ಏಪ್ರಿಲ್ 5ರ ರಾತ್ರಿ 9ಗಂಟೆಗೆ ದೇಶದ ಬಹುತೇಕರು ದೇಶದ ಪ್ರಧಾನಿಗಳ ಕರೆಗೆ ಓಗೊಟ್ಟು 9 ನಿಮಿಷಗಳ ಕಾಲ ದೀಪ ಹಚ್ಚಿದರು. ಇನ್ನು ಕೆಲವರು ಪಟಾಕಿ ಹೊಡೆದು ಹುಚ್ಚೆದ್ದು ಕುಣಿದರು. ಅದೇ ಸಂದರ್ಭದಲ್ಲಿ ಅನ್ನ ಆಹಾರವಿಲ್ಲದೇ, ಮನೆ ತಲುಪುವ ಉದ್ದೇಶದಿಂದ ಮೂರು ದಿನ ನಡೆದ ಕಾರಣಕ್ಕೆ ಬಳಲಿದ್ದ ಗಂಗಮ್ಮ ಎಂಬ ಅಮಾಯಕ ಮಹಿಳೆ ತನ್ನ ಸಾವಿನ ಕ್ಷಣಗಳನ್ನು ಎಣಿಸುತ್ತಾ ಬಳ್ಳಾರಿಯ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದಳು.
ಪೂರ್ವ ಸಿದ್ದತೆ ಮತ್ತು ಬಡವರ ಸ್ಥಿತಿಗತಿ ಏನಾಗಬಹುದೆಂದು ಯೋಚಿಸದೇ ಘೋಷಿಸಿದ ಲಾಕ್‌ಡೌನ್‌ನಿಂದ 30ಕ್ಕೂ ಹೆಚ್ಚು ಜನರು ಜೀವತೆತ್ತಿದ್ದಾರೆ. ಹಸಿವಿನಿಂದ ಸತ್ತವರ ಲೆಕ್ಕ ಸಿಕ್ಕಿಲ್ಲ ಮತ್ತು ಸಿಗುವುದೂ ಇಲ್ಲ. ಈ ನಡುವೆ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಸಿಂಧನೂರಿನ 29 ವರ್ಷದ ಗಂಗಮ್ಮ ಎಂಬ ಮಹಿಳೆ ತನ್ನೂರಿಗೆ ತೆರಳಲು ನಡೆದು ನಡೆದು ಸುಸ್ತಾಗಿ, ಅನ್ನ ನೀರಿಲ್ಲದೆ ಸೋಮವಾರ ಪ್ರಾಣ ಬಿಟ್ಟ ಹೃದಯವಿದ್ರಾವಕ ಘಟನೆ ಪತ್ರಿಕೆಗಳಲ್ಲಿ ವರದಿಯಾಗಿದೆ.
ಬೆಂಗಳೂರಿನ ಗ್ಲೋಬಲ್ ವಿಲೇಜ್ ಎಂಬ ಐಟಿ ಕಂಪನಿಯು ಪ್ರಪಂಚದಲ್ಲಿಯೇ ಫೇಮಸ್. ಆದರೆ ಅದೇ ಅಪಾರ್ಟ್ಮೆಂಟ್ ನಿರ್ಮಾಣದಲ್ಲಿ ತೊಡಗಿಸಿಕೊಂಡ ಕೂಲಿ ಕಾರ್ಮಿಕರ ಬಗ್ಗೆ ಯಾರೂ ಕಾಳಜಿ ವಹಿಸುವುದಿಲ್ಲ. ಅಂತಹ ನತದೃಷ್ಟರಲ್ಲಿ ಗಂಗಮ್ಮಳು ಕೂಡ ಒಬ್ಬಳು. ಅವಳ ಸಾವಿನ ನಂತರದ ಅವರ ಮನೆ ಪರಿಸ್ಥಿತಿಯನ್ನು ಗಮನಿಸಿದರೆ ನಾವೆಲ್ಲರೂ ನಾಗರಿಕರು ಎನಿಸಿಕೊಳ್ಳಲು ಸಹ ನಾಚಿಕೆಯಾಗುತ್ತದೆ.
ಗಂಗಮ್ಮಳ ಗಂಡ ಕುಡಿತದ ದಾಸನಾಗಿದ್ದನು. ಈತನ ಕಿರುಕುಳದಿಂದ ರೋಸಿಹೋಗಿದ್ದ ಗಂಗಮ್ಮ ಒಮ್ಮೆ ಮಲೇರಿಯಾ ರೋಗಕ್ಕೆ ತುತ್ತಾದಳು. ಇನ್ನು ಅಲ್ಲಿರುವುದು ಅಸಾಧ್ಯ ಎನಿಸಿದಾಗ ಉಳಿದೊಂದು ದಾರಿಯಂತೆ ಬೆಂಗಳೂರಿಗೆ ಗುಳೆ ಹೊರಟಳು.
