ಸುಮಾರು 50 ವರ್ಷಗಳ ಬಳಿಕ ಇಂದು (ಜೂನ್ 26) ಲೋಕಸಭೆಯ ಸ್ಪೀಕರ್ ಆಯ್ಕೆಗೆ ಮಹತ್ವದ ಚುನಾವಣೆ ನಡೆಯಲಿದೆ. ಆಡಳಿತ ಪಕ್ಷ ಪ್ರತಿಪಕ್ಷಕ್ಕೆ ಉಪ ಸ್ಪೀಕರ್ ಸ್ಥಾನ ಬಿಟ್ಟು ಕೊಡದ ಕಾರಣ ಚುನಾವಣೆ ನಡೆಸುವ ಅನಿವಾರ್ಯತೆ ಎದುರಾಗಿದೆ.
ಆಡಳಿತ ಕೂಟ ಎನ್‌ಡಿಎ ಈ ಹಿಂದೆ ಸ್ಪೀಕರ್ ಆಗಿದ್ದ ಓಂ ಬಿರ್ಲಾ ಅವರನ್ನೇ ಎರಡನೇ ಬಾರಿ ಕಣಕ್ಕಿಳಿಸಿದೆ. ಪ್ರತಿಪಕ್ಷಗಳ ಕೂಟ ಇಂಡಿಯಾ ಕೇರಳದಿಂದ ಎಂಟು ಬಾರಿ ಸಂಸದರಾಗಿರುವ ಕೋಡಿಕುನ್ನಿಲ್ ಸುರೇಶ್ ಅವರನ್ನು ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿದೆ.
ಈ ಹಿಂದಿನ ಸಂಪ್ರದಾಯದಂತೆ ಉಪ ಸ್ಪೀಕರ್ ಸ್ಥಾನ ನಮಗೆ ಬಿಟ್ಟು ಕೊಟ್ಟರೆ ಎನ್‌ಡಿಎ ಅಭ್ಯರ್ಥಿಯನ್ನು ಸ್ಪೀಕರ್ ಆಗಿ ಬೆಂಬಲಿಸಲು ನಾವು ಸಿದ್ದ ಎಂದು ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟ ಹೇಳಿತ್ತು. ಆದರೆ, ಇದಕ್ಕೆ ಎನ್‌ಡಿಎ ಒಪ್ಪದಿರುವ ಹಿನ್ನೆಲೆ, ಇಂಡಿಯಾ ಸ್ಪೀಕರ್ ಹುದ್ದೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
ವರದಿಗಳ ಪ್ರಕಾರ, 1976ರಲ್ಲಿ ಲೋಕಸಭೆಯ ಸ್ಪೀಕರ್ ಸ್ಥಾನಕ್ಕೆ ಮೊದಲ ಬಾರಿ ಚುನಾವಣೆ ನಡೆದಿತ್ತು. ಆ ಬಳಿಕ ಸ್ಪೀಕರ್ ಹುದ್ದೆ ಆಡಳಿತ ಪಕ್ಷಕ್ಕೆ ಮತ್ತು ಉಪ ಸ್ಪೀಕರ್ ಹುದ್ದೆ ಪ್ರತಿಪಕ್ಷಕ್ಕೆ ನೀಡುತ್ತಾ ಬರಲಾಗಿತ್ತು.
ಇಂದಿನ ಚುನಾವಣೆಯಲ್ಲಿ ಎನ್‌ಡಿಎ ಮತ್ತು ಇಂಡಿಯಾ ಕೂಟದ ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಬೆಂಬಲಿಸುವ ಸಾಧ್ಯತೆಯಿದೆ. ಆದರೆ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಯ ನಿಲುವು ಇನ್ನೂ ಗೌಪ್ಯವಾಗಿದೆ. ಟಿಎಂಸಿ ಬಹುತೇಕ ಇಂಡಿಯಾ ಕೂಟದ ಅಭ್ಯರ್ಥಿಯನ್ನೇ ಬೆಂಬಲಿಸುವ ನಿರೀಕ್ಷೆಯಿದ್ದರೂ, ಅಂತಿಮ ನಿರ್ಧಾರ ಹೇಳಲಾಗದು.
ಇದನ್ನೂ ಓದಿ : ಲೋಕಸಭೆಯ ವಿರೋಧ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿ ಆಯ್ಕೆ


