Homeಕರ್ನಾಟಕಗೌರಿ ಹತ್ಯೆಯ ತನಿಖೆ ನಡೆದದ್ದು ಹೇಗೆ? ಈಗ ಎಲ್ಲಿಯವರೆಗೂ ಬಂದಿದೆ? ಕೊನೆಯ ಭಾಗ ಓದಿ

ಗೌರಿ ಹತ್ಯೆಯ ತನಿಖೆ ನಡೆದದ್ದು ಹೇಗೆ? ಈಗ ಎಲ್ಲಿಯವರೆಗೂ ಬಂದಿದೆ? ಕೊನೆಯ ಭಾಗ ಓದಿ

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 16ಕ್ಕೇರಿದೆ. ಸಂಚಿನಲ್ಲಿ ಭಾಗವಹಿಸಿದ್ದ ವಿಕಾಸ್ ಪಾಟೀಲ್ ಮತ್ತು ರುಷಿಕೇಶ್ ದೇವ್ಡಿಕರ್ ಎಂಬಿಬ್ಬರ ಬಂಧನ ಬಾಕಿಯಿದೆ.

- Advertisement -
- Advertisement -

ಭಾಗ-3  ಕೃಪೆ: ದಿ ಕ್ವಿಂಟ್
ನಿರೂಪಣೆ: ನಿಖಿಲ್ ಕೋಲ್ಪೆ

ಭಾಗ 1: ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಕರ್ನಾಟಕ ವಿಶೇಷ ತನಿಖಾ ದಳ (SIT) ಭೇದಿಸಿದ್ದಾದರೂ ಹೇಗೆ?

ಭಾಗ-2 : ಗೌರಿ ಹತ್ಯೆಯ ತನಿಖೆಯ ಜಾಡು ಹಿಡಿದು ಹೊರಟಾಗ ಸಿಕ್ಕ ರೋಚಕ ಸತ್ಯಗಳು…

7. ಅಕ್ಯುಪಂಕ್ಚರ್ ‘ಸಂಪಾ’

ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದ ಪ್ರಕರಣದ ಎಲ್ಲಾ ಆರೋಪಿಗಳನ್ನು ಎಸ್‌ಐಟಿ ಬಂಧಿಸಿದರೂ, ಈ ಸಂಚಿನಲ್ಲಿ ಭಾಗಿಯಾಗಿ ಸಹಕರಿಸಿದ ಇತರರನ್ನು ಗುಡಿಸಿ, ಕಸದಬುಟ್ಟಿಗೆ ಹಾಕುವ ಕೆಲಸ ಬಾಕಿ ಉಳಿದಿತ್ತು. ವಿಚಾರಣೆಯ ವೇಳೆ, ತಾನು ಮತ್ತು ಇತರ ಮೂವರು ಗೌರಿಹತ್ಯೆಗೆ ಮುನ್ನ ವಾಸಿಸುತ್ತಿದ್ದ ಬೆಂಗಳೂರು ಹೊರವಲಯದ ಕುಂಬಳಗೋಡಿನಲ್ಲಿರುವ ಅಕ್ಯುಪಂಕ್ಚರ್ ಸೆಂಟರ್ ಬಗ್ಗೆ ಪರಶುರಾಮ ವಾಘ್‌ಮೋರೆ ಎಸ್‌ಐಟಿಗೆ ತಿಳಿಸಿದ. ಆತ, ಅಮೋಲ್ ಕಾಳೆ ವಾಸಿಸುತ್ತಿದ್ದ ಗೌರಿಯವರ ಮನೆಗೆ ಹತ್ತಿರವಿರುವ ಸುರೇಶ ಎಂಬಾತನ ಮನೆಯ ಬಗ್ಗೆಯೂ ತಿಳಿಸಿದ.

