2012ರಲ್ಲಿ ಟೈಮ್ ಮ್ಯಾಗಜೀನಿನ ಮುಖಪುಟ “ಮೋದಿ ಮೀನ್ಸ್ ಬ್ಯುಸಿನೆಸ್” ಎಂದು ಘೋಷಿಸಿತ್ತು.
ಟೈಮ್ ಅಮೆರಿಕದಿಂದ ಪ್ರಕಟವಾಗುವ ಪಾಕ್ಷಿಕ. ಅದರ ಮುಖಪುಟದಲ್ಲಿ ಕಾಣಿಸಿಕೊಳ್ಳುವುದೆಂದರೆ ಭಾರತದಲ್ಲೊಂದು ಸಂಭ್ರಮ, ಪ್ರತಿಷ್ಠೆ. ಗುಜರಾತಿನ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿಯವರು ತನ್ನ ವ್ಯಕ್ತಿತ್ವವನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ- ಟೆಕ್ಕಿ ಭಾಷೆಯಲ್ಲಿ ಹೇಳಬೇಕೆಂದರೆ- ’ಕಸ್ಟಮೈಸ್’ ಮಾಡಿಕೊಳ್ಳುತ್ತಿದ್ದ ದಿನಗಳವು. ಅಲ್ಲಿಂದ ಮುಂದಿನದೆಲ್ಲ ಚರಿತ್ರೆ.

ಆ ಡ್ರೀಮ್ ರನ್ ಈಗ ಬಹುತೇಕ ಕೊನೆಗೊಳ್ಳುವ ಹಂತದಲ್ಲಿದೆ.
ಅದೇ ಟೈಮ್ ಮ್ಯಾಗಜೀನಿನ ಹಾಲಿ ಸಂಚಿಕೆ, “ಇಂಡಿಯಾ ಇನ್ ಕ್ರೈಸಿಸ್”; “ಹೌ ಮೋದಿ ಫೇಲ್ಡ್ ಅಸ್” ಎಂಬೆರಡು ಬರಹಗಳ ಶೀರ್ಷಿಕೆಗಳನ್ನು ಮುಖಪುಟದಲ್ಲಿ ಸಾಮೂಹಿಕ ಚಿತೆಗಳ ಚಿತ್ರದೊಂದಿಗೆ ಪ್ರಕಟಿಸಿದೆ. ಮೋದಿಯವರ ಓಟದ ಈ ಲ್ಯಾಪ್, ಯಾಕೆ ಜಾಗತಿಕ ದೃಷ್ಟಿಕೋನದಿಂದ ಕೊನೆಯ ಲ್ಯಾಪ್‌ನಂತೆ ಕಾಣಿಸತೊಡಗಿದೆ ಎಂಬುದನ್ನು ಗಮನಿಸಿದರೆ, ಢಾಳಾಗಿ ಕಾಣಿಸುವುದು ಎರಡು ಅಂಶಗಳು. ಒಂದು, ಭಾರತದೊಳಗೆ ನಡೆದಂತೆ ಬಾಯಿಪಟಾಕಿ ಜಾಗತಿಕ ಮಂಚದಲ್ಲಿ ವರ್ಕ್‌ಔಟ್ ಆಗಲಿಲ್ಲ ಎಂಬ ವಾಸ್ತವ; ಇನ್ನೊಂದು, ದೇಶದೊಳಗೆ ನೀತ್ಯಾತ್ಮಕವಾಗಿ ಮತ್ತು ತಂತ್ರಾತ್ಮಕವಾಗಿ ಎದ್ದು ಕಂಡ ವೈಫಲ್ಯ. ಇದೆಲ್ಲದರಿಂದ 56 ಇಂಚು ಎದೆ, ಮೋದಿ ಹೈ ತೊ ಮುಮ್ಕಿನ್ ಹೈ ಎಂದೆಲ್ಲ ಸಂಭ್ರಮಿಸುತ್ತಿದ್ದ ಅವರ ಉಬ್ಬಾಳ್ತನದ ಆರಾಧಕರೆಲ್ಲ, “ಅಯ್ಯೋ ಪಾಪ ಅವರೊಬ್ಬರೇ ಎಷ್ಟಂತ ಕಷ್ಟಪಡುವುದು; ಉಳಿದವರಾರೂ ಕೈಜೋಡಿಸುತ್ತಿಲ್ಲ” ಎಂದು ಹಳಹಳಿಕೆ ಆರಂಭಿಸಿಕೊಂಡಿರುವುದು ಇಡಿಯ ಚಿತ್ರಣದ ಒಟ್ಟು ಸಾರಾಂಶ.

