Homeಮುಖಪುಟಇಡಿ ದಾಳಿ ಬೆನ್ನಲ್ಲೇ ಬಿಜೆಪಿ ಸೇರಿದ ಟಿಎಂಸಿಯ ಹಿರಿಯ ಶಾಸಕ

ಇಡಿ ದಾಳಿ ಬೆನ್ನಲ್ಲೇ ಬಿಜೆಪಿ ಸೇರಿದ ಟಿಎಂಸಿಯ ಹಿರಿಯ ಶಾಸಕ

ಪಶ್ಚಿಮ ಬಂಗಾಳದಿಂದ ಪಟ್ಟಿ ಹೋಗುತ್ತಿದೆ. ಅದರಂತೆ ಇಡಿ ದಾಳಿ ನಡೆಯುತ್ತಿದೆ ಎಂದ ಟಿಎಂಸಿ

- Advertisement -
- Advertisement -

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ)ದಿಂದ ಚುನಾವಣೆಗೆ ಸ್ಪರ್ಧಿಸಿ ಐದು ಬಾರಿ ಶಾಸಕರಾಗಿದ್ದ ತಪಸ್ ರಾಯ್ ಬುಧವಾರ (ಮಾ.6) ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಕೊಲ್ಕತ್ತಾದ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಯ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಸುಕಾಂತ್ ಮಜುಂದಾರ್ ಅವರು ತಪಸ್ ರಾಯ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.

“ಟಿಎಂಸಿಯ ದುರಾಡಳಿತ ಮತ್ತು ದೌರ್ಜನ್ಯದ ವಿರುದ್ಧ ಹೋರಾಡಲು ನಾನು ಇಂದು ಬಿಜೆಪಿಗೆ ಸೇರಿದ್ದೇನೆ” ಎಂದು ಪಕ್ಷ ಸೇರ್ಪಡೆ ಬಳಿಕ ತಪಸ್ ರಾಯ್ ಹೇಳಿದ್ದಾರೆ.

“ಮುನ್ಸಿಪಲ್ ಉದ್ಯೋಗ ಹಗರಣ ಪ್ರಕರಣ ಸಂಬಂಧ ಜನವರಿ 12ರಂದು ತನ್ನ ನಿವಾಸದ ಮೇಲೆ ಇಡಿ ದಾಳಿ ನಡೆಸಿತ್ತು. ಆಗ ಟಿಎಂಸಿ ಪಕ್ಷ ನನ್ನ ಸಹಾಯಕ್ಕೆ ಬಂದಿಲ್ಲ. ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮೌನ ವಹಿಸಿದ್ದರು” ಎಂದು ತಪಸ್ ರಾಯ್ ವಾಗ್ದಾಳಿ ನಡೆಸಿದ್ದಾರೆ.

“ತನ್ನ ವೈಯುಕ್ತಿಕ ಲಾಭಕ್ಕಾಗಿ ತತ್ವ ಸಿದ್ದಾಂತಗಳನ್ನು ಮರೆತು ತಪಸ್ ರಾಯ್ ಟಿಎಂಸಿ ತೊರೆದಿದ್ದಾರೆ. ಪಟ್ಟಭದ್ರ ಹಿತಾಸಕ್ತಿಗಳಿಗಾಗಿ ಪಕ್ಷವನ್ನು ತೊರೆದ ತಪಸ್ ರಾಯ್ ಅವರಂತಹ ದೇಶ ದ್ರೋಹಿಗಳನ್ನು ಬಂಗಾಳದ ಜನರು ಎಂದಿಗೂ ಕ್ಷಮಿಸುವುದಿಲ್ಲ” ಎಂದು ಟಿಎಂಸಿ ನಾಯಕ ಸಂತಾನು ಸೇನ್ ಹೇಳಿದ್ದಾರೆ.

ಇಡಿ ದಾಳಿ ಬೆನ್ನಲ್ಲೇ ಬಿಜೆಪಿ ಸೇರ್ಪಡೆ:

ಮುನ್ಸಿಪಲ್ ಉದ್ಯೋಗ ಹಗರಣ ಪ್ರಕರಣ ಸಂಬಂಧ ಜನವರಿ 12ರಂದು ತಪಸ್ ರಾಯ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದರು. ಅದೇ ದಿನ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಬಿಜೆಪಿ ನಾಯಕ ಸುವೇಂದು ಅಧಿಕಾರಿ, ಕಳ್ಳರ ಮನೆಗಳ ಮೇಲೆ ಇಡಿ ದಾಳಿ ನಡೆಯಲಿವೆ. ಬಂಗಾಳದ ಯುವಕರು ಮತ್ತು ಇತರ ಜನರು ಅವರು ಕಂಬಿ ಹಿಂದೆ ಹೋಗಬೇಕೆಂದು ಬಯಸುತ್ತಿದ್ದಾರೆ ಎಂದು ಹೇಳಿದ್ದರು.

