ಭಾನುವಾರ ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಮಸೀದಿಯೊಂದರ ಸಮೀಕ್ಷೆಗೆ ಸಂಬಂಧಿಸಿದಂತೆ ಹಿಂಸಾಚಾರದಲ್ಲಿ ನಾಲ್ವರು ಸಾವನ್ನಪ್ಪಿದ ನಂತರ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಶಾಲೆಗಳನ್ನು ಮುಚ್ಚಲಾಗಿದೆ.
ಮೊಘಲರ ಕಾಲದ ಶಾಹಿ ಜಾಮಾ ಮಸೀದಿಯ ನ್ಯಾಯಾಲಯದ ಆದೇಶದ ಸಮೀಕ್ಷೆಯು ಸ್ಥಳೀಯರು ಮತ್ತು ಪೊಲೀಸರ ನಡುವೆ ಹಿಂಸಾತ್ಮಕ ಘರ್ಷಣೆಗೆ ಕಾರಣವಾದಾಗ ಭಾನುವಾರ ಬೆಳಿಗ್ಗೆ ಸಂಭಾಲ್‌ನಲ್ಲಿ ಗೊಂದಲವು ಉಂಟಾಯಿತು. ಮಸೀದಿಯನ್ನು ಹಿಂದೂ ದೇವಾಲಯದ ಸ್ಥಳದಲ್ಲಿ ನಿರ್ಮಿಸಲಾಗಿದೆ ಎಂಬ ವಿವಾದಾತ್ಮಕ ಕಾನೂನು ಹೋರಾಟದಿಂದ ವಿವಾದ ಉಂಟಾಗಿದೆ.
ಪ್ರತಿಭಟನಾಕಾರರು ಕೆಲವು ವಾಹನಗಳಿಗೆ ಬೆಂಕಿ ಹಚ್ಚಿದ್ದು, ಪೊಲೀಸರ ಮೇಲೆ ಕಲ್ಲು ಎಸೆದರು. ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಲಾಠಿಗಳನ್ನು ಬಳಸಿದರು.
ಈ ಗಲಾಟೆಯಲ್ಲಿ ಸುಮಾರು 20 ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ. ತಲೆಗೆ ಪೆಟ್ಟಾಗಿರುವ ಕಾನ್‌ಸ್ಟೆಬಲ್ ಸ್ಥಿತಿ ಚಿಂತಾಜನಕವಾಗಿದೆ.
ಮೂವರು ಮಹಿಳೆಯರು ಸೇರಿದಂತೆ 21 ಜನರನ್ನು ಬಂಧಿಸಿ ತನಿಖೆಯನ್ನು ಪ್ರಾರಂಭಿಸಲಾಗಿದೆ. ಹಿಂಸಾಚಾರದ ಆರೋಪಿಗಳನ್ನು ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ದಾಖಲಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಇಬ್ಬರ ಸಾವಿಗೆ ಕಾರಣ ಸ್ಪಷ್ಟವಾಗಿದೆ, ಕಂಟ್ರಿಮೇಡ್ ಪಿಸ್ತೂಲ್‌ನಿಂದ ಗುಂಡಿನ ಗಾಯಗಳು. ಮೂರನೇ ವ್ಯಕ್ತಿಯ ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ. ಆದರೆ, ಮರಣೋತ್ತರ ಪರೀಕ್ಷೆಯ ನಂತರ ಕಾರಣ ಗೊತ್ತಾಗಲಿದೆ” ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದರ್ ಪೆನ್ಸಿಯಾ ಹೇಳಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ಸಂಭಾಲ್ ತಹಸಿಲ್‌ನಲ್ಲಿ 24 ಗಂಟೆಗಳ ಕಾಲ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಜಿಲ್ಲಾಡಳಿತವು 12 ನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ನವೆಂಬರ್ 25 ರಂದು ರಜೆ ಘೋಷಿಸಿದೆ.
ನವೆಂಬರ್ 30 ರವರೆಗೆ ಯಾವುದೇ ಹೊರಗಿನವರು, ಸಾಮಾಜಿಕ ಸಂಸ್ಥೆಗಳು ಅಥವಾ ಸಾರ್ವಜನಿಕ ಪ್ರತಿನಿಧಿಗಳು ಅಧಿಕಾರಿಗಳ ಆದೇಶವಿಲ್ಲದೆ ಸಂಭಾಲ್‌ಗೆ ಪ್ರವೇಶಿಸುವುದನ್ನು ಅಧಿಕಾರಿಗಳು ನಿರ್ಬಂಧಿಸಿದ್ದಾರೆ.
