ಭರತ ಖಂಡದ ಕೋಟ್ಯಂತರ ಜನರು ಸಹಸ್ರಾರು ವರ್ಷಗಳ ಕಾಲ ಮತ ಮೌಢ್ಯದಲ್ಲಿ ಮುಳುಗಿ ತಮ್ಮ ವಿನಾಶಕ್ಕೆ ತಾವೇ ಕಾರಣರಾದ ದುರಂತವು ಇತಿಹಾಸದ ಭಾಗವಾಗಿದೆಯಷ್ಟೆ. ರಾಜರಾಮ ಮೋಹನರಾಯ, ದಯಾನಂದ ಸರಸ್ವತಿ, ಸ್ವಾಮಿ ವಿವೇಕಾನಂದ ಮೊದಲಾದ ಮನೀಷಿಗಳು ಶುದ್ಧ ಆಧ್ಯಾತ್ಮದ ವಿದ್ಯುತ್ ಕ್ರಾಂತಿಯಿಂದ ಭಾರತದ ಜನಸಹಸ್ರದ ಮನೋ ಲೋಕಗಳನ್ನು ಬೆಳಗಿ ಅಲ್ಲಿನ ಮೂಲೆಮೂಲೆಗಳಲ್ಲಿ ದಟ್ಟವಾಗಿ ಕವಿದು ಹೆಪ್ಪುಗಟ್ಟಿದ ಮೌಢ್ಯ ತಮಸ್ಸನ್ನು ಕರಗಿಸಿ, ಹೊಹರಿಯಿಸುವ ಮಹಾ ಸಾಹಸವನ್ನು ಕೈಗೊಂಡು ತಮ್ಮ ತಮ್ಮ ರೀತಿಯಲ್ಲಿ ಯಶಸ್ವಿಯಾದರು.
ಇಪ್ಪತ್ತನೆಯ ಶತಮಾನದ ಮಧ್ಯ ಭಾಗದಲ್ಲಿ ದಕ್ಷಿಣ ಭಾರತದ ಮತ್ತೊಬ್ಬ ಮಹಾವ್ಯಕ್ತಿ ಮತ ಮೌಢ್ಯ, ಆಜ್ಞಾನ, ಉತ್ತಮರು ಎಂದು ತಮ್ಮನ್ನು ತಾವು ಕರೆದುಕೊಂಡು ವರ್ಣಗಳು ನಡೆಸುತ್ತಿದ್ದ ದೌಷ್ಟ್ಯ ದಬ್ಬಾಳಿಕೆಗಳ ವಿರುದ್ಧ ಭಯಂಕರವಾದ ಯುದ್ಧವನ್ನು ಘೋಷಿಸಿದರು. ಅವರೇ ತಮಿಳುನಾಡಿನ ಜನ ಕೋಟಯು ಗೌರವದಿಂದ ಪೆರಿಯಾರರು ಎಂದು ಕರೆದ ಶ್ರೀ ಇ. ವಿ. ರಾಮಸ್ವಾಮಿನಾಯಕರು.