ಈ ಮಾಹಿತಿ ಪಡೆದ ಎಸ್‌ಐಟಿ, ಮೊದಲಿಗೆ ಅಕ್ಯುಪಂಕ್ಚರ್ ಸೆಂಟರ್ ನಡೆಸುತ್ತಿದ್ದ ಮನೆಗೆ ದಾಳಿ ನಡೆಸಿತು. ಅಲ್ಲಿ ಯಾರೂ ಇರಲಿಲ್ಲ. ಅಲ್ಲಿ ಸಿಕ್ಕಿದ ಡೈರಿಯಲ್ಲಿ ಮೊಬೈಲ್ ನಂಬರುಗಳಿಗಾಗಿ ಹುಡುಕುತ್ತಿದ್ದಾಗ, ಒಂದು ನಂಬರು ಸಿಕ್ಕಿತು. ಅದರ ಮುಂದೆ ಎಂ.ಎನ್. ಸಂಪಾ ಎಂದಿತ್ತು. ಇದೆಂತಹ ಹೆಸರು ಎಂದು ಪೊಲೀಸರು ತಲೆಕೆಡಿಸಿಕೊಂಡರು. ಅದು ಸಂಕೇತ ಭಾಷೆಯಾಗಿತ್ತು. ಪೊಲೀಸರು ಆ ನಂಬರಿನ ಕಾಲ್ ಡಿಟೈಲ್‌ ಹುಡುಕಿದಾಗ ಅಲ್ಲಿ ಎರಡು ಬೆಂಗಳೂರಿನ ನಂಬರುಗಳು ಸಿಕ್ಕಿದವು. ಅವು ಇಬ್ಬರು ರಿಯಲ್ ಎಸ್ಟೇಟ್ ಏಜೆಂಟುಗಳ ನಂಬರುಗಳಾಗಿದ್ದವು. ಅವರಲ್ಲೊಬ್ಬ ತಾನು ಆ ಮನೆಯನ್ನು ಅಕ್ಯುಪಂಕ್ಚರ್ ಸೆಂಟರ್ ನಡೆಸುವುದಕ್ಕಾಗಿ ವ್ಯಕ್ತಿಯೊಬ್ಬನಿಗೆ ಬಾಡಿಗೆಗೆ ಕೊಟ್ಟಿದ್ದುದಾಗಿ ಹೇಳಿದ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆದೊಯ್ಯುವಾಗ

ಆ ಮೊಬೈಲನ್ನು ಕೊನೆಯ ಬಾರಿಗೆ ದಕ್ಷಿಣ ಕನ್ನಡ ಗಡಿಯಲ್ಲಿ, ಕೊಡಗಿನಲ್ಲಿರುವ ಸಂಪಾಜೆ ಗ್ರಾಮದಲ್ಲಿ ಬಳಸಿದ್ದು ಪೊಲೀಸರಿಗೆ ತಿಳಿಯಿತು. ಆಗ ಅವರಿಗೆ ಗೊತ್ತಾಯಿತು- ಸಂಪಾ ಎಂದರೆ ವ್ಯಕ್ತಿಯಲ್ಲ, ಊರು ಎಂದು. ಎಂ.ಎನ್. ಎಂದರೆ ಆ ವ್ಯಕ್ತಿಯ ಹೆಸರು ಎಂದು ಊಹಿಸುವುದು ಸುಲಭವಾಗಿತ್ತು. ಪೊಲೀಸರು ಸಂಪಾಜೆ ತಲಪಿ, ಅಲ್ಲಿ ಅಕ್ಯುಪಂಕ್ಚರ್ ಬಲ್ಲವರ ಬಗ್ಗೆ ವಿಚಾರಿಸಲು ಆರಂಭಿಸಿದರು. ಸ್ವಲ್ಪ ಸಮಯದಲ್ಲೇ ‘ಸಂಪಾ’ ಬಲೆಗೆ ಬಿದ್ದ. ಅವನ ಹೆಸರು ಮೋಹನ್ ನಾಯಕ್ ಎಂದಾಗಿತ್ತು. ಮೂವರು ಹಂತಕರು ಪರಶುರಾಮ ವಾಘ್‌ಮೋರೆ, ಗಣೇಶ ಮಿಸ್ಕಿನ್ ಮತ್ತು ಅಮಿತ್ ಬಡ್ಡಿ ಯಾವುದೇ ಗಮನ ಸೆಳೆಯದಂತೆ ವಾಸಿಸಲು ಅನುಕೂಲಕ್ಕಾಗಿ, ಅಮೋಲ್ ಕಾಳೆಯ ಸೂಚನೆಯಂತೆ ತಾನು ಆ ಮನೆಯನ್ನು ಬಾಡಿಗೆಗೆ ಪಡೆದು ಅಕ್ಯುಪಂಕ್ಚರ್ ಸೆಂಟರ್ ತೆರೆದುದಾಗಿ ಮನೋಹರ ನಾಯಕ್ ಒಪ್ಪಿಕೊಂಡ.

