- Advertisement -
ಗೌರಿ ಹತ್ಯೆ ಪ್ರಕರಣದ ಮುಖ್ಯ ಆರೋಪಿ ಪರಶುರಾಮ ವಾಗ್ಮೋರೆಯನ್ನು ಮಾಧ್ಯಮದಲ್ಲಿ ನೋಡುತ್ತಿದ್ದಂತೆ ತಕ್ಷಣ ಅನ್ನಿಸಿದ್ದು, ಇವನು ಇಲ್ಲೇ ಎಲ್ಲೋ ನಮ್ಮ ಅಕ್ಕಪಕ್ಕದಲ್ಲಿ ಓಡಾಡಿಕೊಂಡಿದ್ದ ಹುಡುಗನಂತಿದ್ದಾನೆ ಎಂದು. ಕರ್ನಾಟಕ-ಗೋವಾ, ಕರ್ನಾಟಕ-ಮಹಾರಾಷ್ಟ್ರ ಗಡಿಸೀಮೆಗಳ ಉದ್ಯೋಗದ ಓಡಾಟ ಇವನನ್ನೋ ಇವನಂಥವರನ್ನೋ ಪದೇ ಪದೇ ಭೇಟಿ ಮಾಡಿಸುತ್ತಲೇ ಇದೆ. ಸರಿದಾಡುತ್ತವೆ ನೆನಪಿನ ನೆರಳುಗಳು. ಎಂದೋ ಯಾರೋ ಗೆಳೆಯರೊಟ್ಟಿಗೆ ಬಂದು ಕ್ಲಾಸರೂಂನ ಒಳಗೆ ಕೂತಿದ್ದವರಲ್ಲಿ? ಕಾಲೇಜಿನಲಿ ್ಲಧ್ವಜವಂದನೆ ಕಾರ್ಯಕ್ರಮ ನಡೆಯುವಾಗ ಕಾಂಪೌಂಡಿನ ಆ ಕಡೆ ನಿಂತ ಗುಂಪು ವೀರ ಸಾವರ್ಕರ್ ಕೀ ಜೈ ಎಂದು ಅನಾಮತ್ತಾಗಿ ಕೂಗಿಹೋದರಲ್ಲ ಆ ಗುಂಪಿನಲ್ಲಿ? ಮುಸ್ಲಿಮ್ ಹುಡುಗಿಯರಿಗೆ ಬುರ್ಖಾ ತೆಗೆಸಿ ಇಲ್ಲಾಂದ್ರೆ ನಾವು ಕೇಸರಿ ಶಾಲು ಹಾಕುವವರೇ- ಎಂದು ಕಾಲೇಜಿನ ನಾಲ್ಕೆಂಟು ಹುಡುಗರು ರಾದ್ಧಾಂತ ಎಬ್ಬಿಸಿದಾಗ, ಆ ಹುಡುಗರಿಗೆ ಕ್ಷಣಾರ್ಧದಲ್ಲಿ ಬ್ಯಾಗುಗಟ್ಟಲೆ ಕೇಸರಿ ಶಾಲುಗಳನ್ನು ಸಪ್ಲೈ ಮಾಡಿ ಹೋದರಲ್ಲ ಆ ಬೈಕುಗಳಲ್ಲಿ ಬಂದವರಲ್ಲಿ? ಕಾಲೇಜಿನಲ್ಲಿ ಹುಲಿಕಲ್ ನಟರಾಜ್ ಅವರನ್ನು ಕರೆಯಿಸಿ ‘ಪವಾಡ ಬಯಲು’ ಕಾರ್ಯಕ್ರಮ ನಡೆಸುವಾಗ, ಕಾಂಪೌಂಡ್ ಗೋಡೆಯ ಆ ಕಡೆ ಮತ್ತೆ ಮತ್ತೆ ಬೈಕುಗಳು ಗಿರುಗುಟ್ಟಿದವಲ್ಲ, ಅವರೆಲ್ಲಿ? ಕಾಲೇಜಿನಲ್ಲೂ ಶಿವಾಜಿ ಜಯಂತಿ ಆಚರಿಸುವವರೇ ಎಂದು ಶಿವಾಜಿ ಫೋಟೋ ತಂದು ಕೇಸರಿ ಕುಂಕುಮ ತಂದು ಕ್ಲಾಸು ಕ್ಲಾಸುಗಳ ಒಳಹೊಕ್ಕು ರಾಡಿ ಎಬ್ಬಿಸಿದರಲ್ಲ ಅವರೊಂದಿಗೆ ನಿರಂತರ ಫೋನ್ ಸಂಭಾಷಣೆ ನಡೆಸುತ್ತಿದ್ದರಲ್ಲ ಆ ಮುಖರಹಿತರಲ್ಲಿ? ದಿನಂಪ್ರತಿಯ ಬದುಕಿನಲ್ಲಿ ತಂತಿ ಮೇಲಿನ ನಡಿಗೆಯಂತೆ ಏದುಬ್ಬಸಪಡಲು ಹಚ್ಚಿದರಲ್ಲ… ಅವರಲ್ಲಿ? ಕಾಲೇಜಿನಗೋಡೆ, ನೋಟಿಸ್ ಬೋರ್ಡ, ಬ್ಲ್ಯಾಕ್ ಬೋರ್ಡಗಳಲ್ಲಿ ‘ಬುರ್ಖಾ ತೆಗೆಸಿ ಇಲ್ಲಾಂದ್ರೆ…’ ಎಂಬ ಪುಟಾಣಿ ಬರಹಗಳ ಹಿಂದಿನ ಕುತ್ಸಿತತನಗಳಲ್ಲಿ ಇದ್ದಿರಬಹುದು. ಇರದಿರಬಹುದು. ಆದರೆ ಒಂದು ಮಾತ್ರ ಸತ್ಯ. ನಮ್ಮ ದಿನನಿತ್ಯದ ಬದುಕಿನ ಪಾಲುದಾರರಾಗಿ ಭಾಗೀದಾರರಾಗಿ ಪರಶುರಾಮ ವಾಗ್ಮೋರೆಯಂತಹ ಮಕ್ಕಳಿದ್ದಾರೆ. ಕೆಲವೊಮ್ಮೆ ಕಾಂಪೌಂಡ್ ಒಳಗೆ, ಕೆಲವೊಮ್ಮೆ ಹೊರಗೆ. ಗೌರಿ ಹತ್ಯೆಯ ಕೇಸಿನಲ್ಲಿ ಅರೆಸ್ಟಾದ ಪರಶುರಾಮ ವಾಗ್ಮೋರೆ, ಸುಜಿತ್‍ಕುಮಾರ ಯಡವೆ, ಅಮೋಲ್ ಕಾಳೆ, ಅಮಿತ್ ದೇಗ್ವೇಕರ್ ಇವರೆಲ್ಲ ನಮ್ಮ ವರ್ತಮಾನದಲ್ಲಿ ಬೆಳೆಯುತ್ತಿರುವ ಒಂದು ವಿಕೃತ ಮನಸ್ಥಿತಿಯ ಸಂಕೇತಗಳು ಮಾತ್ರ. ಇಪ್ಪತ್ತು ವರ್ಷಗಳ ಹಿಂದೆ ಬೊಳುವಾರು ಮಹಮ್ಮದ್ ಕುಂಞಯವರ ಜಿಹಾದ್ ಕಾದಂಬರಿಯನ್ನು ಪಾಠ ಮಾಡುವಾಗ “ಮೇಡಂ, ನೀವ್ಯಾಕೆ ಇದನ್ನು ಕಲಿಸುವಾಗ ಹಿಂದೂ ಧರ್ಮದ ವಿಷಯ ಉದಾಹರಣೆ ಕೊಡ್ತೀರಾ?” ಎಂದು ಜಗಳ ತೆಗೆದಿದ್ದ ಹುಡುಗ ನೆನಪಾಗುತ್ತಾನೆ. ಅವನೊಂದಿಗೆ ಸಂವಾದ ಸಾಧ್ಯವಿತ್ತು. ‘ಯಾಕೆ’ ಎನ್ನುವುದನ್ನು ಅವನಿಗೆ ತಿಳಿಸಬಹುದಿತ್ತು. ಈಗ, ಸಾರಾ ಅಬೂಬಕ್ಕರ ಅವರ ‘ಚಂದ್ರಗಿರಿ ತೀರದಲ್ಲಿ’ ಪಾಠ ಮಾಡುತ್ತಿದ್ದೇನೆ. ಹಿಂದೂಧರ್ಮ ಹೆಣ್ಣನ್ನು ಕಂಡ ಬಗೆಯನ್ನು ಅದ್ಯಾಕೆ ಈ ಕಾದಂಬರಿಯ ಕಕ್ಷೆಯೊಳಗೆ ತರುತ್ತೀರಿ ಎಂದು ಮಕ್ಕಳು ಕೇಳುವುದಿಲ್ಲ. ಜಗಳ ಮಾಡುವುದಿಲ್ಲ. ಬರಿದೇ ಮುಖ ಬಿಗಿದುಕೊಂಡು ಧುಸುಗುಡುವವರಿದ್ದಾರೆ. ಕಿರಿಕಿರಿ ಮಾಡಿಕೊಳ್ಳುವವರಿದ್ದಾರೆ. ಸರಿ-ತಪ್ಪುಗಳನ್ನು, ಮೌಲ್ಯ-ಅಪಮೌಲ್ಯಗಳನ್ನು ಸ್ವಅನುಭವದ ತಿಳಿವಿನ ಶೋಧಕ್ಕೆ ಒಡ್ಡಿಕೊಳ್ಳಬೇಕು ಎನ್ನುವ ಪ್ರವೃತ್ತಿಯೂ ಕಡಿಮೆಯಾಗುತ್ತಿದೆ.
ಯೌವನದ ಕನಸಿನಲ್ಲಿ, ವಿಚಾರದ ಬೆಳಕಿನಲ್ಲಿ ತಮ್ಮ ಚೇತನವನ್ನು ಅನಿಕೇತನವಾಗಿಸಿಕೊಳ್ಳಬೇಕಾದ ಮಕ್ಕಳು ಮತಾಂಧತೆಯ ಗೋಡೌನುಗಳಾಗಿ ಜಡವಾಗುತ್ತಿದ್ದಾರೆ. ಅವರನ್ನು ಮತಾಂಧತೆಯ ಹೊಂಡದಲ್ಲಿ ಹುಗಿದು ಕೊಳೆಯಿಸಲಾಗುತ್ತಿದೆ. ವಿಚಾರವಾದಿಗಳ ಹತ್ಯೆಯ ನಂತರ ಸಂಭ್ರಮಿಸಿದ, ಆರೋಪಿಗಳು ಅರೆಸ್ಟ ಆದ ನಂತರ ಭಾವೋದ್ರೇಕದ ವಿಷಾದದ ಪೋಸ್ಟ್‍ಗಳನ್ನು ಹಾಕಿದ ಸಾಮಾಜಿಕ ಜಾಲತಾಣಗಳ ವಿದ್ಯಾವಂತ ನಾಗರಿಕರು ನಿಜವಾಗಿಯೂ ವರ್ತಮಾನದ ಕ್ರೌರ್ಯದ ರೂವಾರಿಗಳು. ‘ನಿಮ್ಮ ದುಡಿಮೆಯ ಒಂದು ಭಾಗ, ನಿಮ್ಮ ಅನ್ನದ ಒಂದು ತುತ್ತನ್ನು ದೇಶಭಕ್ತರಿಗೆ ಕೊಡಲಾರಿರಾ?’