Homeಮುಖಪುಟಪಕ್ಷಪಾತ ಆರೋಪದಿಂದ ದೀಪಸ್ತಂಭದವರೆಗೆ..ಕಟಕಟೆಯಲ್ಲಿರುವ ನ್ಯಾಯಮೂರ್ತಿ ಸ್ವಾಮಿನಾಥನ್ ಯಾರು?

ಪಕ್ಷಪಾತ ಆರೋಪದಿಂದ ದೀಪಸ್ತಂಭದವರೆಗೆ..ಕಟಕಟೆಯಲ್ಲಿರುವ ನ್ಯಾಯಮೂರ್ತಿ ಸ್ವಾಮಿನಾಥನ್ ಯಾರು?

- Advertisement -
- Advertisement -

ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರ ಪದಚ್ಯುತಿ ಕೋರಿ ಮಂಗಳವಾರ (ಡಿಸೆಂಬರ್ 9) ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ನೋಟಿಸ್ ಸಲ್ಲಿಸಲಾಗಿದೆ. ತಮಿಳುನಾಡಿನ ಡಿಎಂಕೆ ಸೇರಿದಂತೆ ವಿವಿಧ ವಿರೋಧ ಪಕ್ಷಗಳ ಸುಮಾರು 120 ಸಂಸದರು ಈ ನೋಟಿಸ್‌ಗೆ ಸಹಿ ಹಾಕಿದ್ದಾರೆ.

ಸಂವಿಧಾನದ 124ನೇ ವಿಧಿಯೊಂದಿಗೆ ಓದಲಾದ 217ನೇ ವಿಧಿಯ ಅಡಿಯಲ್ಲಿ ನ್ಯಾಯಮೂರ್ತಿ ಸ್ವಾಮಿನಾಥನ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ನೋಟಿಸ್ ಸಲ್ಲಿಕೆ ಮಾಡಲಾಗಿದೆ.

‘ದುರ್ವರ್ತನೆ’ ಆಧಾರದ ಮೇಲೆ ಸ್ವಾಮಿನಾಥನ್ ಅವರನ್ನು ಪದಚ್ಯುತಗೊಳಿಸಲು ಅರ್ಜಿಯಲ್ಲಿ ಕೋರಲಾಗಿದೆ. ನ್ಯಾಯಾಧೀಶರ ನಡವಳಿಕೆಯು ಅವರ ನಿಷ್ಪಕ್ಷಪಾತ, ಪಾರದರ್ಶಕತೆ ಮತ್ತು ಜಾತ್ಯತೀತ ಕಾರ್ಯನಿರ್ವಹಣೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಹೇಳಲಾಗಿದೆ. ನ್ಯಾಯಾಧೀಶರು ಹಿರಿಯ ವಕೀಲರು ಮತ್ತು ನಿರ್ದಿಷ್ಟ ಸಮುದಾಯದ ವಕೀಲರ ಬಗ್ಗೆ ‘ಪಕ್ಷಪಾತಿ ಧೋರಣೆ’ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.

‘ನಿರ್ದಿಷ್ಟ ರಾಜಕೀಯ ಸಿದ್ಧಾಂತ’ ದ ಆಧಾರದ ಮೇಲೆ ಮತ್ತು ಸಂವಿಧಾನದ ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿ ಪ್ರಕರಣಗಳನ್ನು ನಿರ್ಧರಿಸುವ ಕಾರಣಕ್ಕೆ ಸ್ವಾಮಿನಾಥನ್ ಅವರನ್ನು ಪದಚ್ಯುತಗೊಳಿಸಬೇಕೆಂದು ಸಂಸದರು ಕೋರಿದ್ದಾರೆ.

ವರದಿಗಳ ಪ್ರಕಾರ, ನ್ಯಾಯಾಧೀಶರ ವಿರುದ್ದ ವಿಚಾರಣೆಯನ್ನು ಪ್ರಾರಂಭಿಸಲು ಅಗತ್ಯವಿರುವ 100 ಲೋಕಸಭಾ ಸಂಸದರು ಮತ್ತು 50 ರಾಜ್ಯಸಭಾ ಸದಸ್ಯರ ಕನಿಷ್ಠ ಮಿತಿಯಷ್ಟು ಸಹಿ ನೋಟಿಸ್‌ಗೆ ಬಿದ್ದಿದೆ. ಇದು ಅಂಗೀಕರಿಸಲ್ಪಟ್ಟರೆ, ವಿಚಾರಣೆಗಾಗಿ ಮೂವರು ಸದಸ್ಯರ ಸಮಿತಿಗೆ ಹೋಗುತ್ತದೆ. ನಂತರ ಸಂಸತ್ತಿನ ಎರಡೂ ಸದನಗಳಲ್ಲಿ ಮತದಾನ ನಡೆದು ಮೂರನೇ ಎರಡರಷ್ಟು ಬಹುಮತದೊಂದಿಗೆ ಅಂಗೀಕಾರಗೊಳ್ಳಬೇಕು.

ಈ ಪದಚ್ಯುತಿ ನೋಟಿಸ್ ಭಾರತದ ನ್ಯಾಯಾಂಗದ ಇತಿಹಾಸದಲ್ಲಿ ಅಪರೂಪದ ಬೆಳವಣಿಗೆಯಾಗಿದೆ. ಕಾರಣ ಆದೇಶವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರ ವಿರುದ್ದ ಪದಚ್ಯುತಿ ನೋಟಿಸ್ ಸಲ್ಲಿಸಿರುವ ಘಟನೆಗಳು ಇದುವರೆಗೆ ನಡೆದಿಲ್ಲ.