ಮೊದಲ ಅಲೆ
ಜನವರಿ 30, 2021 – ಭಾರತದಲ್ಲಿ ಮೊದಲ ಕೊರೊನಾ ರೋಗಿ ಪತ್ತೆ ಆದದ್ದು. ಅದೇ ಮಾರ್ಚ್ 11ರಂದು ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ಒಂದು ಜಗತ್‌ಪಿಡುಗು ಎಂದು ಪ್ರಕಟಿಸಿತು. ಅದಾಗಿ ಎರಡು ದಿನದ ಬಳಿಕ, ಮಾರ್ಚ್ 13ರ ಹೊತ್ತಿಗೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಕೊರೊನಾ ಅಂತಹ ಆರೋಗ್ಯ ತುರ್ತುಸ್ಥಿತಿ ಅಲ್ಲ ಎಂದು ತಟ್ಟಿಹಾರಿಸುತ್ತಾರೆ. ಭಾರತದಲ್ಲಿ ಕೊರೊನಾ ನಿಭಾವಣೆಗೆ ಜೀವರಕ್ಷಕ ಉಪಕರಣಗಳು ಎಷ್ಟಿವೆ ಎಂಬ ಇನ್ವೆಂಟ್ರಿ ಸಿಕ್ಕಿದ್ದು, ಭಾರತ ಮಾರ್ಚ್ 19ರಂದು ಆರೋಗ್ಯ ಉಪಕರಣಗಳ ರಫ್ತಿಗೆ ನಿಷೇಧ ಹೇರಿದ ಬಳಿಕ. ಅದೇ ದಿನ ಸಂಜೆ ಪ್ರಧಾನಮಂತ್ರಿಗಳು ದೇಶವನ್ನುದ್ದೇಶಿಸಿ ಮಾತನಾಡಿ, ಮಾರ್ಚ್ 22ರಂದು ಜನತಾ ಕರ್ಫ್ಯೂ ಅಂದಾಗಲೇ ಭಾರತ ಜಗತ್‌ಪಿಡುಗಿಗೆ ಎಚ್ಚೆತ್ತುಕೊಂಡದ್ದು. ಅಲ್ಲಿಂದ ಮುಂದೆ ಮಾರ್ಚ್ 24ರಿಂದ ಲಾಕ್‌ಡೌನ್, ಚಪ್ಪಾಳೆ, ಧೂಪ-ದೀಪ-ಜಾಗಟೆಗಳು ಮತ್ತು ಅದರ ನೂರಾರು ಅಡ್ಡ ಪರಿಣಾಮಗಳು! ಇವನ್ನೆಲ್ಲ ಹಿಂದಿರುಗಿ ನೋಡಿದಾಗ ಸ್ಪಷ್ಟವಾಗಿ ಅನ್ನಿಸುವುದು, ಪ್ರಧಾನಮಂತ್ರಿ ಮೋದಿಯವರು ಅನುಸರಿಸಿದ್ದು ಈ ಫ್ರೆಂಚ್ ವ್ಯಂಗ್ಯೋಕ್ತಿಯನ್ನು: on s’engage, et puis on voit (ಅದರ ಅರ್ಥ: ಮೊದಲು ಧುಮುಕು-ಬಳಿಕ ಮುಂದೇನು ಎಂದು ಯೋಚಿಸು!).