- ಎಂದು ಭಾವೋದ್ವೇಗದಿಂದ ಪರಶುರಾಮ ವಾಗ್ಮೋರೆ ಕುಟುಂಬಕ್ಕೆ ಧನಸಹಾಯ ಕೇಳಿದವರು ಏನು ಹೇಳಹೊರಟರು? ಬಿಜೆಪಿ ಯುವ ಮೋರ್ಚಾದ ರಾಜ್ಯಕಾರ್ಯಕಾರಿಣಿ ಸದಸ್ಯೆಯಾದ ಮಂಚಾಲೇಶ್ವರಿ ಎನ್ನುವವರು ‘ಈ ದೇಶದ ತಳಹದಿ ಹಿಂದೂತ್ವ. ಲದ್ದಿ ಜೀವಿಗಳು ಹಿಂದೂ ವಿರೋಧಿ ಚಟುವಟಿಕೆ ಮಾಡಿದ್ರೆ ಮನೆಮನೆಯಲ್ಲೂ ಪರಶುರಾಮನಂತವರು ಹುಟ್ಟುತ್ತಾರೆ’ -ಎಂದು ಪೋಸ್ಟ ಹಾಕಿಕೊಂಡರು. ಇವರುಗಳಿಗೆ ದೇಶಭಕ್ತಿ, ಹಿಂದೂತ್ವ, ಬುದ್ಧಿಜೀವಿ- ಇಂತಹ ಪದಗಳ ಅರ್ಥವಾಗಲಿ; ಈ ದೇಶದ ಚರಿತ್ರೆಯಾಗಲಿ, ಯಾರನ್ನು ಅವಹೇಳನ ಮಾಡಿ ಉದ್ವೇಗಕಾರಿಯಾದ ವಾತಾವರಣ ನಿರ್ಮಿಸುತ್ತಿದ್ದಾರೋ ಅವರ ಬರಹಗಳನ್ನು ತಿಳಿದುಕೊಳ್ಳುವ ಅಧ್ಯಯನ ಶಕ್ತಿಯಾಗಲಿ ಇದೆಯೇ? ಹತ್ಯೆಯ ಆರೋಪಿಯನ್ನು ಸಮರ್ಥಿಸುವುದಾಗಲೀ, ಕಣ್ಣಿಗೆ ಪಟ್ಟಿ ಕಟ್ಟಿಕೊಂಡ ತನ್ನ ಅಳವಿಗೇ ನಿಲುಕದಿರುವ ವಿಷಯಗಳ ಬಗ್ಗೆ ಯಕಶ್ಚಿತವಾಗಿ ಮಾತನಾಡುವುದಾಗಲೀ ಸಂವಿಧಾನಬಾಹಿರವೆಂಬ ಕನಿಷ್ಟ ತಿಳಿವೂ ಇಲ್ಲದಿರುವುದು ಮತಾಂಧ ಅಹಂಕಾರವಾಗಿ ಕಾಣುತ್ತದೆ. ಈ ಬೆಂಕಿಯನ್ನು ಹಬ್ಬಿಸುವ ಮನಸ್ಸುಗಳಿಗೆ ತಣ್ಣೀರು ಸೋಕಿಸದಿದ್ದರೆ… ಮುಂದೆ ಉಳಿಯಬಹುದಾದದ್ದು ಸಮಾಜದ ಸುಡುಬೂದಿ ಮಾತ್ರ.ಪರಶುರಾಮ ವಾಗ್ಮೋರೆ ಹೇಳಿದ್ದಾನೆಂದು ಬಿತ್ತರಗೊಂಡಿರುವ ವಿಷಯಗಳು ಸದ್ಯದ ಸಾಮಾಜಿಕ ಕರಾಳತೆಯ ಸಾಕ್ಷ್ಯಗಳಾಗಿವೆ. ಅವನೊಬ್ಬ ಹಿಂದೂತ್ವವಾದಿ. ಹಿಂದೂ ಧರ್ಮದ ಕುರಿತು ಯಾರೇ ವಿಮರ್ಶಾತ್ಮಕವಾಗಿ ಮಾತನಾಡಿದರೂ ಅವನದನ್ನು ಸಹಿಸಲಾರ. ಹತ್ಯೆಯನ್ನು