ಕರೂರಿನಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಯ ಕುರಿತು ತಪ್ಪು ಮಾಹಿತಿ ಹರಡಿದ ಆರೋಪದ ಮೇಲೆ ಗ್ರೇಟರ್ ಚೆನ್ನೈ ಸೈಬರ್ ಅಪರಾಧ ಪೊಲೀಸರು ಮಂಗಳವಾರ (ಸೆ.30) ಯೂಟ್ಯೂಬರ್ ಫೆಲಿಕ್ಸ್ ಜೆರಾಲ್ಡ್ ಅವರನ್ನು ಬಂಧಿಸಿದ್ದಾರೆ ವರದಿಯಾಗಿದೆ.
ಸೆಪ್ಟೆಂಬರ್ 27ರಂದು ನಟ ವಿಜಯ್ ನೇತೃತ್ವದ ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 41 ಮಂದಿ ಸಾವನ್ನಪ್ಪಿದ್ದು, 50 ಜನರು ಗಾಯಗೊಂಡಿದ್ದಾರೆ.
ಮಂಗಳವಾರ ಮುಂಜಾನೆ ಚೆನ್ನೈನ ನುಂಗಂಬಕ್ಕಂನಲ್ಲಿರುವ ಮನೆಯಿಂದ ಜೆರಾಲ್ಡ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರೆಡ್ ಪಿಕ್ಸ್‌ನಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋದಲ್ಲಿ ಘಟನೆಗೆ ಸರ್ಕಾರವೇ ಕಾರಣ ಎಂದು ಜೆರಾಲ್ಡ್ ಆರೋಪಿಸಿದ್ದರು ಮತ್ತು ವಿಜಯ್‌ಗೆ ಬೆಂಬಲ ವ್ಯಕ್ತಪಡಿಸಿದ್ದರು ಎಂದು ವರದಿಗಳು ಹೇಳಿವೆ.
ಸಾಮಾಜಿಕ ಮಾಧ್ಯಮಗಳಲ್ಲಿ ಕಾಲ್ತುಳಿತದ ಬಗ್ಗೆ ವದಂತಿಗಳನ್ನು ಹರಡಿದ ಆರೋಪದ ಮೇಲೆ ಬಿಜೆಪಿ ರಾಜ್ಯ ಕಲೆ ಮತ್ತು ಸಂಸ್ಕೃತಿ ಕಾರ್ಯದರ್ಶಿ ಸಗಾಯಂ (38) ಮತ್ತು ಟಿವಿಕೆ ಕಾರ್ಯಕರ್ತರಾದ ಮಾಂಗಾಡು ಮೂಲದ ಶಿವನೇಶ್ವರನ್ (36) ಹಾಗೂ ಅವಡಿಯ ಶರತ್ ಕುಮಾರ್ (32) ಅವರನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಪ್ರಚಲಿತ ವಿದ್ಯಮಾನಗಳ ಮೇಲೆ ಕೇಂದ್ರೀಕರಿಸಿ ವಿಡಿಯೋ ಮಾಡುವ ತಮಿಳು ಭಾಷೆಯ ಯೂಟ್ಯೂಬರ್ ಜೆರಾಲ್ಡ್, ಕರೂರು ದುರಂತದ ತನಿಖೆಯ ಭಾಗವಾಗಿ ಬಂಧನಕ್ಕೆ ಒಳಗಾದ ಇತ್ತೀಚಿನ ವ್ಯಕ್ತಿಯಾಗಿದ್ದಾರೆ.
ರಾಜ್ಯ ಸರ್ಕಾರ ಮತ್ತು ಪೊಲೀಸರ ವಿರುದ್ಧ ‘ತಪ್ಪು ಮಾಹಿತಿ ಹರಡಿದ’ ಆರೋಪದ ಮೇಲೆ 25 ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಉಳಿದ ಆರೋಪಿಗಳ ವಿರುದ್ಧ ಬಂಧನ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


