ವಿದ್ಯುನ್ಮಾನ ಮಾಧ್ಯಮಗಳಿಗೆ ಮಾನದಂಡಗಳನ್ನು ನಿಗದಿಪಡಿಸುವ ಮೊದಲು, ಡಿಜಿಟಲ್ ಮಾಧ್ಯಮಗಳ ಕಡೆ ಗಮನಹರಿಸಬೇಕು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೇಳಿದೆ. ಏಕೆಂದರೆ ಡಿಜಿಟಲ್ ಮಾಧ್ಯಮವು ಹೆಚ್ಚು ಪರಿಣಾಮ ಬಿರುತ್ತಿದೆ ಎಂದು ಕೇಂದ್ರ ತನ್ನ ಅಫಿಡವಿಟ್‌ನಲ್ಲಿ ಹೇಳಿದೆ.
ವಿದ್ಯುನ್ಮಾನ ಮಾಧ್ಯಮಗಳಿಗೆ ಮಾನದಂಡಗಳನ್ನು ನಿಗದಿಪಡಿಸಲು ಇಂದು ಸುಪ್ರೀಂನಲ್ಲಿ ವಿಚಾರಣೆ ನಡೆಯಲಿದೆ. ಇದಕ್ಕೂ ಮೊದಲೇ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿ “ವಾಟ್ಸಾಪ್ ಮತ್ತು ಫೇಸ್‌ಬುಕ್‌ನಂತಹ ಅಪ್ಲಿಕೇಶನ್‌ಗಳಿಂದ ವೈರಲ್ ಆಗುವುದರಿಂದ, ಡಿಜಿಟಲ್ ಮಾಧ್ಯಮವು ಜನರನ್ನು ವೇಗವಾಗಿ ತಲುಪುವ ಸಾಧ್ಯತೆಯಿದೆ. ಹಾಗಾಗಿ ಡಿಜಿಟಲ್ ಮಾಧ್ಯಮದ ವ್ಯಾಪ್ತಿ, ಗಂಭೀರ ಪರಿಣಾಮ ಬೀರುವ ದೃಷ್ಟಿಯಿಂದ, ವಿದ್ಯುನ್ಮಾನ ಮಾಧ್ಯಮಗಳಿಗಿಂತ ಮೊದಲು ಡಿಜಿಟಲ್ ಮಾಧ್ಯಮದ ಕಡೆ ಗಮನಹರಿಸಿ” ಎಂದು ಹೇಳಿದೆ.
ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳಿಗೆ ಸಂಬಂಧಿಸಿದಂತೆ, ವಾಕ್‌ಸ್ವಾತಂತ್ರ್ಯ ಮತ್ತು ಪತ್ರಿಕೋದ್ಯಮವನ್ನು ಸಮತೋಲನಗೊಳಿಸುವ ಸಲುವಾಗಿ ಈಗಾಗಲೇ ನಿಗದಿತ ಚೌಕಟ್ಟು, ಶಾಸನಬದ್ದ ನಿಬಂಧನೆಗಳ ಅಡಿಯಲ್ಲಿ ನಿಯಂತ್ರಿಸಲಾಗಿದೆ” ಎಂದು ಕೇಂದ್ರ ಹೇಳಿದೆ.
ಮಾರ್ಗಸೂಚಿಗಳನ್ನು ನಿರ್ಧರಿಸುವುದಕ್ಕೆ ಸಹಾಯ ಮಾಡುವ ಅಮಿಕಸ್ ಕ್ಯೂರಿ (Amicus Curiae – a friend of the court)ಯನ್ನು ಅಥವಾ ಸಮಿತಿಯೊಂದನ್ನು ರಚಿಸುವಂತೆ ನ್ಯಾಯಾಲಯವನ್ನು ಕೇಂದ್ರ ಸರ್ಕಾರ ಒತ್ತಾಯಿಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನು ಓದಿ: ಸುದರ್ಶನ ಟಿವಿಯ ವಿವಾದಾತ್ಮಕ ಕಾರ್ಯಕ್ರಮಕ್ಕೆ ಅನುಮತಿ ನೀಡಿದ ಕೇಂದ್ರ ಸರ್ಕಾರ
ಖಾಸಗಿ ಚಾನೆಲ್, ಸುದರ್ಶನ್ ಟಿ.ವಿ ವಿರುದ್ಧದ ಪ್ರಕರಣಕ್ಕೆ ಕೇಂದ್ರದ ಈ ಅಫಿಡವಿಟ್ ಸಂಬಂಧಿಸಿದೆ. “ಮುಸ್ಲಿಮರು ಸರ್ಕಾರಿ ಸೇವೆಗಳಿಗೆ ನುಸುಳುತ್ತಿದ್ದಾರೆ” (ಯುಪಿಎಸ್‌ಸಿ ಜಿಹಾದ್) ಎಂದು ಸುದರ್ಶನ್ ಟಿ.ವಿ ತನ್ನ ಕಾರ್ಯಕ್ರಮದ ಪ್ರೋಮೋವೊಂದನ್ನು ಬಿಡುಗಡೆ ಮಾಡಿ ವಿವಾದಕ್ಕೆ ಹುಟ್ಟುಹಾಕಿತ್ತು.