ಸರಿ ಎಂದು ವಾದಿಸಿಕೊಳ್ಳಬಲ್ಲ. ಇವನಂಥವರಲ್ಲಿ ಧರ್ಮಗ್ಲಾನಿಯ ಭಯವನ್ನು ಬಿತ್ತಲಾಗಿದೆ. ಕಲ್ಪಿತ ವೈರವನ್ನು ಬೆಳೆಸಲಾಗಿದೆ. ಯಾರು ದುಡಿವ ವರ್ಗದ, ಕುಶಲ ಕರ್ಮಿಗಳಾದ, ಸಣ್ಣ ಪುಟ್ಟ ಜಾತಿಗಳ ಹಿನ್ನೆಲೆಯನ್ನು ಹೊಂದಿರುತ್ತಾರೋ ಅಂತಹ ಯುವಕರು ಬಲುಬೇಗ, ಮತಾಂಧತೆಯ ಗಾಳಕ್ಕೆ ಸಿಲುಕುತ್ತಾರೆ. ಅವರಿಗೆ ಜಾತಿ ರಾಜಕಾರಣ ಪ್ರಬಲವಾಗುತ್ತಿರುವಾಗ ಐಡೆಂಟಿಟಿ ಕ್ರೈಸಸ್ ಇರುತ್ತದೆ. ಬೆಳೆಯುತ್ತಿರುವ ಬಂಡವಾಳವಾದ ವೃತ್ತಿಕೌಶಲ್ಯದ ಮೇಲೆ ಆಕ್ರಮಣ ಮಾಡುತ್ತದೆ. ಮುಂದೇನು? ಎಂಬ ತಬ್ಬಲಿ ಭಾವದ ಬಳಲಿಕೆಯಿರುತ್ತದೆ. ದುರ್ಬಲ ಜಾತಿ-ವರ್ಗದವರಾದ್ದರಿಂದ, ಜಾತಿಯ-ಧರ್ಮದ ಕಟ್ಟುಪಾಡಿನೊಳಗೆ ಬೆಳೆದಿರುತ್ತಾರೆ. ಪುರುಷ ಪ್ರಧಾನವಾದ ಧರ್ಮ ಪ್ರಧಾನವಾದ ಸಮಾಜ ಯಾವುದನ್ನು ನಿರ್ದೇಶಿಸುತ್ತದೆಯೋ ಆ ನಿಯತ್ತಿಗೆ ಅಡಿಯಾಗಿರುತ್ತಾರೆ. ಅಪಾಪೋಲಿ ಉಡಾಫೆತನಗಳು ಇರುವುದಿಲ್ಲ ಮತ್ತು ಸಭ್ಯತೆಯ ಗಂಭೀರ ಸ್ವಭಾವವಿರುತ್ತದೆ. ರಾಜರಿಗೆ ನಿಷ್ಠರಾಗಿದ್ದ ಸೈನಿಕರಂತೆ, ಧರ್ಮಕ್ಕೆ ನಿಷ್ಠರಾದ ಕಟ್ಟಾಳುಗಳು ತಾವು ಎಂಬ ಭ್ರಮೆ ಬೆಳೆದಿರುತ್ತದೆ. ತಮ್ಮನ್ನು ಯಾರು, ಯಾಕೆ ಮತ್ತು ಯಾರಿಗಾಗಿ ಚಿತಾವಣೆ ಮಾಡುತ್ತಿದ್ದಾರೆ- ಎಂಬ ವಿವೇಕಮತಿಯಿರುವುದಿಲ್ಲ. ಸುತ್ತಲ ವಿದ್ಯಮಾನಗಳನ್ನು ಗಮನಿಸುವ ಪ್ರಾಂಜಲ ಮನಸ್ಥಿತಿಯಿರುವುದಿಲ್ಲ. ಮುಖ್ಯ, ಸ್ವ ವಿಚಾರ ಶಕ್ತಿಯಿರುವುದಿಲ್ಲ.