ಕಳೆದ ಮಂಗಳವಾರದಿಂದ ಜಾಮಾ ಮಸೀದಿಯಲ್ಲಿ ಹರಿಹರ ದೇವಸ್ಥಾನವಿದೆ ಎಂಬ ಅರ್ಜಿಯ ಮೇರೆಗೆ ಸ್ಥಳೀಯ ನ್ಯಾಯಾಲಯದ ಆದೇಶದ ಮೇರೆಗೆ ಸಮೀಕ್ಷೆ ನಡೆಸಿದಾಗ ಸಂಭಾಲ್ ಉದ್ವಿಗ್ನವಾಗಿತ್ತು. ಮಂಗಳವಾರದಂದು ಸಮೀಕ್ಷೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಸಾಮಾನ್ಯವಾಗಿ ಮಧ್ಯಾಹ್ನ ನಡೆಯುವ ಪ್ರಾರ್ಥನೆಗಳಿಗೆ ಅಡ್ಡಿಯಾಗುವುದನ್ನು ತಪ್ಪಿಸಲು ಭಾನುವಾರ ಬೆಳಿಗ್ಗೆ ಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂ ಪರ ವಕೀಲರು 1529 ರಲ್ಲಿ ಮೊಘಲ್ ಚಕ್ರವರ್ತಿ ಬಾಬರ್ ಈ ಸ್ಥಳದಲ್ಲಿ ಇದ್ದ ದೇವಾಲಯವನ್ನು ಕೆಡವಿದರು ಎಂದು ಪ್ರತಿಪಾದಿಸಿದರು.
ಸಮೀಕ್ಷೆಯ ಬೆಂಬಲಿಗರು ಐತಿಹಾಸಿಕ ಸತ್ಯಗಳನ್ನು ಬಯಲಿಗೆಳೆಯುವಲ್ಲಿ ಇದು ಅಗತ್ಯವಾದ ಹೆಜ್ಜೆ ಎಂದು ವಾದಿಸುತ್ತಾರೆ. ಆದರೆ, ವಿಮರ್ಶಕರು ಇದನ್ನು ಪೂಜಾ ಸ್ಥಳಗಳ ಕಾಯಿದೆ, 1991 ರ ಪ್ರಕಾರ ಧಾರ್ಮಿಕ ಸ್ಥಳಗಳ ಪಾವಿತ್ರ್ಯತೆಯನ್ನು ಉಲ್ಲಂಘಿಸುವ ಪ್ರಚೋದನೆ ಎಂದು ಪರಿಗಣಿಸುತ್ತಾರೆ.
ಹಿಂಸಾಚಾರದ ನಡುವೆಯೂ ಅಧಿಕಾರಿಗಳು ಯೋಜನೆಯಂತೆ ಸಮೀಕ್ಷೆ ಪೂರ್ಣಗೊಳಿಸಿದ್ದಾರೆ. ಪ್ರಕರಣದ ಅರ್ಜಿದಾರರಾಗಿರುವ ವಕೀಲ ವಿಷ್ಣು ಶಂಕರ್ ಜೈನ್, ನ್ಯಾಯಾಲಯದ ನಿರ್ದೇಶನದಂತೆ ಸಮೀಕ್ಷಾ ತಂಡವು ವೀಡಿಯೊಗ್ರಫಿ ಮತ್ತು ಛಾಯಾಗ್ರಹಣದ ಮೂಲಕ ಸೈಟ್‌ನ ವಿವರವಾದ ಪರೀಕ್ಷೆಯನ್ನು ನಡೆಸಿತು. ಸಮೀಕ್ಷಾ ವರದಿಯನ್ನು ನವೆಂಬರ್ 29 ರೊಳಗೆ ಸಲ್ಲಿಸಲು ನಿರ್ಧರಿಸಲಾಗಿದೆ.
ಜೈನ್ ಮತ್ತು ಅವರ ತಂದೆ ಹರಿ ಶಂಕರ್ ಜೈನ್ ಅವರು ಈ ಹಿಂದೆ ವಾರಣಾಸಿಯ ಜ್ಞಾನವಾಪಿ ಮಸೀದಿ-ಕಾಶಿ ವಿಶ್ವನಾಥ ದೇವಾಲಯ ವಿವಾದ ಸೇರಿದಂತೆ ಪೂಜಾ ಸ್ಥಳಗಳಿಗೆ ಸಂಬಂಧಿಸಿದ ಅನೇಕ ಪ್ರಕರಣಗಳಲ್ಲಿ ಪ್ರತಿನಿಧಿಸಿದ್ದಾರೆ.
ಇದನ್ನೂ ಓದಿ; ಸಂಭಾಲ್ ಹಿಂಸಾಚಾರದ ಹಿಂದೆ ಬಿಜೆಪಿ ಇದೆ; ಚುನಾವಣಾ ರಿಗ್ಗಿಂಗ್ ಗಮನ ಬೇರೆಡೆ ಸೆಳೆಯಲು ಬಯಸಿದೆ: ಅಖಿಲೇಶ್ ಯಾದವ್