ಇದುವರೆಗೆ ವೈಯಕ್ತಿಕ ಭ್ರಷ್ಟಾಚಾರ, ಹಣಕಾಸು ಅವ್ಯವಹಾರ, ಅನೈತಿಕ ನಡವಳಿಕೆ ಅಥವಾ ಸಂಪೂರ್ಣ ಅಸಮರ್ಥತೆಯಂಥ ಗಂಭೀರ ಆರೋಪಗಳ ಮೇಲೆ ಮಾತ್ರ ನ್ಯಾಯಾಧೀಶರ ವಿರುದ್ದ ಪದಚ್ಯುತಿ ನೋಟಿಸ್ ಸಲ್ಲಿಕೆಯಾಗಿದೆ. ಇದೇ ಮೊದಲ ಬಾರಿಗೆ ಆದೇಶವೊಂದರ ಕಾರಣಕ್ಕೆ ನೋಟಿಸ್ ಸಲ್ಲಿಸಲಾಗಿದೆ.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದುವರೆಗೆ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ನ ಯಾವುದೇ ನ್ಯಾಯಾಧೀಶರನ್ನು ಯಶಸ್ವಿಯಾಗಿ ಪದಚ್ಯುತಗೊಳಿಸಲಾಗಿಲ್ಲ.

1993ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿ. ರಾಮಸ್ವಾಮಿ ವಿರುದ್ಧ ಹಣಕಾಸಿನ ಅಕ್ರಮ ಆರೋಪದ ಮೇಲೆ ಪದಚ್ಯುತಿ ನೋಟಿಸ್ ಸಲ್ಲಿಕೆಯಾಗಿತ್ತು. ಅದು ಲೋಕಸಭೆಯಲ್ಲಿ ಮತದಾನಕ್ಕೆ ಬಂದಾಗ ಕಾಂಗ್ರೆಸ್ ಸದಸ್ಯರು ಗೈರು ಹಾಜರಾಗಿದ್ದರಿಂದ ಅಗತ್ಯದ 2/3 ಬಹುಮತ ಸಿಗದೆ ವಿಫಲವಾಯಿತು.

2011ರಲ್ಲಿ ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಸೌಮಿತ್ರ ಸೇನ್ ವಿರುದ್ಧ ಹಣಕಾಸಿನ ಅಕ್ರಮದ ಆರೋಪದ ಮೇಲೆ ಪದಚ್ಯುತಿ ಪ್ರಕ್ರಿಯೆ ಆರಂಭಿಸಲಾಗಿತ್ತು. ಆದರೆ, ರಾಜ್ಯಸಭೆಯಲ್ಲಿ ಮತದಾನಕ್ಕೆ ಮುಂಚೆಯೇ ಅವರು ರಾಜೀನಾಮೆ ನೀಡಿದರು. ಇದರಿಂದ ಆ ಪ್ರಕ್ರಿಯೆ ಸ್ಥಗಿತವಾಯಿತು.

2025ರಲ್ಲಿ ದೆಹಲಿಯ ಮನೆಯಲ್ಲಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರಾಗಿರುವ ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ದ ಪದಚ್ಯುತಿ ನೋಟಿಸ್ ಸಲ್ಲಿಕೆಯಾಗಿದೆ. ಅದರ ಪ್ರಕ್ರಿಯೆ ಸಂಸತ್ತಿನಲ್ಲಿ ಬಾಕಿಯಿದೆ.

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು 146 ಸಂಸದರ ಸಹಿ ಹೊಂದಿರುವ ನೋಟಿಸ್ ಅನುಮೋದಿಸಿ, ನ್ಯಾಯಾಧೀಶರ (ವಿಚಾರಣೆ) ಕಾಯ್ದೆ 1968ರ ಅಡಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್, ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮನೀಂದ್ರ ಮೋಹನ್ ಶ್ರೀವಾಸ್ತವ, ಹಿರಿಯ ವಕೀಲ ಬಿ.ವಿ. ಅಚಾರ್ಯ ಅವರ ಮೂವರು ಸದಸ್ಯರ ಸಮಿತಿ ರಚಿಸಿದ್ದಾರೆ.

ಈ ಸಮಿತಿಯ ವರದಿ ಬಾಕಿಯಿದ್ದು, ಅದರ ಆಧಾರದ ಮೇಲೆ ಲೋಕಸಭೆ/ರಾಜ್ಯಸಭೆಯಲ್ಲಿ 2/3 ಬಹುಮತದಿಂದ ಮತದಾನ ನಡೆಯಲಿದೆ.

ಸ್ವಾಮಿನಾಥನ್ ವಿರುದ್ದ ಪದಚ್ಯುತಿ ನೋಟಿಸ್ ಏಕೆ?

ನಿರ್ದಿಷ್ಟ ರಾಜಕೀಯ ಸಿದ್ಧಾಂತದ ಆಧಾರದ ಮೇಲೆ ಮತ್ತು ಸಂವಿಧಾನದ ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿ ಪ್ರಕರಣಗಳನ್ನು ನಿರ್ಧರಿಸುವ ಕಾರಣಕ್ಕೆ ನ್ಯಾಯಮೂರ್ತಿ ಸ್ವಾಮಿನಾಥನ್ ವಿರುದ್ದ ಪದಚ್ಯುತಿ ನೋಟಿಸ್ ಸಲ್ಲಿಸಿರುವುದಾಗಿ ವಿಪಕ್ಷಗಳ ಸಂಸದರು ಹೇಳಿಕೊಂಡಿದ್ದಾರೆ. ಆದರೆ, ಈ ನೋಟಿಸ್‌ಗೆ ಸ್ವಾಮಿನಾಥನ್ ಇತ್ತೀಚೆಗೆ ತಿರುಪರನ್‌ಕುಂದ್ರಂ ದೀಪಂ ಪ್ರಕರಣದಲ್ಲಿ ನೀಡಿದ ಆದೇಶವೇ ಕಾರಣ ಎಂದು ಹೇಳಲಾಗ್ತಿದೆ.

ಏನಿದು ತಿರುಪರನ್‌ಕುಂದ್ರಂ ದೀಪಂ ಪ್ರಕರಣ?