ನಮ್ಮ ಮಕ್ಕಳನ್ನು ಮತೀಯ ಬಾಂಬರ್‍ಗಳನ್ನಾಗಿಸುವಲ್ಲಿ ಶಿಕ್ಷಣ ವ್ಯವಸ್ಥೆಯು ಬಂಡವಾಳೋದ್ಯಮವಾದದ್ದರ ಕೊಡುಗೆಯೂ ದೊಡ್ಡದಿದೆ. ಶಿಕ್ಷಣ ಎಂದರೆ ಓದು, ಬರಹ, ಕಂಠಪಾಠ, ಅಂಕಗಳಿಕೆ ಮತ್ತು ಬಂಡವಾಳಶಾಹಿಯಾಗುವ ಫಲಿತ ಎಂಬ ಸ್ಥಿತಿ ಎಂದು ನಿರ್ಮಾಣವಾಯಿತೋ ಅಂದಿನಿಂದಲೇ, ವಿದ್ಯೆಗೂ ವ್ಯಕ್ತಿತ್ವ ನಿರ್ಮಿತಿಗೂ ಸಂಬಂಧ ಕಳಚಿತು. ತಪ್ಪು ಮಾಡುವ, ತಪ್ಪುಯೋಚಿಸುವ ಮಕ್ಕಳನ್ನು ತಿದ್ದಿ ಬುದ್ಧಿ ಹೇಳುವ ಶಿಕ್ಷಕರೀಗ, ಅದು ತಮ್ಮ ಸಿಲ್ಯಾಬಸ್‍ಗೆ ಸಂಬಂಧಪಡದ ಸಂಗತಿ ಎಂದುಕೊಂಡಿದ್ದಾರೆ. ಇಂಥದೇ ಶಿಕ್ಷಣ ವ್ಯವಸ್ಥೆಯಿಂದ ರೂಪುಗೊಂಡ ಶಿಕ್ಷಕರಿಗೆ ತಮ್ಮ ಜಾತಿ, ಧರ್ಮ, ವರ್ಗ, ಲಿಂಗಗಳ ಮದವಳಿದು ಗುರುತನವನ್ನು ಅರಗಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಕೊಳ್ಳುಬಾಕತನವು ಸೂತ್ರೀಕರಿಸಿದ ವ್ಯಕ್ತಿತ್ವ ನಿರ್ಮಿತಿಯ ತಪ್ಪು ಮಾನದಂಡವನ್ನು ಸ್ವತಃ ಒಪ್ಪಿಕೊಂಡ ಶಿಕ್ಷಕ ಸಮುದಾಯ, ತನ್ನ ಮುಂದಿನ ತಲೆಮಾರನ್ನು ರೂಪಿಸುವಲ್ಲಿ ಸೋಲುತ್ತಿದೆ. ಶಿಕ್ಷಣ ಕ್ಷೇತ್ರದ ಈ ಬಂಜರುತನ ನಮ್ಮ ಮಕ್ಕಳನ್ನು ಮಣ್ಣಿನ ಮೇಲ್ಪದರನ್ನು ಮಾತ್ರ ಕಚ್ಚಿಕೊಂಡ ಕಸದ ಹಸಿರಾಗಿಸಿದೆ. ಯಾರು ಬೇಕಾದರೂ ಕಿತ್ತು ಕಾಲಡಿಗೆ ಹಾಕಿಕೊಳ್ಳಬಹುದಾದ ಕಸ. ಹಾಗಾಗಿಯೇ ಕೆಲವೇ ದಿನಗಳಲ್ಲಿ ಕೆಲವೇ ಬರಹ, ಭಾಷಣದ ತುಣುಕುಗಳ ಹಸಿಬಿಸಿ ಗ್ರಹಿಕೆ ಹತ್ಯೆಗೆ ಪ್ರಚೋದನೆಯಾಗುತ್ತದೆ. ಇದು ಹಸಿಬಿಸಿ ಗ್ರಹಿಕೆ ಯಾಕೆಂದರೆ ಗೌರಿ ಹಿಂಸೆಯನ್ನು ಉದ್ರೇಕಿಸುವಂತೆ ಬರೆದವರಲ್ಲ. ಇವರ ಗ್ರಹಿಕೆ ಅದೆಷ್ಟು ದುರ್ಬಲವಾದದ್ದೆಂದರೆ, ‘ನಿನ್ನ ಹೆಸರಿನಲ್ಲಿಯೇ ಧರ್ಮರಕ್ಷಣೆಗಾಗಿ ಕಠಾರಿ ಹಿಡಿದ ಕುರುಹಿದೆ’ ಎಂದರೆ ಸಂಭ್ರಮಿಸುವಷ್ಟು, ಪಿತೃ ಪ್ರಧಾನವಾದ ಧರ್ಮಚಿಂತನೆಗೆ ಚೂರು ವ್ಯತಿರಿಕ್ತವಾದರೆ, ಪಿತೃವಾಕ್ಯಕ್ಕಾಗಿ ಮಾತೃಹತ್ಯೆಗೆ ಮುಂದಾದ ಪರಶುರಾಮನ ಕಠಾರಿಯ ರೇಣುಕಾ ಪುರಾಣದ ಕಥೆಯು, ಕಟ್ಟಕಡೆಗೆ ಪ್ರತಿನಿಧಿಸುವುದು ಏನನ್ನು? ರೇಣುಕೆ ದೇವಿಯಾಗಿ ಮರುಹುಟ್ಟು ಪಡೆಯುತ್ತಲೇ ಇರುತ್ತಾಳೆ. ಕಠಾರಿ ಸೋಲುತ್ತಲೇ ಇರುತ್ತದೆ ಎನ್ನುವುದನ್ನಲ್ಲವೆ? ಗೌರಿಯ ಹತ್ಯೆಯ ಕಾರ್ಯಸೂಚಿಯನ್ನು ‘ಆಯೀ’, ‘ಅಮ್ಮ’ ಎಂದೆಲ್ಲ ಕರೆದದ್ದು, ಆ ಪೌರಾಣಿಕ ಕಥನದೊಂದಿಗೆ ಸಂಬಂಧ ಜೋಡಣೆಯ ಮೂರ್ಖತನದಿಂದ.
ತನ್ನ ಅವ್ವ ಜಾನಕಿಬಾಯಿಯ ಬಗ್ಗೆ ಅಂತಃಕರಣದಿಂದ ಮಿಡಿವ ಮಗನಿಗೆ, ಗೌರಿ ಕೂಡ ತನ್ನವ್ವನಂತೆ ಅನ್ನಿಸಲಿಲ್ಲ. ಮತೀಯವಾದ ತನ್ನದು-ತನ್ನದಲ್ಲದ್ದು ಎಂದು ರೂಪಿಸುವ ಒಡಕಲು ಬಿಂಬವೇ ಹಾಗೆ. ತನ್ನವರಲ್ಲದವರನ್ನು ಮನುಷ್ಯತ್ವದಿಂದ ಕಾಣುವ ಸಂಸ್ಕಾರದಿಂದಲೇ ವಂಚಿಸುತ್ತದೆ. ಒಂದೊಮ್ಮೆ ಮನುಷ್ಯ ಸಹಜ ವಿವೇಕದಿಂದ ಬದುಕನ್ನು ನಿರುಕಿಸುವ ಶಕ್ತಿಯಿದ್ದಿದ್ದರೆ… ತನ್ನನ್ನು ಹೀಗಳೆದ ಯುವಕನನ್ನೂ, ‘ನೀನೂ ನನ್ನ ಮಗ, ಆದರೆ ದಾರಿತಪ್ಪಿದ ಮಗ’ ಎಂದ ಗೌರಿಯ ತಾಯ ಕರುಣೆ-ಕಕ್ಕುಲಾತಿಗಳು ತಿಳಿಯುತ್ತಿದ್ದವು.