ಪೆರಿಯಾರರು ಸಾಮಾಜಿಕ ಕ್ಷೇತ್ರದಲ್ಲಿ ಘೋಷಿಸಿದ ಸಮರವು ಯೂರೋಪಿನಲ್ಲಿ ಈ ಶತಮಾನದಲ್ಲಿ ನಡೆದ ಎರಡು ಮಹಾಯುದ್ಧಗಳಷ್ಟೇ ಅನಾಹುತಕಾರಿಯೂ ಅಭ್ಯುದಯಕಾರಿಯೂ ಆಯಿತು. ಈ ಎರಡು ಮಹಾಯುದ್ಧಗಳು ಅನೇಕ ನಗರಗಳನ್ನೂ, ಸಂಸ್ಕೃತಿ ಕೇಂದ್ರಗಳನ್ನೂ, ಕಲಾಕ್ಷೇತ್ರಗಳನ್ನೂ ನಿರ್ನಾಮಗೊಳಿಸಿದುವು. ಮಾನವನ ದೌರ್ಜನ್ಯದ ಭೀಕರ ಮುಖವನ್ನು ತೆಗೆದು ತೋರಿಸಿದುವು. ಜೊತೆಜೊತೆಗೇ ಮಾನವತೆಗೆ ಯುದ್ಧದ ವಿಷಯದಲ್ಲಿ, ವಿಜಯದ ವಿಷಯದಲ್ಲೂ ಇದ್ದ ಭ್ರಮೆಯನ್ನೂ ಅವು ನಿರ್ನಾಮಗೊಳಿಸಿದವು. ಅಲ್ಲದೆ ಮಾನವನ ಅತೀವ ಸಹನ ಶಕ್ತಿ, ಜೀವಕಾಮ ಪೂರ್ಣವಿನಾಶದಿಂದ ನವೋನವನ್ನು ಸೃಷ್ಟಿಸುವ ಪವಾಡ ಸದೃಶ ಶಕ್ತಿಗಳನ್ನೂ ಉಜ್ವಲವಾದ ರೀತಿಯಲ್ಲಿ ಎತ್ತಿ ತೋರಿಸಿದುವು. ಅಲ್ಲದೆ ಎಲ್ಲಕ್ಕೂ ಮಿಗಿಲಾಗಿ ಅನೇಕ ರಾಷ್ಟ್ರಗಳು ಸ್ವಾತಂತ್ರ್ಯ ಪಡೆಯಲೂ ಸಹಾಯಕವಾದುವು.
ಪೆರಿಯಾರರ ಸಾಮಾಜಿಕ ಸಮರವು ಭರತ ಖಂಡದ ಮತ ಮೌಢ್ಯಗಳ ಜೊತೆಗೆ ಇಲ್ಲಿನ ನಿರಂತರ ಜೀವ ಶಕ್ತಿಯಾದ ಧರ್ಮ-ಅಧ್ಯಾತ್ಮಗಳನ್ನೂ ಮೂಲೋತ್ಪಾಟನೆ ಮಾಡಲು ಹೊರಟಿತು. ಕಳೆಯನ್ನು ಕೀಳಲು ಹೊರಟು ಬೆಳೆಯನ್ನೂ ನಾಶ ಮಾಡಬಲ್ಲ ಬುಲ್‌ಡೋಜರಿನಂತೆ ಪೆರಿಯಾರರು ತಮ್ಮ ಯುದ್ಧ ಯಾತ್ರೆಯಲ್ಲಿ ಅಜ್ಞಾನ ಮೂಢನಂಬಿಕೆಗಳ ಜೊತೆಯಲ್ಲಿ ಭಾರತೀಯರ ಸಾರ ಭೂತ ಮೌಲ್ಯಗಳನ್ನೂ ಮುಲೋತ್ಪಾಟನೆ ಮಾಡಲೂ ಹಿಂಜರಿಯಲಿಲ್ಲ. ಬಹುಶಃ ಅವರಿಗೆ ಅಂತರ್ವಿಶ್ವಾಸವಿತ್ತೆಂದು ತೋರುತ್ತದೆ; ನಿತ್ಯವೂ, ಅವಿನಾಶಿಯೂ ಆದ ಆ ಜೀವ ಸತ್ವವು ಎಲ್ಲ ಆಘಾತಗಳನ್ನೂ ತಡೆದು, ತಾನು ಬಾಳಿಯೇ ತೀರುತ್ತದೆ ಎಂಬ ಗಟ್ಟಿ ಸತ್ಯದ ವಿಚಾರದಲ್ಲಿ.
