Homeಕರ್ನಾಟಕಗೌರಿ ಹತ್ಯೆಯ ತನಿಖೆಯ ಜಾಡು ಹಿಡಿದು ಹೊರಟಾಗ ಸಿಕ್ಕ ಸತ್ಯಗಳು... ಭಾಗ-2

ಗೌರಿ ಹತ್ಯೆಯ ತನಿಖೆಯ ಜಾಡು ಹಿಡಿದು ಹೊರಟಾಗ ಸಿಕ್ಕ ಸತ್ಯಗಳು… ಭಾಗ-2

- Advertisement -
- Advertisement -

ಭಾಗ-2 ಕೃಪೆ: ದಿ ಕ್ವಿಂಟ್
ನಿರೂಪಣೆ: ನಿಖಿಲ್ ಕೋಲ್ಪೆ

ಭಾಗ 1 ಓದಲು ಇಲ್ಲಿ ಕ್ಲಿಕ್‌ ಮಾಡಿ: ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಕರ್ನಾಟಕ ವಿಶೇಷ ತನಿಖಾ ದಳ (SIT) ಭೇದಿಸಿದ್ದಾದರೂ ಹೇಗೆ?

3. ಅಮೋಲ್ ಕಾಳೆ- ಸಂಚುಕೋರ

ಬುದ್ಧಿಜೀವಿಗಳನ್ನು ಕೊಲ್ಲಲು ಸಿದ್ಧರಿರುವ ಮಿಕಗಳನ್ನು ಹುಡುಕುವ ಕೆಲಸ ಮಾಡುತ್ತಿದ್ದ ಪ್ರವೀಣನನ್ನು 20 ದಿನಗಳ ಕಾಲ ಹಿಂಬಾಲಿಸಿದ ಎಸ್‌ಐಟಿ, ಆತನ ಚಲನವಲನಗಳ ನಕ್ಷೆ ತಯಾರಿಸಿತು (ಮ್ಯಾಪಿಂಗ್). ಪೊಲೀಸರು ತಮ್ಮ ಸರ್ವರ್ ಬಳಸಿ, ಅದೇ ದಾರಿಯಲ್ಲಿ ಸಾಗುವ ಮೊಬೈಲ್ ಫೋನ್‌ಗಳನ್ನು ಟ್ರ್ಯಾಕ್ ಮಾಡಿದರು. ಕೆಲವೇ ಗಂಟೆಗಳಲ್ಲಿ ಪ್ರವೀಣನ ಮೊಬೈಲ್ ಯಾವ ನಂಬರಿನದು ಎಂದು ಗೊತ್ತಾಯಿತು. ಅದರ ಜಿಯೋ ಲೊಕೇಶನ್ ಅವನ ಜೊತೆಗೇ ಸಾಗುತ್ತಿತ್ತು. ಪ್ರವೀಣ ಒಂದು ಕರೆಯಲ್ಲಿ ಆತ ‘ಭಾಯಿ ಸಾಬ್’ ಎಂದು ಕರೆದ ವ್ಯಕ್ತಿಯನ್ನು ಭೇಟಿಯಾಗಲಿರುವ ಬಗ್ಗೆ ಮಾತನಾಡಿದ. ಈ ಹೆಸರನ್ನು ಭಗವಾನ್ ಹತ್ಯೆ ಸಂಚಿನ ಪ್ರಕರಣದಲ್ಲಿ ಬಂಧಿತರಾಗಿದ್ದ ಕೆಲವರ ವಿಚಾರಣೆಯ ವೇಳೆಯೂ ಪೊಲೀಸರು ಕೇಳಿದ್ದರು.