8. ರಾಜೇಶ್‌ ಬಂಗೇರಾ

ಪೊಲೀಸರ ಮುಂದಿದ್ದ ಒಂದು ಒಗಟೆಂದರೆ, ಪಿಸ್ತೂಲು ಬಳಕೆಯ ಬಗ್ಗೆ ತರಬೇತಿ ನೀಡಿದವರು ಯಾರು ಎಂಬುದು. ಅಮೋಲ್ ಕಾಳೆ ಸೇರಿದಂತೆ ಎಲ್ಲಾ ಆರೋಪಿಗಳು ಆತನನ್ನು ‘ಸರ್’ ಎಂದು ಕರೆಯುತ್ತಿದ್ದರು. ಮತ್ತೆ ವಶಪಡಿಸಿಕೊಳ್ಳಲಾದ ಡೈರಿಗಳು ನೆರವಿಗೆ ಬಂದವು. ಅವುಗಳೊಂದರಲ್ಲಿ ಈ ‘ಸರ್’ ಇದ್ದ. ಅದರ ಮುಂದೆ ಇದ್ದ ಮೊಬೈಲ್ ನಂಬರ್ ಕೊಡಗಿನದ್ದೆಂದು ಎಸ್‌ಐಟಿಗೆ ಗೊತ್ತಾಯಿತು.

ಮನೋಹರ ನಾಯಕ್ ಕೂಡಾ ಕೊಡಗಿನವನೇ ಆಗಿರುವುದರಿಂದ ಅವನಿಗೆ ಈತನ ಸಂಪರ್ಕವಿರಬೇಕು ಎಂದು ತರ್ಕಿಸಿದ ಎಸ್‌ಐಟಿ, ಆತನ ಕಾಲ್ ರೆಕಾರ್ಡ್‌ನ ವಿಶ್ಲೇಷಣೆ ನಡೆಸಿದಾಗ, ಒಂದು ಹೆಸರು ಎದ್ದು ಕಾಣುತ್ತಿತ್ತು. ಯಾಕೆಂದರೆ, ಅವರಿಬ್ಬರೂ ಆಗಿಂದಾಗ್ಗೆ ಮಾತಾಡುತ್ತಿದ್ದರು. ಆ ವ್ಯಕ್ತಿಯ ಹೆಸರು ರಾಜೇಶ್ ಬಂಗೇರ ಎಂದಾಗಿತ್ತು. ಆತನನ್ನು ಬಂಧಿಸಲಾಯಿತು.

