ಗರ್ಭಪಾತವನ್ನು ಮಹಿಳೆಯ ‘ಸಾಂವಿಧಾನಿಕ ಹಕ್ಕು, ಎಂದು ಪ್ರತಿಪಾದಿಸಿರುವ ಫ್ರಾನ್ಸ್‌ನ ಶಾಸಕಾಂಗ, ಸೋಮವಾರ ನಡೆದ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಸಂವಿಧಾನದ 34ನೇ ವಿಧಿಗೆ ತಿದ್ದುಪಡಿ ತರುವ ಮಸೂದೆಯನ್ನು ಅಂಗೀಕರಿಸಿದೆ. ಈ ಮೂಲಕ ಗರ್ಭಪಾತವನ್ನು ಸಂವಿಧಾನಾತ್ಮಕ ಹಕ್ಕಾಗಿ ಘೋಷಿಸಿದ ವಿಶ್ವದ ಮೊದಲ ದೇಶ ಎನಿಸಿಕೊಂಡಿದೆ.
ಸರ್ಕಾರದ ಮಂಡಿಸಿದ ಮಸೂದೆಯನ್ನು ಸೆನೆಟರ್‌ಗಳು ದೊಡ್ಡ ಮಟ್ಟದಲ್ಲಿ ಬೆಂಬಲಿಸಿದ್ದಾರೆ. ಪ್ಯಾರಿಸ್‌ನ ಹೊರವಲಯದ ವರ್ಸೆಲ್ಲೆಸ್ ಅರಮನೆಯಲ್ಲಿ ನಡೆದ ಸಂಸತ್ತಿನ ಜಂಟಿ ಅಧಿವೇಶನದಲ್ಲಿ 780 ಮತಗಳು ಈ ಮಸೂದೆಯ ಪರವಾಗಿ ಚಲಾವಣೆಯಾದರೆ, ಕೇವಲ 72 ಮಂದಿ ವಿರೋಧಿಸಿದ್ದಾರೆ.
ಮಸೂದೆಯ ವಿರುದ್ಧವಾಗಿ ಮತ ಚಲಾಯಿಸಿದವರು ಮಕ್ಕಳನ್ನು ಹೊಂದುವ ಹಕ್ಕುಗಳನ್ನು ಪ್ರತಿಪಾದಿಸಿದ್ದಾರೆಯೇ ಹೊರತು, ಗರ್ಭಪಾತವನ್ನು ಅವರು ಸಂಪೂರ್ಣವಾಗಿ ವಿರೋಧಿಸಿಲ್ಲ ಎಂದು ವರದಿಯಾಗಿದೆ.
ಸಂಸತ್ತಿನಲ್ಲಿ ನಡೆದ ಮತದಾನದ ಫಲಿತಾಂಶವನ್ನು ಬೃಹತ್ ಪರದೆಯಲ್ಲಿ ಪ್ರದರ್ಶಿಸುತ್ತಿದ್ದಂತೆ, ಗರ್ಭಪಾತದ ಹಕ್ಕನ್ನು ಬೆಂಬಲಿಸುವ ಕಾರ್ಯಕರ್ತರು ಪ್ಯಾರಿಸ್‌ನಲ್ಲಿ ಜಮಾಯಿಸಿ ಸಂಭ್ರಮಾಚರಣೆ ನಡೆಸಿದ್ದಾರೆ. ಐಫೆಲ್ ಟವರ್ ಬಳಿ “ನನ್ನದೇಹ ನನ್ನ ಹಕ್ಕು” ಎಂಬ ಸಂದೇಶವನ್ನು ಪ್ರದರ್ಶಿಸಿದ್ದಾರೆ.
