ಮಹಾರಾಷ್ಟ್ರದ ಹಿತಾಸಕ್ತಿಗಾಗಿ ತಮ್ಮ “ಸಣ್ಣ ಭಿನ್ನಾಭಿಪ್ರಾಯಗಳನ್ನು” ಬದಿಗಿಡಲು ಸಿದ್ಧರಿದ್ದೇವೆ ಎಂದು ದೂರವಾದ ಸೋದರಸಂಬಂಧಿಗಳಾದ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಶನಿವಾರ ಹೇಳಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಪಕ್ಷದ ನೇತೃತ್ವ ವಹಿಸಿದ್ದರೆ, ರಾಜ್ ಠಾಕ್ರೆ ಮಹಾರಾಷ್ಟ್ರ ನವನಿರ್ಮಾಣ ಸೇನೆ ಎಂಬ ಪಕ್ಷದ ನೇತೃತ್ವ ವಹಿಸಿದ್ದಾರೆ. ಮಹಾರಾಷ್ಟ್ರಕ್ಕಾಗಿ
2005 ರಲ್ಲಿ ಶಿವಸೇನೆಯ ಸಂಸ್ಥಾಪಕ ಬಾಳಾ ಠಾಕ್ರೆ ತಮ್ಮ ಪುತ್ರ ಉದ್ಧವ್ ಠಾಕ್ರೆ ಅವರನ್ನು ಉತ್ತರಾಧಿಕಾರಿಯಾಗಿ ಹೆಸರಿಸಿದ ನಂತರ ರಾಜ್ ಠಾಕ್ರೆ ಆಗಿನ ಅವಿಭಜಿತ ಶಿವಸೇನೆಯನ್ನು ತೊರೆದಿದ್ದರು. ಒಂದು ವರ್ಷದ ನಂತರ, ರಾಜ್ ಠಾಕ್ರೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯನ್ನು ಪ್ರಾರಂಭಿಸಿದ್ದರು.
ಶನಿವಾರ ಚಲನಚಿತ್ರ ನಿರ್ಮಾಪಕ ಮಹೇಶ್ ಮಂಜ್ರೇಕರ್ ಅವರೊಂದಿಗಿನ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡುತ್ತಾ, “ನನಗೆ, ಮಹಾರಾಷ್ಟ್ರದ ಹಿತಾಸಕ್ತಿ ದೊಡ್ಡದಾಗಿದ್ದು, ಉಳಿದೆಲ್ಲವೂ ಗೌಣವಾಗಿದೆ. ಅದಕ್ಕಾಗಿ ನಮ್ಮ ಸಣ್ಣ ವಿವಾದಗಳನ್ನು ನಾವು ಬದಿಗಿಡಬಹುದು.” ಎಂದು ಹೇಳಿದ್ದಾರೆ.
ಉದ್ಧವ್ ಠಾಕ್ರೆ ಅವರೊಂದಿಗೆ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದು ಅವರು ಹೇಳಿದ್ದಾರೆ. ಅದಾಗ್ಯೂ, ಶಿವಸೇನೆ (ಯುಬಿಟಿ) ಮುಖ್ಯಸ್ಥರಾದ ಉದ್ಧವ್ ಠಾಕ್ರೆ ತಮ್ಮೊಂದಿಗೆ ಕೆಲಸ ಮಾಡಲು ಸಿದ್ಧರಿದ್ದಾರೆಯೇ ಎಂಬುದು ಒಂದೇ ಪ್ರಶ್ನೆಯಾಗಿದೆ ಎಂದು ಹೇಳಿದ್ದಾರೆ.
