ಕೋವಿಡ್‌ನಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ದೆಹಲಿಯ ಆಮ್ ಆದ್ಮಿ ಸರ್ಕಾರ ಘೋಷಿಸಿದೆ. ಅಲ್ಲದೇ ಆ ಮಕ್ಕಳು 25 ವರ್ಷದವರಾಗುವವರೆಗೂ ಮಾಸಿಕ 2500 ರೂ ಪಿಂಚಣಿ ಪಡೆಯುತ್ತಾರೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಕೋವಿಡ್‌ನಿಂದ ಜೀವನೋಪಾಯ ಕಳೆದುಕೊಂಡವರಿಗೆ ಸರಣಿ ಕಲ್ಯಾಣ ಕ್ರಮಗಳನ್ನು ಘೋಷಿಸಿದ ಅವರು, ರಾಜ್ಯದ ಬಡಕುಟುಂಬದ 72 ಲಕ್ಷ ಜನರಿಗೆ 10 ಕೆಜಿ ಉಚಿತ ದಿನಸಿ ನೀಡುವುದಾಗಿ ತಿಳಿಸಿದ್ದಾರೆ. ಇದರಲ್ಲಿ ಅರ್ಧ ದೆಹಲಿ ರಾಜ್ಯ ಸರ್ಕಾರ ಮತ್ತು ಅರ್ಧ ಕೇಂದ್ರ ಸರ್ಕಾರ ಭರಿಸಲಿವೆ.
ರೇಷನ್ ಕಾರ್ಡ್ ಇರಲಿ, ಇಲ್ಲದಿರಲಿ ಯಾರಿಗೆಲ್ಲಾ ದಿನಸಿ ಅಗತ್ಯವಿದೆಯೋ ಅವರಿಗೆ ಉಚಿತವಾಗಿ 10 ಕೆಜಿ ನೀಡುವುದಾಗಿ ಅವರು ತಿಳಿಸಿದ್ದಾರೆ.
ಅಲ್ಲದೇ ನೂರಾರು ಕುಟುಂಬಗಳಲ್ಲಿ ಮನೆಯ ಆಧಾರಸ್ಥಂಭವಾಗಿದ್ದ ವ್ಯಕ್ತಿಗಳೇ ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ. ಮನೆಯ ಏಕೈಕ ದುಡಿಯುವ ವ್ಯಕ್ತಿಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಮೊದಲು ಒಟ್ಟಿಗೆ 50,000 ರೂ ನೀಡಲಾಗುತ್ತಿದೆ. ಇನ್ನು ಮುಂದೆ ಅವರಿಗೆ ಮಾಸಿಕ 2500 ರೂ ಪಿಂಚಣಿ ನೀಡುವುದಾಗಿ ಅವರು ಕೇಜ್ರಿವಾಲ್ ತಿಳಿಸಿದ್ದಾರೆ.
ಮನೆಯಲ್ಲಿ ಗಂಡ ದುಡಿಯುತ್ತಿದ್ದು ಕೋವಿಡ್‌ನಿಂದ ಮೃತಪಟ್ಟರೆ ಹೆಂಡತಿಗೆ ಹಾಗೆ ಹೆಂಡತಿ ಮೃತಪಟ್ಟರೆ ಗಂಡನಿಗೆ ಈ ಪಿಂಚಣಿ ಹೋಗುತ್ತದೆ. ಮಗ ಮೃತಪಟ್ಟರೆ ಪೋಷಕರಿಗೆ ನೀಡಲಾಗುತ್ತದೆ. “ನಿಮ್ಮ ನೋವನ್ನು ಅರ್ಥಮಾಡಿಕೊಂಡಿದ್ದೇನೆ. ಆದರೆ ಅವರನ್ನು ಮರಳಿ ತರಲಾಗುವುದಿಲ್ಲ. ನಿಮ್ಮ ಜೀವನ ದುಸ್ತರವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು” ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಸೋನು ಸೂದ್ “ಕೋವಿಡ್‌ನಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಸರ್ಕಾರ ಉಚಿತ ಶಿಕ್ಷಣ ನೀಡಬೇಕು” ಎಂದು ಆಗ್ರಹಿಸಿದ್ದರು.
ಇದನ್ನೂ ಓದಿ: ಕೋವಿಡ್‌ನಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಸರ್ಕಾರ ಉಚಿತ ಶಿಕ್ಷಣ ನೀಡಬೇಕು: ಸೋನು ಸೂದ್ ಆಗ್ರಹ


