ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಮುರುಡೇಶ್ವರಕ್ಕೆ ಶೈಕ್ಷಣಿಕ ಪ್ರವಾಸಕ್ಕೆಂದು ತೆರಳಿದ್ದ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಎಂ.ಕೊತ್ತೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನಾಲ್ವರು ವಿದ್ಯಾರ್ಥಿನಿಯರು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ (ಡಿ.10) ನಡೆದಿದೆ.
ಈ ಪ್ರಕರಣ ಸಂಬಂಧ ವಸತಿ ಶಾಲೆಯ ಪ್ರಾಂಶುಪಾಲೆಯನ್ನು ಅಮಾನತು ಮಾಡಲಾಗಿದ್ದು, ಅತಿಥಿ ಶಿಕ್ಷಕರು ಮತ್ತು ಡಿ ಗ್ರೂಪ್ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಕಾರ್ಯ ನಿರ್ವಾಹಕ ನಿರ್ದೇಶಕ ಕಾಂತರಾಜು ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.
ಮುಳಬಾಗಿಲು ತಾಲೂಕು ಎಂ.ಕೊತ್ತೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಒಂಭತ್ತನೇ ತರಗತಿಯ 46 ವಿದ್ಯಾರ್ಥಿಗಳು ಪ್ರಾಂಶುಪಾಲರ ನೇತೃತ್ವದಲ್ಲಿ ಬನವಾಸಿ, ಶಿರಸಿ, ಗೋಕರ್ಣ, ಇಡಗುಂಜಿ, ಜೋಗ್ ಫಾಲ್ಸ್ ಮತ್ತು ಮುರುಡೇಶ್ವರಕ್ಕೆ ಪ್ರವಾಸಕ್ಕೆ ತೆರಳಿದ್ದರು.
ಮುರುಡೇಶ್ವರದ ಅರಬ್ಬಿ ಸಮುದ್ರದಲ್ಲಿ ಆಟವಾಡಲು ನೀರಿಗೆ ಇಳಿದಿದ್ದ ವೇಳೆ ಏಳು ಜನ ವಿದ್ಯಾರ್ಥಿನಿಯರು ಕೊಚ್ಚಿ ಹೋಗಿದ್ದಾರೆ. ಈ ಪೈಕಿ ಮೂವರನ್ನು ಸ್ಥಳದಲ್ಲಿದ್ದವರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಮುದ್ರಪಾಲಾದ ಉಳಿದ ನಾಲ್ವರ ಪೈಕಿ ಓರ್ವ ವಿದ್ಯಾರ್ಥಿನಿಯ ಮೃತದೇಹ ಮಂಗಳವಾರ ಸಿಕ್ಕಿತ್ತು. ಇನ್ನುಳಿದ ಮೂವರ ಮೃತದೇಹಗಳು ಇಂದು ಪತ್ತೆಯಾಗಿವೆ.
ಮಂಗಳವಾರ ವಿದ್ಯಾರ್ಥಿನಿ ಶಾವಂತಿ (15)ಯ ಮೃತದೇಹ ಪತ್ತೆಯಾಗಿತ್ತು. ಇಂದು ದೀಕ್ಷಾ (15), ಲಾವಣ್ಯ (15), ವಂದನಾ (15) ಎಂಬವರ ಮೃತದೇಹಗಳು ದೊರೆತಿವೆ.
ಪ್ರಾಂಶುಪಾಲೆ ಅಮಾನತು, ಶಿಕ್ಷಕರ ವಜಾ
ವಿದ್ಯಾರ್ಥಿನಿಯರು ಸಮುದ್ರ ಪಾಲಾದ ಘಟನೆಗೆ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ವಸತಿ ಶಾಲೆಯ ಪ್ರಾಂಶುಪಾಲೆ ಶಶಿಕಲಾ ಅವರನ್ನು ಅಮಾನತುಗೊಳಿಸಲಾಗಿದೆ. ಅತಿಥಿ ಶಿಕ್ಷಕರಾದ ಎಸ್. ಚೌಡಪ್ಪ, ಸಿ.ಎನ್ ಶಾರದಮ್ಮ,ಕೆ. ನರೇಶ್, ಆರ್. ಸುನೀಲ್,ಎಸ್. ವಿಶ್ವನಾಥ್ ಮತ್ತು ಡಿ ಗ್ರೂಪ್ ಸಿಬ್ಬಂದಿ ಲಕ್ಷಮ್ಮ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ.
ಸ್ವಯಂ ಪ್ರೇರಿತ ಪ್ರಕರಣ ದಾಖಲು
ವಿದ್ಯಾರ್ಥಿನಿಯರ ಸಾವಿಗೆ ಸಂಬಂಧಪಟ್ಟಂತೆ ವಸತಿ ಶಾಲೆಯ ಪ್ರಾಂಶುಪಾಲೆ ಶಶಿಕಲಾ, ಶಿಕ್ಷಕರಾದ ಆರ್.ಸುನೀಲ್, ಎಸ್.ಚೌಡಪ್ಪ, ಎಸ್.ವಿಶ್ವನಾಥ್, ಸಿ.ಎನ್.ಶಾರದಮ್ಮ ಮತ್ತು ಕೆ.ನರೇಶ್ ವಿರುದ್ಧ ಮುರ್ಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
5 ಲಕ್ಷ ಪರಿಹಾರ ಘೋಷಣೆ
ಮೃತ ನಾಲ್ವರು ವಿದ್ಯಾರ್ಥಿನಿಯರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ 5 ಲಕ್ಷ ಪರಿಹಾರ ಘೋಷಣೆ ಮಾಡಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದು, “ವಿದ್ಯಾರ್ಥಿಗಳ ಕುಟುಂಬಕ್ಕೆ ರಾಜ್ಯ ಸರ್ಕಾರದ ವತಿಯಿಂದ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಮೃತ ದೇಹಗಳನ್ನು ಹುಟ್ಟೂರಿಗೆ ತಲುಪಿಸುವ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದೇನೆ” ಎಂದಿದ್ದಾರೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆಂದು ಹೋದ ಸಂದರ್ಭದಲ್ಲಿ ಮುರುಡೇಶ್ವರ ಬಳಿಯ ಸಮುದ್ರದಲ್ಲಿ ನೀರುಪಾಲಾದ ಸುದ್ದಿ ತಿಳಿದು ಆಘಾತವಾಯಿತು. ಮೃತ ಮಕ್ಕಳ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಮಕ್ಕಳ ದುಃಖತಪ್ತ ಪೋಷಕರಿಗೆ ನನ್ನ ಸಂತಾಪಗಳು.
ಈ ದುರ್ಘಟನೆಯಲ್ಲಿ ಮಡಿದ ನಾಲ್ವರು…
— Siddaramaiah (@siddaramaiah) December 11, 2024
ಇದನ್ನೂ ಓದಿ : ಅನಧಿಕೃತ ರ‍್ಯಾಲಿ, ಸಂಚಾರಕ್ಕೆ ತಡೆ; ಎಸ್‌ಡಿಪಿಐ ಮುಖಂಡರನ್ನು ಬಂಧಿಸಿದ ಉಡುಪಿ ಪೊಲೀಸರು


