ಎರಡು ವರ್ಷಗಳ ನರಮೇಧದ ಬಳಿಕ ಗಾಝಾದಲ್ಲಿ ಕದನ ವಿರಾಮ ಜಾರಿಯಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿದ್ದ 20 ಅಂಶಗಳ ‘ಗಾಝಾ ಕದನ ವಿರಾಮ’ ಒಪ್ಪಂದಕ್ಕೆ ಇಸ್ರೇಲ್ ಮತ್ತು ಹಮಾಸ್ ಒಪ್ಪಿಗೆ ಸೂಚಿಸಿವೆ. ಪರಿಣಾಮ ಗಾಝಾದ ಮೇಲಿನ ಬಾಂಬ್ ದಾಳಿಯನ್ನು ಇಸ್ರೇಲ್ ನಿಲ್ಲಿಸಿದೆ. ಹಮಾಸ್ ಮತ್ತು ಇಸ್ರೇಲ್ ಪರಸ್ಪರ ಬಂಧಿತರು ಮತ್ತು ಒತ್ತೆಯಾಳುಗಳ ಹಸ್ತಾಂತರ ಮಾಡಿಕೊಂಡಿವೆ.
ಅಕ್ಟೋಬರ್ 13ರಂದು ಇಸ್ರೇಲ್ ಸಂಸತ್ ನೆಸ್ಸೆಟ್‌ನಲ್ಲಿ ಮಾತನಾಡಿದ ಟ್ರಂಪ್, ಗಾಝಾ ಕದನ ವಿರಾಮದ ವಿಷಯದಲ್ಲಿ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿದ್ದಾರೆ. ಬಳಿಕ ಈಜಿಪ್ಟ್‌ನಲ್ಲಿ ನಡೆದ ‘ಗಾಝಾ ಶಾಂತಿ ಶೃಂಗ’ದಲ್ಲಿ ಕೂಡ ಇದನ್ನು ಪುನರಾವರ್ತಿಸಿದ್ದಾರೆ.
ಇಸ್ರೇಲ್, ಈಜಿಪ್ಟ್ ಸೇರಿದಂತೆ ಹಲವು ರಾಷ್ಟ್ರಗಳು ‘ಟ್ರಂಪ್’ ಜಾಗತಿಕ ಶಾಂತಿಯ ರಾಯಭಾರಿ ಎಂಬಂತೆ ಬಿಂಬಿಸಿವೆ, ಹೊಗಳಿ ಅಟ್ಟಕೇರಿಸಿವೆ. ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್-ಸಿಸಿ ಒಂದು ಹೆಜ್ಜೆ ಮುಂದೆ ಹೋಗಿ ಟ್ರಂಪ್‌ಗೆ ದೇಶದ ಅತ್ಯುನ್ನತ ಗೌರವ ‘ಆರ್ಡರ್ ಆಫ್ ದಿ ನೈಲ್’ ನೀಡುವುದಾಗಿ ಘೋಷಿಸಿದ್ದಾರೆ.
ಒಟ್ಟಿನಲ್ಲಿ, ಗಾಝಾ ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ಪ್ರಮುಖ ಪಾತ್ರವಹಿಸಿದ ಕೀರ್ತಿ ಟ್ರಂಪ್‌ಗೆ ಸಲ್ಲಿಕೆಯಾಗಿದೆ.
ಈ ನಡುವೆ, ಗಾಝಾದಲ್ಲಿ 2023ರ ಅಕ್ಟೋಬರ್ 8ರಿಂದ 2025ರ ಅಕ್ಟೋಬರ್ 10ರವರೆಗೆ ಕಂದಮ್ಮಗಳು ಸೇರಿದಂತೆ ಸುಮಾರು 70 ಸಾವಿರ ಅಮಾಯಕ ಜನರನ್ನು ಕೊಂದು ಅಟ್ಟಹಾಸ ಮೆರೆಯಲು ಇಸ್ರೇಲ್‌ಗೆ ಸಹಾಯ ಮಾಡಿದ್ದು ಯಾರು ಎಂಬುವುದನ್ನು ಜಗತ್ತು ಮರೆತು ಹೋದಂತಿದೆ. ಅರಬ್ ದೇಶಗಳು ಸೇರಿದಂತೆ ವಿವಿಧ ರಾಷ್ಟ್ರಗಳ ನಾಯಕರು ಗಾಝಾದಲ್ಲಿ ಏನೂ ಆಗಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.
ಅತ್ತ ಗಾಝಾದಲ್ಲಿ ತಮ್ಮವರನ್ನು, ಮನೆ, ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡ ಅಮಾಯಕ ಜನರು ಮಾತ್ರ ದಿಕ್ಕು ತೋಚದೆ ಕುಳಿತಿದ್ದಾರೆ. ಹಾಗಿದ್ದರೆ, ಆ ಜನರ ಬದುಕನ್ನು ನಿರ್ಣಾಮ ಮಾಡಿದ್ದು ಯಾರು ಎಂದು ಜಗತ್ತು ಅರಿಯುವುದು ಬೇಡವೇ? ಕೊಂದು ಕೈ ತೊಳೆದುಕೊಂಡರೆ ಹಂತಕನನ್ನು ಸುಮ್ಮನೆ ಬಿಡಬೇಕೆ?