ತಿರುಪರನ್‌ಕುಂದ್ರಂ ದೀಪಂ ಪ್ರಕರಣವು ತಮಿಳುನಾಡಿನ ಮಧುರೈನಲ್ಲಿರುವ ತಿರುಪರನ್‌ಕುಂದ್ರಂ ಬೆಟ್ಟದಲ್ಲಿರುವ ಸುಬ್ರಮಣ್ಯ ಸ್ವಾಮಿ (ಮುರುಗ) ದೇವಸ್ಥಾನದ ಕಾರ್ತಿಗೈ (ಕಾರ್ತಿಕ) ದೀಪಂ ಹಬ್ಬಕ್ಕೆ ಸಂಬಂಧಿಸಿದ ಧಾರ್ಮಿಕ-ರಾಜಕೀಯ ವಿವಾದವಾಗಿದೆ.

ತಿರುಪರನ್‌ಕುಂದ್ರಂ ಬೆಟ್ಟದ ಮೇಲೆ ಸುಬ್ರಮಣ್ಯ ಸ್ವಾಮಿ ದೇವಸ್ಥಾನ (ಹಿಂದೂ ದೇವಾಲಯ) ಮತ್ತು ಅದರ ಸಮೀಪದಲ್ಲಿ ಹಝರತ್ ಸುಲ್ತಾನ್ ಸಿಕಂದರ್ ಬಾದುಷಾ ದರ್ಗಾ (ಸೂಫಿ ದರ್ಗಾ) ಇದೆ. ಇದು ಶತಮಾನಗಳಿಂದಲೂ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಸಾಮರಸ್ಯದ ಸ್ಥಳವಾಗಿದೆ.

ಕಾರ್ತಿಗೈ ದೀಪಂ (ಕಾರ್ತಿಕ ಮಾಸದ ದೀಪ ಹಬ್ಬ) ತಮಿಳುನಾಡಿನಲ್ಲಿ ಮುರುಗನ್‌ ದೇವರಿಗೆ ಸಮರ್ಪಿತವಾದ ಹಬ್ಬವಾಗಿದೆ. ಈ ಸಂದರ್ಭದಲ್ಲಿ ತಿರುಪರನ್‌ಕುಂದ್ರಂ ಬೆಟ್ಟದ ಮೇಲಿರುವ ದೀಪಾತೂಣ್ (ಕಲ್ಲಿನ ದೀಪ ಸ್ತಂಭ) ಬೆಳಗಿಸುವ ಸಂಪ್ರದಾಯವಿದೆ.

ಶತಮಾನಗಳಿಂದ ದೀಪಾತೂಣ್ ಬಳಿ (ದರ್ಗಾ ಸಮೀಪ) ದೀಪ ಬೆಳಗಿಸುತ್ತಿದ್ದರೂ, 2019ರಿಂದ ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶದಂತೆ, ಸಾಮುದಾಯಿಕ ಘರ್ಷಣೆ ತಪ್ಪಿಸಲು ಉಚ್ಚಿಪಿಲ್ಲೈಯರ್ ದೇವಸ್ಥಾನದ ಬಳಿ (ಬೆಟ್ಟದ ಕೆಳಗೆ) ಮಾತ್ರ ದೀಪ ಬೆಳಗಿಸಲಾಗುತ್ತಿತ್ತು. ಹಿಂದೂ ಸಂಘಟನೆಗಳು (ಹಿಂದೂ ತಮಿಳರ್ ಕಚ್ಚಿ, ಹಿಂದೂ ಮುನ್ನಾನಿ) ಇದನ್ನು ‘ಹಿಂದೂಗಳ ಧಾರ್ಮಿಕ ಹಕ್ಕುಗಳ ದಮನ’ ಎಂದು ವಿರೋಧಿಸಿತ್ತು.

2025ರ ಅಕ್ಟೋಬರ್ ಅಂತ್ಯದಲ್ಲಿ ಹಾಗೂ ನವೆಂಬರ್ ಆರಂಭದಲ್ಲಿ ಹಿಂದೂ ತಮಿಳರ್ ಕಚ್ಚಿ ಸ್ಥಾಪಕ ರಾಮ ರವಿಕುಮಾರ್ ದೇವಸ್ಥಾನದ ಆಡಳಿತ ಸಮಿತಿಗೆ ಮನವಿ ಸಲ್ಲಿಸಿ ದೀಪಾತೂಣ್ ಬಳಿ ದೀಪ ಬೆಳಗಿಸಲು ಕೋರಿದ್ದರು. ದೇವಸ್ಥಾನದ ಆಡಳಿತವು ಮನವಿಯನ್ನು ತಿರಸ್ಕರಿಸಿತ್ತು. ಆದರೆ, ಇದೇ ಸಂದರ್ಭದಲ್ಲಿ ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ರಾಮ ರವಿಕುಮಾರ್ ಅವರ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ್ದರು. ವಿಚಾರಣೆ ಬಳಿಕ ದೇವಸ್ಥಾನದ ಆಡಳಿತಕ್ಕೆ ದೀಪಾತೂಣ್ ಬಳಿ ದೀಪ ಬೆಳಗಿಸಲು ಆದೇಶ ನೀಡಿದ್ದರು. “ರಾಜ್ಯ ಸರ್ಕಾರ ಹಿಂದೂ ಆಚರಣೆಗಳನ್ನು ದುರ್ಬಲಗೊಳಿಸಲು ಅಧಿಕಾರವಿಲ್ಲ” ಎಂದು ಹೇಳಿ 2019ರ ಆದೇಶವನ್ನು ತಿರಸ್ಕರಿಸಿದ್ದರು.