“ಪ್ರಮುಖ ಸಮಸ್ಯೆಗಳು ಉದ್ಭವಿಸಿದಾಗ, ನಮ್ಮ ನಡುವಿನ ವಿವಾದಗಳು ಮತ್ತು ಜಗಳಗಳು ಚಿಕ್ಕದಾಗಿರುತ್ತವೆ. ಮಹಾರಾಷ್ಟ್ರ ಮತ್ತು ಮರಾಠಿ ಜನರ ವಿಚಾರದಲ್ಲಿ ನಮ್ಮ ನಡುವಿನ ಸಂಘರ್ಷಗಳು ಅಷ್ಟೆನೂ ದೊಡ್ಡ ವಿಚಾರವಲ್ಲ” ಎಂದು ಅವರು ಹೇಳಿದ್ದಾರೆ.
ಅವರ ಈ ಹೇಳಿಕೆಯ ನಂತರ ಉದ್ಧವ್ ಠಾಕ್ರೆ ಅವರು ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮಹಾರಾಷ್ಟ್ರದ ಹಿತದೃಷ್ಟಿಯಿಂದ ತಮ್ಮ ವಿವಾದಗಳನ್ನು ಬದಿಗಿಡಲು ಸಿದ್ಧರಿರುವುದಾಗಿ ಹೇಳಿದ್ದಾರೆ. “ಸಣ್ಣ ಜಗಳಗಳನ್ನು ಬದಿಗಿಟ್ಟು ಮರಾಠಿ ಸಮುದಾಯದ ಹಿತಾಸಕ್ತಿಗಾಗಿ ಒಟ್ಟಿಗೆ ಸೇರಲು ನಾನು ಸಿದ್ಧನಿದ್ದೇನೆ” ಎಂದು ಅವರು ಹೇಳಿದ್ದಾರೆ.
“ಮೊದಲು, ಮಹಾರಾಷ್ಟ್ರದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ವರ್ತಿಸುವವರನ್ನು ಮನೆಗೆ ಆಹ್ವಾನಿಸುವುದನ್ನು ಮತ್ತು ಅವರಿಗೆ ಊಟ ಬಡಿಸುವುದನ್ನು ನಿಲ್ಲಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಿ. ನಂತರ ರಾಜ್ಯದ ಕಲ್ಯಾಣದ ಬಗ್ಗೆ ಮಾತನಾಡಬೇಕು.” ಎಂದು ಅವರು ಹೇಳುದ್ದಾರೆ. ಅವರು ಈ ಹೇಳಿಕೆಗಳನ್ನು 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಯೊಂದಿಗೆ ರಾಜ್ ಠಾಕ್ರೆ ಅವರ ಮೈತ್ರಿಯನ್ನು ಉಲ್ಲೇಖಿಸಿ ಹೇಳಿದ್ದಾಗಿದೆ.
“ಲೋಕಸಭಾ ಚುನಾವಣೆಯ ಸಮಯದಲ್ಲಿ ಕೈಗಾರಿಕೆಗಳನ್ನು ಮಹಾರಾಷ್ಟ್ರದಿಂದ ಗುಜರಾತ್‌ಗೆ ಸ್ಥಳಾಂತರಿಸಲಾಗುತ್ತಿದೆ ಎಂದು ನಾನು ಹೇಳುತ್ತಿದ್ದೆ. ಆ ಸಮಯದಲ್ಲಿ ಈ ಬಗ್ಗೆ ವಿರೋಧಿಸುತ್ತಿದ್ದರೆ, ಇಂದು ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಇರುತ್ತಿರಲಿಲ್ಲ” ಎಂದು ಅವರು ಹೇಳಿದ್ದಾರೆ.