ಗಾಝಾ ನರಮೇಧಕ್ಕೆ ಬೆನ್ನೆಲುಬಾಗಿ ನಿಂತಿದ್ದು ಅಮೆರಿಕ
ಹೌದು, ಗಾಝಾ ಯುದ್ದ ನಿಲ್ಲಿಸಿದ್ದೇವೆ, ನಾನು ಶಾಂತಿಯ ರಾಯಭಾರಿ ಎಂದು ಬೀಗುತ್ತಿರುವ ಟ್ರಂಪ್ ಅಥವಾ ಅಮೆರಿಕವೇ ಗಾಝಾದಲ್ಲಿ ನರಮೇಧ ನಡೆಸಲು ಕಳೆದ ಎರಡು ವರ್ಷಗಳಿಂದ ಇಸ್ರೇಲ್‌ಗೆ ಬೆನ್ನೆಲುಬಾಗಿ ನಿಂತಿದ್ದು ಎನ್ನುವುದು ಜಗತ್ತು ಅರಿತುಕೊಳ್ಳಬೇಕಾದ ಸತ್ಯ.
ಅಮೆರಿಕ ಆರ್ಥಿಕ, ಮಿಲಿಟರಿ, ರಾಜತಾಂತ್ರಿಕ, ಗುಪ್ತಚರ ಸೇರಿದಂತೆ ಎಲ್ಲಾ ರೀತಿಯ ಸಹಾಯವನ್ನು ಇಸ್ರೇಲ್‌ಗೆ ಒದಗಿಸಿದೆ. 2023ರ ಅಕ್ಟೋಬರ್ 7ರಿಂದ 2025ರ ಅಕ್ಟೋಬರ್ 10ವರೆಗೆ ಗಾಝಾ ಮೇಲಿನ ಆಕ್ರಮಣಕ್ಕೆ ಮಾತ್ರ 21.7 ಬಿಲಿಯನ್ ಡಾಲರ್ ಮಿಲಿಟರಿ ನೆರವನ್ನು ಅಮೆರಿಕ ಇಸ್ರೇಲ್‌ಗೆ ನೀಡಿದೆ ಎನ್ನುತ್ತವೆ ವರದಿಗಳು. ಇದಲ್ಲದೆ, ಇದೇ ಅವಧಿಯಲ್ಲಿ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಇಸ್ರೇಲ್ ನಡೆಸಿದ ಇತರ ಆಕ್ರಮಣಗಳಿಗೆ ( ಇರಾನ್, ಲೆಬನಾನ್, ಸಿರಿಯಾ, ಯೆಮನ್ ಮೇಲಿನ ದಾಳಿ) ಸುಮಾರು 9.65 ರಿಂದ 12.07 ಬಿಲಿಯನ್ ಡಾಲರ್ ಮೊತ್ತದ ಮಿಲಿಟರಿ ಸಹಾಯವನ್ನು ಅಮೆರಿಕ ನೀಡಿದೆ.
ಐತಿಹಾಸಿಕವಾಗಿ ನೋಡಿದರೂ, ಅಮೆರಿಕ ಇಸ್ರೇಲ್ ಅನ್ನು ಬೆಂಬಲಿಸುತ್ತಲೇ ಬಂದಿದೆ. ಅಮೆರಿಕದ ಈ ಬೆಂಬಲವೇ, ಏಕಾಂಗಿಯಾಗಿರುವ ಯಹೂದಿ ರಾಷ್ಟ್ರ ಇಸ್ರೇಲ್, ಸುತ್ತಮುತ್ತಲಿನ ಇಸ್ಲಾಮಿಕ್ ರಾಷ್ಟ್ರಗಳ ಮೇಲೆ ದಬ್ಬಾಳಿಕೆ ನಡೆಸಿಕೊಂಡು ಬರಲು ಕಾರಣವಾಗಿದೆ. ಇಸ್ರೇಲ್ ಸ್ಥಾಪನೆಯಾದಗಿನಿಂದ ಈಗಿನವರೆಗೆ 174 ಬಿಲಿಯನ್ ಡಾಲರ್‌ಗಿಂತ ಹೆಚ್ಚು ದ್ವಿಪಕ್ಷೀಯ ಸಹಾಯವನ್ನು ಅಮೆರಿಕ ಇಸ್ರೇಲ್‌ಗೆ ಒದಗಿಸಿದೆ.