ರಾಮ ರವಿಕುಮಾರ್ ನವೆಂಬರ್ 12ಕ್ಕೆ ಮೊದಲು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದರ ಮೊದಲ ವಿಚಾರಣೆ ನವೆಂಬರ್ 12ರಂದು ನಡೆದಿತ್ತು. ನಂತರ ನವೆಂಬರ್ 19ರಂದು ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ಬೆಟ್ಟಕ್ಕೆ ತಿಳಿವಳಿಕೆಗಾಗಿ ಭೇಟಿ ನೀಡಿದ್ದರು. ಬಳಿಕ ನವೆಂಬರ್ 24 ಮತ್ತು 27ರಂದು ವಿಚಾರಣೆ ಮುಂದುವರಿಸಿ ಆದೇಶ ಕಾಯ್ದಿರಿಸಿದ್ದರು. ಅದನ್ನು ಡಿಸೆಂಬರ್ 1, 2025ರಂದು ಪ್ರಕಟಿಸಿದ್ದರು.

ದೀಪಾತೂಣ್ ಬಳಿ ದೀಪ ಬೆಳಗಿಸಿ ಎಂಬ ಹೈಕೋರ್ಟ್ ಆದೇಶವನ್ನು ಪಾಲಿಸಲು ತಮಿಳುನಾಡು ಸರ್ಕಾರ ಮತ್ತು ದೇವಸ್ಥಾನದ ಆಡಳಿತ ಮಂಡಳಿ ನಿರಾಕರಿಸಿತು. ಇದರಿಂದ ವಿವಾದ ತೀವ್ರಗೊಂಡಿತು. ಡಿಸೆಂಬರ್ 3 ಕಾರ್ತಿಕದಂದು ದೀಪಾತೂಣ್ ಬಳಿ ದೀಪ ಬೆಳಗಲಿಲ್ಲ, ಉಚ್ಚಿಪಿಲ್ಲೈಯರ್ ದೇವಸ್ಥಾನದ ಬಳಿ ಮಾತ್ರ ದೀಪ ಬೆಳಗಿತು.

ಹೈಕೋರ್ಟ್ ಆದೇಶ ಪಾಲಿಸದ ತಮಿಳುನಾಡು ಸರ್ಕಾರ ಮತ್ತು ದೇವಸ್ಥಾನದ ಆಡಳಿತ ಮಂಡಳಿ ವಿರುದ್ದ ರಾಮ ರವಿಕುಮಾರ್ ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದರು. ಅರ್ಜಿ ಕೈಗೆತ್ತಿಕೊಂಡ ನ್ಯಾಯಮೂರ್ತಿ ಸ್ವಾಮಿನಾಥನ್ ಅವರು, ಮಧುರೈ ಜಿಲ್ಲಾಧಿಕಾರಿ ಕೆ.ಜೆ ಪ್ರವೀಣ್‌ಕುಮಾರ್ ಮತ್ತು ಪೊಲೀಸ್ ಆಯುಕ್ತ ಜೆ. ಲೋಗನಾಥನ್ ಅವರನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಲು ಆದೇಶಿಸಿ, ಬಿಎನ್‌ಎಸ್‌ಎಸ್‌ ಸೆಕ್ಷನ್ 163ರ ಅಡಿ ಸರ್ಕಾರ ವಿಧಿಸಿದ್ದ ನಿಷೇಧಾಜ್ಞೆಯನ್ನು ರದ್ದುಪಡಿಸಿದರು. ರಾಮ ರವಿಕುಮಾರ್ ಮತ್ತು 10 ಮಂದಿ ಭಕ್ತರಿಗೆ ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಭದ್ರತೆಯೊಂದಿಗೆ ದೀಪ ಬೆಳಗಿಸಲು ಅನುಮತಿ ನೀಡಿದರು. ಹೈಕೋರ್ಟ್ ಆದೇಶದಂತೆ ರಾಮ ರವಿಕುಮಾರ್ ಮತ್ತು ತಂಡ ದೀಪ ಬೆಳಗಿಸಲು ಮುಂದಾದಾಗ ತಮಿಳುನಾಡು ಪೊಲೀಸರು ತಡೆದರು. ಇದರಿಂದ ಘರ್ಷಣೆ ಉಂಟಾಯಿತು.

ಆ ಬಳಿಕ ತಮಿಳುನಾಡು ಸರ್ಕಾರ ಮತ್ತು ಮಧುರೈ ಪೊಲೀಸ್ ಆಯುಕ್ತರು ಹೈಕೋರ್ಟ್‌ನಲ್ಲಿ ಲೆಟರ್ಸ್ ಪೇಟೆಂಟ್ ಅಪೀಲ್ (ಎಲ್‌ಪಿಎ) ಅಥವಾ ಆಂತರಿಕ ಅರ್ಜಿ ಸಲ್ಲಿಸಿದರು. ನ್ಯಾಯಮೂರ್ತಿಗಳಾದ ಜೆ. ಜಯಚಂದ್ರನ್ ಮತ್ತು ಕೆ.ಕೆ. ರಾಮಕೃಷ್ಣನ್ ಅವರ ವಿಭಾಗೀಯ ಪೀಠ ಅರ್ಜಿ ತಿರಸ್ಕರಿಸಿ, “ಸರ್ಕಾರ ನ್ಯಾಯಾಲಯದ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದೆ” ಎಂದು ಟಿಪ್ಪಣಿ ಮಾಡಿತು.

ನಂತರ, ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ಡಿಸೆಂಬರ್ 4ರ ಸಂಜೆಯೊಳಗೆ ದೀಪ ಬೆಳಗಿಸಲು ಮತ್ತೊಮ್ಮೆ ಆದೇಶ ನೀಡಿದರು. ಆದರೂ, ಅದು ಜಾರಿಯಾಗಲಿಲ್ಲ; ಬಿಜೆಪಿ ನಾಯಕ ನೈನಾರ್ ನಾಗೇಂದ್ರನ್ ಅವರನ್ನು ಪೊಲೀಸ್ ಬಂಧಿಸಿದರು. ಅದೇ ದಿನ ಸಂಜೆ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಸ್ಪೆಷಲ್ ಲೀವ್ ಪಿಟಿಷನ್ (ಎಸ್‌ಎಲ್‌ಪಿ) ಸಲ್ಲಿಸಿತು. ಹೈಕೋರ್ಟ್ ಆದೇಶವು ‘ದೇವಸ್ಥಾನದ ಸ್ವಾಯತ್ತತೆ ಮತ್ತು ಸಾಮುದಾಯಿಕ ಸಾಮರಸ್ಯಕ್ಕೆ ಧಕ್ಕೆ’ ಎಂದು ವಾದಿಸಿತು.