ಕಟ್ಟಡ ನಿರ್ಮಾಣದಲ್ಲಿ ದುಡಿದು ದುಡಿದು ಬಸವಳಿದಿದ್ದ ಆಕೆ ಇಲ್ಲಿ ಒಂದಷ್ಟು ನೆಮ್ಮದಿಯನ್ನಾದರೂ ಕಂಡುಕೊಂಡಿದ್ದಳು. ಅಷ್ಟರಲ್ಲಿ ಅಪ್ಪಳಿಸಿದ್ದೆ 21 ದಿನಗಳ ಕೊರೊನಾ ಲಾಕ್‌ಡೌನ್. ಎಷ್ಟು ದಿನ ಕಾದರೂ ಕೆಲಸ ಸಿಗದಾಗ ಮತ್ತೆ ತನ್ನೂರು ಸಿಂಧನೂರಿಗೆ ಹೊರಟು ನಿಂತಿದ್ದಾಳೆ. ಕೈಯಲ್ಲಿ ದುಡ್ಡಿಲ್ಲ, ಹೊಟ್ಟೆಗೆ ಆಹಾರವಿಲ್ಲ. ಊರು ತಲುಪಿದರೆ ಏನಾದರೂ ಸಿಗಬಹುದೆಂಬ ಆಸೆಯೊತ್ತು ಹೊರಟ ಗಂಗಮ್ಮ ಕೊನೆಗೆ ಸೇರಿದ್ದು ಮಾತ್ರ ಸ್ಮಶಾನಕ್ಕೆ.
ಟ್ರಾಕ್ಟರ್‌ನಲ್ಲಿ ಒಂದಷ್ಟು ಜೊತೆಗಾರರೊಂದಿಗೆ ಗಂಗಮ್ಮ ಹೊರಟಿದ್ದಾಗ ತುಮಕೂರಿನಲ್ಲಿ ಪೊಲೀಸರು ತಡೆದಿದ್ದಾರೆ. ಅಲ್ಲಿಂದ ಕಾಲ್ನಡಿಗೆ ಆರಂಭಿಸಿದ ಆಕೆಗೆ ಆಹಾರ ನೀರು ದಕ್ಕಿಲ್ಲ. ಮೊದಲೇ ಅನಾರೋಗ್ಯವಿದ್ದ ಆಕೆ ಛಲಬಿಡದೇ ನಡೆದಿದ್ದಾಳೆ. ನಂತರ ಟ್ರಾಕ್ಟರ್ ಬಂದು ಬಳ್ಳಾರಿವರೆಗೂ ತಲುಪಿಸಿದೆ. ಅಷ್ಟರಲ್ಲಿ ಬಸವಳಿದಿದ್ದ ಆಕೆಯನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂರು ದಿನ ಅಲ್ಲಿಯೂ ನರಳಿದ ಆಕೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾಳೆ.
ಸತ್ತ ನಂತರವೂ ಬಿಡದ ಅವಮಾನ
ಗಂಗಮ್ಮ ಸಾವನಪ್ಪುವ ಮುನ್ನ ಒಂದು ವಾರಗಳ ಮುಂಚೆ ತಾನೇ ಆಕೆಯ ಅತ್ತೆ (ಗಂಡನ ತಾಯಿ) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಗಂಗಮ್ಮನ ಮೃತದೇಹವನ್ನು ಸಿಂಧನೂರಿಗೆ ತರಬಾರದು, ಇದರಿಂದ ಇಡೀ ನಗರಕ್ಕೆ ತೊಂದರೆಯಾಗುತ್ತದೆ ಎಂದು ವೆಂಕಟೇಶ್ವರ ನಗರದ ಕೆಲವರು ತಗಾದೆ ತೆಗೆದಿದ್ದಾರೆ.