2023ರಲ್ಲಿ ಇಸ್ರೇಲ್ ಗಾಝಾ ಮೇಲೆ ಆಕ್ರಮಣ ಪ್ರಾರಂಭಿಸಿದಾಗ ಅಮೆರಿಕದಲ್ಲಿ ಜೋ ಬೈಡನ್ ಸರ್ಕಾರ ಇತ್ತು. ಪ್ರಸ್ತುತ ಟ್ರಂಪ್ ಸರ್ಕಾರ ಇದೆ. ಈ ಎರಡೂ ಸರ್ಕಾರಗಳು ಕೂಡ ಇಸ್ರೇಲ್‌ಗೆ ದೊಡ್ಡ ಮಟ್ಟದ ಮಿಲಿಟರಿ ನೆರವನ್ನು ನೀಡಿದೆ. ಇದರ ಮೂಲಕ ಇಸ್ರೇಲ್ ಗಾಝಾ ಮಾತ್ರವಲ್ಲದೆ, ಲೆಬನಾನ್, ಸಿರಿಯಾ, ಇರಾನ್ ಮೇಲೂ ದಾಳಿ ಮಾಡಿದೆ.
ಆರ್ಥಿಕ ಬೆಂಬಲ
ಅಮೆರಿಕ ಇಸ್ರೇಲ್‌ಗೆ 2019–2028 ಆರ್ಥಿಕ ವರ್ಷಗಳನ್ನು ಒಳಗೊಂಡ 10 ವರ್ಷಗಳ ಮೆಮೊರಾಂಡಮ್ ಆಫ್ ಅಂಡರ್‌ಸ್ಟ್ಯಾಂಡಿಂಗ್ (ಎಂಒಯು) ಅಡಿಯಲ್ಲಿ ಪ್ರತಿ ವರ್ಷ 3.8 ಬಿಲಿಯನ್ ಡಾಲರ್ ಆರ್ಥಿಕ ಸಹಾಯವನ್ನು ನೀಡುತ್ತಿದೆ.
ಅಮೆರಿಕದಿಂದ ಮಿಟಲಿರಿ ಸಾಮಗ್ರಿಯನ್ನು ಖರೀದಿಸಲು ಫಾರಿನ್ ಮಿಲಿಟರಿ ಫೈನಾನ್ಸಿಂಗ್ (ಎಫ್‌ಎಂಎಫ್) ಅಡಿ 3.3 ಬಿಲಿಯನ್ ಡಾಲರ್ ಸಹಾಯ, ಐರನ್ ಡೋಮ್, ಡೇವಿಡ್‌ಸ್ ಸ್ಲಿಂಗ್ ಮತ್ತು ಆರೋ ಸಿಸ್ಟಮ್‌ಗಳಂತಹ ಇಸ್ರೇಲ್‌ನ ಸಹಜ ಮಿಸೈಲ್ ರಕ್ಷಣೆ ಕಾರ್ಯಕ್ರಮಗಳಿಗೆ 500 ಮಿಲಿಯನ್ ಡಾಲರ್ ಸಹಾಯ ಇದರಲ್ಲಿ ಸೇರಿವೆ.
ಇದಲ್ಲದೆ, ಅಕ್ಟೋಬರ್ 2023ರಿಂದ, ಪೂರಕ ಶಾಸನದ ಮೂಲಕ ಕನಿಷ್ಠ 16.3 ಬಿಲಿಯನ್ ಡಾಲರ್ ನೇರ ಮಿಲಿಟರಿ ನೆರವನ್ನು ಅಮೆರಿಕ ನೀಡಿದೆ. ಇದರಲ್ಲಿ ಏಪ್ರಿಲ್ 2024ರ ವಿನಿಯೋಗ ಕಾಯ್ದೆ ಮೂಲಕ ನೀಡಿದ 8.7 ಬಿಲಿಯನ್ ಡಾಲರ್ ಮತ್ತು 2024 ಮತ್ತು 2025ರಲ್ಲಿ ಎಂಯುಗೆ ಅನುಗುಣವಾಗಿ ನೀಡಿದ ಹೆಚ್ಚಿನ ಆರ್ಥಿಕ ಸಹಾಯ ಸೇರಿವೆ.
ಅಮೆರಿಕದ ಮಿಲಿಟರಿ ಸಾಮಗ್ರಿಗಳ ಖರೀದಿಗೆ ಮಾತ್ರ ಸೀಮಿತವಾಗಿರುವ ಎಫ್‌ಎಂಎಫ್ ನಿಧಿಯನ್ನು ಇತರ ವಿಷಯಗಳಿಗೆ ಬಳಸುವ ಅವಕಾಶ ವಿಶೇಷವಾಗಿ ಇಸ್ರೇಲ್‌ಗೆ ನೀಡಲಾಗಿದೆ. ಅಲ್ಲದೆ, ಇಸ್ರೇಲ್‌ನಲ್ಲಿರುವ ಅಮೆರಿಕದ ಯುದ್ಧ ಮೀಸಲು ದಾಸ್ತಾನುಗಳಿಂದ ಬೇಕಾದ ಸಹಾಯ ಪಡೆಯುವ ವಿಶಿಷ್ಟ ಅವಕಾಶವನ್ನು ಇಸ್ರೇಲ್‌ಗೆ ಅಮೆರಿಕ ಒದಗಿಸಿದೆ.
