ಉತ್ತರಪ್ರದೇಶದ ಕ್ಯಾಬಿನೆಟ್ ಸಚಿವ ಮತ್ತು ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್ ಅವರು ಕೊರೊನಾ ಸೋಂಕಿನಿಂದ ಭಾನುವಾರ ನಿಧನರಾಗಿದ್ದಾರೆ.
ಭಾರತದ ಪರವಾಗಿ 40 ಟೆಸ್ಟ್ ಪಂದ್ಯಗಳನ್ನು ಆಡಿದ ಚೇತನ್ ಚೌಹಾಣ್ 73 ವರ್ಷ ವಯಸ್ಸಿನವರಾಗಿದ್ದು, ಅವರಿಗೆ ಪತ್ನಿ ಮತ್ತು ಮಗ ವಿನಾಯಕ್ ಇದ್ದಾರೆ. ಅವರಿಬ್ಬರೂ ಮೆಲ್ಬೋರ್ನ್‌ನಲ್ಲಿ ವಾಸವಿದ್ದಾರೆ.
“ನನ್ನ ಹಿರಿಯ ಸಹೋದರ ಚೇತನ್ ಚೌಹಾಣ್ ಅವರು ಕೊರೊನಾ ವಿರುದ್ಧದ ಯುದ್ಧದಲ್ಲಿ ಹೋರಾಡಿದ ನಂತರ ಇಂದು ನಮ್ಮನ್ನು ಅಗಲಿದ್ದಾರೆ. ಅವರ ಚೇತರಿಕೆಗಾಗಿ ಪ್ರಾರ್ಥಿಸಿದ ಎಲ್ಲರಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅವರ ಮಗ ವಿನಾಯಕ್ ಬಂದ ನಂತರ ನಾವು ಅಂತಿಮ ವಿಧಿಗಳನ್ನು ಮಾಡುತ್ತೇವೆ” ಎಂದು ಅವರ ಸಹೋದರ ಪುಷ್ಪೇಂದ್ರ ಚೌಹಾಣ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಚೇತನ್ ಚೌಹಾಣ್‌ಗೆ ಕೊರೊನಾ ದೃಢಪಟ್ಟ ನಂತರ ಅವರನ್ನು ಜುಲೈ 12 ರಂದು ಲಕ್ನೋದ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂತ್ರಪಿಂಡ ಸಂಬಂಧಿತ ಕಾಯಿಲೆಗಳಿಂದಾಗಿ ಅವರ ಆರೋಗ್ಯ ಹದಗೆಟ್ಟಿತ್ತು. ಹಾಗಾಗಿ ಅವರನ್ನು ಗುರಗಾಂವ್‌ನ ಮೆಡಂತಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಶುಕ್ರವಾರ ರಾತ್ರಿ, ಅವರು ಬಹು-ಅಂಗಾಂಗ ವೈಫಲ್ಯದಿಂದ ವೆಂಟಿಲೇಟರ್‌ನಲ್ಲಿದ್ದರು. ಆದರೆ ಇಂದು ನಿಧನರಾಗಿದ್ದಾರೆ.
ಈ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಶಿಕ್ಷಣ ಸಚಿವೆ ಕಮಲ್ ರಾಣಿ ವರುಣ್‌ರವರು ಸಹ ಕೊರೊನಾ ಕಾರಣದಿಂದ ಮೃತಪಟ್ಟಿದ್ದರು.
ಇದನ್ನೂ ಓದಿ: ನನ್ನ ಪತಿ ಸಾವಿಗೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಕಾರಣ: ರಾಜೀವ್ ತ್ಯಾಗಿ ಪತ್ನಿ ಆರೋಪ


