Homeಅಂತರಾಷ್ಟ್ರೀಯಇಸ್ರೇಲ್ ವೈಮಾನಿಕ ದಾಳಿಯಲ್ಲಿ ಅಲ್ ಜಝೀರಾದ ನಾಲ್ವರು ಪತ್ರಕರ್ತರು ಹತ್ಯೆ; ಮನಕಲಕಿದ ಅನಾಸ್ ಅಲ್-ಶರೀಫ್ ಅಂತಿಮ...

ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಅಲ್ ಜಝೀರಾದ ನಾಲ್ವರು ಪತ್ರಕರ್ತರು ಹತ್ಯೆ; ಮನಕಲಕಿದ ಅನಾಸ್ ಅಲ್-ಶರೀಫ್ ಅಂತಿಮ ಸಂದೇಶ 

- Advertisement -
- Advertisement -

ಪ್ಯಾಲೆಸ್ತೀನ್/ಗಾಜಾ: ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಗಾಜಾ ಮೂಲದ ಧೈರ್ಯಶಾಲಿ ಪತ್ರಕರ್ತ ಅನಾಸ್ ಅಲ್-ಶರೀಫ್ ಸೇರಿದಂತೆ ಅಲ್ ಜಝೀರಾದ ನಾಲ್ವರು ಪತ್ರಕರ್ತರು ಹತ್ಯೆಯಾಗಿದ್ದಾರೆ. ಗಾಜಾ ನರಮೇಧ ಆರಂಭವಾದಾಗಿನಿಂದಲೂ ನಿರಂತರವಾಗಿ ವರದಿ ಮಾಡುತ್ತಿದ್ದ ಅನಾಸ್ ಅಲ್-ಶರೀಫ್, ಅಲ್ ಜಝೀರಾ ಅರೇಬಿಕ್‌ನ ಪ್ರಮುಖ ಧ್ವನಿಯಾಗಿದ್ದರು. ಈ ದಾಳಿಯಲ್ಲಿ ಅಲ್-ಶರೀಫ್ ಅವರೊಂದಿಗೆ, ಕ್ಯಾಮರಾಮ್ಯಾನ್‌ಗಳಾದ ಇಬ್ರಾಹಿಂ ಝಾಹರ್ ಮತ್ತು ಮೊಹಮ್ಮದ್ ನೌಫಲ್ ಹಾಗೂ ಮತ್ತೊಬ್ಬ ಪತ್ರಕರ್ತ ಮೊಹಮ್ಮದ್ ಖ್ರೀಖೆ ಕೂಡ ಸಾವನ್ನಪ್ಪಿದ್ದಾರೆ.

ಅಲ್ ಜಝೀರಾ ವರದಿ ಪ್ರಕಾರ, ಈ ಘಟನೆ ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆಯ ಹೊರಗೆ ಪತ್ರಕರ್ತರು ತಂಗಿದ್ದ ಡೇರೆಯ ಮೇಲೆ ನಡೆದ ಇಸ್ರೇಲಿ ದಾಳಿಯ ಪರಿಣಾಮವಾಗಿದೆ. ಇದು ಉದ್ದೇಶಪೂರ್ವಕ ದಾಳಿ ಎಂದು ಅಲ್ ಜಝೀರಾ ಖಂಡಿಸಿದೆ. ಹತ್ಯೆಗೀಡಾದ ಅನಾಸ್ ಅಲ್-ಶರೀಫ್ (28) ಅವರು ಉತ್ತರ ಗಾಜಾದಲ್ಲಿ ವ್ಯಾಪಕವಾಗಿ ವರದಿ ಮಾಡಿದ್ದರಿಂದ ಅಲ್ಲಿ ಮನೆ ಮಾತಾಗಿದ್ದರು. ಇಸ್ರೇಲ್ ಪಡೆಗಳು ಈ ಪತ್ರಕರ್ತರ ವಿರುದ್ಧ, ವಿಶೇಷವಾಗಿ ಅಲ್-ಶರೀಫ್ ವಿರುದ್ಧ, “ಪ್ರಚೋದನೆಯ ಅಭಿಯಾನ” ನಡೆಸುತ್ತಿದ್ದವು ಎಂದು ಅಲ್ ಜಝೀರಾ ಮೀಡಿಯಾ ನೆಟ್‌ವರ್ಕ್ ಹೇಳಿದೆ.