ಡಿಸೆಂಬರ್ 5,2025ರಂದು ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಎಲ್‌ಪಿಯ ತುರ್ತು ವಿಚಾರಣೆಗೆ ಕೋರಲಾಯಿತು. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠ ಎಸ್‌ಎಲ್‌ಪಿ ಸ್ವೀಕರಿಸಿ, ಆದ್ಯತೆ ಮೇರೆಗೆ ವಿಚಾರಣೆಗೆ ಒಪ್ಪಿತು. ಆದರೆ, ತುರ್ತು ವಿಚಾರಣೆಯ ಭರವಸೆ ನೀಡಲಿಲ್ಲ. ಇದೇ ದಿನ ಹೈಕೋರ್ಟ್‌ನಲ್ಲಿ ದೇವಸ್ಥಾನ ಆಡಳಿತದ ಅರ್ಜಿಗಳ ವಿಚಾರಣೆ ಡಿಸೆಂಬರ್ 12ಕ್ಕೆ ಮುಂದೂಡಿಕೆಯಾಯಿತು. ರಾಮ ರವಿಕುಮಾರ್ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಸ್ವಾಮಿನಾಥನ್ ಡಿಸೆಂಬರ್ 9ಕ್ಕೆ ಮುಂದೂಡಿದರು ಮತ್ತು ಸಿಸಿಐಎಸ್‌ಎಫ್ ಕಮಾಂಡಂಟ್‌ರಿಂದ ವರದಿ ಕೇಳಿದರು.

ಸುಪ್ರೀಂ ಕೋರ್ಟ್‌ನಲ್ಲಿ ತಮಿಳುನಾಡು ರಾಜ್ಯ ಸರ್ಕಾರದ ಎಸ್‌ಎಲ್‌ಪಿ ಮತ್ತು ಮಧುರೈ ಹೈಕೋರ್ಟ್‌ನಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅರ್ಜಿ ಪ್ರಸ್ತುತ ಬಾಕಿಯಿದೆ. ರಾಮ ರವಿಕುಮಾರ್ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ಸ್ವಾಮಿನಾಥನ್ ಪೀಠದಲ್ಲಿ ಮಂಗಳವಾರ (ಡಿಸೆಂಬರ್ 9) ನಡೆದಿದೆ.

ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ವಿಚಾರಣೆ ವೇಳೆ “ನ್ಯಾಯಾಲಯದ ಆದೇಶಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಲಾಗಿದೆ” ಎಂದು ತೀವ್ರವಾಗಿ ಟಿಪ್ಪಣಿ ಮಾಡಿದ್ದಾರೆ. ಅಧಿಕಾರಿಗಳ ಕರ್ತವ್ಯ ಕಾನೂನು ಜಾರಿಗೊಳಿಸುವುದು, ಮೌಖಿಕ ಆದೇಶಗಳನ್ನು ಅನುಸರಿಸುವುದಲ್ಲ ಎಂದು ಹೇಳಿದ್ದಾರೆ.

ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಚೀಫ್ ಸೆಕ್ರಟರಿ) ಮತ್ತು ಹೆಚ್ಚುವರಿ ಪೊಲೀಸ್ ನಿರ್ದೇಶಕ (ಎಡಿಜಿಪಿ ಕಾನೂನು ಸುವ್ಯವಸ್ಥೆ) ಅವರಿಗೆ ಡಿಸೆಂಬರ್ 17, 2025ರಂದು ಮಧ್ಯಾಹ್ನ 3 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ವೈಯಕ್ತಿಕವಾಗಿ ಹಾಜರಾಗಲು ಆದೇಶಿಸಿದ್ದಾರೆ.

ಸಿಸಿಐಎಸ್‌ಎಫ್ ಭದ್ರತೆ ಒದಗಿಸದ್ದಕ್ಕೆ ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿಯನ್ನೂ ಪ್ರಕರಣದಲ್ಲಿ ಪ್ರತಿವಾದಿಯಾಗಿ ಸೇರಿಸಲಾಗಿದೆ. ಸಿಸಿಐಎಸ್‌ಎಫ್ ಕಮಾಂಡಂಟ್‌ರಿಂದ ದೀಪ ಬೆಳಗಿಸುವ ಸಂದರ್ಭದಲ್ಲಿ ಯಾರು ಭದ್ರತೆಗೆ ತಡೆಯಾಗಿದ್ದಾರೆ ಎಂಬ ವರದಿ ಕೇಳಲಾಗಿದೆ.

ಮಧುರೈ ನಗರ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಎ.ಜಿ ಇನಿಗೊ ತಿವ್ಯನ್ ಅವರಿಗೆ ನೋಟಿಸ್ ಜಾರಿಗೊಳಿಸಿ, ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಬಾರದೇಕೆ? ಎಂದು ಕೇಳಲಾಗಿದೆ.

ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ವೀರ ಕಥಿರವನ್ ಅವರು, ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಎಲ್‌ಪಿ ಸಲ್ಲಿಕೆಯಾಗಿದ್ದರಿಂದ ಅಧಿಕಾರಿಗಳು ಹೈಕೋರ್ಟ್‌ನಲ್ಲಿ ಹಾಜರಾಗಲು ಸಾಧ್ಯವಿಲ್ಲ ಎಂದಿದ್ದಾರೆ. ಆದರೆ, ನ್ಯಾಯಮೂರ್ತಿ ಸ್ವಾಮಿನಾಥನ್ ಎಸ್‌ಎಲ್‌ಪಿ ದೋಷಪೂರಿತವಾಗಿದೆ. ಅದು ಇನ್ನೂ ವಿಚಾರಣೆಗೆ ಬಂದಿಲ್ಲ. ಹಾಗಾಗಿ, ಸದ್ಯಕ್ಕೆ ಹೈಕೋರ್ಟ್ ಆದೇಶ ಜಾರಿಯಲ್ಲಿದೆ ಹೇಳಿದ್ದಾರೆ.

ವಿಚಾರಣೆ ವೇಳೆ ರಾಮ ರವಿಕುಮಾರ್ ಪರ ವಕೀಲ ಪಿ.ವಿ. ಯೋಗೇಶ್ವರನ್ ಅವರು “ರಾಜ್ಯ ಸರ್ಕಾರ ಡ್ರಾಮಾ ಮಾಡುತ್ತಿದೆ” ಎಂದು ಆರೋಪಿಸಿದ್ದಾರೆ.

ಈ ಎಲ್ಲಾ ಕಾನೂನು ಬೆಳವಣಿಗೆಗಳ ನಡುವೆ ನ್ಯಾಯಮೂರ್ತಿ ಸ್ವಾಮಿನಾಥನ್ ಅವರ ಪದಚ್ಯುತಿಗೆ ಸಂಸತ್ತಿನಲ್ಲಿ ನೋಟಿಸ್ ಸಲ್ಲಿಕೆಯಾಗಿದೆ. ಹಾಗಾಗಿ, ಈ ವಿಷಯದಲ್ಲಿ ಮುಂದೆ ಯಾವ ಬೆಳವಣಿಗೆ ನಡೆಯಲಿದೆ ಎಂಬ ಕುತೂಹಲ ಮೂಡಿದೆ.

ನ್ಯಾಯಮೂರ್ತಿ ಸ್ವಾಮಿನಾಥನ್ ವಿರುದ್ದದ ಇತರ ಆರೋಪಗಳು

ವಕೀಲನ ವಿರುದ್ದ ಆಕ್ರೋಶ

ವಿವಾದಿತ ಬೆಟ್ಟದಲ್ಲಿ ದೀಪ ಬೆಳಗಿಸಲು ಅವಕಾಶ ಕೊಡುವ ಮೂಲಕ ನಿರ್ದಿಷ್ಟ ಧರ್ಮ, ಸಿದ್ದಾಂತದ ಪರ ಪಕ್ಷಪಾತಿ ಧೋರಣೆ ತೋರಿದ್ದಾರೆ ಎಂಬ ಆರೋಪ ಮಾತ್ರ ನ್ಯಾಯಮೂರ್ತಿ ಸ್ವಾಮಿನಾಥನ್ ವಿರುದ್ದ ಇಲ್ಲ. ಈ ಹಿಂದೆಯೂ ಅವರ ವಿರುದ್ದ ಹಲವು ಆರೋಪಗಳು ಕೇಳಿ ಬಂದಿತ್ತು.

2025 ಜುಲೈ 8ರಂದು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಅಸಾಧಾರಣ ಸಂದರ್ಭಕ್ಕೆ ಸಾಕ್ಷಿಯಾಗಿತ್ತು. ತನ್ನ ವಿರುದ್ದದ ವಕೀಲರೊಬ್ಬರ ಆರೋಪಗಳ ಕುರಿತು ಸ್ವತಃ ವಿಚಾರಣೆ ನಡೆಸಿದ್ದ ನ್ಯಾ. ಸ್ವಾಮಿನಾಥನ್, ವಕೀಲನ ವಿರುದ್ದ ಕಿಡಿಕಾರಿದ್ದರು.

ವಿಚಾರಣೆ ವೇಳೆ, ತನ್ನ ವಿರುದ್ದ ಜಾತಿ ಮತ್ತು ಕೋಮು ಪಕ್ಷಪಾತದ ಆರೋಪ ಮಾಡಿದ್ದ ವಕೀಲ ವಂಚಿನಾಥನ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದ ಸ್ವಾಮಿನಾಥನ್, ವಕೀಲ ವಂಚಿನಾಥನ್ ಅವರನ್ನು “ನೀವೊಬ್ಬರು ಕಾಮಿಡಿ ಪೀಸ್” ಎಂದು ಜರೆದಿದ್ದರು.

ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ನ್ಯಾಯಾಲಯದಲ್ಲಿ ಜಾತಿ ಪೂರ್ವಾಗ್ರಹ ಪ್ರದರ್ಶಿಸುತ್ತಿದ್ದಾರೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ವಕೀಲ ವಂಚಿನಾಥನ್ ಅವರನ್ನು ನ್ಯಾಯಾಲಯಕ್ಕೆ ಕರೆಸಲಾಗಿತ್ತು. ತನ್ನ ವಿರುದ್ದ ಹೇಳಿಕೆ ನೀಡಿದ್ದ ವಂಚಿನಾಥನ್ ವಿರುದ್ದ ಸ್ವಾಮಿನಾಥನ್ ಅವರು ‘ನ್ಯಾಯಾಂಗ ನಿಂದನೆ’ ಆರೋಪ ಹೊರಿಸಿದ್ದರು.

ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಸಂವಿಧಾನದ ವಿರುದ್ದ ಹೇಳಿಕೆ ಆರೋಪ

ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ಜಾತ್ಯತೀತತೆ ಮತ್ತು ಕಾನೂನಿನ ನಿಯಮಕ್ಕೆ ವಿರುದ್ಧವಾದ ವಿಚಾರಗಳ ಪರವಾಗಿ ಬ್ಯಾಟಿಂಗ್ ಮಾಡುವ ಮೂಲಕ ಸಂವಿಧಾನಕ್ಕೆ ಮತ್ತು ತಮ್ಮ ಪ್ರಮಾಣವಚನಕ್ಕೆ ದ್ರೋಹ ಎಸಗಿದ್ದಾರೆ ಎಂದು ನಿವೃತ್ತ ನ್ಯಾಯಮೂರ್ತಿ ಕೆ. ಚಂದ್ರು 2025ರ ಅಕ್ಟೋಬರ್ 22ರಂದು ಚೆನ್ನೈನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹೇಳಿದ್ದರು.