ಇದರಿಂದ ಮತ್ತಷ್ಟು ಭೀತಿಕ್ಕೊಳಗಾದ ಕುಟುಂಬವು ಸಾಸಲುಮರೆ ಎಂಬ ಗ್ರಾಮದಲ್ಲಿ ರಾತ್ರೋರಾತ್ರಿ ದಫನ್ ಮಾಡಿದೆ. ಕುಟುಂಬದ ಕಡೆ ಯಾರೂ ಸಹ ತಿರುಗಿ ನೋಡಿಲ್ಲ. ಬಡವರ ಸಾವಿಗೆ ಅಳುವವರು ಯಾರು ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಲುತ್ತಿಲ್ಲ ಸಹಾಯ
ಮೋದಿ ಸರ್ಕಾರವೇನೋ ಲಾಕ್‌ಡೌನ್ ಘೋಷಿಸಿ ಮಧ್ಯಮ ವರ್ಗದ ಜನರಿಗೆ ಬೇಸರವಾಗದಿರಲೆಂದು ಟಿವಿಯಲ್ಲಿ ರಾಮಾಯಣ, ಮಹಾಭಾರತ ಪ್ರದರ್ಶನ ಮಾಡುತ್ತಿದೆ. ಇನ್ನೂ ಮುಂದೆ ಹೋಗಿ ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಎಂದು ವಾರಕ್ಕೊಂದು ಕರೆ ನೀಡಲಾಗುತ್ತಿದೆ. ಆದರೆ ದೇಶದ ಅರ್ಧ ಸಂಖ್ಯೆಯಷ್ಟಿರುವ ಬಡವರು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ, ಅವರಿಗೆ ಊಟ ವಸತಿ ಸಿಗುತ್ತಿದೆಯೇ ಎಂದು ಯೋಚಿಸುವ ಗೋಜಿಗೆ ಸರ್ಕಾರ ಹೋಗಿಲ್ಲ. ಚಿಲ್ಲರೆ ಪ್ಯಾಕೇಜ್ ಘೋಷಿಸಿ ಕೇಂದ್ರ ಸರ್ಕಾರ ಕೈತೊಳೆದುಕೊಂಡರೆ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಊಟ ಕೊಡಲಾರದಷ್ಟು ಬೊಕ್ಕಸದಲ್ಲಿ ಹಣವಿಲ್ಲದೇ ಒದ್ದಾಡುತ್ತಾ ದಾನಿಗಳತ್ತ ಮುಖ ಮಾಡಿದೆ.
ಅಂದ ಮಾತ್ರಕ್ಕೆ ಪ್ರಜ್ಞಾವಂತರು, ಮಾನವೀಯ ಕಾಳಜಿಯುಳ್ಳವರು ಕೈಕಟ್ಟಿ ಕುಳಿತಿದ್ದಾರೆ ಅಂತಲ್ಲ. ದೇಶಾದ್ಯಂತ ಲಕ್ಷಾಂತರ ಮಂದಿ ಪ್ರಾಣದ ಹಂಗು ತೊರೆದು ಬಡವರಿಗೆ ತುತ್ತು ಊಟ ಕೊಡಲು ಶ್ರಮಿಸುತ್ತಿದ್ದಾರೆ. ದಿನಕ್ಕೆ ಲಕ್ಷಾಂತರ ಖರ್ಚು ಮಾಡಿ ಊಟ ಬೇಯಿಸಿ ಅಗತ್ಯವಿದ್ದವರಿಗೆ ತಲುಪಿಸುವ ಮಾದರಿ ಕೆಲಸ ಮಾಡುತ್ತಿದ್ದಾರೆ. ಬಹುತೇಕ ಮುಸ್ಲಿಂ ಧರ್ಮಿಯರು ಸಹಾಯಹಸ್ತ ಕೆಲಸದಲ್ಲಿ ನಿರತರಾಗಿದ್ದಾರೆ ಎಂಬುದನ್ನು ಒತ್ತಿಯೇ ಹೇಳಬೇಕಾಗಿದೆ.
ಆದರೂ ಸಾಲುತ್ತಿಲ್ಲ. ಹಸಿದ ಎಲ್ಲರ ಹೊಟ್ಟೆ ಹೊರೆಯಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಭಾರತ ಬೃಹತ್ ರಾಷ್ಟ್ರ. ಇಲ್ಲಿನ ಎಲ್ಲರ ಹೊಟ್ಟೆ ತುಂಬಿಸಬೇಕಾದರೆ ಸರ್ಕಾರವೇ ಮುಂದೆ ನಿಂತು ಸಾವಿರಾರು ಕೋಟಿ ಖರ್ಚಾದರೂ ಸರಿಯೇ ಬಡವರ ಜೀವ ಮುಖ್ಯ ಅನ್ನುವ ದಿಟ್ಟತನ ಪ್ರದರ್ಶಿಸಬೇಕು. ಹಸಿವಿನಿಂದ ಸಾಯದಂತೆ ಕಾಯುವುದೇ ತನ್ನ ಪರಮ ಗುರಿಯಾಗಿ ತೆಗೆದುಕೊಳ್ಳಬೇಕಿತ್ತು. ಆದರೆ ಅದು ಆಗುತ್ತಿಲ್ಲ. ಆದ್ದರಿಂದಲೇ ಗಂಗಮ್ಮನಂತಹ ಅದೆಷ್ಟು ಜನ ಅನಾಥ ಶವವಾಗುತ್ತಿದ್ದಾರೋ. ಅವೆಲ್ಲವೂ ವರದಿಯಾಗುತ್ತಿಲ್ಲವಷ್ಟೇ.
