ಐಪೋನ್ ಬಿಡಿ ಭಾಗಗಳ ತಯಾರಿಕಾ ಕಂಪನಿ ಫಾಕ್ಸ್‌ಕಾನ್ ಉದ್ಯೋಗ ನೀಡುವ ವೇಳೆ ವಿವಾಹಿತ ಮಹಿಳೆಯರಿಗೆ ಅವಕಾಶ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
‘ಅವಿವಾಹಿತ ಮಹಿಳೆಯರಿಗೆ ಹೋಲಿಸಿದರೆ ವಿವಾಹಿತರಿಗೆ ಹೆಚ್ಚು ಕೌಟುಂಬಿಕ ಜವಾಬ್ದಾರಿಗಳಿವೆ’ ಎಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆ ಎಂದು ರಾಯಟರ್ಸ್ ತನಿಖಾ ವರದಿ ಹೇಳಿದೆ. ತಮಿಳುನಾಡಿನ ಚೆನ್ನೈ ಸಮೀಪದ ಶ್ರೀಪೆರಂಬದೂರ್‌ನಲ್ಲಿರುವ ಘಟಕವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಫಾಕ್ಸ್‌ಕಾನ್ ಕಂಪನಿಗೆ ಉದ್ಯೋಗ ಕೇಳಿ ಬರುವ ವಿವಾಹಿತ ಮಹಿಳೆಯರಿಗೆ ಸಂಸ್ಥೆಯ ಆವರಣದೊಳಕ್ಕೆ ಪ್ರವೇಶಿಸಲೂ ಅನುಮತಿ ನೀಡುತ್ತಿಲ್ಲ. ಕಂಪನಿಯ ಗೇಟ್ ಒಳಗೆ ಪ್ರವೇಶಿಸುವ ಮುನ್ನವೇ ಅಲ್ಲಿನ ಭದ್ರತಾ ಸಿಬ್ಬಂದಿ ವೈವಾಹಿಕ ಸ್ಥಿತಿಯ ಬಗ್ಗೆ ಕೇಳುತ್ತಾರೆ ಎಂದು ವರದಿ ಹೇಳಿದೆ.
ವಿವಾಹಿತ ಮಹಿಳೆಯರು ಕೌಟುಂಬಿಕ ಕರ್ತವ್ಯಗಳು, ಗರ್ಭಧಾರಣೆ ಮತ್ತು ಹೆಚ್ಚು ಗೈರಾಗುತ್ತಾರೆ ಎಂಬ ಕಾರಣಗಳನ್ನು ನೀಡಿ ಕಂಪನಿಯು ಉದ್ಯೋಗ ನೀಡುತ್ತಿಲ್ಲ ಎಂದು ಅಲ್ಲಿನ ಹಾಲಿ ಮತ್ತು ಮಾಜಿ ಉದ್ಯೋಗಿಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.
‘ಸಾಂಸ್ಕೃತಿಕ ಹಾಗೂ ಸಾಮಾಜಿಕ ವಿಷಯಕ್ಕೆ ಸಂಬಂಧಿಸಿದ ಕೆಲವು ಕಾರಣಗಳಿಂದಾಗಿ ವಿವಾಹಿತೆಯರಿಗೆ ಫಾಕ್ಸ್‌ಕಾನ್ ಘಟಕದಲ್ಲಿ ಉದ್ಯೋಗ ನೀಡದೆ ತಿರಸ್ಕರಿಸಲಾಗುತ್ತಿದೆ’ ಎಂದು ಕಂಪನಿ ತೊರೆದಿರುವ ಫಾಕ್ಸ್‌ಕಾನ್ ಇಂಡಿಯಾದ ಮಾನವ ಸಂಪನ್ಮೂಲ ವಿಭಾಗದ ಕಾರ್ಯ ನಿರ್ವಾಹಕ ಅಧಿಕಾರಿ ಎಸ್. ಪಾಲ್ ಹೇಳಿದ್ದಾರೆ.
‘ಹಿಂದೂ ಮಹಿಳೆಯರು ಮಾಂಗಲ್ಯ ಸೇರಿ ಚಿನ್ನದ ಆಭರಣಗಳನ್ನು ಧರಿಸುತ್ತಾರೆ. ಇದರಿಂದ ಐಫೋನ್ ತಯಾರಿಕಾ ಕೆಲಸಕ್ಕೆ ತೊಂದರೆಯಾಗುತ್ತಿದೆ. ಹಾಗಾಗಿ, ವಿವಾಹಿತೆಯರಿಗೆ ನೇಮಕಕ್ಕೆ ಅವಕಾಶ ನೀಡಲು ಹಿಂದೇಟು ಹಾಕಲಾಗುತ್ತಿದೆ’ ಎಂದು ಈ ಮೂಲಗಳು ತಿಳಿಸಿವೆ ಎಂದೂ ವರದಿ ಹೇಳಿದೆ.
ಬಾಹ್ಯ ಏಜೆನ್ಸಿಗಳ ಮೂಲಕ ಫಾಕ್ಸ್‌ಕಾನ್ ಉದ್ಯೋಗಿಗಳ ನೇಮಕಾತಿ ನಡೆಸುತ್ತದೆ. ಈ ಏಜೆನ್ಸಿಗಳು ಅಧಿಕೃತ ಸೇವಾ ಪೂರೈಕೆದಾರರು ಎಂದು ತಮಿಳುನಾಡು ಸರ್ಕಾರದಿಂದ ನೋಂದಣಿ ಪಡೆದಿವೆ. ಆದರೆ ಉದ್ಯೋಗ ನೀಡುವ ವೇಳೆ ನಡೆಸುವ ತಾರತಮ್ಯದ ಕುರಿತ ಪ್ರಶ್ನೆಗಳಿಗೆ ಸರ್ಕಾರವಾಗಲಿ, ಈ ಏಜೆನ್ಸಿಗಳಾಗಲಿ ಪ್ರತಿಕ್ರಿಯಿಸಿಲ್ಲ ಎಂದು ವರದಿ ಹೇಳಿದೆ.
ಇದನ್ನೂ ಓದಿ : ಮುಂಬೈ ಕಾಲೇಜಿನ ಹಿಜಾಬ್ ನಿಷೇಧ ನಿರ್ಧಾರ ಎತ್ತಿ ಹಿಡಿದ ಬಾಂಬೆ ಹೈಕೋರ್ಟ್: ವಿದ್ಯಾರ್ಥಿನಿಯರ ಅರ್ಜಿ ವಜಾ