ಈ ಭೇಟಿಗೆ ಹೋಗಲಿದ್ದ ಪ್ರವೀಣನನ್ನು ಹಿಂಬಾಲಿಸಲು ಪೊಲೀಸರು ನಿರ್ಧರಿಸಿದರು. ಈ ಭೇಟಿ ದಾವಣಗೆರೆ ಜಿಲ್ಲೆಯಲ್ಲಿ ನಡೆಯಲಿತ್ತು. ಆದರೆ, ಆತ ಆ ಸ್ಥಳವನ್ನು ತಲಪುವ ಮೊದಲೇ ಅವನನ್ನು ವಶಕ್ಕೆ ಪಡೆದುಕೊಂಡ ಪೊಲೀಸರು, ‘ಭಾಯ್ ಸಾಬ್‌’ನನ್ನು ತೋರಿಸಲು ಹೇಳಿದರು. ಆತ ಒಂದು ಕೆಂಪು ವ್ಯಾನನ್ನು ತೋರಿಸಿದ. ಪೋಲೀಸರು ಆ ವ್ಯಾನನ್ನು ಸುತ್ತುವರಿದಾಗ ಅದರಲ್ಲಿ ಇದ್ದವರು ಮೂವರು- ಭಾಯಿ ಸಾಬ್ ಯಾನೆ ಅಮೋಲ್ ಕಾಳೆ, ಅಮಿತ್ ದೇಗ್ವೇಕರ್ ಮತ್ತು ಮನೋಹರ್ ಎಡವೆ.

4. ನಾಲ್ಕು ಗುಪ್ತ ಡೈರಿಗಳು

ಗೌರಿ ಲಂಕೇಶರನ್ನು ಹತ್ಯೆ ಮಾಡಿದ ಗುಂಪು ಈಗ ಎಸ್ಐಟಿ ವಶದಲ್ಲಿತ್ತು. ಇವರಲ್ಲಿ ಕಾಳೆ- ಹತ್ಯೆಯ ಯೋಜಕ ಅಥವಾ ಸಂಚುಕೋರನಾಗಿದ್ದ. ಅಮಿತ್ ದೇಗ್ವೇಕರ್ ಗೌರಿ ಹತ್ಯೆಗೆ ಹಣಕಾಸು ಒದಗಿಸಿದ್ದ ಆರೋಪಿ ಮತ್ತು ಮನೋಹರ ಎಡವೆ ಕರ್ನಾಟಕರಲ್ಲಿ ತಮ್ಮ ಗುಂಪಿಗಾಗಿ ಕೆಲಸ ಮಾಡಲು ಮಿಕಗಳನ್ನು ಹುಡುಕುತ್ತಿದ್ದ ಇನ್ನೊಬ್ಬ ಅಸಾಮಿ. ಆದರೆ, ಇವರ್ಯಾರೂ ಗುಂಪಿನ ಇತರ ಸದಸ್ಯರನ್ನು ಗುರುತಿಸಲು ಎಸ್‌ಐಟಿ ಜೊತೆ ಸಹಕರಿಸಲಿಲ್ಲ. ಅಂದರೆ, ನಿಜವಾಗಿಯೂ ಗುಂಡುಹಾರಿಸಿ ಕೊಂದ ತಂಡ ಯಾವುದು ಎಂದು ಅವರು ಬಾಯಿ ಬಿಡಲಿಲ್ಲ.

ಅವರು ಬಾಯಿ ಬಿಡಬೇಕಾದ ಅಗತ್ಯವೂ ಇರಲಿಲ್ಲ. ಅವರ ಮನೆಗಳ ಮೇಲೆ ದಾಳಿ ನಡೆಸಿದಾಗ ಸಿಕ್ಕಿದ ನಾಲ್ಕು ದಿನಚರಿಗಳು ಸಾಕ್ಷಿಗಳಾಗಿ ಬಾಯಿಬಿಟ್ಟವು! ಅಮೋಲ್ ಕಾಳೆಯ ಮನೆಯಲ್ಲಿ ಎರಡು ಮತ್ತು ಎಡವೆ ಮತ್ತು ಪ್ರವೀಣನ ಮನೆಗಳಲ್ಲಿ ತಲಾ ಒಂದೊಂದು ಡೈರಿಗಳು ಎಸ್‌ಐಟಿಗೆ ಸಿಕ್ಕಿದ್ದವು. ಈ ಡೈರಿಗಳಲ್ಲಿ ಸಂಕೇತ ಭಾಷೆಯಲ್ಲಿ ಬರೆದ ಹಲವಾರು ಹೆಸರುಗಳು ಮತ್ತು ಫೋನ್ ನಂಬರ್‌ಗಳಿದ್ದವು.

