ಹೊಸದಿಲ್ಲಿ: ಭಾರತ ಸರ್ಕಾರದಿಂದ ಈಗ ನಿಷೇಧಿಸಲ್ಪಟ್ಟಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ಸ್ಥಾಪಕ ಅಧ್ಯಕ್ಷ ಎರಾಪ್ಪಂಗಲ್ ಅಬೂಬಕರ್ ಅವರು ಯಾವುದೇ ವಿಚಾರಣೆ ಇಲ್ಲದೆ 1000 ದಿನಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. ಅವರ ಕುಟುಂಬವು ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂದು ತೀವ್ರ ಆತಂಕ ವ್ಯಕ್ತಪಡಿಸಿದೆ.
ಅಬೂಬಕರ್ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) 2022ರ ಸೆ.22ರಂದು ಅವರ ಮನೆಯಿಂದ ಬಂಧಿಸಿತ್ತು. ಆ ಸಮಯದಲ್ಲಿ ಅವರು ಅನ್ನನಾಳದ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಾ ವಿಶ್ರಾಂತಿಯಲ್ಲಿದ್ದರು. ಅಂದೇ, 10 ರಾಜ್ಯಗಳಲ್ಲಿ ಸುಮಾರು 100 ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಲಾಗಿತ್ತು ಅಥವಾ ವಶಕ್ಕೆ ತೆಗೆದುಕೊಳ್ಳಲಾಗಿತ್ತು.
ನಂತರ, ಅದೇ ವರ್ಷ ಸೆಪ್ಟೆಂಬರ್ 28ರಂದು ಸರಕಾರವು ಪಿಎಫ್‌ಐ ಮತ್ತು ಅದರ ಅಂಗಸಂಸ್ಥೆಗಳಾದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ರೆಹಬ್ ಇಂಡಿಯಾ ಫೌಂಡೇಶನ್, ಅಖಿಲ ಭಾರತ ಇಮಾಮ್ಸ್ ಕೌನ್ಸಿಲ್, ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ಸ್, ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ಕೇರಳದ ರೆಹಬ್ ಫೌಂಡೇಶನ್‌ಗಳನ್ನು ನಿಷೇಧಿಸಿತು.
73 ವರ್ಷದ ಈ ಮುಸ್ಲಿಂ ನಾಯಕ ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ ಉಳಿದಿದ್ದಾರೆ. ಅವರ ವಿರುದ್ಧದ ತನಿಖೆ ಇನ್ನೂ ಬಾಕಿಯಿದೆ. ದೆಹಲಿ ಹೈಕೋರ್ಟ್ ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯಗಳು ಈ ಹಿಂದೆ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿವೆ.
ಅವರಿಗೆ ಸೂಕ್ತವಾದ ಆಹಾರ ಲಭ್ಯವಿಲ್ಲದ ಕಾರಣ ದಿನದಿಂದ ದಿನಕ್ಕೆ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಅವರಿಗೆ ನೆನಪಿನ ಶಕ್ತಿಯೂ ಕಡಿಮೆಯಾಗುತ್ತಿದೆ ಎಂದು ಅಬೂಬಕರ್ ಅವರ ಪತ್ನಿ ಅಮಿನಾ ಅವರು ಮಕ್ತೂಬ್‌ಗೆ ನೀಡಿದ ಹೇಳಿಕೆಯಲ್ಲಿ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಅಬೂಬಕರ್ ಅವರ ಆರೋಗ್ಯ ಸ್ಥಿತಿಯನ್ನು ವಿವರವಾಗಿ ಪರಿಶೀಲಿಸಲು ಏಮ್ಸ್‌ನ 10 ವೈದ್ಯರನ್ನೊಳಗೊಂಡ ವೈದ್ಯಕೀಯ ಮಂಡಳಿಯನ್ನು ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ರಚಿಸಲಾಗಿತ್ತು. ಆದರೆ, ಕೇಂದ್ರ ಸಂಸ್ಥೆಗಳ ಹಸ್ತಕ್ಷೇಪದಿಂದಾಗಿ ಅವರ ನಿಜವಾದ ಆರೋಗ್ಯ ಸ್ಥಿತಿಯನ್ನು ಮರೆಮಾಚಿ ವರದಿಯನ್ನು ಸಲ್ಲಿಸಲಾಗಿದೆ ಎಂದು ಕುಟುಂಬವು ಆರೋಪಿಸಿದೆ.