ಯುದ್ಧ ಆರಂಭಕ್ಕೆ ಮೊದಲೇ ಗೆಲುವಿನ ಘೋಷಣೆ
ಜಗನ್ಮಾರಿಯ ವಿರುದ್ಧ ಯುದ್ಧ ಮುಗಿಯುವ ಮೊದಲೇ ಪ್ರಧಾನಮಂತ್ರಿ ಮೋದಿಯವರು ಜಾಗತಿಕ ಮಂಚಗಳಲ್ಲಿ ಭಾರತದ ಯಶಸ್ಸನ್ನು ಸಾರಿಕೊಂಡು ಬಂದರು. ಜನವರಿ 28, 2021ರಂದು ಅವರು WEFನ ದಾವೊಸ್ ಶೃಂಗಸಭೆಯಲ್ಲಿ ಆಡಿದ ದೊಡ್ಡಸ್ತಿಕೆಯ ಮಾತುಗಳನ್ನು, ಅಮೆರಿಕಕ್ಕೆ ಹೈಡ್ರಾಕ್ಸಿಕ್ಲೋರೊಕ್ವಿನ್ ಎಂಬ ನಿರುಪಯುಕ್ತ (ಕೋವಿಡ್ ಸಮಸ್ಯೆಗೆ) ಔಷಧಿಯನ್ನು ಕೊಟ್ಟದ್ದನ್ನೇ ದೊಡ್ಡದಾಗಿ ಬಿಂಬಿಸಿದ್ದನ್ನು, ಭಾರತ ಜೀವರಕ್ಷಕ ಉಪಕರಣಗಳಿಗೆ ಸ್ವಾವಲಂಬಿ ಆಗಿಬಿಟ್ಟಿದೆ ಎಂದದ್ದನ್ನು, ಒಪ್ಪಂದದ ಮೇರೆಗೆ ಕೊಡಲೇಬೇಕಾಗಿದ್ದ ಲಸಿಕೆಗಳನ್ನು ದಾನವಾಗಿ ಕೊಡುತ್ತಿದ್ದೇವೆಂದು ಬಿಟ್ಟಿ ಪ್ರಚಾರಕ್ಕೆ ಹೊರಟದ್ದನ್ನು, ಇವೆಲ್ಲವನ್ನೂ ಜಗತ್ತು ಗಮನಿಸಿದೆ. ಈಗ ಈ ಆತ್ಮವಿಶ್ವಾಸದ ಪೊಳ್ಳುತನವೇ ದೇಶವನ್ನು ಕಷ್ಟದ ಜೊತೆ ಮುಜುಗರಕ್ಕೀಡುಮಾಡಿದೆ.

ಭಾರತದಂತಹ ದೊಡ್ಡ ದೇಶವೊಂದು ತನ್ನ ಸೀಮಿತ ಸೌಲಭ್ಯಗಳ ಆಸರೆಯಲ್ಲಿ ಕೊರೊನಾ ಜಗನ್ಮಾರಿಯ ವಿರುದ್ಧ ಹೋರಾಡುವಾಗ ಸ್ವಲ್ಪ ಎಚ್ಚರ ವಹಿಸಿದ್ದರೂ, ಜಾಗತಿಕವಾಗಿ ಇಷ್ಟೊಂದು ಮುಖೇಡಿತನ ಎದುರಿಸಬೇಕಾಗಿ ಬರುತ್ತಿರಲಿಲ್ಲ. ಆದರೆ ನಿರ್ಲಕ್ಷ್ಯದ ಜೊತೆ ಅನಗತ್ಯ ದುರಹಂಕಾರದ ಮಾತುಗಳು ಇಂದು ಜಗತ್ತಿನಾದ್ಯಂತ ಭಾರತವನ್ನು ಎತ್ತಿ ಆಡುವಂತೆ ಮಾಡಿವೆ. ಅವುಗಳಲ್ಲಿ ಎರಡು ಸಂಗತಿಗಳನ್ನು, ಆ ಸಂಗತಿಗಳು ಭವಿಷ್ಯದಲ್ಲಿ ಭಾರತದ ಅಂತಾರಾಷ್ಟ್ರೀಯ ಸಂಬಂಧಗಳ ಮೇಲೂ ದೂರಗಾಮಿ ಪರಿಣಾಮ ಬೀರಬಹುದೆಂಬ ಕಾರಣಕ್ಕೆ ಇಲ್ಲಿ ವಿವರವಾಗಿ ಚರ್ಚಿಸಿದ್ದೇನೆ.