ಕಾಳೆಯ ಡೈರಿಯಲ್ಲಿ ಒಂದು ಚೀಟಿ ಎಸ್‌ಐಟಿಗೆ ಸಿಕ್ಕಿತ್ತು. ಅದನ್ನೂ ಸಂಕೇತ ಭಾಷೆಯಲ್ಲಿ ಬರೆಯಲಾಗಿತ್ತು. ಯಾವಯಾವ ದಿನ ಏನನ್ನು ಮಾಡಬೇಕು ಎಂದು ಅದರಲ್ಲಿ ಬರೆಯಲಾಗಿತ್ತು. ಆ ಚೀಟಿಯಲ್ಲಿದ್ದ ಕೊನೆಯ ದಿನಾಂಕ- 5 ಸೆಪ್ಟೆಂಬರ್, 2017. ಅದುವೇ ಗೌರಿ ಹತ್ಯೆಯಾದ ದಿನ. ಈ ಚೀಟಿ ಸಾಮಾನ್ಯವಲ್ಲ; ಅದು ಗೌರಿ ಹತ್ಯೆಯ ನೀಲನಕ್ಷೆ ಎಂದು ಪೊಲೀಸರಿಗೆ ಮನವರಿಕೆಯಾಯಿತು.

ಪ್ರವೀಣ ಮತ್ತು ಎಡವೆಯ ಮನೆಗಳಲ್ಲಿ ಸಿಕ್ಕಿದ ಡೈರಿಗಳಲ್ಲಿ ಜಿಲ್ಲಾವಾರು ಹೆಸರುಗಳು ಮತ್ತು ಫೋನ್ ನಂಬರುಗಳು ಇದ್ದವು. ಆದರೆ, ಹೆಸರುಗಳನ್ನು ಕೂಡಾ ಸಂಕೇತ ಭಾಷೆಯಲ್ಲಿ ಬರೆಯಲಾಗಿತ್ತು. ವಿಚಾರಣೆ ಮತ್ತು ಡೈರಿಗಳಲ್ಲಿ ಇದ್ದ ಮಾಹಿತಿಗಳ ವಿಶ್ಲೇಷಣೆಯಿಂದ ಎಸ್‌ಐಟಿಗೆ ತಿಳಿದಿದ್ದದ್ದೇನೆಂದರೆ, ಇವೆಲ್ಲವೂ ಮುಂದೆ ಇವರ ಗುಂಪನ್ನು ಸೇರುವ ಸಾಧ್ಯತೆ ಇರುವ ವ್ಯಕ್ತಿಗಳ ವಿವರಗಳಾಗಿದ್ದವು. ಇನ್ನೊಂದು ವಿಷಯ ಎಂದರೆ, ಪ್ರವೀಣ ದಕ್ಷಿಣ ಮತ್ತು ಪಶ್ಚಿಮ ಕರ್ನಾಟಕದಲ್ಲಿ ಕಾರ್ಯಾಚರಿಸುತ್ತಿದ್ದರೆ, ಎಡವೆ ಉತ್ತರ ಕರ್ನಾಟಕದಲ್ಲಿ ಕಾರ್ಯಾಚರಿಸುತ್ತಿದ್ದ.