ಸ್ವಾಮಿನಾಥನ್ ವಿರುದ್ಧ ಕಟು ಟೀಕೆ ಮಾಡಿದ್ದ ನ್ಯಾ. ಚಂದ್ರು, ನ್ಯಾಯಮೂರ್ತಿ ಸ್ವಾಮಿನಾಥನ್ ಅವರನ್ನು ಒಬ್ಬ ‘ವಿಚಿತ್ರ ವ್ಯಕ್ತಿ’ ಎಂದಿದ್ದರು. ಅವರು ನ್ಯಾಯಾಧೀಶರಾಗಿ ಸಂವಿಧಾನವನ್ನು ಎತ್ತಿಹಿಡಿಯುವುದಾಗಿ ಪ್ರಮಾಣವಚನ ಸ್ವೀಕರಿಸಿದ್ದರೂ, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕ್ರಮದಲ್ಲಿ ಸಂವಿಧಾನದ ವಿರುದ್ಧ ಮಾತನಾಡಿದ್ದಾರೆ ಎಂದು ತಿಳಿಸಿದ್ದರು.

ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಮತ್ತು ಭಾರತದ ಸಂವಿಧಾನದ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. “ನಮ್ಮ ಸಂವಿಧಾನ 1935ರ ಭಾರತ ಸರ್ಕಾರಿ ಕಾಯ್ದೆಯಿಂದ ನಕಲು ಮಾಡಿ ಪುಸ್ತಕವಾಗಿದೆ” ಎಂದು ಹೇಳಿದ್ದಾರೆ ಎಂದು ಚಂದ್ರು ಆರೋಪಿಸಿದ್ದರು.

ಇವಿಷ್ಟೇ ಅಲ್ಲದೆ ಇನ್ನೂ ಕೆಲ ಆರೋಪಗಳು ನ್ಯಾಯಮೂರ್ತಿ ಸ್ವಾಮಿನಾಥನ್ ವಿರುದ್ದ ಇವೆ. ಹಾಗಾಗಿ, ಅವರ ವಿರುದ್ದದ ಪದಚ್ಯುತಿ ನೋಟಿಸ್ ದೇಶದ ಗಮನ ಸೆಳೆದಿದೆ. ಬಿಜೆಪಿ-ಸಂಘ ಪರಿವಾರದವರು ಮಾತ್ರ ವಿಪಕ್ಷಗಳ ಪದಚ್ಯುತಿ ನೋಟಿಸ್‌ಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಸ್ವಾಮಿನಾಥನ್ ಪರ ಬ್ಯಾಟಿಂಗ್ ಮಾಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣ : ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಮತ್ತಿತರರ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ದೆಹಲಿ ಗಲಭೆ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್, ಮೊಹಮ್ಮದ್ ಸಲೀಮ್ ಖಾನ್ ಮತ್ತು ಶಾದಾಬ್ ಅಹ್ಮದ್ ಸಲ್ಲಿಸಿದ್ದ ಅರ್ಜಿಗಳ...

ಗುಜರಾತ್‌| 6 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಗಂಭೀರವಾಗಿ ಹಲ್ಲೆ ನಡೆಸಿದವನ ಬಂಧನ

ಆರು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ನಂತರ ಆಕೆಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ. ಈ ಪ್ರಕರಣ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, 35 ವರ್ಷದ...

‘ಮತಗಳ್ಳತನ ಅತ್ಯಂತ ಗಂಭೀರ ರಾಷ್ಟ್ರವಿರೋಧಿ ಕೃತ್ಯ’: ‘ಬಿಜೆಪಿ-ಇಸಿ ಒಪ್ಪಂದ’ವನ್ನು ನೇರವಾಗಿ ಟೀಕಿಸಿದ ರಾಹುಲ್ ಗಾಂಧಿ

ನವದೆಹಲಿ: "ಮತಗಳ್ಳತನ"(ವೋಟ್ ಚೋರಿ) ಒಂದು "ಅತ್ಯಂತ ಗಂಭೀರ ರಾಷ್ಟ್ರವಿರೋಧಿ ಕೃತ್ಯ”,  ಬಿಜೆಪಿ ಮತ್ತು ಚುನಾವಣಾ ಆಯೋಗವು ಭಾರತದ ಪ್ರಜಾಪ್ರಭುತ್ವವನ್ನು ನಾಶಮಾಡಲು ಮತ್ತು "ಜನರ ಧ್ವನಿಯನ್ನು ಕಸಿದುಕೊಳ್ಳಲು" ಪಿತೂರಿ ನಡೆಸುತ್ತಿವೆ ಎಂದು ಕಾಂಗ್ರೆಸ್ ನಾಯಕ...

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆ ನಿಷೇಧಿಸಿದ ಆಸ್ಟ್ರೇಲಿಯಾ ಸರ್ಕಾರ

16 ವರ್ಷದೊಳಗಿನ ಎಲ್ಲರಿಗೂ ಸಾಮಾಜಿಕ ಮಾಧ್ಯಮ ಪ್ರವೇಶವನ್ನು ದೇಶಾದ್ಯಂತ ನಿಷೇಧಿಸಿದ ಮೊದಲ ದೇಶ ಆಸ್ಟ್ರೇಲಿಯಾ. ಈ ಕಾನೂನು ಬುಧವಾರ ಜಾರಿಗೆ ಬಂದಿದ್ದು, ಟಿಕ್‌ಟಾಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್, ಫೇಸ್‌ಬುಕ್, ಸ್ನ್ಯಾಪ್‌ಚಾಟ್, ರೆಡ್ಡಿಟ್, ಎಕ್ಸ್, ಥ್ರೆಡ್ಸ್,...