ಅಮೆರಿಕ ನೀಡಿದ ಈ ಆರ್ಥಿಕ ಬೆಂಬದಿಂದಲೇ ಇಸ್ರೇಲ್ ಗಾಝಾ ಮೇಲೆ ಎರಡು ವರ್ಷಗಳ ಕಾಲ ನಿರಂತರ ಆಕ್ರಮಣ ನಡೆಸಿ, ಸುಮಾರು 70 ಸಾವಿರ ಜನರನ್ನು ಹತ್ಯೆ ಮಾಡಿದೆ ಮತ್ತು ಇಡೀ ಗಾಝಾ ಪಟ್ಟಿಯನ್ನು ಹಾಳುಗೆಡವಿದೆ. ಸುಮಾರು 1.5 ಲಕ್ಷ ಜನರು ಗಾಯಗೊಂಡು ತಮ್ಮ ಜೀವನವನ್ನು ಕಳೆದುಕೊಂಡಿದ್ದಾರೆ. ಸಾವಿರಾರು ಜನರು ಅನಾಥರಾಗಿದ್ದಾರೆ ಎಂದು ವರದಿಗಳು ಹೇಳುತ್ತವೆ.
ಮಿಲಿಟರಿ ಬೆಂಬಲ
ಅಮೆರಿಕ ಇಸ್ರೇಲ್‌ಗೆ ನೀಡಿದ ಮಿಲಿಟರಿ ಬೆಂಬಲದಲ್ಲಿ ನೇರ ಆಯುಧ ವರ್ಗಾವಣೆ, ಮಾರಾಟ ಮತ್ತು ಲಾಜಿಸ್ಟಿಕ್ ಸಹಾಯ ಒಳಗೊಂಡಿದೆ.
ಅಕ್ಟೋಬರ್ 2023ರಿಂದ ಅಮೆರಿಕ 4.2 ಬಿಲಿಯನ್ ಡಾಲರ್ ಮೊತ್ತದ ಆಯುಧಗಳನ್ನು ನೇರವಾಗಿ ಇಸ್ರೇಲ್‌ಗೆ ಸರಬರಾಜು ಮಾಡಿದೆ. ಇದರಲ್ಲಿ 2.3 ಬಿಲಿಯನ್ ಡಾಲರ್ ಮೊತ್ತದ ಬಾಂಬ್‌ಗಳು, ಮಿಸೈಲ್‌ಗಳು ಮತ್ತು ಮೈನ್‌ಗಳು ಹಾಗೂ 416 ಮಿಲಿಯನ್ ಫೈರ್‌ಆರ್ಮ್‌ಗಳು ಸೇರಿವೆ.
2023ರಿಂದ 800 ವಿಮಾನಗಳು ಮತ್ತು 140 ನೌಕೆಗಳ ಮೂಲಕ 90 ಸಾವಿರ ಟನ್ ಯುದ್ದ ಸಾಮಗ್ರಿಯನ್ನು ಇಸ್ರೇಲ್‌ಗೆ ಸಾಗಿಸಲಾಗಿದೆ. ಗೈಡೆಡ್ ಮ್ಯುನಿಷನ್‌ಗಳು, ಟ್ಯಾಂಕ್, ಆರ್ಟಿಲರಿ ರಾಕೆಟ್‌ಗಳು, ಸಣ್ಣ ಆಯುಧಗಳು ಮತ್ತು ವಿಮಾನದ ಬಿಡಿ ಭಾಗಗಳು ಈ ಯುದ್ದ ಸಾಮಾಗ್ರಿಗಳಲ್ಲಿ ಒಳಗೊಂಡಿವೆ.
ಇನ್ನು ಇಸ್ರೇಲ್ ವಾಯು ಸೇನೆಯು ಸಂಪೂರ್ಣವಾಗಿ ಅಮೆರಿಕ ಒದಗಿಸಿದ ಸಾಮಾಗ್ರಿಗಳಿಂದ ಕೂಡಿದೆ. 75 ಎಫ್15, 196 ಎಫ್16 ಮತ್ತು 39 ಎಫ್ 35 ಯುದ್ದ ವಿಮಾನಗಳು ಹಾಗೂ 46 ಅಪಾಚಿ ಹೆಲಿಕಾಫ್ಟರ್‌ಗಳನ್ನು ಅಮೆರಿಕ ಇಸ್ರೇಲ್‌ಗೆ ನೀಡಿದೆ.
ಏಪ್ರಿಲ್ 2025ರ ವೇಳೆಗೆ ಎಫ್-35 ವಿಮಾನಗಳು, ಸಿಹೆಚ್-53ಕೆ ಹೆಲಿಕಾಪ್ಟರ್‌ಗಳು, ಕೆಸಿ-46ಎ ಟ್ಯಾಂಕರ್‌ಗಳು ಮತ್ತು ಗೈಡೆಡ್ ಬಾಂಬ್‌ಗಳಂತಹ ವಸ್ತುಗಳನ್ನು ಒಳಗೊಂಡ 39.2 ಬಿಲಿಯನ್ ಡಾಲರ್ ಮೌಲ್ಯದ 751 ವಹಿವಾಟು ಅಮೆರಿಕ-ಇಸ್ರೇಲ್ ನಡುವೆ ನಡೆದಿದೆ.
