ವಿವರವಾದ ತನಿಖೆಯಿಂದ ಮಾಜಿ ಡಿಜಿಪಿ ಓಂ ಪ್ರಕಾಶ್ ಅವರ ಹತ್ಯೆಯ ಹಿಂದಿನ ಸತ್ಯ ಹೊರಬರುತ್ತದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಸೋಮವಾರ ಹೇಳಿದ್ದಾರೆ.
ಆದರೆ, ಅವರನ್ನು ಅವರ ಪತ್ನಿ ಪಲ್ಲವಿ ಕೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ನಿವೃತ್ತ ಐಪಿಎಸ್ ಅಧಿಕಾರಿ ಬೆಂಗಳೂರಿನಲ್ಲಿರುವ ತಮ್ಮ ಎಚ್‌ಎಸ್‌ಆರ್ ಲೇಔಟ್ ನಿವಾಸದಲ್ಲಿ ಭಾನುವಾರ ಮಧ್ಯಾಹ್ನ ರಕ್ತದ ಮಡುವಿನಲ್ಲಿ ಮೃತಪಟ್ಟಿರುವುದು ಪತ್ತೆಯಾಗಿದೆ.
“ಮಾಜಿ ಡಿಜಿಪಿ ಓಂ ಪ್ರಕಾಶ್ ಅವರನ್ನು ಕೊಲೆ ಮಾಡಲಾಗಿದೆ. ಅವರ ಪತ್ನಿ (ಪಲ್ಲವಿ) ಅವರನ್ನು ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ವಿವರವಾದ ತನಿಖೆಯಿಂದ ಮಾತ್ರ ಸತ್ಯ ಹೊರಬರುತ್ತದೆ” ಎಂದು ಪರಮೇಶ್ವರ ಇಂದು ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
2015 ರಲ್ಲಿ ತಾವು ಗೃಹ ಸಚಿವರಾಗಿದ್ದಾಗ ಓಂ ಪ್ರಕಾಶ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಆದರು ಎಂದು ಸಚಿವರು ಹೇಳಿದರು.
ಕೊಲೆಯ ಹಿಂದಿನ ಕಾರಣದ ಬಗ್ಗೆ ಕೇಳಿದಾಗ, ತನಿಖೆ ಪ್ರಾರಂಭವಾಗಿದೆ, ತನಿಖಾ ಅಧಿಕಾರಿ ಇನ್ನೂ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಸ್ಕಿಜೋಫ್ರೇನಿಯಾದಿಂದ ಬಳಲುತ್ತಿರುವ ಪಲ್ಲವಿ ಹಾಗೂ ಓಂ ಪ್ರಕಾಶ್ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ತನಗೆ ತಿಳಿದಿಲ್ಲ ಎಂದು ಪರಮೇಶ್ವರ ಹೇಳಿದರು.


