ಪಕ್ಷದಿಂದ ಟಿಕೆಟ್ ಸಿಗದ ಹಿನ್ನೆಲೆ ವಿಧಾನಪರಿಷತ್ ಚುನಾವಣೆಗೆ ನೈರುತ್ಯ ಪದವೀಧರ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಅವರನ್ನು ಬಿಜೆಪಿ ಆರು ವರ್ಷಗಳ ಕಾಲ ಉಚ್ಚಾಟಿಸಿದೆ.
ಈ ಕುರಿತು ಆದೇಶ ಹೊರಡಿಸಿರುವ ಬಿಜೆಪಿಯ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಅವರು, “ಪಕ್ಷದ ಸೂಚನೆಯನ್ನು ಕಡೆಗಣಿಸಿ ವಿಧಾನಪರಿಷತ್ ಚುನಾವಣೆಗೆ ನೈರುತ್ಯ ಪದವೀಧರ ಕ್ಷೇತ್ರದಿಂದ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧವೇ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪಕ್ಷಕ್ಕೆ ಮುಜುಗರ ತಂದಿದ್ದೀರಿ. ಇದು ಪಕ್ಷದ ಶಿಸ್ತು ಉಲ್ಲಂಘನೆಯಾಗಿದೆ. ತಮ್ಮನ್ನು ತಕ್ಷಣದಿಂದಲೇ ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸಿ, ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ” ಎಂದು ತಿಳಿಸಿದ್ದಾರೆ.

ಆರಂಭದಲ್ಲಿ ರಘುಪತಿ ಭಟ್ ಅವರನ್ನು ಬಿಜೆಪಿ ನಾಯಕರು ಮನವೊಲಿಸುವ ಪ್ರಯತ್ನ ಮಾಡಿದ್ದರು. ಅದು ವಿಫಲವಾದಾಗ, ಎರಡು ದಿನಗಳ ಹಿಂದೆ ಸ್ಪಷ್ಟನೆ ಕೋರಿ ನೋಟಿಸ್ ನೀಡಿದ್ದರು. ಇದೀಗ ಉಚ್ಚಾಟನೆ ಆದೇಶ ಹೊರ ಬಿದ್ದಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಮರು ಆಯ್ಕೆ ಬಯಸಿದ್ದ ರಘುಪತಿ ಭಟ್ ಅವರಿಗೆ ಹೈಕಮಾಂಡ್ ಟಿಕೆಟ್ ನಿರಾಕರಿಸಿತ್ತು. ಭಟ್ ಬದಲು ಅವರ ಆಪ್ತ ಯಶಪಾಲ್ ಸುವರ್ಣ ಅವರಿಗೆ ಮಣೆ ಹಾಕಿತ್ತು. ಆಗ ಆರಂಭದಲ್ಲಿ ಬಂಡಾಯದ ಸೂಚನೆ ನೀಡಿದ್ದ ಭಟ್, ಬಳಿಕ ತಣ್ಣಗಾಗಿದ್ದರು. ಯಶಪಾಲ್ ಪರ ಪ್ರಚಾರ ನಡೆಸಿದ್ದರು. ಯಶಪಾಲ್ ಚುನಾವಣೆಯಲ್ಲಿ ಜಯಗಳಿಸಿ ಶಾಸಕರಾಗಿದ್ದಾರೆ.
ವಿಧಾನಸಭೆ ಚುನಾವಣೆಗೆ ಟಿಕೆಟ್ ಕೈ ತಪ್ಪಿದರೂ ಸುಮ್ಮನಾಗಿದ್ದ ರಘುಪತಿ ಭಟ್, ವಿಧಾನಪರಿಷತ್ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಇದನ್ನೂ ಓದಿ : ಪರಿಷತ್ ಚುನಾವಣೆ: ಐವರು ಬಂಡಾಯ ಅಭ್ಯರ್ಥಿಗಳನ್ನು ಉಚ್ಚಾಟಿಸಿದ ಕಾಂಗ್ರೆಸ್