ಟ್ರಂಪ್ ಆಡಳಿತದಲ್ಲಿ ಜನವರಿ 2025ರಿಂದ ಭವಿಷ್ಯದ ಮಿಲಿಟರಿ ಖರೀದಿಗಾಗಿ 10.1 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಈ ಖರೀದಿಯಲ್ಲಿ 35 529 ಎಂಕೆ 84 ಅಥವಾ ಬಿಎಲ್‌ಯು-117 ಬಾಂಬ್‌ಗಳು (2,000 ಪೌಂಡ್ ಭಾರದ ಭಾರೀ ಬಾಂಬ್‌ಗಳು) ಜೆಇಎಂಎಂ ಗೈಡೆನ್ಸ್ ಕಿಟ್‌ಗಳು (ನಿಖರ ದಾಳಿಗಳಿಗೆ ಸಾಮಾನ್ಯ ಬಾಂಬ್‌ಗಳನ್ನು ಪ್ರಿಸಿಷನ್-ಗೈಡೆಡ್ (ಜಿಪಿಎಸ್ ಗೈಡೆಡ್) ಮಾಡುವ ಕಿಟ್‌ಗಳು) ಹೆಲ್‌ಫೈರ್ ಮಿಸೈಲ್‌ಗಳು (ಎಜಿಎಂ-114 ಎಂದು ಕರೆಯಲ್ಪಡುವ ಡ್ರೋನ್ ಅಥವಾ ಹೆಲಿಕಾಪ್ಟರ್‌ಗಳಿಂದ ಬಳಸುವಂತಹ ಸಣ್ಣ ರೆಂಜ್ ಮಿಸೈಲ್‌ಗಳು) ಮತ್ತು ಕ್ಯಾಟರ್‌ಫಿಲ್ಲರ್ ಬುಲ್ಡೋಜರ್‌ಗಳು ಸೇರಿವೆ.
ಅಮೆರಿಕ ಇಸ್ರೇಲ್‌ಗೆ 1992ರಿಂದ 6.6 ಬಿಲಿಯನ್ ಡಾಲರ್ ಮೌಲ್ಯದ ಹೆಚ್ಚುವರಿ ರಕ್ಷಣಾ ಸಾಮಾಗ್ರಿಗಳ ಸಹಾಯ ಮಾಡಿದೆ. ಸ್ಪೇರ್ ಪಾರ್ಟ್‌ಗಳು ಮತ್ತು ಸಿಮ್ಯುಲೇಟರ್‌ಗಳನ್ನು ಇದರಲ್ಲಿ ಒಳಗೊಂಡಿವೆ. ಅಮೆರಿಕದ ಈ ಬೆಂಬಲವು ಇಸ್ರೇಲ್‌ನ ರಕ್ಷಣಾ ವ್ಯವಸ್ಥೆಯ ಸಹಜ ಅಭಿವೃದ್ಧಿಗೆ ಸಹಾಯ ಮಾಡಿದೆ. ಇದರ ಮೂಲಕ ಹಮಾಸ್, ಹಿಝ್ಬುಲ್ಲಾ ಮತ್ತು ಇರಾನ್‌ನಿಂದ ಬಂದ ಬೆದರಿಕೆಗಳನ್ನು ಇಸ್ರೇಲ್ ಎದುರಿಸಿದೆ.
ರಾಜತಾಂತ್ರಿಕ ಬೆಂಬಲ
ಅಮೆರಿಕ ಹಿಂದಿನಿಂದಲೂ ಇಸ್ರೇಲ್‌ಗೆ ಬಲವಾದ ರಾಜತಾಂತ್ರಿಕ ಬೆಂಬಲವನ್ನು ನೀಡುತ್ತಾ ಬಂದಿದ್ದು, ಅಂತಾರಾಷ್ಟ್ರೀಯ ಒತ್ತಡದಿಂದ ಇಸ್ರೇಲ್ ಅನ್ನು ರಕ್ಷಿಸುತ್ತಿದೆ. ಇದರಲ್ಲಿ 2023ರಿಂದ 2025ರ ನಡುವೆ ಕನಿಷ್ಠ ಆರು ಬಾರಿ ವಿಶ್ವಸಂಸ್ಥೆ ಷರತ್ತು ರಹಿತ ಗಾಝಾ ಕದನ ವಿರಾಮಕ್ಕೆ ನಿರ್ಣಯ ಅಂಗೀಕರಿಸಿದಾಗ ಅಮೆರಿಕ ವೀಟೋ ಬಳಸಿದ್ದು ಸೇರಿವೆ. ಗಾಝಾ ಆಕ್ರಮಣಕ್ಕೆ ಸಂಬಂಧಿಸಿದಂತೆ ಕೊನೆಯಾಗಿ 2025ರ ಸೆಪ್ಟೆಂಬರ್‌ನಲ್ಲಿ ವಿಶ್ವಸಂಸ್ಥೆ ನಿರ್ಣಯ ಅಂಗೀಕರಿಸಿದಾಗಲೂ ಅಮೆರಿಕ ವೀಟೋ ಪವರ್ ಬಳಸಿ ಇಸ್ರೇಲ್ ಬೆಂಬಲಕ್ಕೆ ನಿಂತಿತ್ತು.