ಇಷ್ಟು ಹೇಳಿದ ಮಾತ್ರಕ್ಕೇ ಪೆರಿಯಾರರು ಭಾರತೀಯರಿಗೆ ಮಾಡಿದ ಉಪಕಾರದ ಪ್ರಮಾಣವನ್ನು ಕಡಿಮೆ ಮಾಡಿ ತೋರಿಸಿದಂತೆ ಆಗಲಿಲ್ಲ. ಧರ್ಮ, ಮತ, ಆಧ್ಯಾತ್ಮಗಳ ಹೆಸರಿನಲ್ಲಿ ಜನಸಾಮಾನ್ಯರನ್ನು ತುಳಿಯುತ್ತಿದ್ದ ಪುರೋಹಿತಶಾಹಿಯ ಪಾದಗಳು ಬಳಿದುಕೊಂಡಿದ್ದ ವಿಭೂತಿ ನಾಮ, ಮುದ್ರೆಗಳನ್ನು ಅವರು ನಿರ್ದಾಕ್ಷಿಣ್ಯವಾಗಿ ಒರಸಿ ಹಾಕಿದರು. ಜನಸಾಮಾನ್ಯರ ವಿಚಾರಪ್ರಗತಿಗೆ ಅಡ್ಡಿಯಾಗಿ ಬೆದರು ಬೊಂಬೆಗಳಂತೆ ನಿಂತಿದ್ದ ಜನಿವಾರ-ಶಿವದಾರಗಳನ್ನು ತಮ್ಮ ವಿಚಾರವಾದದ ಬಿರುಗಾಳಿಯಿಂದ ತೂರಿಸಿ, ಹಾರಿಸಿದರು. ಕಂದಾಚಾರದ ಅರ್ಭಟದಿಂದ ತಮ್ಮ ವ್ಯಕ್ತಿತ್ವವನ್ನೇ ಕಳೆದುಕೊಂಡಿದ್ದ ಜನಸಾಮಾನ್ಯರಿಗೆ ವ್ಯಕ್ತಿತ್ವವನ್ನೂ ಆತ್ಮ ಗೌರವವನ್ನೂ ದಾನ ಮಾಡಿದರು. ಪತಿತರು ಮತ್ತೆ ತಲೆ ಎತ್ತಿ ಬಾಳುವುದನ್ನು ಕಲಿಸಿದರು. ಒಟ್ಟಿನಲ್ಲಿ ದಕ್ಷಿಣ ಭಾರತದ, ಅದರಲ್ಲೂ ತಮಿಳುನಾಡಿನ ಇತಿಹಾಸದ ದಿಕ್ಕು ದೆಸೆಗಳನ್ನು ಗಮನೀಯವಾದ ರೀತಿಯಲ್ಲಿ ಬದಲಿಸಿದರು. ಈ ಎಲ್ಲ ಕಾರಣಗಳಿಗಾಗಿ ಪೆರಿಯಾರರ ಹೆಸರು ನಮ್ಮ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದೇ ತೀರುತ್ತದೆ.
ನನ್ನ ಅಭಿಪ್ರಾಯದಲ್ಲಿ ಭಾರತವು ಉಳಿಯಬೇಕಾದರೆ ನಮ್ಮ ಜನರ ಮೂಢನಂಬಿಕೆಗಳು ತೊಲಗಲೇಬೇಕು. ಆದರೆ, ಹಾಗೆ ಮಾಡುವ ಭರದಲ್ಲಿ ಅಧ್ಯಾತ್ಮವನ್ನೂ ತೊಲಗಿಸುತ್ತೇವೆ ಎಂದು ಹೊರಟರೆ ವಿನಾಶವು ಕಟ್ಟಿಟ ಬುತ್ತಿ.
ಆದ್ದರಿಂದ ನಾನು ಇತ್ತೀಚಿನ ವರ್ಷಗಳಲ್ಲಿ ಪದೇ ಪದೇ ಉಚ್ಚರಿಸುತ್ತಿರುವ ನವ ನಿರ್ಮಾಣ ಮಂತ್ರವನ್ನು ಈ ಸಂದರ್ಭದಲ್ಲಿಯೂ ಘೋಷಿಸಬಯಸುತ್ತೇನೆ. ಪಂಚ ಮಂತ್ರಗಳಾವುವೆಂದರೆ, 1. ಮನುಜಮತ, 2. ವಿಶ್ವಪಥ 3. ಸರ್ವೋದಯ 4. ಸಮನ್ವಯ ಮತ್ತು 5. ಪೂರ್ಣದೃಷ್ಟಿ.