ಏಕೆಂದರೆ, ಗಡ್ಡ ಬಿಟ್ಟು ಟೊಪ್ಪಿ ತೊಟ್ಟ ಮುಸ್ಲಿಮರು ಯಾವ್ಯಾವುದೋ ಕಾಲದ ವಿಡಿಯೋಗಳನ್ನೆಲ್ಲಾ ಹುಡುಕುವುದರಲ್ಲಿ ಐಟಿ ಸೆಲ್‌ಗಳು ಬ್ಯುಸಿಯಾಗಿದ್ದರೆ, ಎಲ್ಲವನ್ನೂ ಸೆನ್ಸೇಷನ್ ಮಾಡಲು ಟಿಆರ್‌ಪಿ ಟಿವಿಗಳು ನಿರತವಾಗಿವೆ.
ಗಂಗಮ್ಮನ ಸಾವಿಗೆ ನೂರಾರು ಜನ ಸಾಮಾಜಿಕ ಜಾಲತಾಣದಲ್ಲಿ ಕಂಬನಿ ಮಿಡಿದಿದ್ದಾರೆ. ಕೊಲೆಗಾರರು ನಾವೇ ಎನ್ನುವಷ್ಟರ ಮಟ್ಟಿಗೆ ತಪ್ಪನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅವರೆಲ್ಲರೂ ತಮ್ಮ ಕೈಲಾದಷ್ಟು ಜನರಿಗೆ ಸಹಾಯ ಮಾಡಿದವರೆ. ಆದರೆ ಯಾರಿಗೂ ಒಂದು ಪೈಸೆ ಸಹಾಯ ಮಾಡದ ಕೆಲವು ಧರ್ಮಾಂಧರು ಇಂದಿಗೂ ಮುಸ್ಲಿಮರಿಂದಲೇ ಕೊರೊನಾ ಹರಡಿದೆ, ಜಿಹಾದಿ ವೈರಸ್ ಎನ್ನುವ ಸುಳ್ಳು ಸುದ್ದಿ ಹರಡಲು ಮುಂದಾಗಿದ್ದಾರೆ. ಮುಖ್ಯವಾಹಿನಿ ಮಾಧ್ಯಮಗಳು ಇದಕ್ಕೆ ಕುಮ್ಮಕ್ಕು ಕೊಡುತ್ತಿದ್ದು ಇಡೀ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಹರಡಲು ಕೊರೊನಾವನ್ನು ಬಳಸಿಕೊಳ್ಳುತ್ತಿದ್ದಾರೆ. ನೆನಪಿಸಿಕೊಳ್ಳಿ ಇದುವರೆಗೂ ಯಾವ ಟಿವಿ ಚಾನೆಲ್‌ನವರೂ ಸಹ ಕೊರೊನಾ ವಿರುದ್ಧದ ಹೋರಾಟಕ್ಕೆ ಒಂದು ರೂಪಾಯಿ ಕೂಡ ನೆರವು ನೀಡಿಲ್ಲ. ಬದಲಿಗೆ ದ್ವೇಷದ ವಿಷ ಬಿತ್ತುತ್ತಾ ಅಮಾಯಕ ಜನರ ಸಾವನ್ನು ಸಂಭ್ರಮಿಸುತ್ತಿದ್ದಾರೆ. ಈ ನಾಡಿನಲ್ಲಾದ ಒಂದು ಸಾವಿಗೆ ಸಂಬಂಧವೇ ಇಲ್ಲದ ನೂರಾರು ಆತ್ಮಸಾಕ್ಷಿಯುಳ್ಳ ಮನಸ್ಸುಗಳು ಇದಕ್ಕೆ ನಾನು ಹೊಣೆ ಎಂದು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಆದರೆ ದಿನವೀಡಿ ಇನ್ನೊಬ್ಬರ ಮೇಲೆ ದ್ವೇಷ ಕಾರುವ ಧರ್ಮವೀರರು ಮತ್ತು ಮಾಧ್ಯಮಗಳಿಗೆ ಈ ಸಾವು ಏನು ಅನ್ನಿಸುತ್ತಿಲ್ಲ ಏಕೆ?
ಗಂಗಮ್ಮನ ಸಾವನ್ನು ಯಾವ ಮುಸ್ಲಿಮರ ತಲೆಗೂ ಕಟ್ಟಲು ಸಾಧ್ಯವಿಲ್ಲವಾದ್ದರಿಂದ ಅದು ಸುದ್ದಿಯಾಗಿಲ್ಲ ಎಂಬುದನ್ನು ಮರೆಯದಿರೋಣ. ನಾವೆಂತಹ ದೇಶದಲ್ಲಿ ಬದುಕುತ್ತಿದ್ದೇವೆ? ಮಾನವೀಯತೆ ಇಲ್ಲದ ದೇಶ ಉಳಿದೀತೇ?