ವಿಚಾರಣೆಯ ವೇಳೆ, ತಾನು ಇತರ ಆರೋಪಿಗಳಿಗೆ ಬೆಳಗಾವಿ ಜಿಲ್ಲೆಯ ತೋಟದ ಮನೆಯೊಂದರಲ್ಲಿ ಪಿಸ್ತೂಲು ಬಳಸುವ ತರಬೇತಿ ನೀಡಿದುದಾಗಿಯೂ, ತಾನು 1990ರ ದಶಕದಲ್ಲಿ ‘ಸನಾತನ ಸಂಸ್ಥೆ’ ಎಂಬ ಸಂಘಟನೆ ಸೇರಿದ್ದು, ಆ ಸಂಸ್ಥೆಯು ಶಸ್ತ್ರಾಸ್ತ್ರ ತರಬೇತಿ ನೀಡಿದ್ದವರಲ್ಲಿ ತಾನೂ ಒಬ್ಬ ಎಂದು ರಾಜೇಶ್ ಬಂಗೇರ ತಿಳಿಸಿದ. ತಾನು ಈ ತರಬೇತಿಯಲ್ಲಿ ಅತ್ಯುತ್ತಮವಾಗಿದ್ದುದರಿಂದ, ಹೊಸದಾಗಿ ಸಂಘಟನೆ ಸೇರಿದವರಿಗೆ ತರಬೇತಿ ನೀಡುತ್ತಿದ್ದೆ ಎಂದು ಆತ ತಿಳಿಸಿದ. ಇದಕ್ಕೂ ಹೆಚ್ಚಾಗಿ, ನರೇಂದ್ರ ದಾಬೋಲ್ಕರ್ ಮತ್ತು ಎಂ‌.ಎಂ. ಕಲಬುರ್ಗಿಯವರ ಹಂತಕರಿಗೆ ತರಬೇತಿ ನೀಡಿದವನು ತಾನೇ ಎಂದು ಹೇಳಿಕೊಂಡನಾದರೂ, ಅವರ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ.

9. ಆರೋಪಿಯಾಗಿ ಬದಲಾದ ಸಾಕ್ಷಿ

ಎರಡು ಮನೆಗಳು ಈಗ ತನಿಖೆಗೆ ಮುಖ್ಯವಾಗಿದ್ದವು. ಅವುಗಳಲ್ಲಿ ಒಂದಾದ ಕುಂಬಳಗೋಡಿನ ಮನೆ ಹಂತಕರು ವಾಸಿಸುತ್ತಿದ್ದದ್ದು. ಎರಡನೇ ಮನೆ ಸೀಗೆಹಳ್ಳಿಯಲ್ಲಿ ಅಮೋಲ್ ಕಾಳೆ ಮತ್ತು ಇತರರು ವಾಸಿಸುತ್ತಿದ್ದದ್ದು. ಕುಂಬಳಗೋಡಿನ ಮನೆ ವಿಷಯ ಆಗಲೇ ಗೊತ್ತಿದ್ದುದರಿಂದ, ಎಸ್‌ಐಟಿಯವರು ಸೀಗೆಹಳ್ಳಿಯ ಮನೆಗೆ ಹೋದರು. ಅದು ಎಚ್.ಎಲ್. ಸುರೇಶ್ ಎಂಬವನದ್ದಾಗಿತ್ತು. ತಾನು ಕೇವಲ ಮನೆ ಮಾಲಕನಾಗಿದ್ದು, ತನಗೆ ಈ ಸಂಚಿನ ಬಗ್ಗೆ ಏನೇನೂ ಗೊತ್ತಿಲ್ಲ ಎಂದು ಆತ ಹೇಳಿದ. ಎಸ್‌ಐಟಿ ಆತನ ಮಾತುಗಳನ್ನು ನಂಬಿತು ಮತ್ತು ಅತನನ್ನು ಈ ಪ್ರಕರಣದಲ್ಲಿ ಸಾಕ್ಷಿಯಾಗಿ ಮಾಡಿತು. ಆತ, ತಾನು ಈ ಪ್ರಕರಣದ ಸಾಕ್ಷಿ ಎಂದು ಸಿಆರ್‌ಪಿಸಿ ವಿಧಿ 164ರ ಅನ್ವಯ ಮ್ಯಾಜಿಸ್ಟ್ರೇಟ್ ಒಬ್ಬರ ಮುಂದೆ ಹೇಳಿಕೆಯನ್ನೂ ದಾಖಲಿಸಿದ.