“ಒಂದು ಸಮುದಾಯವನ್ನು ಗುರಿಯಾಗಿಸಲು ಮತ್ತು ನಿರ್ದಿಷ್ಟ ರೀತಿಯಲ್ಲಿ ಬ್ರಾಂಡ್ ಮಾಡಲು ಸಾಧ್ಯವಿಲ್ಲ. ಒಂದು ಸಮುದಾಯವನ್ನು ಗುರಿಯಾಗಿಸಲು, ಪ್ರತಿಷ್ಠೆಯನ್ನು ಹಾಳುಮಾಡಲು, ವ್ಯಕ್ತಿತ್ವಕ್ಕೆ ಮಸಿಬಳಿಯುವಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮದ ಪಾಲು ದೊಡ್ಡದಾಗಿದೆ” ಎಂದು ಪ್ರಕರಣದ ವಾದಗಳ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಸುದರ್ಶನ್ ಟಿ.ವಿಗೆ ಮಂಗಳವಾರ ಹೇಳಿತ್ತು.
ಇದನ್ನು ಓದಿ: ಸುದರ್ಶನ್ ಟಿವಿಯ ’ಯುಪಿಎಸ್ಸಿ ಜಿಹಾದ್’ ಕಾರ್ಯಕ್ರಮ ಪ್ರಸಾರಕ್ಕೆ ತಡೆ ನೀಡಿದ ಸುಪ್ರೀಂ
ವಿಚಾರಣೆಯ ಸಂಧರ್ಭದಲ್ಲಿ ನ್ಯಾಯಾಧೀಶರೊಬ್ಬರು “ಎಲೆಕ್ಟ್ರಾನಿಕ್ ಮಾಧ್ಯಮದ ಸಮಸ್ಯೆ ಟಿಆರ್‌ಪಿಗಳದ್ದೇ ಆಗಿದೆ, ಇದು ಹೆಚ್ಚು ಹೆಚ್ಚು ಉದ್ರೇಕಗೊಳಿಸಿ ಜನರ ಪ್ರತಿಷ್ಠೆಯನ್ನು ಹಾಳು ಮಾಡುತ್ತದೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಮೂರು ನ್ಯಾಯಾಧೀಶರ ಪೀಠವು ಐದು ಗಣ್ಯ ನಾಗರಿಕರ ಸಮಿತಿಯು ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಮಾನದಂಡಗಳನ್ನು ತರಲು ಕರೆ ನೀಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಈಗಾಗಲೇ ನಿಯಮಗಳು ಜಾರಿಯಲ್ಲಿವೆ ಎಂದು ಹೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, “ನಿಜವಾಗಿಯೂ ಇದೆಯೆ? ಎಲ್ಲವೂ ಉತ್ಕೃಷ್ಟವಾಗಿ ನಡೆಯುತ್ತಿದ್ದರೆ ನಾವು ಇಂದು ಪ್ರತಿದಿನ ಟಿವಿಯಲ್ಲಿ ನೋಡುತ್ತಿರುವುದನ್ನು ನೋಡಬೇಕಾಗಿರಲಿಲ್ಲ” ಎಂದು ಚಾಟಿ ಬೀಸಿದ್ದರು.
ಯಾವುದೇ ಚಾನೆಲ್ ನಿಯಮವನ್ನು ಉಲ್ಲಂಘಿಸಿ, ವಿಚಾರಣೆಯಲ್ಲಿ ತಪ್ಪಿತಸ್ಥರೆಂದು ಸಾಬೀತಾದರೆ ಅದಕ್ಕೆ ₹ 1 ಲಕ್ಷ ದಂಡ ವಿಧಿಸಬೇಕು ಎಂದು ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಷನ್ ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ.
ಇದನ್ನು ಓದಿ: UPSC ಪಾಸಾದ ಜಾಮಿಯಾದ ಮುಸ್ಲಿಂ ವಿದ್ಯಾರ್ಥಿಗಳ ಅವಹೇಳನ: ಸುದರ್ಶನ್ ಚಾನೆಲ್ ನಿರೂಪಕನ ಮೇಲೆ ದೂರು ದಾಖಲು