ಆದರೆ, ಇಸ್ರೇಲ್ ಸೇನೆಯು ಹತ್ಯೆಯನ್ನು ಸಮರ್ಥಿಸಿಕೊಳ್ಳುತ್ತಾ, ಅಲ್-ಶರೀಫ್ ಹಮಾಸ್ ಕೋಶದ ಮುಖ್ಯಸ್ಥನಾಗಿದ್ದ ಮತ್ತು “ಇಸ್ರೇಲಿ ನಾಗರಿಕರು ಮತ್ತು ಪಡೆಗಳ ವಿರುದ್ಧ ರಾಕೆಟ್ ದಾಳಿಗಳನ್ನು ಉತ್ತೇಜಿಸುತ್ತಿದ್ದ” ಎಂದು ಆರೋಪಿಸಿದೆ. ಈ ಆರೋಪಗಳನ್ನು ಅಲ್ ಜಝೀರಾ ಸಂಪೂರ್ಣವಾಗಿ ನಿರಾಕರಿಸಿದೆ.

ತಮ್ಮ ಹತ್ಯೆಯ ಕೆಲವು ಕ್ಷಣಗಳ ಮೊದಲು, ಅಲ್-ಶರೀಫ್ ಎಕ್ಸ್‌ನಲ್ಲಿ (ಹಿಂದಿನ ಟ್ವಿಟರ್) ಗಾಜಾ ನಗರದ ಪೂರ್ವ ಮತ್ತು ದಕ್ಷಿಣ ಭಾಗಗಳ ಮೇಲೆ ಇಸ್ರೇಲ್ ತೀವ್ರವಾದ ಮತ್ತು ಕೇಂದ್ರೀಕೃತ ಬಾಂಬ್ ದಾಳಿ ನಡೆಸುತ್ತಿದೆ ಎಂದು ಬರೆದಿದ್ದರು. ಈ ಬಾಂಬ್ ದಾಳಿಯನ್ನು “ಫೈರ್ ಬೆಲ್ಟ್‌ಗಳು” ಎಂದೂ ಕರೆಯಲಾಗುತ್ತದೆ. ಅವರ ಕೊನೆಯ ವೀಡಿಯೊದಲ್ಲಿ, ಹಿನ್ನೆಲೆಯಲ್ಲಿ ನಿರಂತರ ಬಾಂಬ್ ದಾಳಿಯ ಶಬ್ದಗಳು ಕೇಳಿಬರುತ್ತಿದ್ದು, ಕತ್ತಲೆ ಆಕಾಶ ಕಿತ್ತಳೆ ಬೆಳಕಿನಿಂದ ಮಿನುಗುತ್ತಿರುವುದು ಕಾಣುತ್ತದೆ. “ಕಳೆದ ಎರಡು ಗಂಟೆಗಳಿಂದ ಗಾಜಾ ನಗರದ ಮೇಲೆ ಇಸ್ರೇಲಿ ಆಕ್ರಮಣ ತೀವ್ರಗೊಂಡಿದೆ” ಎಂದು ಅವರು ಬರೆದಿದ್ದರು.