ಗರ್ಭಪಾತದ ಹಕ್ಕು ಫ್ರಾನ್ಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಸ್ವೀಕೃತವಾಗಿದ್ದು, ಗರ್ಭಪಾತವನ್ನು ಕಾನೂನುಬದ್ಧಗೊಳಿಸುವ ಕ್ರಮವನ್ನು ಫ್ರಾನ್ಸ್‌ನ ಶೇಕಡ 80ರಷ್ಟು ಮಂದಿ ಬೆಂಬಲಿಸಿರುವುದು ಸಮೀಕ್ಷೆಯಿಂದ ಗೊತ್ತಾಗಿದೆ. ಆದರೆ, ಗರ್ಭಪಾತ ವಿರೋಧಿ ಸಂಘಟನೆಗಳು ಇದನ್ನು ಕಟುವಾಗಿ ಟೀಕಿಸಿವೆ.
“ನಿಮ್ಮ ದೇಹ ನಿಮಗೆ ಸೇರಿದ್ದು, ನಿಮಗಾಗಿ ಬೇರೆ ಯಾರೂ ನಿರ್ಧಾರ ಕೈಗೊಳ್ಳುವಂತಿಲ್ಲ” ಎನ್ನುವ ಸಂದೇಶವನ್ನು ಎಲ್ಲ ಮಹಿಳೆಯರಿಗೆ ರವಾನಿಸುತ್ತಿದ್ದೇವೆ ಎಂದು ಪ್ರಧಾನಿ ಗ್ಯಾಬ್ರಿಯೆಲ್ ಅಟ್ಟಲ್ ಹೇಳಿದ್ದಾರೆ. ಫ್ರಾನ್ಸ್ ನಲ್ಲಿ 1974ರಿಂದಲೂ ಗರ್ಭಪಾತದ ಹಕ್ಕಿಗೆ ಸಂಬಂಧಿಸಿದ ಕಾನೂನು ಜಾರಿಯಲ್ಲಿದೆ.
ಅಮೆರಿಕದಲ್ಲಿ ಗರ್ಭಪಾತವನ್ನು ಮಹಿಳೆಯರ ಸಾಂವಿಧಾನಿಕ ಹಕ್ಕು ಎಂದು ಘೋಷಿಸಿದ ರಾಯ್ ವಿ.ವೇಡ್ ಅವರ ತೀರ್ಪನ್ನು 2022ರಲ್ಲಿ ಅಮೆರಿಕದ ಸುಪ್ರೀಂಕೋರ್ಟ್ ತಳ್ಳಿಹಾಕಿದ ಹಿನ್ನೆಲೆಯಲ್ಲಿ ಫ್ರಾನ್ಸ್ ಇದೀಗ ಇದನ್ನು ಮೂಲಭೂತ ಕಾನೂನಾಗಿ ಜಾರಿಗೊಳಿಸಿದ ಮೊದಲ ದೇಶವಾಗಲಿದೆ.
ಫ್ರಾನ್ಸ್ ಮೊದಲ ಬಾರಿಗೆ 1975ರಲ್ಲಿ ಗರ್ಭಪಾತವನ್ನು ಕಾನೂನುಬದ್ಧಗೊಳಿಸಿತ್ತು. ಆಗಿನ ಆರೋಗ್ಯ ಸಚಿವೆ ಸಿಮೋನ್ ವೇಲ್ ನೇತೃತ್ವದಲ್ಲಿ ಅಭಿಯಾನ ನಡೆದ ನಂತರ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಸಿಮೋನ್ ವೇಲ್ ಅವರು ನಾಝಿಗಳ ಆಶ್ವಿಟ್ಜ್ ಹತ್ಯಾಕಾಂಡದಲ್ಲಿ ಬದುಕುಳಿದವರು. ಫ್ರಾನ್ಸ್‌ನ ದೊಡ್ದ ಸ್ತ್ರೀವಾದಿಯಾಗಿದ್ದರು.
ಇದನ್ನೂ ಓದಿ : ಉಕ್ರೇನ್ ವಿರುದ್ಧ ಯುದ್ಧದಲ್ಲಿ ಹೋರಾಡುವಂತೆ ರಷ್ಯಾದಿಂದ ಬಲವಂತ: ಭಾರತೀಯರಿಂದ ವಿಡಿಯೋ ರಿಲೀಸ್