ಮುಂದಿನ ಪೀಳಿಗೆಗೆ ಅಮೃತ ಸಂದೇಶ
’ವಿಶ್ವ’ ಮಾನವರಾಗಲು ನಾವು ಸಾಧಿಸಲೇಬೇಕಾದ ಮೂಲಭೂತ ಸ್ವರೂಪದ ತತ್ವ ಪ್ರಣಾಳಿಕೆ
ಸಪ್ತ ಸೂತ್ರ:
- ’ಮನುಷ್ಯ ಜಾತಿ ತಾನೊಂದೆ ವಲಂ’ ಎಂಬುದನ್ನು ನಿರುಪಾಧಿತವಾಗಿ ಸ್ವೀಕರಿಸಬೇಕು.
- ವರ್ಣಾಶ್ರಮವನ್ನು ತಿದ್ದುವುದಿಲ್ಲ; ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು. ಅಂದರೆ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ಅಂತ್ಯಜ ಇತ್ಯಾದಿ ವಿಭಜನೆಯನ್ನು ನಿರ್ನಾಮ ಮಾಡಬೇಕು.
- ಜಾತಿಪದ್ಧತಿಯನ್ನು ಸಂಪೂರ್ಣವಾಗಿ ನಿರಾಕರಿಸಿ, ವಿನಾಶಗೊಳಿಸಬೇಕು.
- ’ಮತ’ ತೊಲಗಿ ಅಧ್ಯಾತ್ಮ ಮಾತ್ರ ವೈಜ್ಞಾನಿಕ ತತ್ವವಾಗಿ ಮಾನ್ಯತೆ ಪಡೆಯಬೇಕು.
- ಮತ ಮನುಜಮತವಾಗಬೇಕು. ಪಥ ವಿಶ್ವಪಥವಾಗಬೇಕು. ಮನುಷ್ಯ ವಿಶ್ವಮಾನವನಾಗಬೇಕು.
- ಮತ ಗುಂಪು ಕಟ್ಟುವ ವಿಷಯವಾಗಬಾರದು. ಯಾರೂ ಯಾವ ಒಂದು ಮತಕ್ಕೂ ಸೇರದೆ ಪ್ರತಿಯೊಬ್ಬನೂ ತಾನು ಕಂಡುಕೊಳ್ಳುವ ತನ್ನ ಮತಕ್ಕೆ ಮಾತ್ರ ಸೇರಬೇಕು. ಅಂದರೆ ಜಗತ್ತಿನಲ್ಲಿ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟೇ ಸಂಖ್ಯೆಯ ಮತಗಳಿರುವಂತಾಗುತ್ತದೆ. ಯಾರೊಬ್ಬರೂ ಇನ್ನೊಬ್ಬರ ಮತಕ್ಕೆ ಸೇರಿ ಗುಂಪು ಕಟ್ಟಿ ಜಗಳ ಹಚ್ಚುವಂತಾಗಬಾರದು.
- ಯಾವ ಒಂದು ಗ್ರಂಥವೂ ಏಕೈಕ ಪರಮ ಪೂಜ್ಯ ಗ್ರಂಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾದವುಗಳನ್ನೆಲ್ಲ ಓದಿ ತಿಳಿದು ತನ್ನ ದರ್ಶನವನ್ನು ತಾನೇ ನಿರ್ಣಯಿಸಿ ಕಟ್ಟಿಕೊಳ್ಳಬೇಕು.