“ನಾನು ನಿಮಗೆ ಪ್ಯಾಲೆಸ್ಟೈನ್ ಅನ್ನು ಒಪ್ಪಿಸುತ್ತೇನೆ”: ಅನಾಸ್ ಅಲ್-ಶರೀಫ್ ಅವರ ಅಂತಿಮ ಸಂದೇಶ

ಅನಾಸ್ ಅಲ್-ಶರೀಫ್ ಅವರ ಹತ್ಯೆಯ ನಂತರ, ಅವರು ಈ ವರ್ಷದ ಆರಂಭದಲ್ಲಿ ಬರೆದಿದ್ದ ತಮ್ಮ ಅಂತಿಮ ಸಂದೇಶವನ್ನು ಅವರ ಎಕ್ಸ್ ಖಾತೆಯಲ್ಲಿ ಪ್ರಕಟಿಸಲಾಯಿತು. ಈ ಸಂದೇಶವು ಅವರ ನೋವು, ಕಷ್ಟಗಳು ಮತ್ತು ತಮ್ಮ ಜನರು ಹಾಗೂ ಮಾತೃಭೂಮಿಯ ಮೇಲಿದ್ದ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ.

ಅವರ ಅಂತಿಮ ಸಂದೇಶದ ಪೂರ್ಣ ಪಠ್ಯ ಇಲ್ಲಿದೆ:

“ನನ್ನ ಮಾತುಗಳು ನಿಮ್ಮನ್ನು ತಲುಪಿದರೆ, ಇಸ್ರೇಲ್ ನನ್ನನ್ನು ಕೊಲ್ಲುವಲ್ಲಿ ಮತ್ತು ನನ್ನ ಧ್ವನಿಯನ್ನು ಮೌನಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಯಿರಿ. ಮೊದಲಿಗೆ, ನಿಮ್ಮೆಲ್ಲರ ಮೇಲೆ ಶಾಂತಿ, ಕರುಣೆ ಮತ್ತು ಆಶೀರ್ವಾದವಿರಲಿ.

ಜಬಾಲಿಯಾ ನಿರಾಶ್ರಿತರ ಶಿಬಿರದ ಗಲ್ಲಿಗಳಲ್ಲಿ ಮತ್ತು ಬೀದಿಗಳಲ್ಲಿ ನನ್ನ ಬದುಕು ಆರಂಭವಾದಾಗಿನಿಂದ, ನನ್ನ ಜನರಿಗೆ ಧ್ವನಿ ಮತ್ತು ಶಕ್ತಿಯಾಗಿ ನಿಲ್ಲಲು ನಾನು ನನ್ನ ಸರ್ವ ಪ್ರಯತ್ನವನ್ನೂ ಅರ್ಪಿಸಿದ್ದೇನೆ ಎಂದು ಅಲ್ಲಾಹನಿಗೆ ತಿಳಿದಿದೆ. ಅತಿಕ್ರಮಿತ ಭೂಮಿ, ನನ್ನ ಮೂಲ ಪಟ್ಟಣ ಅಸ್ಖಲಾನ್ (ಅಲ್-ಮಜ್ದಲ್)ಗೆ ನನ್ನ ಕುಟುಂಬ ಮತ್ತು ಪ್ರೀತಿಪಾತ್ರರ ಜೊತೆಗೆ ಹಿಂತಿರುಗುವ ಆಸೆಯನ್ನು ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೆ. ಆದರೆ ಅಲ್ಲಾಹನ ಇಚ್ಛೆಯು ಅನಿರೀಕ್ಷಿತವಾಗಿತ್ತು, ಮತ್ತು ಆತನ ತೀರ್ಮಾನವೇ ಅಂತಿಮ. ನೋವಿನ ಎಲ್ಲಾ ರೂಪಗಳನ್ನು ನಾನು ಅನುಭವಿಸಿದ್ದೇನೆ, ದುಃಖ ಮತ್ತು ನಷ್ಟವನ್ನು ಪದೇ ಪದೇ ಕಂಡಿದ್ದೇನೆ. ಆದರೂ, ಸತ್ಯವನ್ನು ಅದು ಇರುವಂತೆಯೇ, ಯಾವುದೇ ಬದಲಾವಣೆ ಅಥವಾ ಸುಳ್ಳಿಲ್ಲದೆ ಹೇಳಲು ನಾನು ಎಂದಿಗೂ ಹಿಂಜರಿಯಲಿಲ್ಲ. ನಮ್ಮ ಹತ್ಯೆಯನ್ನು ಒಪ್ಪಿಕೊಂಡ, ನಮ್ಮ ಉಸಿರುಗಳನ್ನು ಬಂಧಿಸಿದ, ನಮ್ಮ ಮಕ್ಕಳ ಮತ್ತು ಮಹಿಳೆಯರ ಛಿದ್ರಗೊಂಡ ದೇಹಗಳನ್ನು ನೋಡಿಯೂ ಹೃದಯ ಕರಗದ ಮತ್ತು ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ನಮ್ಮ ಜನರ ಮೇಲೆ ನಡೆಯುತ್ತಿರುವ ಈ ಮಾರಣಹೋಮವನ್ನು ನಿಲ್ಲಿಸದವರ ವಿರುದ್ಧ ಅಲ್ಲಾಹನು ಸಾಕ್ಷಿಯಾಗಿರುತ್ತಾನೆ ಎಂದು ನಾನು ನಂಬಿದ್ದೇನೆ.