ಲಸಿಕೆ ಇಕ್ಕಳದಲ್ಲಿ ಸಿಕ್ಕಿಹಾಕಿಕೊಂಡದ್ದು
ಸಾಂಪ್ರದಾಯಿಕವಾಗಿ ಜಗತ್ತಿನ ’ಲಸಿಕೆ ಕಿಂಗ್’ ಭಾರತ. ಅಂತಹ ಬಹುಕಾಲದ ಗೌರವವನ್ನು ಕೋವಿಡ್ ಲಸಿಕೆ ನಿರ್ವಹಣೆಯಲ್ಲಿ ಒಕ್ಕೂಟ ಸರ್ಕಾರದ ಪಾತ್ರ ಮತ್ತು ಉದ್ಯಮಿ ಪೂನಾವಾಲಾ ಹಪಾಹಪಿ ಒಟ್ಟು ಸೇರಿ ಚಿಂದಿ ಚಿತ್ರಾನ್ನ ಮಾಡಿಬಿಟ್ಟಿದೆ. ಆಸ್ಟ್ರಜನೆಕಾ ಜೊತೆ ಒಪ್ಪಂದ ಮಾಡಿಕೊಂಡು, ಜಾಗತಿಕ ಲಸಿಕೆ ಒಕ್ಕೂಟ GAVI ಸಹಾಯದಿಂದ ತನ್ನಪಾಡಿಗೆ ತಾನು ಲಸಿಕೆ ಉತ್ಪಾದನೆಯಲ್ಲಿ ತೊಡಗಿದ್ದ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII)ಕ್ಕೆ ಕಳೆದ ನವೆಂಬರ್ 28ರಂದು ಪ್ರಧಾನಿ ಭೇಟಿ ನೀಡುವ ಮೂಲಕ ಎಲ್ಲ ಗೊಂದಲಗಳಿಗೆ ಮುಹೂರ್ತ ನಿಗದಿಯಾಗುತ್ತದೆ. ಅಸ್ಟ್ರಜನೆಕಾ ಜೊತೆ ಒಪ್ಪಂದದನ್ವಯ ತನ್ನ ಉತ್ಪಾದನೆಯಲ್ಲಿ ಜಗತ್ತಿನ ಸುಮಾರು 70 ರಾಷ್ಟ್ರಗಳಿಗೆ ಫೆಬ್ರವರಿಯಿಂದ ಮೇ ನಡುವೆ 10 ಕೋಟಿ ಲಸಿಕೆ ಡೋಸ್‌ಗಳನ್ನು ವಿತರಿಸಬೇಕಾಗಿದ್ದ SII, ಬರೇ 1.98ಕೋಟಿ ಲಸಿಕೆಗಳನ್ನು ಮಾತ್ರ ಪೂರೈಸಿ, ಈಗ ಹಣಪಡೆದು ಒಪ್ಪಂದ ಉಲ್ಲಂಘನೆ ಮಾಡಿದ್ದಕ್ಕಾಗಿ ಸಿಕ್ಕ ಸಿಕ್ಕ ದೇಶಗಳಿಂದ ಕೇಸು ಹಾಕಿಸಿಕೊಳ್ಳುವ ದುಸ್ಥಿತಿಗೆ ಬಂದಿದೆ.
ಈ ಒಪ್ಪಂದವನ್ನು ಬಹಿರಂಗಪಡಿಸದ ಒಕ್ಕೂಟ ಸರ್ಕಾರ, ದೇಶದಿಂದ ಹೊರಗೆ ಒಪ್ಪಂದದ ಪ್ರಕಾರ ಕೊಡಲೇಬೇಕಾಗಿದ್ದ ಲಸಿಕೆಯನ್ನು ತನ್ನ ದಾನ ಎಂದು ಹೇಳಿಕೊಂಡು ತಿರುಗಿದ್ದು, ಹಲವಾರು ದೇಶಗಳ ಕಣ್ಣು ಕೆಂಪಾಗಿಸಿದೆ. ವಾಸ್ತವ ಎಂದರೆ, ಒಂದು ಲಸಿಕೆ ತಯಾರಾಗಲು ಸುಮಾರು 9000 ಕಚ್ಛಾವಸ್ತುಗಳನ್ನು 30 ದೇಶಗಳ 300 ಸರಬರಾಜು ದಾರರಿಂದ ತರಿಸಿಕೊಳ್ಳಬೇಕು. ಮುಖ್ಯ ಸರಬರಾಜುದಾರ ಅಮೆರಿಕ, ತನ್ನಲ್ಲಿ ಆಂತರಿಕ ತುರ್ತು ಸ್ಥಿತಿ ಘೋಷಿಸಿ, ಲಸಿಕೆ ಕಚ್ಛಾವಸ್ತುಗಳ ಸರಬರಾಜನ್ನು ನಿಲ್ಲಿಸಿದಾಗ ಎಲ್ಲವೂ ಅಯೋಮಯ ಆಗತೊಡಗಿತು. ತನ್ನ ವಿದೇಶಾಂಗ ವ್ಯವಹಾರ ಪರಿಣತಿ ತೋರಿ ಅಮೆರಿಕವನ್ನು ಕಾಡಿ-ಬೇಡಿ ಲಸಿಕೆಗೆ ಕಚ್ಛಾಮಾಲು ತರಿಸಿಕೊಳ್ಳುವ ಬದಲು, ಭಾರತ WTOನಲ್ಲಿ ಲಸಿಕೆಯಂತಹ ಕೋವಿಡ್ ತುರ್ತು ಸಾಮಗ್ರಿಗಳ ಪೇಟೆಂಟ್ ನೀತಿ ಸಡಿಲ ಮಾಡುವ ಮೂಲಕ ಎಲ್ಲ ದೇಶಗಳಿಗೂ ಲಸಿಕೆ ಉತ್ಪಾದನೆಗೆ ಅವಕಾಶ ಕೊಡಬೇಕೆಂದು ಅಹವಾಲು ಸಲ್ಲಿಸಿತು. ಅದಕ್ಕೆ ವ್ಯಾಪಾರಿ ಅಮೆರಿಕ ಒಪ್ಪಿದೆಯಾದರೂ, ಔಷಧಿ ಉತ್ಪಾದನೆಗಳ ಮುಂಚೂಣಿಯಲ್ಲಿರುವ ಯುರೋಪಿನ ಹಲವು ದೇಶಗಳು ವಿರೋಧ ವ್ಯಕ್ತಪಡಿಸಿವೆ.
ಈ ನಡುವೆ ತನ್ನ ಲಸಿಕೆ ಉತ್ಪಾದನೆಯನ್ನು ತಿಂಗಳಿಗೆ 6-7 ಕೋಟಿಯಿಂದ 10 ಕೋಟಿಗೆ ಹೆಚ್ಚಿಸಿಕೊಳ್ಳಲು, 3000 ಕೋಟಿ ಸಾಲ ಕೊಡಿ ಎಂದು ಕೇಂದ್ರ ಸರ್ಕಾರಕ್ಕೆ ದುಂಬಾಲು ಬಿದ್ದ SII ಮಾಲೀಕ ಪೂನಾವಾಲಾ, ಅದನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ. ದೇಶದ ಹಣಕಾಸು ಇಲಾಖೆ ಏಪ್ರಿಲ್ 19ರಂದು ಅದಕ್ಕೆ ಒಪ್ಪಿಗೆ ನೀಡಿದೆ. ಆದರೆ, ಪೂನಾವಾಲಾ ಮಾತ್ರ ಮೇ 2ರಂದು, ಹುತಾತ್ಮರ ಪೋಸ್ ಕೊಟ್ಟು ಇಂಗ್ಲೆಂಡಿಗೆ ಹಾರಿಹೋಗಿದ್ದಾರೆ. ಇದರ ಹಿಂದೆ ಇನ್ನೊಂದು ಕತೆ ಇದೆ. ಪೂನಾವಾಲ ಇಂಗ್ಲೆಂಡಿನಲ್ಲಿ 24 ಕೋಟಿ ಪೌಂಡ್ ಹೂಡಿಕೆ ಮಾಡಿ, ಲಸಿಕೆ ಕಾರ್ಖಾನೆ ತೆರೆಯುತ್ತಿದ್ದಾರೆ. ಇದಕ್ಕೆ ’ಭಾರತದಲ್ಲೇ ಸಾಲ ಪಡೆದು ಅಲ್ಲಿ ಹೂಡಿಕೆ’ ಎಂಬ ಮಾತುಗಳು ಉದ್ಯಮ ವಲಯದಿಂದ ಕೇಳಿಬರಲಾರಂಭಿಸಿವೆ. ಭಾರತ 3000 ಕೋಟಿ ಸಾಲ ಕೊಟ್ಟರೂ, ಇಲ್ಲಿ ಕೋವಿಶೀಲ್ಡ್ ಲಸಿಕೆ ಕೊರತೆ ಸುಧಾರಿಸುತ್ತಿಲ್ಲ ಎಂಬುದು ವಾಸ್ತವ.