ಎಸ್.ನಿಜಲಿಂಗಪ್ಪನವರು ಕರ್ನಾಟಕ ಕಂಡ ಅಪರೂಪದ ರಾಜಕಾರಣಿ: ಸಿಎಂ ಸಿದ್ದರಾಮಯ್ಯ

ಬೆಳಗಾವಿ: ಎಸ್. ನಿಜಲಿಂಗಪ್ಪನವರು ಒಬ್ಬ ದಕ್ಷ, ಪ್ರಾಮಾಣಿಕ ವ್ಯಕ್ತಿ. ಕರ್ನಾಟಕ ಕಂಡ ಅಪರೂಪದ ರಾಜಕಾರಣಿಯಾಗಿದ್ದು ಕೊನೆಯವರೆಗೂ ಪ್ರಾಮಾಣಿಕವಾಗಿ ಇದ್ದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.  ಡಿಸೆಂಬರ್ 10ರಂದು, ಮಾಜಿ ಮುಖ್ಯಮಂತ್ರಿ ದಿ| ಎಸ್. ನಿಜಲಿಂಗಪ್ಪರವರ...

ನಕಲಿ ತುಪ್ಪ ವಿವಾದದ ಬಳಿಕ ಮತ್ತೊಂದು ಹಗರಣ; ತಿರುಮಲ ದೇವಸ್ಥಾನಕ್ಕೆ ರೇಷ್ಮೆ ಹೆಸರಿನಲ್ಲಿ ‘ಪಾಲಿಯೆಸ್ಟರ್‌’ ದುಪಟ್ಟಾ ಪೂರೈಕೆ

ಲಡ್ಡು ಪ್ರಸಾದಕ್ಕೆ ನಕಲಿ ತುಪ್ಪ ಪೂರೈಕೆ ವಿವಾದದ ಬಳಿಕ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಹೊಸ ಹಗರಣವೊಂದು ಬೆಳಕಿಗೆ ಬಂದಿದೆ. 2015 ರಿಂದ 2025 ರವರೆಗಿನ ಹತ್ತು ವರ್ಷಗಳ ಅವಧಿಯಲ್ಲಿ ರೇಷ್ಮೆ ದುಪಟ್ಟಾಗಳ ಖರೀದಿಯಲ್ಲಿ...

‘ಶಾಶ್ವತ ವಿಪತ್ತು ನಿಧಿಯನ್ನು ಏಕೆ ರಚಿಸಿಲ್ಲ’: ಸಿಎಂ ಸಿದ್ದರಾಮಯ್ಯ ಅವರಿಗೆ ಆರ್. ಅಶೋಕ್ ಪ್ರಶ್ನೆ

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮಾತನ್ನು ಉಳಿಸಿಕೊಳ್ಳಲು ವಿಫಲರಾಗಿದ್ದಾರೆ ಮತ್ತು ರೈತರಿಗೆ 'ದ್ರೋಹ' ಮಾಡಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ (ಎಲ್‌ಒಪಿ) ಆರ್. ಅಶೋಕ ಮಂಗಳವಾರ ಆರೋಪಿಸಿದ್ದಾರೆ. ಉತ್ತರ ಕರ್ನಾಟಕವನ್ನು ಕಾಡುತ್ತಿರುವ...

ಆಂಧ್ರ ಪ್ರದೇಶ| ದಲಿತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಾಧ್ಯಾಪಕರ ಬಂಧನ; ಭುಗಿಲೆದ್ದ ಪ್ರತಿಭಟನೆ

ಆಂಧ್ರಪ್ರದೇಶದ ತಿರುಪತಿಯಲ್ಲಿರುವ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷದ ಬಿ.ಇಡಿ ದಲಿತ ವಿದ್ಯಾರ್ಥಿನಿಯೊಬ್ಬಳು ಇಬ್ಬರು ಸಹಾಯಕ ಪ್ರಾಧ್ಯಾಪಕರಾದ ಲಕ್ಷ್ಮಣ್ ಕುಮಾರ್ ಮತ್ತು ಶೇಖರ್ ರೆಡ್ಡಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ...

ಝೀ ನ್ಯೂಸ್‌ನಿಂದ 18 ಕೋಟಿ ರೂ. ಪರಿಹಾರ ಕೇಳಿದ ಫೋಟೋಗ್ರಾಫರ್…ಕಾರಣ?

ಆಫ್ರಿಕಾದಿಂದ ಭಾರತಕ್ಕೆ ಚಿರತೆಗಳ ಸಾಗಣೆಯನ್ನು ದಾಖಲಿಸಿರುವ ತನ್ನ ಅತ್ಯಮೂಲ್ಯ ವಿಡಿಯೋವನ್ನು ಅನುಮತಿಯಿಲ್ಲದೆ ಬಳಸಿಕೊಂಡಿದ್ದಕ್ಕೆ ಝೀ ನ್ಯೂಸ್‌ ಚಾನೆಲ್‌ ವಿರುದ್ದ ಎಮ್ಮಿ ಪ್ರಶಸ್ತಿಗೆ ನಾಮನಿರ್ದೇಶಿತರಾದ ಚಲನಚಿತ್ರ ನಿರ್ಮಾಪಕ ಮತ್ತು ಛಾಯಾಗ್ರಾಹಕ ರೋನಿ ಸೇನ್ ಹಕ್ಕುಸ್ವಾಮ್ಯ...

ನ್ಯಾ. ಗವಾಯಿ ಮೇಲೆ ಶೂ ಎಸೆಯಲು ಯತ್ನಿಸಿದ್ದ ವಕೀಲ ರಾಕೇಶ್‌ಗೆ ಚಪ್ಪಲಿಯಿಂದ ಹಲ್ಲೆ

ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ್ದ ವಕೀಲ ರಾಕೇಶ್ ಕಿಶೋರ್ ಅವರಿಗೆ ಮಂಗಳವಾರ (ಡಿಸೆಂಬರ್ 9) ದೆಹಲಿಯ ಕರ್ಕಾರ್ಡೂಮಾ ನ್ಯಾಯಾಲಯದ ಸಂಕೀರ್ಣದೊಳಗೆ ಅಪರಿಚಿತ ವ್ಯಕ್ತಿಗಳು...