ಉತ್ತರ ಪ್ರದೇಶದ ಕಾನ್ಪುರದಲ್ಲಿ ಕಳೆದ ವಾರ ಎಂಟು ಪೊಲೀಸರನ್ನು ಹೊಂಚು ಹಾಕಿ ಕೊಲೆ ಮಾಡಿದ ಪ್ರಮುಖ ಆರೋಪಿ ಕುಖ್ಯಾತ ದರೋಡೆಕೋರ ವಿಕಾಸ್ ದುಬೆ ಮಂಗಳವಾರ ದೆಹಲಿ ಬಳಿಯ ಹರಿಯಾಣದ ಫರಿದಾಬಾದ್‌ನ ಹೋಟೆಲ್‌ನಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ ಫರಿದಾಬಾದ್ ಹೋಟೆಲ್‌ನಲ್ಲಿ ಪೋಲಿಸರು ದಾಳಿ ನಡೆಸಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಪೊಲೀಸರು ತಲುಪುವ ಮೊದಲೇ ವಿಕಾಸ್ ದುಬೆಯನ್ನು ಹೋಲುವ ವ್ಯಕ್ತಿಯೊಬ್ಬ ಹೋಟೆಲ್ ತೊರೆದಿದ್ದಾನೆ ಎಂದು ಹೋಟೆಲ್ ಮ್ಯಾನೇಜರ್ ಹೇಳಿದ್ದಾರೆ. ಆ ವ್ಯಕ್ತಿ ವಿಕಾಸ್ ದುಬೆ ಎಂದು ಪೊಲೀಸರು ನಂತರ ಖಚಿತಪಡಿಸಿದ್ದಾರೆ.
ಹೋಟೆಲ್‌ನ ವ್ಯವಸ್ಥಾಪಕ ರೋಮಿ NDTVಗೆ ನೀಡಿದ ಹೇಳಿಕೆಯಲ್ಲಿ, “ನಿನ್ನೆ ಮಧ್ಯಾಹ್ನ 12:30 ರ ಸುಮಾರಿಗೆ ಇಬ್ಬರು ಬಂದರು. ಅವರಲ್ಲಿ ಒಬ್ಬರು ಗುರುತಿನ ಚೀಟಿಗಳನ್ನು ತೋರಿಸಿದರು, ಫೋಟೋ ಸ್ಪಷ್ಟವಾಗಿರಲಿಲ್ಲ. ಈ ಐಡಿಯನ್ನು ಬಳಸಲಾಗುವುದಿಲ್ಲ ಎಂದು ನಾನು ಅವರಿಗೆ ಹೇಳಿದೆ. ಇದಕ್ಕೂ ಮೊದಲು ವಿಕಾಸ್ ದುಬೆ ಅವರನ್ನು ನೋಡಿರಲಿಲ್ಲ. ಸಂಜೆ 4:30 ರ ಸುಮಾರಿಗೆ ಪೊಲೀಸರು ಬಂದು ದುಬೆ ಅವರ ಕೋಣೆಯ ವಿವರಗಳನ್ನು ಕೇಳಿದರು. ನಂತರ CCTV ಕ್ಯಾಮರಾದ ತುಣುಕುಗಳನ್ನು ತೆಗೆದುಕೊಂಡರು” ಎಂದು ಹೇಳಿದ್ದಾರೆ.
ಪೊಲೀಸರು ವಶಪಡಿಸಿಕೊಂಡ CCTV ದೃಶ್ಯಾವಳಿಗಳು ವಿಕಾಸ್ ದುಬೆ ಮಾಸ್ಕ್ ಧರಿಸಿರುವುದು ಖಚಿತವಾಗಿದೆ. ಮಂಗಳವಾರ ಬಂಧಿಸಲ್ಪಟ್ಟ ಇಬ್ಬರಲ್ಲಿ, ಕುಖ್ಯಾತ ಅಪರಾಧಿಗೆ ತಲೆಮರೆಸಿಕೊಳ್ಳಲು ಸಹಾಯ ಮಾಡಿದ ಅಂಕುರ್. ಮತ್ತೊಬ್ಬ ಪ್ರಭಾತ ಎಂಬುವವನು ಸಂಚುಕೋರರ ಗ್ರಾಮದವನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ನಡೆದ ಹತ್ಯಾಕಾಂಡದ ನಂತರ ನಾಪತ್ತೆಯಾಗಿದ್ದ ವಿಕಾಸ್ ದುಬೆಯನ್ನು ಬಂಧಿಸಲು ಯುಪಿ ಪೊಲೀಸರ ಇಪ್ಪತ್ತೈದು ತಂಡಗಳು ದಾಳಿ/ತನಿಖೆ ನಡೆಸುತ್ತಿವೆ. ಆರೋಪಿಯ ಬಗ್ಗೆ ಸುಳಿವು ಕೊಟ್ಟವರಿಗೆ 2.5 ಲಕ್ಷ ಬಹುಮಾನ ಘೋಷಿಸಲಾಗಿದೆ.