ಕೇಂದ್ರ ಸಂಸ್ಥೆಗಳ ಈ ಪ್ರಭಾವದಿಂದಲೇ ಸುಪ್ರೀಂ ಕೋರ್ಟ್ ನಮ್ಮ ಪತಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಇದೇ ಕಾರಣಕ್ಕೆ, ಈ ವೈದ್ಯಕೀಯ ಮಂಡಳಿಯ ವರದಿಯನ್ನು ನಾವು ಒಪ್ಪುವುದಿಲ್ಲ ಎಂದು ಅಬೂಬಕರ್ ಅವರ ಪತ್ನಿ ಜೈಲು ಅಧಿಕಾರಿಗಳಿಗೆ ಪತ್ರವನ್ನು ಬರೆದಿದ್ದಾರೆ. ಅಲ್ಲದೇ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಂತೆ ಕೋರಿ ಕೆಳ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದಾರೆ.
2020ರಲ್ಲಿ ಅಬೂಬಕರ್ ಅವರಿಗೆ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ನಡೆದ ನಂತರ, ಅವರು ತಮ್ಮ ಕುಟುಂಬ ಸದಸ್ಯರ ತೀವ್ರ ಆರೈಕೆಯಲ್ಲಿ ಮನೆಯಲ್ಲೇ ಉಳಿದಿದ್ದರು.
ಪ್ರಸ್ತುತ, ಅವರು ಅಧಿಕ ರಕ್ತದೊತ್ತಡ, ಇಡಿಯೋಪಥಿಕ್ ಪಾರ್ಕಿನ್ಸನ್ ರೋಗ, ಕರೋನರಿ ಆರ್ಟರಿ ಡಿಸೀಸ್, ಅನ್ನನಾಳದ ಕ್ಯಾನ್ಸರ್‌ನ ಶಸ್ತ್ರಚಿಕಿತ್ಸೆ ನಂತರದ ಸ್ಥಿತಿ ಮತ್ತು ಹಾನಿಕರವಲ್ಲದ ಪ್ರಾಸ್ಟಾಟಿಕ್ ಹೈಪರ್ಪ್ಲಾಸಿಯಾದಂತಹ ವಿವಿಧ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಅವರ ಪತ್ನಿ ಮಾಹಿತಿ ಹೇಳಿದ್ದಾರೆ.
ಜೈಲಿನಲ್ಲಿಯೇ ಮರಣ ಹೊಂದಿದ ಫಾದರ್ ಸ್ಟಾನ್ ಸ್ವಾಮಿಯವರ ದುರಂತ ಪರಿಸ್ಥಿತಿ ನನ್ನ ಪತಿಗೂ ಬರಬಹುದು ಎಂದು ನಾವೆಲ್ಲರೂ ಭಯಪಡುತ್ತಿದ್ದೇವೆ. ಅವರ ಹದಗೆಟ್ಟ ಆರೋಗ್ಯ ಸ್ಥಿತಿ ಮತ್ತು ಮಾನವೀಯ ನೆಲೆಯ ಮೇಲೆ ಅವರಿಗೆ ಜಾಮೀನು ನೀಡುವುದು ಅತ್ಯಗತ್ಯವಾಗಿದೆ ಎಂದು ಅಮಿನಾ ಒತ್ತಾಯಿಸಿದ್ದಾರೆ.
ಏರ್ ಇಂಡಿಯಾ ಪತನ: ತಾನು ಬದುಕುಳಿದಿದ್ದು ಹೇಗೆಂದು ತಿಳಿಸಿದ ವಿಶ್ವಾಸ್