5. ಪರಶುರಾಮ ವಾಘ್‌ಮೋರೆ- ಹತ್ಯೆಯ ಆರೋಪಿ

ಗೌರಿ ಹತ್ಯೆಯ ಸೂತ್ರದಾರರು ಈಗ ಎಸ್ಐಟಿ ವಶದಲ್ಲಿದ್ದರೂ, ನಿಜವಾಗಿಯೂ ಗುಂಡು ಹೊಡೆದು ಕೊಂದವರು ಹೊರಗೆಯೇ ತಿರುಗಾಡುತ್ತಿದ್ದರು. ಎಸ್‌ಐಟಿ ಕಸ್ಟಡಿಯಲ್ಲಿದ್ದ ಆರೋಪಿಗಳು ದಪ್ಪ ಚರ್ಮದ ಗಿರಾಕಿಗಳು ಎಂದು ಎಸ್‌ಐಟಿಗೆ ಮನವರಿಕೆಯಾಗುತ್ತಾ ಬರುತ್ತಿತ್ತು. ಪೋಲೀಸರು ಅನೇಕ ರೀತಿಯ ವಿಚಾರಣಾ ತಂತ್ರಗಳನ್ನು ಬಳಸಿದರು. ಆರೋಪಿಗಳನ್ನು ಪ್ರಚೋದಿಸುವುದು, ಅವರೊಂದಿಗೆ ತಾತ್ವಿಕ ಚರ್ಚೆಗಳಲ್ಲಿ ತೊಡಗುವುದು ಇತ್ಯಾದಿ. (ಸಾಮಾನ್ಯವಾಗಿ ಪೋಲೀಸರು ಕಳ್ಳಕಾಕರೊಂದಿಗೆ ವ್ಯವಹರಿಸುವಂತೆ ಮೂರನೇ ಡಿಗ್ರಿ ಬಳಸುವಂತಿರಲಿಲ್ಲ. ಬಳಸುವಂತಿದ್ದರೆ, ದೊಡ್ಡ ಜಾಲವೇ ಬಯಲಾಗಿ, ದೊಡ್ಡದೊಡ್ಡ ಕುಳಗಳ ಹೆಸರು ಹೊರಗೆ ಬರುತ್ತಿತ್ತೇನೋ!)

ಪರಶುರಾಮ ವಾಘ್ಮೋರೆ ಪ್ರಮೋದ್‌ ಮುತಾಲಿಕ್‌ನೊಂದಿಗೆ

ಕೊನೆಗೂ ಒಂದು ಸುಳಿವು ಸಿಕ್ಕಿತು. ಅದು ಬಂದದ್ದು ಗೌರಿ ಹತ್ಯೆಗೆ ಹಣಕಾಸು ಒದಗಿಸಿದ್ದ ಆರೋಪಿ ದೇಗ್ವೇಕರ್‌ನಿಂದ. ಒಂದು ದೀರ್ಘ ವಿಚಾರಣೆಯ ವೇಳೆ ಗೌರಿ ಲಂಕೇಶ್ ಅವರನ್ನು ಕೊಂದದ್ದು ಒಬ್ಬ ‘ಬಿಲ್ಡರ್’ ಎಂದು ಆತನ ಬಾಯಿಯಿಂದ ಹೊರಬಂತು. ಎಸ್‌ಐಟಿ ಅಧಿಕಾರಿಗಳು ಡೈರಿಗಳಲ್ಲಿ ಇದ್ದ ಹೆಸರುಗಳನ್ನು ಪರಿಶೀಲಿಸಿ, ಯಾರಾದರೂ ಬಿಲ್ಡರ್‌ಗಳ ಹೆಸರಿದೆಯೇ ಎಂದು ಹುಡುಕುತ್ತಿದ್ದಾಗ ಅಚ್ಚರಿ ಕಾದಿತ್ತು. ಡೈರಿಯಲ್ಲಿ ‘ಬಿಲ್ಡರ್’ ಎಂಬ ಎಂಟ್ರಿ ಇತ್ತು. ಆ ಹೆಸರಿನ ಮುಂದಿದ್ದ ಮೊಬೈಲ್ ನಂಬರ್ ಸ್ವಿಚ್‌ಆಫ್ ಆಗಿತ್ತು. ಆ ಮೊಬೈಲ್ ನಂಬರ್ ಕೊನೆಯ ಬಾರಿಗೆ ವಿಜಯಪುರ ಜಿಲ್ಲೆಯ ಸಿಂಧಗಿ ಪಟ್ಟಣದಲ್ಲಿ ಬಳಕೆಯಾಗಿತ್ತು. ಇನ್ನಷ್ಟು ವಿಚಾರಣೆ ನಡೆಸಿದಾಗ ‘ಬಿಲ್ಡರ್’ ಎಂದರೆ ‘ಬಾಡಿ ಬಿಲ್ಡರ್’ ಎಂದು ದೇಗ್ವೇಕರ್ ಬಾಯಿಬಿಟ್ಟ. ಇದಕ್ಕಿಂತ ಮುಂದೆ ಆತ ತನಿಖೆಯಲ್ಲಿ ಸಹಕರಿಸಲಿಲ್ಲ.

