ಟಿಪ್ಪು ಸುಲ್ತಾನ್ ವಂಶಸ್ಥೆ, ಬ್ರಿಟಿಷ್ ಭಾರತೀಯ ಗೂಢಚಾರಿ ನೂರ್ ಇನಾಯತ್ ಖಾನ್ ಅವರು ಎರಡನೇ ಮಹಾಯುದ್ಧದ ಸಮಯದಲ್ಲಿ ಜರ್ಮನಿಯ ನಾಜಿಗಳ ವಿರುದ್ಧ ಹೋರಾಡಿದ ಕಾರಣಕ್ಕೆ ಫ್ರೆಂಚ್ ಅಂಚೆ ಸೇವೆಯು ನೂರ್ ಅವರ ಅಂಚೆಚೀಟಿ ಬಿಡುಗಡೆ ಮಾಡುವ ಮೂಲಕ ಗೌರವ ಸಲ್ಲಿಸಿದೆ.
18ನೇ ಶತಮಾನದ ಮೈಸೂರು ದೊರೆ ಟಿಪ್ಪು ಸುಲ್ತಾನನ ವಂಶಸ್ಥೆಯಾಗಿರುವ ನೂರ್ ಇನಾಯತ್ ಖಾನ್, ಎರಡನೇ ಮಹಾಯುದ್ಧದ ಸಮಯದಲ್ಲಿ ಗುಪ್ತ ಬ್ರಿಟಿಷ್ ಏಜೆಂಟ್ ಆಗಿ ಫ್ರೆಂಚ್ ಪ್ರತಿರೋಧದಲ್ಲಿ ವಹಿಸಿದ ಪಾತ್ರಕ್ಕಾಗಿ ಫ್ರಾನ್ಸ್ ಸ್ಮರಣಾರ್ಥ ಅಂಚೆ ಚೀಟಿಯೊಂದಿಗೆ ಗೌರವಿಸಲ್ಪಟ್ಟ ಏಕೈಕ ಭಾರತೀಯ ಮೂಲದ ಮಹಿಳೆಯಾಗಿದ್ದಾರೆ.
ಫ್ರೆಂಚ್ ಅಂಚೆ ಸೇವೆ, ಲಾ ಪೋಸ್ಟೆ, ನಾಜಿ ಜರ್ಮನಿಯ ವಿರುದ್ಧ ಹೋರಾಡಿದ “ಪ್ರತಿರೋಧದ ವ್ಯಕ್ತಿಗಳ” ಗೌರವಾರ್ಥವಾಗಿ ಬಿಡುಗಡೆ ಮಾಡಲಾದ ಅಂಚೆಚೀಟಿಯೊಂದಿಗೆ ನೂರ್ ಅವರನ್ನು ಗೌರವಿಸಿದೆ. ಎರಡನೇ ಮಹಾಯುದ್ಧದ 80 ವರ್ಷಗಳನ್ನು ಗುರುತಿಸಲು ಈ ತಿಂಗಳು ಬಿಡುಗಡೆ ಮಾಡಲಾದ ಅಂಚೆಚೀಟಿಗಳ ಸೆಟ್‌ನಲ್ಲಿ ಆಯ್ಕೆಯಾದ ಒಂದು ಡಜನ್ ಯುದ್ಧ ವೀರರು ಮತ್ತು ನಾಯಕಿಯರಲ್ಲಿ ಅವರು ಒಬ್ಬರು.
“ಯುದ್ಧದ ಅಂತ್ಯದ 80 ನೇ ಮಹತ್ವದ ವಾರ್ಷಿಕೋತ್ಸವದಂದು ಫ್ರಾನ್ಸ್ ನೂರ್ ಇನಾಯತ್ ಖಾನ್ ಅವರಿಗೆ ಅಂಚೆ ಚೀಟಿ ನೀಡಿ ಗೌರವಿಸಿರುವುದು ನನಗೆ ಸಂತೋಷ ತಂದಿದೆ” ಎಂದು ನೂರ್ ಅವರ ಜೀವನ ಚರಿತ್ರೆ – ‘ಸ್ಪೈ ಪ್ರಿನ್ಸೆಸ್: ದಿ ಲೈಫ್ ಆಫ್ ನೂರ್ ಇನಾಯತ್ ಖಾನ್’ ನ ಲಂಡನ್ ಮೂಲದ ಲೇಖಕಿ ಶ್ರಬಾನಿ ಬಸು ಹೇಳಿದ್ದಾರೆ.
“ನೂರ್ ಫ್ಯಾಸಿಸಂ ವಿರುದ್ಧದ ಹೋರಾಟದಲ್ಲಿ ತನ್ನ ಪ್ರಾಣವನ್ನು ತ್ಯಾಗ ಮಾಡಿದಳು. ಅವಳು ಪ್ಯಾರಿಸ್‌ನಲ್ಲಿ ಬೆಳೆದಳು, ಇಂಗ್ಲೆಂಡ್‌ನಲ್ಲಿ ಯುದ್ಧ ಪ್ರಯತ್ನದಲ್ಲಿ ಸೇರಿಕೊಂಡಳು, ಮತ್ತು ಫ್ರಾನ್ಸ್‌ನಲ್ಲಿ ಸಾಮಾನ್ಯ ಜನರು ಪೋಸ್ಟ್ ಮಾಡುವ ಅಂಚೆ ಚೀಟಿಯಲ್ಲಿ ಅವಳ ಮುಖವನ್ನು ನೋಡುವುದು ಅದ್ಭುತವಾಗಿದೆ,” ಎಂದು ಅವರು ಹೇಳಿದರು.
ಪ್ರತಿಯೊಂದು ಅಂಚೆಚೀಟಿ ಛಾಯಾಚಿತ್ರದಿಂದ ತೆಗೆದ ಕೆತ್ತನೆಯ ರೂಪದಲ್ಲಿದ್ದು, ನೂರ್ ಅವರ ಮೇಲಿನ ಅಂಚೆಚೀಟಿ ಅವರ ಬ್ರಿಟಿಷ್ ಮಹಿಳಾ ಸಹಾಯಕ ವಾಯುಪಡೆ (WAAF) ಸಮವಸ್ತ್ರವನ್ನು ಪ್ರದರ್ಶಿಸುತ್ತದೆ.
“ನೂರ್ ಅವರ ಜನ್ಮ ಶತಮಾನೋತ್ಸವದ ನೆನಪಿಗಾಗಿ ಬ್ರಿಟನ್ 2014 ರಲ್ಲಿ ಅವರನ್ನು ಗೌರವಿಸಿತು. ಈಗ ಬ್ರಿಟನ್ ಮತ್ತು ಫ್ರಾನ್ಸ್ ಅವರ ಗೌರವಾರ್ಥವಾಗಿ ಅಂಚೆಚೀಟಿ ಹೊರಡಿಸಿವೆ. ಅವರ ಪೂರ್ವಜರ ದೇಶವಾದ ಭಾರತವು ಕೂಡ ಅಂಚೆಚೀಟಿಯೊಂದಿಗೆ ಅವರನ್ನು ಗೌರವಿಸುವ ಸಮಯ ಬಂದಿದೆ” ಎಂದು ಬಸು ಹೇಳಿದ್ದಾರೆ.


