ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ನ ಹೈ ಎನರ್ಜಿ ಫಿಸಿಕ್ಸ್ ಸೆಂಟರ್‌ನಲ್ಲಿ ಬೋಧಿಸುವ ಭೌತವಿಜ್ಞಾನಿ ಪ್ರೊಫೆಸರ್ ರೋಹಿಣಿ ಗೋಡ್ಬೋಲೆ ಅವರಿಗೆ ಫ್ರಾನ್ಸ್ ಸರ್ಕಾರ ಅತ್ಯುನ್ನತ ಗೌರವವಾದ ‘ನ್ಯಾಷನಲ್ ಆರ್ಡರ್ ಆಫ್ ಮೆರಿಟ್’ ಸಂದಿದೆ.
ಬೆಂಗಳೂರಿನವರಾದ ಪ್ರೊ. ರೋಹಿಣಿ ಗೋಡ್ಬೋಲೆ ಪದ್ಮಶ್ರೀ ಪುರಸ್ಕೃತರಾಗಿದ್ದು, ಜೆಸಿ ಬೋಸ್ ಫೆಲೋ ಕೂಡ ಆಗಿದ್ದಾರೆ. ಪ್ರಸ್ತುತ ಅವರು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಬೋಧಿಸುತ್ತಿದ್ದಾರೆ. ಸ್ಟೋನಿ ಬ್ರೂಕ್‌ನಲ್ಲಿರುವ ಸ್ಟೇಟ್ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್‌ನಿಂದ ಸೈದ್ಧಾಂತಿಕ ಕಣ ಭೌತಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಅದಕ್ಕೂ ಮೊದಲು ಅವರು ಮುಂಬೈನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.
ಇದನ್ನೂ ಓದಿ: ರೈತ ಮಹಿಳಾ ದಿನ: ರೈತರಿಗೆ ಬೆಂಬಲ ಘೋಷಿಸಿ ದೇಶವ್ಯಾಪಿ ಪ್ರತಿಭಟನೆ ನಡೆಸಲು ಮಹಿಳೆಯರ ನಿರ್ಧಾರ
ಈ ಬಗ್ಗೆ ಐಐಎಸ್‌ಸಿಯ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಅವರಿಗೆ ಶುಭಾಶಯ ಕೋರಿ ಟ್ವೀಟ್ ಮಾಡಲಾಗಿದೆ. ಟ್ವೀಟ್‌ನಲ್ಲಿ, ”ಫ್ರಾನ್ಸ್‌ನ ಅತ್ಯುನ್ನತ ಪ್ರಶಸ್ತಿಯಾದ ’ನ್ಯಾಷನಲ್ ಆರ್ಡರ್ ಆಫ್ ಮೆರಿಟ್’ ಪಡೆದಿರುವುದಕ್ಕೆ ಪ್ರೊಫೆಸರ್ ರೋಹಿಣಿ ಗೋಡ್ಬೋಲೆ ಅವರಿಗೆ ಅಭಿನಂದನೆಗಳು! ಫ್ರಾನ್ಸ್ ಮತ್ತು ಭಾರತದ ಸಹಯೋಗಗಳಲ್ಲಿ ನಡೆದ ’ವಿಜ್ಞಾನದಲ್ಲಿ ಮಹಿಳೆಯರನ್ನು ಉತ್ತೇಜಿಸುವ ಕಾರ್ಯಗಳಲ್ಲಿ’ ನೀಡಿದ ಕೊಡುಗೆಗಳಿಗಾಗಿ ಅವರು ಈ ಗೌರವಕ್ಕೆ ಭಾಜನರಾಗಿದ್ದಾರೆ” ಎಂದು ಬರೆದಿದೆ.
Congratulations to Prof Rohini Godbole (CHEP) on being awarded the Ordre National du Mérite, among the highest distinctions bestowed by France! She has been recognised for contributions to collaborations b/w France & India and commitment to promoting enrolment of women in science pic.twitter.com/K6fT26SdlQ
— IISc Bangalore (@iiscbangalore) January 13, 2021
ಪ್ರೊಫೆಸರ್ ರೋಹಿಣಿ ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಪ್ರತಿಪಾದಿಸುವರಾಗಿದ್ದಾರೆ. ಮಹಿಳೆಯರು ಉನ್ನತ ಶಿಕ್ಷಣವನ್ನು ಆರಿಸಿಕೊಳ್ಳುತ್ತಿದ್ದರೂ ವಿಜ್ಞಾನ ಮತ್ತು ಸಂಶೋಧನಾ ಪಿಎಚ್‌ಡಿ ಕೋರ್ಸ್‌ಗಳಲ್ಲಿ ಇನ್ನೂ ಕಡಿಮೆ ಸಂಖ್ಯೆಯಲ್ಲಿದ್ದಾರೆ ಎಂದು ಅವರು ಹೇಳುತ್ತಾರೆ.
ಇದನ್ನೂ ಓದಿ: ಬಿಬಿಸಿ ಸ್ಪೂರ್ತಿದಾಯಕ ಮಹಿಳೆಯರೆನಿಸಿಕೊಂಡ ಇಸೈವಾಣಿ, ಬಿಲ್ಕೀಸ್!
“ವಿಜ್ಞಾನ ಸಂಶೋಧನೆ ವಿಷಯದಲ್ಲಿ ಕಾಲೇಜಿನಿಂದ ವಿಶ್ವವಿದ್ಯಾಲಯಕ್ಕೆ ಬರುವ ಮಹಿಳೆಯರಲ್ಲಿ 10% ಜನ ಹಿಂದೆ ಸರಿಯುತ್ತಾರೆ. ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿಗೆ 5% ಮಹಿಳೆಯರು ಹಿಂದೆ ಸರಿಯುತ್ತಾರೆ ಮತ್ತು ಪಿಎಚ್‌ಡಿಯಿಂದ ಯಶಸ್ವಿ ವೈಜ್ಞಾನಿಕ ವೃತ್ತಿಜೀವನಕ್ಕೆ 15% ಮಹಿಳೆಯರು ಹಿಂದೆ ಸರಿಯುತ್ತಾರೆ” ಎಂದು ರೋಹಿಣಿ ಅಭಿಪ್ರಾಯಪಡುತ್ತಾರೆ. ವೈಜ್ಞಾನಿಕ ಸಂಶೋಧನೆಯಲ್ಲಿ ಹೆಚ್ಚಿನ ಮಹಿಳೆಯರು ಭಾಗವಹಿಸುವಂತಾಗಲು ಸಾಮಾಜಿಕ ಬದಲಾವಣೆ ಸೇರಿದಂತೆ ನೀತಿ ನಿರೂಪಣೆಗಳಲ್ಲಿಯೂ ಬದಲಾವಣೆಗಳನ್ನೂ ಮಾಡುವ ಅವಶ್ಯಕತೆಯಿದೆ ಎಂದು ಅವರು ಹೇಳುತ್ತಾರೆ.
1982 ರಲ್ಲಿ ಬಾಂಬೆ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿರುವ ರೋಹಿಣಿ, ನಂತರ 1995 ರಲ್ಲಿ ಐಐಎಸ್ಸಿಯಲ್ಲಿ ಸಹಾಯಕ ಪ್ರಾಧ್ಯಾಪಕರಾದರು. ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ಅವರು ತಮ್ಮ ವೃತ್ತಿಜೀವನದಲ್ಲಿ ವಿವಿಧ ವೈಜ್ಞಾನಿಕ ವಿಷಯಗಳ ಬಗ್ಗೆ 100 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಬರೆದಿದ್ದಾರೆ. ಸಿಇಆರ್ಎನ್‌ನ ಯುರೋಪಿಯನ್ ಆರ್ಗನೈಸೇಶನ್ ಫಾರ್ ನ್ಯೂಕ್ಲಿಯರ್ ರಿಸರ್ಚ್‌ನಲ್ಲಿ ಅವರು ನೀಡಿದ ಕೊಡುಗೆ ಅವರನ್ನು ಹೆಚ್ಚು ಜನಪ್ರಿಯರನ್ನಾಗಿಸಿದೆ.
ಇದನ್ನೂ ಓದಿ: ಇಂದಿರಾ ಗಾಂಧಿ ಜನ್ಮದಿನ: ಮಹಿಳೆಯರಿಗಾಗಿ ಉಚಿತ ಮೊಬೈಲ್ ಕ್ಲಿನಿಕ್ ಆರಂಭಿಸಿದ ಚತ್ತೀಸ್‌ಗಢ ಸರ್ಕಾರ