ಇದೇ ಹೊತ್ತಿಗೆ ವಿಧಿ ವಿಜ್ಞಾನ (ಫೋರೆನ್ಸಿಕ್) ವರದಿ ಎಸ್‌ಐಟಿಯ ಕೈಯಲ್ಲಿತ್ತು. ಅದು ಸಿಸಿಟಿವಿ ಫೂಟೇಜ್‌ನಿಂದ ಗೌರಿಯವರ ಎತ್ತರ ಬಳಸಿ, ಹಂತಕನ ಅಂದಾಜು ಎತ್ತರವನ್ನು ಲೆಕ್ಕಹಾಕಿತ್ತು. ಆ ವರದಿಯ ಪ್ರಕಾರ ಹಂತಕ ಐದಡಿ ಒಂದಿಂಚಿನ ಕುಳ್ಳಗಿನ ವ್ಯಕ್ತಿ. ಸಿಂಧಗಿಯ ಪೊಲೀಸರನ್ನು ಸಂಪರ್ಕಿಸಿದ ಎಸ್ಐಟಿ, ಆ ಭಾಗದಲ್ಲಿ ಪರಿಚಿತ ಕ್ರಿಮಿನಲ್‌ಗಳು, ವಿಶೇಷವಾಗಿ, ಕೋಮುಗಲಭೆಗಳಲ್ಲಿ ಬಂಧಿತರಾದವರ ಗುರುತು ಹಚ್ಚುವ ಪರೇಡ್ (ಐಡೆಂಟಿಫಿಕೇಷನ್ ಪರೇಡ್) ನಡೆಸುವಂತೆ ಕೇಳಿಕೊಂಡಿತು. ಇದು ಸುಮ್ಮನೇ ಹಳೆ ಆರೋಪಿಗಳ ಯಾದಿಯನ್ನು ನವೀಕರಿಸುವ ಕಾರ್ಯಕ್ರಮದ ಭಾಗವಷ್ಟೇ ಎಂದು ಸಿಂಧಗಿ ಪೊಲೀಸರಿಗೆ ತಿಳಿಸಲಾಯಿತು. (ಪ್ರವೀಣನ ಪ್ರಕರಣದಲ್ಲಿ ನಿಖರ ಮಾಹಿತಿ ಸೋರಿಕೆ ಆದ ಬಳಿಕ ಪೊಲೀಸ್ ಪಡೆಯಲ್ಲೂ ಕೋಮುವಾದಿ ಏಜೆಂಟರು ನುಸುಳಿರುವುದು ಎಸ್‌ಐಟಿಗೆ ಮನವರಿಕೆ ಆಗಿರಬೇಕು. ಅದು ಪೊಲೀಸರನ್ನೂ ನಂಬಲು ಸಿದ್ಧವಿರಲಿಲ್ಲ.)