ಪರಶುರಾಮ ವಾಗ್ಮೋರೆ ಅಥವಾ ಅಂತಹ ಯಾರೇ ಆರೋಪಿಗಳನ್ನು ಅವರ ಕುಟುಂಬವನ್ನು, ಏನೂ ಅರಿಯದ, ಅಬೋಧಕರೆಂದು ಯಾರಿಂದಲೋ ದೌರ್ಜನ್ಯದಿಂದ ಬಳಕೆಗೊಂಡವರೆಂದು ಮಾತ್ರ ನೋಡಬೇಕೆ? ಪಾಕಿಸ್ತಾನಿ ಧ್ವಜ ಹಾರಿಸಿ, ಆ ಆರೋಪದಲ್ಲಿ ಅರೆಸ್ಟ ಆಗಿ, ಚಾರ್ಜ್ ಮಾಡಿಸಿಕೊಂಡಿದ್ದ ಪರಶುರಾಮನ ಬಗ್ಗೆ ಹೆತ್ತವರಿಗೆ ತಿಳಿಯದ್ದೇನಲ್ಲ. ಅವನೊಳಗಿನ ಧರ್ಮ ಲಂಪಟತೆಯನ್ನು ತಡೆವ ಪ್ರಯತ್ನವನ್ನು ಕುಟುಂಬವರ್ಗ ಮಾಡಿತ್ತೇ? ಅಥವಾ ಅವರೊಳಗೂ ಈ ಎಲ್ಲ ಧರ್ಮಕಾರಣಗಳಿದ್ದವೇ? ಅಥವಾ ಮತಾಂಧತೆಯನ್ನೂ ಮೀರಿದ ಬೇರೆ ರೀತಿಯ ಭ್ರಷ್ಟ ಆಮಿಷಗಳ ಸೆಳೆತವಿತ್ತೇ? ಪಾಕಿಸ್ತಾನದ ಧ್ವಜವನ್ನು ಹಾರಿಸಿ ಕಾನೂನು ಭಂಗಗೊಳಿಸಿ ಸಮಾಜದ ಶಾಂತಿಯನ್ನು ಕದಡಲು ಯತ್ನಿಸಿದ್ದು ಸಣ್ಣ ಅಪರಾಧವೇನೂ ಆಗಿರಲಿಲ್ಲ. ಸರ್ಕಾರ ಮತ್ತು ಪೊಲೀಸ್ ಇಲಾಖೆ ಇನ್ನಷ್ಟು ಎಚ್ಚರದಿಂದ ವರ್ತಿಸಿದ್ದರೆ, ಈ ಮತಾಂಧ ನೀಚತನಕ್ಕೆ ಗೌರಿಯಂತಹ ಅಮೂಲ್ಯ ಜೀವ ಬಲಿಯಾಗದಿರಬಹುದಿತ್ತು. ಗೌರಿ ಪಾಕಿಸ್ತಾನಿ ಧ್ವಜವನ್ನು ಹಾರಿಸಿದ್ದ ಪ್ರಕರಣದಲ್ಲಿ ಪರಶುರಾಮ ವಾಗ್ಮೋರೆ ಮತ್ತು ಸಂಗಡಿಗರನ್ನು ಬಯ್ದು ಹಂಗಿಸಿ ಬರೆದಿದ್ದಳು. ಬಹುಶಃ ಈತ ಚಿಕ್ಕವನಿದ್ದಾಗ ಬಾಯಲ್ಲಿ ಮಣ್ಣು ಹಾಕಿಕೊಂಡಾಗ ತಾಯಿ ಜಾನಕಿಬಾಯಿ ಎಳೆದು ನಾಲ್ಕು ಬಡಿದು ಬುದ್ದಿ ಹೇಳಿ ಕಿವಿ ತಿರುವಿರಬಹುದು. ಹಾಗೆ, ಥೇಟ್ ಹಾಗೆ ಗೌರಿ. ಆ ಅದೇ ತಾಯ್ತನದ ಕಕ್ಕುಲಾತಿಯಲ್ಲಿ ತನ್ನ ಮುಂದಿನ ತಲೆಮಾರಿನೊಂದಿಗೆ ಸಂವಾದಿಸಿದ್ದಳು. ಈ ಸತ್ಯವನ್ನು ಪರಶುರಾಮನಂಥವರು ತಿಳಿಯುವ ಹಾಗಿದ್ದರೆ…
– ವಿನಯ ಒಕ್ಕುಂದ