ಆದರೆ ಇನ್ನಷ್ಟು ಬಂಧನಗಳು ನಡೆದಾಗ ಆತನ ಬಣ್ಣ ಬಯಲಾಯಿತು. ಈ ಸುರೇಶ ಕೂಡಾ ಸಂಚಿನ ಪಾಲುದಾರನಾಗಿದ್ದ. ಎಸ್‌ಐಟಿ ಹೇಳುವಂತೆ ಸುರೇಶ, ಆರೋಪಿಗಳಿಗೆ ಆಶ್ರಯ ನೀಡಿ,  ಅಡುಗೆಯನ್ನೂ ಮಾಡಿಕೊಡುತ್ತಿದ್ದ ಮತ್ತು ನಂತರ ಸಾಕ್ಷ್ಯಗಳನ್ನೂ ನಾಶಪಡಿಸಿದ್ದ. ಗೌರಿ ಹತ್ಯೆಯ ಬಳಿಕ ಹಂತಕರು ಹಾಕಿದ್ದ ಬಟ್ಟೆಗಳನ್ನು ವಿಲೇವಾರಿ ಮಾಡುವ ಕೆಲಸವನ್ನು ಸುರೇಶನಿಗೆ ವಹಿಸಲಾಗಿತ್ತು. ಮುಂದಿನ ದಿಗಳಲ್ಲಿ ಆತ ಅವುಗಳನ್ನು ನಗರದ ಬೇರೆ ಬೇರೆ ಭಾಗಗಳಲ್ಲಿ ಎಸೆದುಬಂದಿದ್ದ. ಸುರೇಶ ಕನಿಷ್ಟ 2008ರಿಂದ ಗೋವಾ ಮೂಲದ ‘ಹಿಂದೂತ್ವ’ ಸಂಘಟನೆಯ ಸಕ್ರಿಯ ಸದಸ್ಯನಾಗಿದ್ದು, ಅಮೋಲ್ ಕಾಳೆಯ ಹತ್ತಿರದ ಗೆಳೆಯನೂ ಆಗಿದ್ದ. ಬೇಗನೇ ಸಾಕ್ಷಿಯಾಗಿದ್ದ ಸುರೇಶ 11ನೇ ಆರೋಪಿಯಾದ.

10. ಅಂಕಲ್ ಮತ್ತು ತೋಟದಮನೆ

ಬಂಗೇರನ ಬಂಧನದ ನಂತರವೂ ಇನ್ನಷ್ಟು ಆರೋಪಿಗಳನ್ನು ಬಂಧಿಸುವುದು ಬಾಕಿಯಿತ್ತು. ಕಾಳೆಯ ಮನೆಯಲ್ಲಿ ವಶಪಡಿಸಿಕೊಂಡ ಡೈರಿಗಳು, ಕಸ್ಟಡಿಯಲ್ಲಿ ಆರೋಪಿಗಳ ವಿಚಾರಣೆಯ ವೇಳೆ ಒಬ್ಬ ‘ಅಂಕಲ್’ ಕಾಣಿಸಿಕೊಂಡಿದ್ದ. ಆತ ಈ ಗ್ಯಾಂಗಿನ ಸಭೆಗಳಲ್ಲಿ ಭಾಗವಹಿಸಿದ್ದ. ಅವನನ್ನು ‘ಟಮಾಟರ್’ ಅಂದರೆ ಟೊಮೆಟೊ ಎಂದೂ ಕರೆಯಲಾಗುತ್ತಿತ್ತು. ಯಾಕೆಂದರೆ, ಆತ ತರಕಾರಿ ಮಾರುತ್ತಿದ್ದನಂತೆ. ಆತ ಕುಂಬಳಗೋಡಿನ ಮನೆಯಲ್ಲಿ ಹಂತಕರ ಜೊತೆಗೂ ಇದ್ದ. ಗೌರಿಯವರಿಗೆ ಗುಂಡಿಕ್ಕಿದ ಬಳಿಕ ಪರಶುರಾಮ ವಾಘ್‌ಮೋರೆಯನ್ನು ನಗರದ ಹೊರವಲಯಕ್ಕೆ ಬಿಟ್ಟೂ ಬಂದಿದ್ದ. ಯಾರು ಈ ‘ಅಂಕಲ್’ ಎಂಬುದು ಎಸ್‌ಐಟಿಗೆ ಸಮಸ್ಯೆಯಾಯಿತು.