ವಿಶ್ವಮಾನವ ಗೀತೆ
ಓ ನನ್ನ ಚೇತನ
ಆಗು ನೀ ಅನಿಕೇತನ
1
ರೂಪ ರೂಪಗಳನು ದಾಟಿ
ನಾಮ ಕೋಟಿಗಳನ್ನು ಮೀಟಿ
ಎದೆಯ ಬಿರಿಯೆ ಭಾವ ದೀಟಿ
ಓ ನನ್ನ ಚೇತನ
ಆಗು ನೀ ಅನಿಕೇತನ
2
ನೂರು ಮತದ ಹೊಟ್ಟ ತೂರಿ
ಎಲ್ಲ ತತ್ವದೆಲ್ಲೆ ಮೀರಿ
ನಿರ್ದಿಗಂತವಾಗಿ ಏರಿ
ಓ ನನ್ನ ಚೇತನ
ಆಗು ನೀ ಅನಿಕೇತನ
3
ಎಲ್ಲಿಯೂ ನಿಲ್ಲದಿರು
ಮನೆಯನೆಂದೂ ಕಟ್ಟದಿರು
ಕೊನೆಯನೆಂದೂ ಮುಟ್ಟದಿರು
ಓ ಅನಂತವಾಗಿರು
ಓ ನನ್ನ ಚೇತನ
ಆಗು ನೀ ಅನಿಕೇತನ
4
ಅನಂತ ತಾನೆ ಅನಂತವಾಗಿ
ಆಗುತಿಹನೆ ನಿತ್ಯಯೋಗಿ
ಅನಂತ ನೀ ಅನಂತವಾಗು,
ಆಗು ಆಗು ಆಗು ಆಗು,
ಓ ನನ್ನ ಚೇತನ,
ಆಗು ನೀ ಅನಿಕೇತನ
ಪೆರಿಯಾರರ ನೂರನೆಯ ಜನ್ಮ ದಿನೋತ್ಸವವನ್ನು ಆಚರಿಸುತ್ತಿರುವ ಮಿತ್ರರ ಉತ್ಸಾಹ ಅಭಿನಂದನೀಯವಾದದ್ದು. ಇದು ಬರಿಯ ಉತ್ಸವದಲ್ಲಿ ಪರ್ಯಾವಸಾನವಾಗಕೂಡದು ಎಂದು ನಮ್ಮ ಮಿತ್ರರು ಪೆರಿಯಾರರ ಬರಹವನ್ನು ಸೊಗಸಾಗಿ ಅನುವಾದಿಸಿ ಸುಂದರವಾದ ಪುಸ್ತಕಗಳ ರೂಪದಲ್ಲಿ ಪ್ರಕಟಿಸಿ ಸುಲಭ ದರದಲ್ಲಿ ಮಾರುವ ವ್ಯವಸ್ಥೆಗೊಳಿಸಿದ್ದಾರೆ. ಇದು ಸ್ತುತ್ಯವಾದ ಕಾರ್ಯ ಇಂದಿನ ಸಮಾರಂಭಕ್ಕೂ ಮುಂದಿನ ಸಾಹಸಗಳಿಗೂ ನಾನು ಹೃತೂರ್ವಕವಾಗಿ ಶುಭವನ್ನು ಕೋರುತ್ತೇನೆ.
(ಇದು ವೇಮಣ್ಣ ಅವರು ಪೆರಿಯಾರ್ ಬರಹಗಳನ್ನು ಸಂಗ್ರಹಿಸಿ ಅನುವಾದಿಸಿರುವ ’ಸಮಾಜವಾದ ಪೆರಿಯಾರರ ದೃಷ್ಟಿಯಲ್ಲಿ’ ಎಂಬ ಪುಟ್ಟ ಪುಸ್ತಿಕೆಯ ಪ್ರಾರಂಭದಲ್ಲಿ ಪ್ರಕಟವಾಗಿದೆ. ಇದನ್ನು ಚಿಂತಕರ ಚಾವಡಿ-ಕರ್ನಾಟಕ 1980ರಲ್ಲಿ ಪ್ರಕಟಿಸಿದೆ.)