ಐಡೆಂಟಿಫಿಕೇಷನ್ ಪರೇಡ್ ದಿನ ಅಲ್ಲೊಬ್ಬ ಅಸಾಮಿ ನಿಂತಿದ್ದ. ಅವನ ಎತ್ತರ ಐದಡಿ ಎರಡಿಂಚು ಆಗಿದ್ದು, ದಪ್ಪವಾದ ತೋಳುಗಳನ್ನು ಹೊಂದಿದ್ದ. (ಬಾಡಿ ಬಿಲ್ಡರ್!) ಎಸ್ಐಟಿ ಎಲ್ಲರ ಚಿತ್ರಗಳ ಜೊತೆ ಸಂಶಯಿತ ಹಂತಕನ ಚಿತ್ರವನ್ನೂ ತೆಗೆಯಿತು. ಆತನ ಚಿತ್ರ ಸಿಸಿಟಿವಿ ಫೂಟೇಜ್ ಚಿತ್ರಕ್ಕೆ ತಾಳೆಯಾಗುತ್ತಿತ್ತು. ಮರುದಿನ ಎಸ್‌ಐಟಿ ತಂಡ ಪರಶುರಾಮ ವಾಘ್‌ಮೋರೆಯ ಮನೆಬಾಗಿಲಲ್ಲಿ ನಿಂತಿತ್ತು. ಅಧಿಕಾರಿಗಳು ಹೇಳುವಂತೆ, ಪೊಲೀಸರನ್ನು ಕಂಡು ಆತನಿಗೆ ನಿರಾಳವಾದಂತೆ ಇತ್ತು. ನೀವು ನನ್ನನ್ನು ಹುಡುಕಿಕೊಂಡು ಬಂದೇಬರುತ್ತೀರಿ ಎಂದು ನನಗೆ ಗೊತ್ತಿತ್ತು ಎಂದು ಹೇಳಿದ ಆತ, ಗೌರಿ ಹತ್ಯೆಯನ್ನು ತಾನೇ ಮಾಡಿರುವುದಾಗಿ ಒಪ್ಪಿಕೊಂಡ. ಎಸ್‌ಐಟಿ ಕಸ್ಟಡಿಯಲ್ಲಿದ್ದ ಆರೋಪಿಯೊಬ್ಬ, ಫೊಟೋ ತೋರಿಸಿದಾಗ ಅದರಲ್ಲಿರುವ ವ್ಯಕ್ತಿ ಪರಶುರಾಮ ವಾಘ್‌ಮೋರೆ ಎಂದು ಒಪ್ಪಿಕೊಂಡ. ಪರಶುರಾಮ ವಾಘ್‌ಮೋರೆ- ಗೌರಿಯವರನ್ನು ಕೊಂದ, ಪಿಸ್ತೂಲಿನ ಟ್ರಿಗರ್ ಎಳೆದ ವ್ಯಕ್ತಿ.

ಎಸ್‌ಐಟಿ ಅಧಿಕಾರಿಗಳು ಹೇಳುವ ಪ್ರಕಾರ, ತನ್ನ ಬಂಧನದಿಂದ ವಾಘ್‌ಮೋರೆಗೆ ನಿರಾಳವಾದರೆ, ಅಮೋಲ್ ಕಾಳೆ ಹತಾಶನಾದ. ವಾಘ್‌ಮೋರೆಯನ್ನು ಬಂಧಿಸಿ ತರುತ್ತಿರುವುದನ್ನು ನೋಡಿದ ತಕ್ಷಣ ಆತ ಗೋಡೆಗೆ ತಲೆ ಬಡಿದ ಎಂದು ಅಧಿಕಾರಿಗಳು ಹೇಳುತ್ತಾರೆ. ನಂತರ ನಡೆದ ವಿಚಾರಣೆಯಲ್ಲಿ ವಾಘ್‌ಮೋರೆ, ಎಸ್‌ಐಟಿಗೆ ಯಾವೆಲ್ಲಾ ಮಾಹಿತಿ ಬೇಕಿತ್ತೋ, ಅವೆಲ್ಲವನ್ನೂ ನೀಡಿದ. ತಾನು, ಇನ್ನಿಬ್ಬರು ವ್ಯಕ್ತಿಗಳು- ಒಬ್ಬ ಅಮಿತ್, ಇನ್ನೊಬ್ಬ ಗಣೇಶ ಎಂಬವರ ಜೊತೆಗೆ ತಂಗಿದ್ದಾಗಿ ಆತ ಬಾಯಿಬಿಟ್ಟ. ಇವರಲ್ಲಿ ಗಣೇಶ, ಗೌರಿ ಹತ್ಯೆಯ ಸಂದರ್ಭದಲ್ಲಿದ್ದ ಬೈಕ್ ಸವಾರ ಮತ್ತು ಅಮಿತ್, ವ್ಯಾನ್ ಬಳಿ ಕಾದು ನಿಂತಿದ್ದ ಮತ್ತು ತನಗೆ ಪಿಸ್ತೂಲು ತಂದುಕೊಟ್ಟ ವ್ಯಕ್ತಿ ಎಂದು ವಾಘ್‌ಮೋರೆ ತಿಳಿಸಿದ.