ಗಾಝಾ ಆಕ್ರಮಣದ ಸಂದರ್ಭದಲ್ಲಿ ಪ್ರತಿ ಬಾರಿಯೂ ವೀಟೋ ಬಳಸಿ ಇಸ್ರೇಲ್ ವಿರುದ್ದದ ನಿರ್ಣಯಕ್ಕೆ ತಡೆಯೊಡ್ಡುವಾಗಲೂ, ಈ ನಿರ್ಣಯ ಹಮಾಸ್ ಅನ್ನು ಖಂಡಿಸಿಲ್ಲ ಎಂಬ ಸಮಜಾಯಿಸಿಯನ್ನು ಅಮೆರಿಕ ನೀಡುತ್ತಾ ಬಂದಿದೆ. ಆದರೆ, ಇಸ್ರೇಲ್ ಗಾಝಾದಲ್ಲಿ ನಡೆಸುತ್ತಿದ್ದ ನರಮೇಧದ ಬಗ್ಗೆ ಇದುವರೆಗೆ ಸೊಲ್ಲೆತ್ತಿಲ್ಲ.
ಐತಿಹಾಸಿಕವಾಗಿ ನೋಡುವುದಾದರೆ, ಅಮೆರಿಕ 1972ರಿಂದ ಇಸ್ರೇಲ್‌ಗೆ ವಿರುದ್ಧವಾದ 34ಕ್ಕಿಂತ ಹೆಚ್ಚು ವಿಶ್ವಸಂಸ್ಥೆಯ ನಿರ್ಣಯಗಳನ್ನು ವೀಟೋ ಪ್ರಯೋಗಿಸಿ ತಡೆದಿದೆ. ಈ ಮೂಲಕ ಇಸ್ರೇಲ್‌ನ ಎಲ್ಲಾ ಅಕ್ರಮಗಳಿಗೆ ಬೆಂಬಲವಾಗಿ ನಿಂತಿದೆ.
ಅಧ್ಯಕ್ಷರಾದ ಬೈಡನ್ ಮತ್ತು ಟ್ರಂಪ್ ಅಮೆರಿಕ ನಾಯಕ ಮಾತಿನ ಬೆಂಬಲವೂ ಗಾಝಾ ನರಮೇಧದ ವೇಳೆ ಇಸ್ರೇಲ್‌ಗೆ ದೊರೆತಿತ್ತು. ಇಸ್ರೇಲ್‌ನೊಂದಿಗಿನ ಒಡಬಂಡಿಕೆಗಳು ಅಮೆರಿಕದ ವಿದೇಶಾಂಗ ನೀತಿಯ ‘ಕೋನ್ ಸ್ಟೋನ್’ ಎಂದು ಹೇಳಲಾಗಿದೆ. ಅಂದರೆ, ಅಮೆರಿಕ-ಇಸ್ರೇಲ್ ಒಡಂಬಡಿಕೆಗಳನ್ನು ಅಮೆರಿಕದ ಮಧ್ಯಪ್ರಾಚ್ಯ ನೀತಿಯ ಪ್ರಮುಖ ಅಂಶ ಎಂದು ಪರಿಗಣಿಸಲಾಗಿದೆ. ಅಮೆರಿಕ ಬೆಂಬಲದ ಮೂಲಕವೇ, ಗಾಝಾದ ಯುದ್ದದ ನಡುವೆಯೂ ಲೆಬನಾನ್‌ನಿಂದ ಹಿಝ್ಬುಲ್ಲಾ, ಯೆಮನ್‌ನಿಂದ ಹೂತಿ ಮತ್ತು ಇರಾನ್‌ನ ಮಿಸೈಲ್‌ಗಳ ವಿರುದ್ದ ಇಸ್ರೇಲ್ ಕಾದಾಟ ನಡೆಸಿದೆ. ಹೆಚ್ಚಿನ ಹಾನಿಯಿಲ್ಲದೆ ತನ್ನನ್ನು ತಾನು ರಕ್ಷಿಸಿಕೊಂಡಿದೆ.
