳಸುವ ಒಟ್ಟು 203 ಶಿಬಿರಗಳಲ್ಲಿ 146 ಬಾಧಿತವಾಗಿದೆ. ಒರಾಂಗ್‌ನಲ್ಲಿ ಒಟ್ಟು 40 ಶಿಬಿರಗಳಲ್ಲಿ 22 ಪ್ರವಾಹಕ್ಕೆ ಒಳಗಾಗಿವೆ ಎಂದು ಎಎಸ್ಡಿಎಂಎ ತಿಳಿಸಿದೆ.
ಪ್ರವಾಹದಿಂದಾಗಿ 12 ಸ್ಥಳಗಳಲ್ಲಿನ ಒಡ್ಡುಗಳಿಗೆ ಹಾನಿಯಾಗಿದೆ ಮತ್ತು ಎಂಟು ಪೀಡಿತ ಜಿಲ್ಲೆಗಳ 86 ರಸ್ತೆಗಳ ವಿಭಾಗಗಳು ಹಾನಿಗೀಡಾಗಿವೆ, ಕೊಚ್ಚಿ ಹೋಗಿವೆ ಅಥವಾ ಪ್ರವಾಹದಿಂದಾಗಿ ಮುಳುಗಿವೆ ಎನ್ನಲಾಗಿದೆ.
ಬಿಹಾರ, ಪೂರ್ವ ಉತ್ತರ ಪ್ರದೇಶ, ಪಶ್ಚಿಮ ಬಂಗಾಳದ ಹಲವು ಕಡೆ ಹಾಗೂ ಸಿಕ್ಕಿಂನಲ್ಲಿ ಮುಂದಿನ 5 ದಿನಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅಸ್ಸಾಂ ರಾಜ್ಯದ 25 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ಬ್ರಹ್ಮಪುತ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಈಗಾಗಲೇ ಇಲ್ಲಿನ 13.16 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಒಟ್ಟಾರೆ 273 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಪ್ರವಾಹ ಸಂತ್ರಸ್ತರ ಬಗ್ಗೆ ಒಂದೂ ಮಾತಾಡದೇ ಮೋದಿ ಬರೀ ಸುಳ್ಳು ಹೇಳಿದ್ದಾರೆ: ಸಿದ್ದರಾಮಯ್ಯ ವಾಗ್ದಾಳಿ


