ಗಾಜಾ ಸಂಘರ್ಷ ಕೊನೆಗೊಳ್ಳುವವರೆಗೆ ಕಣ್ಣೂರಿನ ಉಡುಪು ತಯಾರಿಕಾ ಉದ್ಯಮ ‘ಮರ್ಯಾನ್ ಅಪರೆಲ್’, ಇಸ್ರೇಲ್ ಮತ್ತು ಹೊಸ ಗುತ್ತಿಗೆ ಪಡೆಯದಿರಲು ನಿರ್ಧರಿಸಿದೆ.
ಇಸ್ರೇಲ್ ಪೊಲೀಸರಿಗೆ 2015ರಿಂದ ಸಮವಸ್ತ್ರ ಪೂರೈಕೆ ಮಾಡುತ್ತಿರುವ ಈ ಉದ್ಯಮವು ನೈತಿಕ ನೆಲೆಯಲ್ಲಿ ಈ ತೀರ್ಮಾನ ಕೈಗೊಂಡಿದೆ.
ಈ ಬಗ್ಗೆ ‘ಮರ್ಯಾನ್ ಅಪರೆಲ್’ ವ್ಯವಸ್ಥಾಪಕ ನಿರ್ದೇಶಕ ಥಾಮಸ್ ಒಲಿಕಲ್ ಅವರು ಹೇಳಿಕೆ ಬಿಡುಗಡೆ ಮಾಡಿದ್ದು, ”ಶಾಂತಿ ಮರುಸ್ಥಾಪನೆಗೊಳ್ಳುವವರೆಗೆ ಇಸ್ರೇಲ್ ಪೊಲೀಸರಿಗೆ ಸಮವಸ್ತ್ರ ಪೂರೈಸುವ ಹೊಸ ಒಪ್ಪಂದ ಮಾಡಿಕೊಳ್ಳದಿರಲು ನಿರ್ಧರಿಸಿದ್ದೇವೆ. ಗಾಜಾ ಪಟ್ಟಿ ಆಸ್ಪತ್ರೆ ಮೇಲಿನ ಬಾಂಬ್ ದಾಳಿ
ಮತ್ತು ಸಾವಿರಾರು ಅಮಾಯಕರು ಸಾವಿಗೀಡಾದ ಇತ್ತೀಚಿನ ಪ್ರಕರಣಗಳನ್ನು ಗಮನದಲ್ಲಿರಿಸಿ
ನೈತಿಕ ನೆಲೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದೇವೆ” ಎಂದು ಹೇಳಿದ್ದಾರೆ.
ಉದ್ಯಮವು ಇಸ್ರೇಲ್ ಪೋಲೀಸರಿಗೆ ಸಮವಸ್ತ್ರ ಪೂರೈಸಲು ಈ ಹಿಂದೆ ಮಾಡಿಕೊಂಡಿದ್ದ ಎಲ್ಲ
ಒಪ್ಪಂದಗಳನ್ನೂ ಪೂರ್ಣಗೊಳಿಸಿದ್ದೇವೆ. ಶೀಘ್ರದಲ್ಲೇ ಶಾಂತಿ ಮರುಸ್ಥಾಪನೆಯಾಗುವ ಭರವಸೆ ಇದೆ ಎಂದು ಒಲಿಕಲ್ ತಿಳಿಸಿದ್ದಾರೆ.
‘ಮರ್ಯಾನ್ ಅಪರೆಲ್’ ನಿಲುವಿಗೆ ಅಂತರರಾಷ್ಟ್ರೀಯ ಮನ್ನಣೆ ಸಿಗಲಿದೆ ಎಂದು ಕೇರಳ ಕೈಗಾರಿಕಾ ಸಚಿವ ಹಾಗೂ ಸಿಪಿಐ (ಎಂ) ಹಿರಿಯ ನಾಯಕ ಪಿ.ರಾಜೀವ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಇಸ್ರೇಲ್ ಪೊಲೀಸರಿಗೆ ಹಲವು ವರ್ಷಗಳಿಂದ ವಾರ್ಷಿಕ ಸುಮಾರು ಒಂದು ಲಕ್ಷಕ್ಕೂ ಅಧಿಕ ಸಮವಸ್ತ್ರಗಳನ್ನು ಪೂರೈಸುತ್ತಿರುವ ಈ ಉದ್ಯಮ, ಈ ವರ್ಷವೂ ಆದೇಶಗಳನ್ನು ಪಡೆದುಕೊಂಡಿತ್ತು. ಮುಂಬೈ ಪ್ರಧಾನ ಕಛೇರಿಯನ್ನು ಹೊಂದಿರುವ ಈ ಉದ್ಯಮವು, ಕಣ್ಣೂರಿನ ಕೂತುಪರಂಬದಲ್ಲಿ ಕಾರ್ಖಾನೆಯನ್ನು ಹೊಂದಿದೆ. ಸಂಸ್ಥೆಯು ವಿವಿಧ ದೇಶಗಳ ವಿವಿಧ ಏಜೆನ್ಸಿಗಳಿಗೂ ಸಮವಸ್ತ್ರ ಪೂರೈಸುತ್ತಿದೆ.
ಇದನ್ನೂ ಓದಿ: ಇಸ್ರೇಲ್-ಹಮಾಸ್ ಯುದ್ಧ: ಗಾಜಾ ಆಸ್ಪತ್ರೆಯ ಪ್ರತಿಭಟನೆಯಲ್ಲಿ 100-300 ಜನ ಸಾವು