ನಾನು ಪ್ಯಾಲೆಸ್ಟೈನ್ ಅನ್ನು ನಿಮ್ಮ ಕೈಗೆ ಒಪ್ಪಿಸುತ್ತೇನೆ. ಇದು ಮುಸ್ಲಿಂ ಪ್ರಪಂಚದ ಒಂದು ರತ್ನ ಮತ್ತು ಪ್ರತಿಯೊಬ್ಬ ಸ್ವತಂತ್ರ ಹೃದಯದ ಆಸೆಯಾಗಿದೆ. ಸಾವಿರಾರು ಟನ್‌ಗಳ ಇಸ್ರೇಲಿ ಬಾಂಬ್‌ಗಳಿಂದ ಹರಿದುಹೋದ ಅಮಾಯಕ ಮಕ್ಕಳ ದೇಹಗಳು ಮತ್ತು ಅಲ್ಲಿನ ಜನರ ಜವಾಬ್ದಾರಿಯನ್ನು ನಾನು ನಿಮಗೆ ವಹಿಸುತ್ತಿದ್ದೇನೆ. ಯಾವುದೇ ಬಂಧನಗಳು ನಿಮ್ಮನ್ನು ಮೌನವಾಗಿಸಬಾರದು. ನಮ್ಮ ನೆಲ ಮತ್ತು ಜನರಿಗೆ ಘನತೆ ಮತ್ತು ಸ್ವಾತಂತ್ರ್ಯ ದೊರೆಯುವವರೆಗೂ ಅವರನ್ನು ಬಿಡುಗಡೆಗೊಳಿಸುವ ಸೇತುವೆಯಾಗಿ ನೀವು ಇರಿ.

ನನ್ನ ಪ್ರೀತಿಯ ಕುಟುಂಬವನ್ನು ನಿಮಗೆ ಒಪ್ಪಿಸುತ್ತಿದ್ದೇನೆ. ನನ್ನ ಕಣ್ಣಿನ ದೃಷ್ಟಿಯಂತಿದ್ದ ಮಗಳು ಶಮ್ಳನ್ನು ನಿಮಗೆ ವಹಿಸುತ್ತಿದ್ದೇನೆ, ಅವಳು ಬೆಳೆಯುವುದನ್ನು ನೋಡುವ ಆಸೆ ನನಗೆ ಈಡೇರಲಿಲ್ಲ. ನನ್ನ ಮಗ ಸಲಾಹ್‌ನನ್ನು ನಿಮಗೆ ಒಪ್ಪಿಸುತ್ತೇನೆ, ಅವನು ನನ್ನ ಜವಾಬ್ದಾರಿಯನ್ನು ಹೊರುವಷ್ಟು ಶಕ್ತಿಯುತನಾಗುವವರೆಗೆ ನಾನು ಅವನ ಬೆಂಬಲಕ್ಕೆ ನಿಲ್ಲಬೇಕಿತ್ತು.