6. ರೈಡರ್, ಬ್ಯಾಕಪ್ ಮತ್ತು ‘ನೂಡಲ್ಸ್ ಕಾಲು’

ಅಮಿತ್ ಮತ್ತು ಗಣೇಶನನ್ನು ಹಿಡಿಯಲು ಎಸ್‌ಐಟಿಯು ಸ್ಕೆಚ್‌ಗಳನ್ನು ಮಾಡಲು ಶುರುಮಾಡಿತು. ಕಲಾವಿದರು ವಾಘ್‌ಮೋರೆ ನೀಡಿದ ವಿವರಗಳ ಆಧಾರದಲ್ಲಿ ಕಂಪ್ಯೂಟರ್ ಚಿತ್ರಗಳನ್ನು ರಚಿಸಿದರು. ಆಗ ವಾಘ್‌ಮೋರೆ ಒಂದು ವಿಲಕ್ಷಣ ವಿವರಣೆ ನೀಡಿದ. ಅದೆಂದರೆ, ಗಣೇಶನ ಕಾಲುಗಳು ನೂಡಲ್ಸ್‌ನಂತಿವೆ. ಇದು ವೆರಿಕೋಸ್ ವೆಯಿನ್ಸ್ ಅಂದರೆ, ನರಗಳು ಉಬ್ಬಿಕೊಂಡು ಸುರುಳಿ ಸುತ್ತಿ, ಚರ್ಮದ ಮೂಲಕ ಕಾಣಿಸುವ ಸ್ಥಿತಿ ಎಂದು ಎಸ್‌ಐಟಿಗೆ ಗೊತ್ತಾಯಿತು.

ಇದೇ ಹೊತ್ತಿಗೆ ಇನ್ನೊಂದು ತಂಡ ವಶಪಡಿಸಿಕೊಂಡ ನಾಲ್ಕು ಡೈರಿಗಳನ್ನು ಪರಿಶೀಲಿಸುತ್ತಿತ್ತು. ಅವುಗಳಲ್ಲಿ ಗಣೇಶ ಮತ್ತು ಅಮಿತ್ ಎಂಬ ಹೆಸರುಗಳು ಇದ್ದವು. ಇವು ನಿಜ ಹೆಸರುಗಳು ಎಂದು ಪೊಲೀಸರು ನಂಬಲಿಲ್ಲವಾದರೂ, ಅವುಗಳಲ್ಲಿ ಇದ್ದ ಮೊಬೈಲ್ ನಂಬರ್‌ಗಳು  ಹುಬ್ಬಳ್ಳಿ ಜಿಲ್ಲೆಯವು ಎಂದು ತಿಳಿಯಿತು. ಕೂಡಲೇ ಹುಬ್ಬಳ್ಳಿಯ ಪರಿಚಿತ ಕ್ರಿಮಿನಲ್‌ಗಳ ಯಾದಿಯನ್ನು ತರಿಸಿ ಪರಿಶೀಲಿಸಲಾಯಿತು. ಅವುಗಳಲ್ಲಿ ಎರಡು ಹೆಸರುಗಳು ಇದ್ದವು. ಅವೆಂದರೆ, ಗಣೇಶ ಮಿಸ್ಕಿನ್ ಮತ್ತು ಅಮಿತ್ ಬಡ್ಡಿ. ಇವರಿಬ್ಬರೂ 2012ರಲ್ಲಿ ನಡೆದಿದ್ದ ಕೋಮುಗಲಭೆಯೊಂದರಲ್ಲಿ ಬಂಧಿತರಾಗಿದ್ದರು.