ಗುಪ್ತಚರ ಬೆಂಬಲ
ಮಿಲಿಟರಿ ಮತ್ತು ರಾಜತಾಂತ್ರಿಕ ಸಹಾಯ ಮಾತ್ರವಲ್ಲದೆ ಗಾಝಾ ಮೇಲಿನ ಆಕ್ರಮಣದಲ್ಲಿ ಅಮೆರಿಕ ಇಸ್ರೇಲ್‌ಗೆ ಗುಪ್ತಚರ ಸಹಾಯವನ್ನೂ ಒದಗಿಸಿದೆ. ಡ್ರೋನ್ ವಿಡಿಯೋಗಳು, ಸ್ಯಾಟೆಲೈಟ್ ಫೋಟೋಗಳು, ವಿಶ್ಲೇಷಣೆ ವರದಿಗಳ ಮೂಲಕ ಹಮಾಸ್ ಮೇಲೆ ಅಮೆರಿಕ ನಿಗಾ ಇಟ್ಟಿತ್ತು ಅಥವಾ ಕ್ಷಣಕ್ಷಣದ ಮಾಹಿತಿಯನ್ನು ಇಸ್ರೇಲ್‌ಗೆ ಒದಗಿಸುತ್ತಿತ್ತು. ಇದರಿಂದ ಇಸ್ರೇಲ್ ಗಾಝಾ ಮೇಲೆ ಬಾಂಬ್ ದಾಳಿ ಮಾಡುತ್ತಿತ್ತು. “ನಾವು ಹಮಾಸ್ ಗುರಿಯಾಗಿಸಿ ದಾಳಿ ಮಾಡಿದ್ದೇವೆ” ಎಂದು ಇಸ್ರೇಲ್ ಹೇಳಿಕೊಂಡರೂ, ಪ್ರತಿ ಬಾರಿ ದಾಳಿ ಮಾಡಿದಾಗಲೂ ಅಮಾಯಕ ನಾಗರಿಕರು ಸಾಯುತ್ತಿದ್ದರು.
ವರದಿಗಳ ಪ್ರಕಾರ, ಅಕ್ಟೋಬರ್ 7ರಂದು ಹಮಾಸ್ ಟೆಲ್ ಅವೀವ್ ಮೇಲೆ ಮಾಡಿದ್ದ ದಾಳಿಯ ಮುನ್ಸೂಚಣೆಯನ್ನೂ ಅಮೆರಿಕ ಇಸ್ರೇಲ್ ನೀಡಿತ್ತು ಎನ್ನಲಾಗಿದೆ. ಹಮಾಸ್‌ನ ಗುಪ್ತ ಯೋಜನೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಇಸ್ರೇಲ್‌ಗೆ ಒದಗಿಸುತ್ತಿದ್ದ ಅಮೆರಿಕದ ಸಂಸ್ಥೆಗಳು, ರಣತಂತ್ರ ಹೆಣೆಯಲು ಸಹಾಯ ಮಾಡುತ್ತಿತ್ತು.
ಇತರ ರೀತಿಯ ಬೆಂಬಲ
ನೇರ ನೆರವಿನ ಹೊರತಾಗಿ, ಪರಸ್ಪರ ಕಾರ್ಯಸಾಧ್ಯತೆಯನ್ನು ಹೆಚ್ಚಿಸಲು ಅಮೆರಿಕವು ಜುನಿಪರ್ ಓಕ್ ಮತ್ತು ಜುನಿಪರ್ ಫಾಲ್ಕನ್‌ನಂತಹ ಜಂಟಿ ಮಿಲಿಟರಿ ವ್ಯಾಯಾಮಗಳಲ್ಲಿ ಇಸ್ರೇಲ್ ಜೊತೆ ತೊಡಗಿಸಿಕೊಂಡಿದೆ. ಅಮೆರಿಕ ಮತ್ತು ಇಸ್ರೇಲ್‌ನ ದ್ವಿಪಕ್ಷೀಯ ಒಪ್ಪಂದಗಳು ಲಾಜಿಸ್ಟಿಕ್ಸ್, ಮಾಹಿತಿ ಹಂಚಿಕೆ ಮತ್ತು ರಕ್ಷಣಾ ವ್ಯಾಪಾರವನ್ನು ಸುಗಮಗೊಳಿಸಿವೆ. ಇಸ್ರೇಲ್‌ಗೆ ಸಹಾಯ ಮಾಡುವ ಸಲುವಾಗಿ ನ್ಯಾಟೋ ಅಲ್ಲದ ಪ್ರಮುಖ ಮಿತ್ರ ರಾಷ್ಟ್ರವಾಗಿ ಅಮೆರಿಕ ಇಸ್ರೇಲ್ ಅನ್ನು ಪರಿಗಣಿಸಿದೆ.
ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ನಾಶದಂತಹ ಯೋಜನೆಗಳಲ್ಲಿ ಅಮೆರಿಕ ಹೂಡಿಕೆ ಮಾಡುತ್ತಿದೆ. 2011 ರಿಂದ 8 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ ವರದಿಯಿದೆ. ಇದಲ್ಲದೆ, ಅಮೆರಿಕ ಇಸ್ರೇಲ್‌ನಲ್ಲಿ ಕಾರ್ಯತಂತ್ರದ ದಾಸ್ತಾನು ನಿರ್ವಹಿಸುತ್ತಿದೆ.
ಹೆಚ್ಚುವರಿಯಾಗಿ, ಯೆಮೆನ್‌ನಿಂದ ಬರುವ ಬೆದರಿಕೆಗಳನ್ನು ತಡೆಯುವಂತಹ ಈ ಪ್ರದೇಶದಲ್ಲಿನ ಅಮೆರಿಕದ ಮಿಲಿಟರಿ ಕಾರ್ಯಾಚರಣೆಗಳು, ಶತಕೋಟಿ ಹೆಚ್ಚುವರಿ ವೆಚ್ಚದಲ್ಲಿ ಇಸ್ರೇಲ್‌ಗೆ ಪರೋಕ್ಷವಾಗಿ ಬೆಂಬಲ ನೀಡಿವೆ. ಈ ಎಲ್ಲಾ ಬೆಂಬಲಗಳ ಮೂಲಕ ಇಸ್ರೇಲ್ ಸತತ ಎರಡು ವರ್ಷಗಳ ಕಾಲ ಗಾಝಾ ಆಕ್ರಮಣ ನಡೆಸಿದೆ. ಅಮಾಯಕರ ರಕ್ತ ಹರಿಸಿದೆ.