ತಪಸ್ ರಾಯ್ ಮನೆ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತ. ಪಶ್ಚಿಮ ಬಂಗಾಳದಿಂದ ದೆಹಲಿ ಪಟ್ಟಿ ಹೋಗುತ್ತಿದೆ. ಆ ಪಟ್ಟಿ ಪ್ರಕಾರ ಬಿಜೆಪಿ ಹೇಳಿದಂತೆ ಇಡಿ ದಾಳಿ ನಡೆಸುತ್ತಿದೆ ಎಂದು ಜನವರಿ 12ರಂದು ಟಿಎಂಸಿ ಆರೋಪಿಸಿತ್ತು.

ಈ ನಡುವೆ ಮಾರ್ಚ್ 4ರಂದು ತಪಸ್ ರಾಯ್ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಸುವೇಂದು ಅಧಿಕಾರಿ, “ತಪಸ್ ರಾಯ್ ನಮ್ಮ ರಾಜ್ಯದ ಅತ್ಯಂತ ಹಿರಿಯ ನಾಯಕ. ಅವರು ಮಾಜಿ ಮಂತ್ರಿ ಮತ್ತು 4- 5 ಬಾರಿ ಶಾಸಕರಾದವರು. ಪಕ್ಷಕ್ಕೆ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅವರ ನಿರ್ಧಾರವನ್ನು ಸ್ವಾಗತಿಸುತ್ತೇನೆ” ಎಂದಿದ್ದರು.

ನಿನ್ನೆ (ಮಾರ್ಚ್ 6) ತಪಸ್ ರಾಯ್ ಸುವೇಂದು ಅಧಿಕಾರಿ ಸೇರಿದಂತೆ ಬಿಜೆಪಿ ನಾಯಕರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಜನವರಿ 12ರಂದು ಸುವೇಂದು ಅಧಿಕಾರಿ ಇಡಿ ದಾಳಿಯಾಗಲಿದೆ ಎಂದು ಹೇಳಿದ ಬೆನ್ನಲ್ಲೇ ತಪಸ್ ರಾಯ್ ಮನೆ ಇಡಿ ದಾಳಿ ನಡೆದಿರುವುದು ಮತ್ತು ತಪಸ್ ರಾಯ್ ಅನ್ನು ಪರೋಕ್ಷವಾಗಿ ಕಳ್ಳ ಎಂದು ಸಂಭೋಂದಿಸಿದ್ದ ಸುವೇಂದು ಅಧಿಕಾರಿ, ಅವರು ಟಿಎಂಸಿಗೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಲು ಮುಂದಾದಾಗ ತಪಸ್ ರಾಯ್ ಹಿರಿಯ ನಾಯಕ ಎಂದು ಹೊಗಳಿರುವುದು ಇಲ್ಲಿ ಗಮನಾರ್ಹ ಸಂಗತಿ.

ಏನಿದು ಮುನ್ಸಿಪಲ್ ನೇಮಕಾತಿ ಹಗರಣ? 

ಜನವರಿ 12ರಂದು ತಪಸ್ ರಾಯ್ ಮತ್ತು ಇತರ ಇಬ್ಬರು ಟಿಎಂಸಿ ನಾಯಕರ ಮನೆ ಮೇಲೆ ಇಡಿ ದಾಳಿ ಮಾಡಿತ್ತು. ಮುನ್ಸಿಪಲ್ ನೇಮಕಾತಿ ಹಗರಣ ಎಂದು ಹೇಳಲಾಗುವ, ಸ್ಥಳೀಯ ಸಂಸ್ಥೆಗಳ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿ ಈ ದಾಳಿ ನಡೆದಿತ್ತು.

ಶಾಲಾ ನೇಮಕಾತಿ ಹಗರಣದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆ ವೇಳೆ ಮುನ್ಸಿಪಲ್ ನೇಮಕಾತಿ ಹಗರಣವನ್ನು ಇಡಿ ಬಯಲಿಗೆಳೆದಿತ್ತು. ಇದು ಸುಮಾರು 200 ಕೋಟಿ ಮೌಲ್ಯದ ಅವ್ಯವಹಾರ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಹೈಕೋರ್ಟ್‌ ನ್ಯಾಯಾಧೀಶರು ಬಿಜೆಪಿ ಸೇರ್ಪಡೆ: ನ್ಯಾಯಾಂಗದ ಸ್ವಾತಂತ್ರ್ಯದ ಪ್ರಶ್ನೆ ಉದ್ಭವಿಸಿರುವುದೇಕೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...