ಇವರಿಬ್ಬರನ್ನು ಬಂಧಿಸಲು ತಡವಾಗಲಿಲ್ಲ. ಪೊಲೀಸರು ಗಣೇಶನ ಕಾಲುಗಳನ್ನು ಪರಿಶೀಲಿಸಿದಾಗ, ನೂಡಲ್ಸ್ ಕಾಲುಗಳ ವಿಷಯ ನಿಜವಾಗಿತ್ತು. ಕೆಲವು ದಿನಗಳ ವಿಚಾರಣೆಯ ನಂತರ ಇವರಿಬ್ಬರೂ ಗೌರಿ ಲಂಕೇಶ್ ಹತ್ಯೆಯಲ್ಲಿ ತಮ್ಮ ಶಾಮೀಲಾತಿಯನ್ನು ಒಪ್ಪಿಕೊಂಡರು. ಮಾತ್ರವಲ್ಲ; ಎಂ.ಎಂ. ಕಲಬುರ್ಗಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡುವ ಮೊದಲು, 2015ರಲ್ಲಿ ಕಲಬುರ್ಗಿಯವರ ಮನೆಯ ಸುತ್ತ ತಾವು ಪೂರ್ವಭಾವಿ ಪರಿಶೀಲನೆ ನಡೆಸಿದ್ದಾಗಿ ಒಪ್ಪಿಕೊಂಡರು. ವಿಚಾರವಾದಿಗಳಾದ ದಾಬೋಲ್ಕರ್, ಪನ್ಸಾರೆ, ಕಲಬುರ್ಗಿ ಮತ್ತು ಗೌರಿ ಹತ್ಯೆಗಳು ಒಂದೇ ರೀತಿಯಲ್ಲಿ ನಡೆದಿದ್ದುದರಿಂದ, ಆ ಹತ್ಯೆಗಳನ್ನು ಕೂಡ ಇದೇ ತಂಡ ಮಾಡಿರಬಹುದು ಎಂಬ ಸಂಶಯವು ಇವರಿಬ್ಬರು ಆರೋಪಿಗಳ ಕೊನೆಯ ಹೇಳಿಕೆಯಿಂದ ಬಹುತೇಕ ಖಚಿತವಾಯಿತು.

ಆದರೆ, ಎಸ್‌ಐಟಿಯ ಕೆಲಸ ಮುಗಿದಿರಲಿಲ್ಲ. ಈ ಬಹುದೊಡ್ಡ ಸಂಚಿನಲ್ಲಿ ಸಹಕರಿಸಿ, ಭಾಗವಹಿಸಿದ್ದ ಬಹಳಷ್ಟು ಮಂದಿಯನ್ನು ಇನ್ನಷ್ಟೇ ಗುರುತಿಸಿ ಬಂಧಿಸುವ ಕೆಲಸ ಬಾಕಿ ಇತ್ತು.

(ಮುಂದುವರಿಯುವುದು)

ಕೊನೆಯ ಭಾಗ ಓದಿ: ಗೌರಿ ಹತ್ಯೆಯ ತನಿಖೆ ನಡೆದದ್ದು ಹೇಗೆ? ಈಗ ಎಲ್ಲಿಯವರೆಗೂ ಬಂದಿದೆ? ಕೊನೆಯ ಭಾಗ ಓದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...