ನನ್ನ ಶಕ್ತಿಯಾಗಿದ್ದ ಪ್ರೀತಿಯ ತಾಯಿಯನ್ನು, ಅವರ ಪ್ರಾರ್ಥನೆಗಳು ನನ್ನನ್ನು ಕಾಪಾಡಿದವು, ನಿಮಗೆ ಒಪ್ಪಿಸುತ್ತೇನೆ. ಜೀವನದುದ್ದಕ್ಕೂ ನನ್ನ ಜೊತೆಗಿದ್ದ ನನ್ನ ಪತ್ನಿ ಬಯಾನ್ಳನ್ನು ನಿಮಗೆ ವಹಿಸುತ್ತೇನೆ. ಯುದ್ಧವು ನಮ್ಮನ್ನು ದೂರಮಾಡಿದರೂ, ಅವಳು ದೃಢವಾಗಿ ಮತ್ತು ನಿಷ್ಠೆಯಿಂದ ಕುಟುಂಬವನ್ನು ನೋಡಿಕೊಂಡಳು. ದಯವಿಟ್ಟು ನೀವು ಎಲ್ಲರೂ ಸೇರಿ, ಅವರಿಗೆ ಅಲ್ಲಾಹನ ನಂತರ ದೊಡ್ಡ ಬೆಂಬಲವಾಗಿರಿ.

ನನ್ನ ಅಂತ್ಯ ಸಂಭವಿಸಿದರೆ, ನನ್ನ ತತ್ವಗಳಿಗೆ ಬದ್ಧನಾಗಿ ಈ ಜಗತ್ತನ್ನು ಬಿಡುತ್ತೇನೆ. ಅಲ್ಲಾಹನ ಇಚ್ಛೆಯಿಂದ ನಾನು ತೃಪ್ತನಾಗಿದ್ದೇನೆ ಮತ್ತು ಆತನನ್ನು ಸೇರುವುದು ಶಾಶ್ವತ ಶಾಂತಿಯ ದಾರಿ ಎಂದು ನಾನು ನಂಬಿದ್ದೇನೆ.

ಓ ಅಲ್ಲಾಹ್, ನನ್ನನ್ನು ಹುತಾತ್ಮನಾಗಿ ಸ್ವೀಕರಿಸು. ನನ್ನ ಭೂತ ಮತ್ತು ಭವಿಷ್ಯದ ಪಾಪಗಳನ್ನು ಕ್ಷಮಿಸು. ನನ್ನ ರಕ್ತದ ಹನಿಯು ನನ್ನ ಜನ ಮತ್ತು ಕುಟುಂಬದ ಸ್ವಾತಂತ್ರ್ಯಕ್ಕಾಗಿ ಪ್ರಕಾಶಿಸುವ ಬೆಳಕಾಗಲಿ. ಒಂದು ವೇಳೆ ನಾನು ಎಲ್ಲಿಯಾದರೂ ತಪ್ಪು ಮಾಡಿದ್ದರೆ ನನ್ನನ್ನು ಕ್ಷಮಿಸು. ನನ್ನ ಒಡಂಬಡಿಕೆಗೆ ನಾನು ಸದಾ ನಿಷ್ಠನಾಗಿದ್ದೇನೆ. ಗಾಜಾವನ್ನು ಮರೆಯಬೇಡಿ… ಮತ್ತು ನಿಮ್ಮ ಒಳ್ಳೆಯ ಪ್ರಾರ್ಥನೆಗಳಲ್ಲಿ ನನ್ನನ್ನು ದಯೆಯಿಂದ ನೆನಪಿಸಿಕೊಳ್ಳಿ.

ಅನಾಸ್ ಅಲ್-ಶರೀಫ್

06.04.2025″

ಮಹಿಳೆಯೊಬ್ಬರು ಎರಡು ಬಾರಿ ಮತ ಚಲಾಯಿಸಿದ ಆರೋಪ: ರಾಹುಲ್ ಗಾಂಧಿಯಿಂದ ದಾಖಲೆ ಕೇಳಿದ ರಾಜ್ಯ ಚುನಾವಣಾಧಿಕಾರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...