ಸರ್ಕಾರ ಕೂಡ ಮೊದಲು ವಾರಿಯರ್‍ಸ್‌ಗಳಿಗೆ, 65 ದಾಟಿದವರಿಗೆ ಲಸಿಕೆ ಎಂದು ಹೇಳಿದ್ದು, ಕಡೆಗೆ ಏನೇನೋ ಒತ್ತಡಗಳಿಗೆ ಮಣಿದು, ಈಗ 18 ದಾಟಿದವರಿಗೆಲ್ಲ ಲಸಿಕೆ ಅನ್ನುತ್ತಿದೆ! ಮಧ್ಯೆ ಒಪ್ಪಂದದ ಪ್ರಕಾರ ಹೊರಹೋಗಬೇಕಿದ್ದ ಲಸಿಕೆಯನ್ನು ತಡೆದು ದೇಶದೊಳಗೇ ಬಳಸಿಕೊಳ್ಳುವ ಒಂದು ವಿಫಲ ಯತ್ನವನ್ನೂ ನಡೆಸಿದೆ. ದೇಶದ ಲಸಿಕೆ ಉತ್ಪಾದನೆ ವಾರ್ಷಿಕ 30-35ಕೋಟಿ ದಾಟಿಲ್ಲ. ಅದರಲ್ಲಿ ಹೊರಗೆ ಕಳುಹಿಸಬೇಕಾದುದನ್ನು ಕಳುಹಿಸಿ, 136 ಕೋಟಿ ಜನರಲ್ಲಿ ಎಷ್ಟು ಜನರಿಗೆ ಲಸಿಕೆ ಕೊಡುವುದು ಸಾಧ್ಯವಾಗಲಿದೆ ಎಂಬ ಯೋಜನೆಯೂ ಸರ್ಕಾರದ ಬಳಿ ಇದ್ದಂತಿಲ್ಲ. ಇದನ್ನೆಲ್ಲ ಜಗತ್ತು ಗಮನಿಸುತ್ತಿಲ್ಲ ಎಂದರೆ ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದಂತೆಯೇ ಸರಿ.
ಸೂಪರ್ ಸ್ಪ್ರೆಡರ್ ಜಂಗುಳಿಗಳು
ಭಾರತ ಕೋವಿಡ್ ನಿರ್ದಿಷ್ಟ ಮೂಲಸೌಕರ್ಯ ಹೊಂದಿದೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಡಾಯಿ ಕೊಚ್ಚಿಕೊಂಡಿದ್ದ ಪ್ರಧಾನಮಂತ್ರಿಗಳು, ದೇಶದ ಒಳಗೆ ಆ ತಯಾರಿಗಳಲ್ಲಿ ನಿಜಕ್ಕೂ ತೊಡಗಿಕೊಳ್ಳುವ ಬದಲು, ತಮ್ಮ ಎಂದಿನ ರಾಜಕೀಯ ವ್ಯವಹಾರಗಳಲ್ಲಿ ತೊಡಗಿಕೊಂಡರು.
*2020ರ ಜನವರಿ 14 ಏಪ್ರಿಲ್ 27ರ ನಡುವೆ ಹರಿದ್ವಾರದಲ್ಲಿ ಕುಂಭಮೇಳಕ್ಕೆ ಸರಿಸುಮಾರು 90 ಲಕ್ಷ ಮಂದಿ ಪಾಲ್ಗೊಂಡರು.
* ಪಶ್ಚಿಮ ಬಂಗಾಳ, ತಮಿಳುನಾಡು, ಪಾಂಡಿಚೆರಿ, ಕೇರಳ ಸೇರಿದಂತೆ ದೇಶದ ಹಲವೆಡೆ ಲಕ್ಷಾಂತರ ಜನ ಸೇರಿ ಚುನಾವಣಾ ಪ್ರಚಾರಸಭೆಗಳು ನಡೆದವು.
* ದಿಲ್ಲಿಯಲ್ಲಿ ಧರಣಿ ಕುಳಿತಿರುವ ರೈತರ ಬೇಡಿಕೆಗಳನ್ನು ಈ ತುರ್ತು ಸಂದರ್ಭದಲ್ಲಾದರೂ ಒಪ್ಪಿ, ಮುಂದೂಡಬಹುದಿತ್ತು. ಅದನ್ನೂ ಮಾಡಲಿಲ್ಲ.