ಇವೆಲ್ಲವೂ ವಿವಿಧ ಮೂಲಗಳಿಂದ ನಮಗೆ ಲಭ್ಯವಾದ ಮಾಹಿತಿಯಾಗಿದೆ. ಇವಿಷ್ಟೇ ಅಲ್ಲದೆ, ಇನ್ನೂ ಹಲವು ರೀತಿಯಲ್ಲಿ ಗಾಝಾ ಮೇಲಿನ ಆಕ್ರಮಣಕ್ಕೆ ಅಮೆರಿಕ ಇಸ್ರೇಲ್‌ಗೆ ಬೆಂಬಲವಾಗಿ ನಿಂತಿತ್ತು.
“ಕದನ ವಿರಾಮಕ್ಕೆ ಒಪ್ಪಿಕೊಳ್ಳಿ, ಇಲ್ಲ ಪರಿಣಾಮ ಎದುರಿಸಿ” ಎಂದು ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಹಮಾಸ್‌ಗೆ ಬೆದರಿಕೆ ಹಾಕಿದ್ದರು. ಎರಡು ವರ್ಷಗಳ ಕಾಲ ಇಸ್ರೇಲ್‌ಗೆ ಆಯುಧ ಕೊಟ್ಟು ಕಂದಮ್ಮಗಳ ರಕ್ತ ಹರಿಸಿದ ಟ್ರಂಪ್, ಬೆದರಿಕೆ ಹಾಕಿ ಕದನ ವಿರಾಮಕ್ಕೆ ಒತ್ತಾಯಿಸಿದ್ದು ವಿಪರ್ಯಾಸವಲ್ಲದೆ ಇನ್ನೇನು?
ಭಾರತ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿದೆ ಎಂಬ ಕಾರಣಕ್ಕೆ ಟ್ರಂಪ್ ಹೆಚ್ಚುವರಿ ತೆರಿಗೆ ವಿಧಿಸಿದ್ದರು. ರಷ್ಯಾ ಉಕ್ರೇನ್ ಮೇಲೆ ಬಾಂಬ್ ದಾಳಿ ಮಾಡುತ್ತಿದೆ. ಅಂತಹ ರಷ್ಯಾದಿಂದ ತೈಲ ಖರೀದಿಸುವ ಮೂಲಕ, ಉಕ್ರೇನ್ ಮೇಲಿನ ದಾಳಿಗೆ ಭಾರತ ಬೆಂಬಲ ನೀಡುತ್ತಿದೆ ಎಂದು ಟ್ರಂಪ್ ಹೇಳಿಕೊಂಡಿದ್ದರು. ಹಾಗಾದರೆ, ಎರಡು ವರ್ಷಗಳ ಕಾಲ ಗಾಝಾದ ಮಕ್ಕಳನ್ನು ಕೊಲ್ಲಲು ಇಸ್ರೇಲ್‌ಗೆ ನಿರಂತರ ಬಾಂಬ್ ಸರಬರಾಜು ಮಾಡಿ ಟ್ರಂಪ್ ಮಾಡಿದ್ದು ಪುಣ್ಯದ ಕೆಲಸವೇ?
ಗಾಝಾದಲ್ಲಿ ಆಕ್ರಮಣ ನಿಲ್ಲಿಸಬೇಕು ಎಂದು ಮಾನವ ಹಕ್ಕು ಸಂಘಟನೆಗಳು ಆಗ್ರಹಿಸಿದಾಗ, ಮಾನವೀಯತೆ ಇರುವ ವಿಶ್ವದ ನಾಯಕರು ನಿರ್ಣಯ ಅಂಗೀಕರಿಸಿದಾಗ, ಪ್ಯಾಲೆಸ್ತೀನ್‌ಗೆ ಪ್ರತ್ಯೇಕ ರಾಷ್ಟ್ರದ ಸ್ಥಾನಮಾನ ನೀಡಿದಾಗ, ಅದಕ್ಕೆ ಅಡ್ಡಗಾಲು ಹಾಕಿದ ಟ್ರಂಪ್ ಅಥವಾ ಅಮೆರಿಕ ಕೊನೆಗೆ ಗಾಝಾ ಯುದ್ದ ನಿಲ್ಲಿಸಿದ ಶಾಂತಿಯ ರಾಯಭಾರಿಯಾಗಿ ಹೊರ ಹೊಮ್ಮಿರುವುದು ನಾಚಿಕೆಗೇಡು ಅಲ್ಲದೆ ಮತ್ತೇನು?
ಗಾಝಾ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ ಟ್ರಂಪ್ : ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿಯ ಭರವಸೆ