ಗಣೇಶ ಮಿಸ್ಕಿನ್‌ ಬಂಧನದಲ್ಲಿ ಆರೋಪಿಯೊಬ್ಬ ಪ್ರಮುಖ ಪಾತ್ರ ವಹಿಸಿದ್ದ. ವಿಚಾರಣೆಯ ವೇಳೆ ಆತ, ತಾವು ‘ಅಂಕಲ್’ನನ್ನು ಭೇಟಿಯಾದ ಜಾಗವನ್ನು ತೋರಿಸುವುದಾಗಿ ಹೇಳಿದ್ದ. ಅದರಂತೆಯೇ ಆತ ಎಸ್‌ಐಟಿ ಪೊಲೀಸರನ್ನು ಬೆಳಗಾವಿಯ ಖಾನಾಪುರದಲ್ಲಿರುವ ಮೂರೆಕರೆಯ ತೋಟದ ಮನೆಗೆ ಕರೆದೊಯ್ದ. ಅದೇ ತೋಟದ ಮನೆಯಲ್ಲಿ ರಾಜೇಶ್ ಬಂಗೇರ ಹತ್ಯೆ ಆರೋಪಿಗಳಿಗೆ, ಮತ್ತಿತರರಿಗೆ ತರಬೇತಿ ನೀಡಿದ್ದುದು. ಅಲ್ಲದೇ, ಹತ್ಯೆಯ ಯೋಜನೆ ರೂಪಿಸುವ ಹಲವು ಸಭೆಗಳು ನಡೆದಿದ್ದುದೂ ಇದೇ ತೋಟದ ಮನೆಯಲ್ಲಿ. ಈ ತೋಟದಮನೆ ಮಹಿಳೆಯೊಬ್ಬರ ಹೆಸರಿನಲ್ಲಿ ನೋಂದಣಿಯಾಗಿತ್ತು. ವಿಚಾರಣೆಯ ವೇಳೆ ಪೊಲೀಸರು ಆಕೆಯಿಂದ ಆಕೆಯ ಮಕ್ಕಳಿಬ್ಬರ ಫೊಟೋ ಪಡೆದರು. ಅವರಲ್ಲಿ ಒಬ್ಬನ ಫೊಟೋವನ್ನು ಮಿಸ್ಕಿನ್, ‘ಅಂಕಲ್’ಎಂದು ಗುರುತಿಸಿದ. ಅವನೇ ಭರತ್ ಕುರ್ಣೆ. ಆತ ಈ ಪ್ರಕರಣದಲ್ಲಿ ಬಂಧಿತನಾದ 11ನೇ ವ್ಯಕ್ತಿ.

11. ಪೂರ್ತಿ ಗುಡಿಸುವ ಕೆಲಸ
ಬಹುತೇಕ ಎಲ್ಲಾ ಸಂಚುಕೋರರನ್ನು ಬಂಧಿಸಲಾಗಿದ್ದರೂ, ಹತ್ಯೆ ಸಂಚಿನಲ್ಲಿ ಶಾಮೀಲಾದ ಎಲ್ಲರನ್ನೂ ಗುಡಿಸುವ ಕೆಲಸ ಇನ್ನೂ ಬಾಕಿಯಿತ್ತು. ವಿಚಾರಣೆಯ ವೇಳೆ ಆರೋಪಿಗಳು ಹತ್ಯೆಯ ವೇಳೆ ಬಳಸಿದ್ದ ಬೈಕ್ ಕಳವು, ಪಿಸ್ತೂಲಿನ ವಿಲೇವಾರಿ ಇತ್ಯಾದಿಗಳಲ್ಲಿ ಪಾಲುಗೊಂಡಿದ್ದ ಇನ್ನೂ ನಾಲ್ವರ ಹೆಸರುಗಳನ್ನು ಬಾಯಿಬಿಟ್ಟಿದ್ದರು. ಗೌರಿ ಹತ್ಯೆ ಮತ್ತು ಮಹಾರಾಷ್ಟ್ರದಲ್ಲಿ ನಡೆದಿದ್ದ ದಾಬೋಲ್ಕರ್ ಮತ್ತು ಪನ್ಸಾರೆ ಹತ್ಯೆಗಳ ನಡುವೆ ಸಂಬಂಧ ಇದ್ದುದರಿಂದ ಕರ್ನಾಟಕ ಎಸ್‌ಐಟಿ, ಮಹಾರಾಷ್ಟ್ರ ಪೊಲೀಸರೊಂದಿಗೆ ಈ ಮಾಹಿತಿಗಳನ್ನು ಹಂಚಿಕೊಂಡಿತ್ತು.