* ದೇಶದಾದ್ಯಂತ ಜನ ಕೊರೊನಾ ಇನ್ನಿಲ್ಲ ಎಂದು ತಮ್ಮ ಪಾಡಿಗೆ ತಮ್ಮ ಹೊಟ್ಟೆಪಾಡುಗಳಲ್ಲಿ ತೊಡಗಿಕೊಂಡರು. ಏಕೆಂದರೆ ನೋಟು ರದ್ದತಿಯಿಂದಾದಿಯಾಗಿ ಲಾಕ್‌ಡೌನ್ ತನಕ, ದೇಶದ ಜನಸಾಮಾನ್ಯರ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಇವನ್ನೆಲ್ಲ ವಿದೇಶಿ ಮಾಧ್ಯಮಗಳು ಸತತವಾಗಿ ಗಮನಿಸುತ್ತಲೇ ಬಂದಿದ್ದವು.
ವೈಫಲ್ಯದ ದೃಶ್ಯಗಳು
ದಿಲ್ಲಿ-ಮುಂಬಯಿಗಳಲ್ಲಿನ ಸೀಮಿತ ವೈದ್ಯಕೀಯ ಸೌಲಭ್ಯಗಳನ್ನು ದಾಟಿ ಏಕಕಾಲದಲ್ಲಿ ಎರಡನೇ ಅಲೆ ಸ್ಫೋಟಗೊಳ್ಳತೊಡಗಿದಾಗ, ವಿದೇಶಿ ಮಾಧ್ಯಮಗಳು ಸಹಜವಾಗಿಯೇ ಭಾರತದತ್ತ ಆತಂಕಭರಿತ ದೃಷ್ಟಿ ಇಟ್ಟುಕೊಂಡಿದ್ದವು. ಆದರೆ ಸರ್ಕಾರದ ಕಡೆಯಿಂದ, ಇದು ದೇಶದ ಹೆಸರು ಕೆಡಿಸುವ ಪ್ರಯತ್ನ ಎಂಬ ನರೇಟಿವ್ ಹೊರಟು ಸಾಮಾಜಿಕ ಮಾಧ್ಯಮಗಳಲ್ಲಿ ಆ ರೀತಿಯ ಸುದ್ದಿಗಳನ್ನು ನಿಯಂತ್ರಿಸಹೊರಟಾಗ, ವಿದೇಶೀ ಮಾಧ್ಯಮಗಳು ಜಿದ್ದಿಗೆ ಬಿದ್ದವರಂತೆ ಸರ್ಕಾರದ ಕೋವಿಡ್ ನಿರ್ವಹಣೆ ವೈಫಲ್ಯಗಳನ್ನು ಇಂಚುಇಂಚಾಗಿ ಸಾಕ್ಷಿ ಸಮೇತ ಜಗತ್ತಿನ ಎದುರು ಬಿಡಿಸಿಡತೊಡಗಿದ್ದಾರೆ. ಅದಕ್ಕೆ ಸರಿಯಾಗಿ ಕೊರೊನಾ ಎರಡನೇ ಅಲೆ ದೇಶದಾದ್ಯಂತ ತೀವ್ರವಾಗಿ ಅಪ್ಪಳಿಸಿದೆ. ತಯಾರಿಯ ಕೊರತೆ, ಹಾದಿಬೀದಿಯ ಸಾವುಗಳು, ಔಷಧಿ-ಆಮ್ಲಜನಕ-ಸ್ಮಶಾನದ ಕೊರತೆಗಳಿಂದಾಗಿ, ದೇಶ ಇನ್ನಷ್ಟು ಮುಜುಗರ ಎದುರಿಸುವಂತಾಗಿರುವುದು ಸುಳ್ಳಲ್ಲ.
- ರಾಜಾರಾಂ ತಲ್ಲೂರು

ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಉಡುಪಿಯ ನಿವಾಸಿ. ಉದಯವಾಣಿ ದಿನಪತ್ರಿಕೆಯ ಆರೋಗ್ಯ ಪುರವಣಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅವರು ನಂತರ ಅದರಿಂದ ಹೊರಬಂದು ಸ್ವಂತ ಉದ್ಯಮ ಆರಂಭಿಸಿದ್ದಾರೆ. ನುಣ್ಣನ್ನ ಬೆಟ್ಟ ಅವರ ಮೊದಲ ಪ್ರಕಟಿತ ಕೃತಿ.



good article sir