ದೆಹಲಿಯ ಸಮೀಪವಿರುವ ಹರಿಯಾಣದ ಎರಡು ನಗರಗಳು – ಫರಿದಾಬಾದ್ ಮತ್ತು ಗುರಗಾಂವ್ ಹೈ-ಅಲರ್ಟ್ ಘೋಷಿಸಿವೆ. ಈ ಎಚ್ಚರಿಕೆಯ ನಡುವೆಯೇ ಕುಖ್ಯಾತ ಅಪರಾಧಿ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಶರಣಾಗಬಹುದು ಎಂಬ ಊಹಾಪೋಹಗಳಿವೆ.
ಬುಧವಾರ ಮುಂಜಾನೆ ಯುಪಿ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ರಾಜ್ಯ ರಾಜಧಾನಿ ಲಕ್ನೋದಿಂದ 200 ಕಿ.ಮೀ ದೂರದ ಹಮೀರ್‌ಪುರ ಜಿಲ್ಲೆಯಲ್ಲಿ ನಡೆಸಿದ ಎನ್‌ಕೌಂಟರ್‌ನಲ್ಲಿ ಯುಪಿ ದರೋಡೆಕೋರನ ಆಪ್ತ ಸಹಾಯಕ ಅಮರ್ ದುಬೆ ಮೃತಪಟ್ಟಿದ್ದಾನೆ. ಕಾನ್ಪುರದಲ್ಲಿ ಶ್ಯಾಮು ಬಾಜ್‌ಪೈ ಎಂಬ ಇನ್ನೊಬ್ಬ ಸಹಾಯಕನನ್ನು ಬಂಧಿಸಲಾಗಿದೆ.
8 ಪೊಲೀಸರ ಹತ್ಯೆಗೆ ಕಾರಣರಾದ ಮಾಹಿತಿಸೋರಿಕೆ ಶಂಕೆಯ ಆಧಾರದ ಮೇಲೆ ಶುಕ್ರವಾರದಂದು 68 ಪೊಲೀಸರನ್ನು ಕಾನ್ಪುರದ ಚೌಬೆಪುರ ಪೊಲೀಸ್ ಠಾಣೆಯಿಂದ ತೆಗೆದುಹಾಕಲಾಗಿದೆ. ದುಬೆಯ ಬಿಕ್ರು ಗ್ರಾಮವು ಚೌಬೆಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ.
ಕಾನ್ಪುರ ಪೊಲೀಸರ ಮಾಜಿ ಮುಖ್ಯಸ್ಥ ಅನಂತ್ ಡಿಯೋ ಅವರನ್ನು ಯುಪಿ ಸರ್ಕಾರ ವರ್ಗಾಯಿಸಿದೆ. ಎಸ್‌ಟಿಎಫ್‌ನೊಂದಿಗೆ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಆಗಿರುವ ಡಿಯೊ ಅವರನ್ನು ಮೊರಾದಾಬಾದ್‌ನ ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿಗೆ ವರ್ಗಾಯಿಸಲಾಗಿದೆ. ಶುಕ್ರವಾರ ಕೊಲೆಯಾದ ಉಪ ಪೊಲೀಸ್ ವರಿಷ್ಠಾಧಿಕಾರಿ ದೇವೇಂದ್ರ ಮಿಶ್ರಾ ಅವರು ಮಾರ್ಚ್‌ನಲ್ಲಿ ಬರೆದ ಪತ್ರವೊಂದನ್ನು ಅವರು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಲಾಗಿದೆ.
ದೇವೇಂದ್ರ ಮಿಶ್ರಾ ಬರೆದಿದ್ದಾರೆ ಎನ್ನಲಾಗಿರುವ ಪತ್ರದಲ್ಲಿ, ಚೌಬೆಪುರ ಪೊಲೀಸ್ ಠಾಣೆಯ ಸ್ಟೇಷನ್ ಆಫೀಸರ್ ವಿನಯ್ ತಿವಾರಿ ದರೋಡೆಕೋರರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ದೂರನ್ನು ನಿರ್ಲಕ್ಷಿಸಿದರೆ “ದೊಡ್ಡ ಅಚಾತುರ್ಯ” ನಡೆಯುವ ಬಗ್ಗೆ ಪತ್ರದಲ್ಲಿ ಎಚ್ಚರಿಕೆ ನೀಡಿದ್ದರು. ಪತ್ರದ ನಕಲನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ. ಆದರೆ ಪತ್ರ ಸಿಕ್ಕಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ವಿನಯ್ ತಿವಾರಿ ಅವರನ್ನು ಭಾನುವಾರ ಅಮಾನತು ಮಾಡಲಾಗಿದೆ.
ಇದನ್ನೂ ಓದಿ: ಯುಪಿ ದಾಳಿಯಲ್ಲಿ ಕೊಲ್ಲಲ್ಪಟ್ಟ ಅಧಿಕಾರಿ ಬರೆದ ಪತ್ರ ವೈರಲ್; ನಮಗೆ ಸಿಕ್ಕಿಲ್ಲವೆಂದ ಪೊಲೀಸರು


