ಹೈದರಾಬಾದ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಎದುರು ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಸೇನಾ ಕಾರ್ಯಾಚರಣೆಗಳಿಗೆ ಅಮೆರಿಕವು ಬೆಂಬಲ ನೀಡುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಹೈದರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ವಿದ್ಯಾರ್ಥಿಗಳನ್ನು ನರ್ಸಿಂಗಿ ಮತ್ತು ಗಚಿಬೌಲಿ ಪೊಲೀಸ್ ಠಾಣೆಗಳಿಗೆ ಕರೆದೊಯ್ಯಲಾಗಿದೆ. ನಿನ್ನೆ (ಜೂ.19) ರಾಯಭಾರ ಕಚೇರಿ ಹೊರಗೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಸೇರಿ, ಸಾಮ್ರಾಜ್ಯಶಾಹಿ ವಿರೋಧಿ ಮತ್ತು ಝಿಯೋನಿಸ್ಟ್ ವಿರೋಧಿ ಘೋಷಣೆಗಳನ್ನು ಕೂಗಿದರು.
ಈ ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ‘ಝಿಯೋನಿಸಂಗೆ ಧಿಕ್ಕಾರ, ಅಮೆರಿಕನ್ ಸಾಮ್ರಾಜ್ಯಶಾಹಿಗೆ ಧಿಕ್ಕಾರ, ನೆತನ್ಯಾಹುನಿಂದ ಪ್ಯಾಲೇಸ್ತೀನ್ ಸ್ವತಂತ್ರವಾಗಲಿ, ಅಮೆರಿಕದಿಂದ ಪ್ಯಾಲೇಸ್ತೀನ್ ಸ್ವತಂತ್ರವಾಗಲಿ’ ಎಂಬಂತಹ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.
ಈ ಪ್ರತಿಭಟನೆಯನ್ನು ವಿವಿಧ ಎಡಪಂಥೀಯ ಪಕ್ಷಗಳು ಆಯೋಜಿಸಿದ್ದವು ಎಂದು ದಿ ಸಿಯಾ ಸತ್ ಡೈಲಿ ವರದಿ ಮಾಡಿದೆ.
ಈ ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ಸಿಪಿಐ(ಎಂಎಲ್) ಸಂಘಟನೆಯ ಸಂಧ್ಯಾ ಅವರು, “ಗಾಜಾದಲ್ಲಿ ಸಾವಿರಾರು ಜನರ ಸಾವಿಗೆ ಅಮೆರಿಕವೇ ಕಾರಣ. ಮಕ್ಕಳು, ಶಿಕ್ಷಕರು, ವೈದ್ಯರು, ಪತ್ರಕರ್ತರು ಸೇರಿದಂತೆ ಪ್ಯಾಲೆಸ್ತೀನ್‌ನ ನಿರಪರಾಧಿ ಜನರನ್ನು ಹತ್ಯಾಕಾಂಡ ನಡೆಸಲು ಇಸ್ರೇಲ್‌ಗೆ ಅಮೆರಿಕದ ಬೆಂಬಲವೇ ಕಾರಣವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಮೆರಿಕ ಬೆಂಬಲಿತ ಇಸ್ರೇಲ್ ಗಾಜಾದ ಮೇಲೆ ನಡೆಸುತ್ತಿರುವ ಈ ದಾಳಿಗಳು ಇಡೀ ವಿಶ್ವಕ್ಕೆ ಅಪಾಯಕಾರಿ. ನಾವು ಎಡಪಂಥೀಯ ಪಕ್ಷಗಳು, ಇವುಗಳನ್ನು ತಕ್ಷಣವೇ ನಿಲ್ಲಿಸುವಂತೆ ಒತ್ತಾಯಿಸುತ್ತೇವೆ ಎಂದು ಎಸ್‌ಯುಸಿಐ(ಸಿ)ನ ಭರತ್ ತಿಳಿಸಿದರು.
ಪೊಲೀಸರು ಬಂಧಿಸಿದ ನಂತರ ನಮಗೆ ಕಿರುಕುಳ ನೀಡಲಾಯಿತು; ಪೊಲೀಸರು ನಮ್ಮ ಫೋನ್‌ಗಳನ್ನು ಬಲವಂತವಾಗಿ ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ-ಲೆನಿನಿಸ್ಟ್) ನ್ಯೂ ಡೆಮಾಕ್ರಸಿ, ಸಿಪಿಐ(ಎಂಎಲ್)ಎನ್‌ಡಿ, ಸಿಪಿಐ(ಎಂಎಲ್)ಮಾಸ್‌ಲೈನ್, ಸಿಪಿಐ(ಎಂಎಲ್), ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಯುನೈಟೆಡ್), ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ (ಎಐಎಫ್‌ಬಿ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ-ಲೆನಿನಿಸ್ಟ್) ಲಿಬರೇಷನ್, ರೆವಲ್ಯೂಷನರಿ ಸೋಶಿಯಲಿಸ್ಟ್ ಪಾರ್ಟಿ (ಆರ್‌ಎಸ್‌ಪಿ) ಮತ್ತು ಸೋಶಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) (ಎಸ್‌ಯುಸಿಐ(ಸಿ)) ಸೇರಿದಂತೆ ಎಡಪಂಥೀಯ ಪಕ್ಷಗಳಿಗೆ ಸೇರಿದ ವಿದ್ಯಾರ್ಥಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇಸ್ರೇಲ್-ಇರಾನ್ ಯುದ್ಧಕ್ಕೆ ಅಮೆರಿಕ ಎಂಟ್ರಿ | 2 ವಾರಗಳಲ್ಲಿ ನಿರ್ಧರಿಸುತ್ತೇನೆ ಎಂದ ಟ್ರಂಪ್