ಪರಿಣಾಮ ನಿರೀಕ್ಷೆ ಮೀರಿತ್ತು. ಮಹಾರಾಷ್ಟ್ರ ಭಯೋತ್ಪಾದಕ ವಿರೋಧಿ ದಳ (ಎಟಿಎಸ್), ಮುಂಬಯಿಯ ನಲಸೊಪಾರ ಮತ್ತು ಪುಣೆಯಲ್ಲಿ ನಡೆಸಿದ ದಾಳಿಯಲ್ಲಿ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ವಶವಾಗಿತ್ತು. ಅದರ ನಂತರ ನಡೆದ ಬಂಧನ ಸರಣಿಯಲ್ಲಿ ಕರ್ನಾಟಕ ಎಸ್‌ಐಟಿಗೆ ಬೇಕಾಗಿದ್ದ ನಾಲ್ವರೂ ಇದ್ದರು. ಅವರಲ್ಲೊಬ್ಬ, ವಾಸುದೇವ ಸೂರ್ಯವಂಶಿ. ಈತ ಮೋಟಾರ್ ಸೈಕಲ್ ಮೆಕ್ಯಾನಿಕ್ ಆಗಿದ್ದು, ಗೌರಿ ಹತ್ಯೆಗೆ ಬಳಸಿದ್ದ ಬೈಕ್ ಕದ್ದಿದ್ದ. ಇನ್ನೊಬ್ಬ ಶರದ್ ಕಾಲಸ್ಕರ್, ಗೌರಿ ಹತ್ಯೆಗೆ ಬಳಸಿದ್ದ ಪಿಸ್ತೂಲನ್ನು ವಿಲೇವಾರಿ ಮಾಡಿದ್ದ. ಶ್ರೀಕಾಂತ ಪಾಂಗರ್ಕರ್ ಸಂಚಿನ ಸಭೆಗಳಲ್ಲಿ ಭಾಗವಹಿಸಿದ್ದ. ಸುಧನ್ವ ಕಾಲಸ್ಕರ್ ಎಂಬಾತ ಹತ್ಯೆಯ ಸ್ಥಳದಲ್ಲಿ ಉಪಸ್ಥಿತನಿದ್ದ.

ಈ ನಾಲ್ವರ ಬಂಧನದೊಂದಿಗೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 16ಕ್ಕೇರಿತು. ಸಂಚಿನಲ್ಲಿ ಭಾಗವಹಿಸಿದ್ದ ವಿಕಾಸ್ ಪಾಟೀಲ್ ಮತ್ತು ರುಷಿಕೇಶ್ ದೇವ್ಡಿಕರ್ ಎಂಬಿಬ್ಬರ ಬಂಧನ ಬಾಕಿಯಿದೆ.

ಈ ಪ್ರಕರಣದಲ್ಲಿ ವಿಶೇಷ ತನಿಖಾ ತಂಡವು ಮೂಲ ಆರೋಪಪಟ್ಟಿಗೆ ಹೆಚ್ಚುವರಿಯಾಗಿ 9,235 ಪುಟಗಳ ವಿವರವಾದ ಆರೋಪಪಟ್ಟಿಯನ್ನೂ ಸಲ್ಲಿಸಿದೆ. ತೀರ್ಪು ನ್ಯಾಯಾಲಯದ ಕೈಯ್ಯಲ್ಲಿದೆ.

(ಮುಗಿಯಿತು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....