ಶನಿವಾರದ ಬೆಳವಣಿಗೆಯ ಕುರಿತು ಮಾತನಾಡಿದ ಉದ್ಧವ್ ನೇತೃತ್ವದ ಶಿವಸೇನೆಯ ವಕ್ತಾರ ಸಂಜಯ್ ರಾವತ್, ಮಹಾರಾಷ್ಟ್ರದ ಹಿತಾಸಕ್ತಿಗಳಿಗೆ ವಿರುದ್ಧವಾಗಿರುವವರೊಂದಿಗೆ ರಾಜ್ ಠಾಕ್ರೆ ವ್ಯವಹರಿಸಬೇಕು ಎಂದು ಪುನರುಚ್ಚರಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. “ಅವರು [ರಾಜ್] ಒಬ್ಬ ಠಾಕ್ರೆ. ಉದ್ಧವ್ ಕೂಡ ಒಬ್ಬ ಠಾಕ್ರೆ. ಅವರ ಸಂಬಂಧ ಶಾಶ್ವತ. ರಾಜಕೀಯ ಭಿನ್ನಾಭಿಪ್ರಾಯಗಳಿಂದಾಗಿ, ಅವರು ಪ್ರತ್ಯೇಕ ಮಾರ್ಗಗಳನ್ನು ಆರಿಸಿಕೊಂಡಿದ್ದಾರೆ.” ಎಂದು ಅವರು ಹೇಳಿದ್ದಾರೆ.
“ಲೋಕಸಭಾ ಚುನಾವಣೆಯ ಸಮಯದಲ್ಲಿ ಮಹಾರಾಷ್ಟ್ರದ ಶತ್ರುಗಳಿಗೆ ಯಾವುದೇ ರೀತಿಯ ಸಹಾಯವನ್ನು ನೀಡಬಾರದು ಎಂದು ನಾವು ಸ್ಪಷ್ಟಪಡಿಸಿದ್ದೆವು. ಮಹಾರಾಷ್ಟ್ರವನ್ನು ಕಡಿಮೆ ಅಂದಾಜು ಮಾಡುವ ಕೆಲವು ಶಕ್ತಿಗಳಿವೆ ಎಂದು ಉದ್ಧವ್ ಠಾಕ್ರೆ ಹೇಳಿದ್ದರು. ಅವರು ಮರಾಠಿ ಜನರ ಹಿತಾಸಕ್ತಿಗಳ ವಿರುದ್ಧ ಪಿತೂರಿ ನಡೆಸುತ್ತಲೇ ಇದ್ದಾರೆ.” ಎಂದು ಸಂಜಯ್ ಹೇಳಿದ್ದಾರೆ
ಅಂತಹ ಶಕ್ತಿಗಳೊಂದಿಗೆ ರಾಜ್ ಠಾಕ್ರೆ ಬೆರೆಯಬಾರದು ಅಥವಾ ಕುಳಿತುಕೊಳ್ಳಬಾರದು. ಅವರು [ರಾಜ್] ಈ ನಿಲುವನ್ನು ಅಳವಡಿಸಿಕೊಳ್ಳಬೇಕು. ಅವರು ಈ ನಿಲುವನ್ನು ತೆಗೆದುಕೊಂಡರೆ, ನಾವು … ಚರ್ಚೆಗಳನ್ನು ನಡೆಸಲು ಸಿದ್ಧರಿದ್ದೇವೆ ಎಂದು ಅವರು ಹೇಳಿದ್ದಾರೆ. ಮಹಾರಾಷ್ಟ್ರಕ್ಕಾಗಿ
ಇದನ್ನೂಓದಿ: ಬಿಹಾರ| ಸಹೋದ್ಯೋಗಿಯನ್ನು ಸರ್ವಿಸ್ ರೈಫಲ್‌ನಿಂದ ಗುಂಡು ಹಾರಿಸಿ ಕೊಂದ ಪೊಲೀಸ್ ಕಾನ್‌ಸ್ಟೆಬಲ್
ಬಿಹಾರ| ಸಹೋದ್ಯೋಗಿಯನ್ನು ಸರ್ವಿಸ್ ರೈಫಲ್‌ನಿಂದ ಗುಂಡು ಹಾರಿಸಿ ಕೊಂದ ಪೊಲೀಸ್ ಕಾನ್‌ಸ್ಟೆಬಲ್


