ದೆಹಲಿ ವಿಧಾನಸಭೆ ವಿರೋಧ ಪಕ್ಷದ ನಾಯಕಿಯಾಗಿ ಮಾಜಿ ಮುಖ್ಯಮಂತ್ರಿ ಮತ್ತು ಎಎಪಿ ನಾಯಕಿ ಅತಿಶಿ ಅವರನ್ನು ಭಾನುವಾರ ಪಕ್ಷದ ಶಾಸಕರು ಆಯ್ಕೆ ಮಾಡಿದ್ದಾರೆ. ಅವರು ದೆಹಲಿ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಮೊದಲ ಮಹಿಳಾ ನಾಯಕಿ.
ಎಎಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ವಿರೋಧ ಪಕ್ಷದ ನಾಯಕಿಯಾಗಿ ಅತಿಶಿ ಅವರನ್ನು ಆಪ್ ಶಾಸಕರು ಸರ್ವಾನುಮತದಿಂದ ಆಯ್ಕೆ ಮಾಡಿದರು. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರನ್ನು ಎದುರಿಸಲು ಆತಿಶಿ ಹೆಸರನ್ನು ಪ್ರಬಲ ಮಹಿಳಾ ಮುಖವಾಗಿ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಸೌರಭ್ ಭಾರದ್ವಾಜ್ ಸೇರಿದಂತೆ ಉನ್ನತ ಎಎಪಿ ನಾಯಕರು ತಮ್ಮ ಸ್ಥಾನಗಳಿಂದ ಸೋತಿದ್ದಾರೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ವಿರೋಧ ಪಕ್ಷದ ನಾಯಕಿಯಾಗಿ ಅವರ ಬಡ್ತಿ ಮಹತ್ವದ್ದಾಗಿದೆ.
ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ತಿಂಗಳ ನಂತರ ಜೈಲಿನಿಂದ ಬಿಡುಗಡೆಯಾದ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡಿದ್ದರು. ಬಳಿಕ, 43 ವರ್ಷದ ಆತಿಶಿ ಮುಖ್ಯಮಂತ್ರಿಯಾದರು.
ಕೇಜ್ರಿವಾಲ್ ಅವರ ಜೈಲುವಾಸದ ಸಮಯದಲ್ಲಿ ಅವರು ದೆಹಲಿಯಲ್ಲಿ ಎಎಪಿ ಸರ್ಕಾರದ ಮುಖವಾಗಿದ್ದರು. ಹಲವಾರು ವಿಷಯಗಳ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಹೋರಾಡಿದರು.
2020 ರಲ್ಲಿ ದಕ್ಷಿಣ ದೆಹಲಿಯ ಕಲ್ಕಾಜಿಯಿಂದ ಆಯ್ಕೆಯಾದ ಅತಿಶಿ, ಫೆಬ್ರವರಿ 5 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ, ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾದ ಮಾಜಿ ಬಿಜೆಪಿ ಸಂಸದ ರಮೇಶ್ ಬಿಧುರಿ ಅವರೊಂದಿಗೆ ತೀವ್ರ ಪೈಪೋಟಿಯ ನಂತರ ತಮ್ಮ ಸ್ಥಾನವನ್ನು ಉಳಿಸಿಕೊಂಡರು.
ಇದನ್ನೂ ಓದಿ; ಮುಸ್ಲಿಂ ಕುಟುಂಬಕ್ಕೆ ಮನೆ ಮಾರಾಟ ಮಾಡುವುದನ್ನು ವಿರೋಧಿಸಿ ಹಿಂದುತ್ವ ಸಂಘಟನೆ ಪ್ರತಿಭಟನೆ


