ಇಸ್ರೇಲಿ ಆಕ್ರಮಣದ ನಿರಂತರ ದಾಳಿಯಲ್ಲಿ ಗಾಯಗೊಳ್ಳುತ್ತಿರುವ ಪ್ಯಾಲೆಸ್ತೀನಿಯನ್ನರನ್ನು ವೈದ್ಯಕೀಯ ಸೌಲಭ್ಯಗಳ ಕೊರತೆ ಗಂಭಿರವಾಗಿ ಕಾಡುತ್ತಿದೆ. ಗಾಜಾ ಪಟ್ಟಿಯಾದ್ಯಂತದ ಆಸ್ಪತ್ರೆ ಮತ್ತು ರಕ್ತನಿಧಿಗಳು ‘ಸಂಪೂರ್ಣ ಸ್ಥಗಿತ’ದ ಅಂಚಿನಲ್ಲಿವೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಇಂದು ಹೇಳಿಕೆ ನೀಡಿದೆ.
“ರಕ್ತ ಸಂಗ್ರಹಣ ಘಟಕಗಳು , ಪ್ರಯೋಗಾಲಯ ಮತ್ತು ಸಂಗ್ರಹಣೆಗೆ ಅಗತ್ಯವಾದ ಪ್ರಯೋಗಾಲಯ ಸರಬರಾಜುಗಳ ತೀವ್ರ ದಾಳಿಯ ಪರಿಣಾಮವಾಗಿ ಆಸ್ಪತ್ರೆಗಳಲ್ಲಿನ ರಕ್ತನಿಧಿಗಳು ಸಂಪೂರ್ಣ ಸ್ಥಗಿತಗೊಳ್ಳುವ ಭೀತಿ ಎದುರಿಸುತ್ತಿವೆ” ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ರಕ್ತದ ತೀವ್ರ ಕೊರತೆಯೂ ಇದೆ ಎಂದು ಸಚಿವಾಲಯ ಹೇಳಿದೆ. ಇದು ಗಾಯಾಳುಗಳಿಗೆ ಜೀವ ಉಳಿಸುವ ಕೆಲಸ ಮಾಡುವ ಆಸ್ಪತ್ರೆಗಳ ಸಾಮರ್ಥ್ಯಕ್ಕೆ ಅಡ್ಡಿಯಾಗುತ್ತಿದೆ ಎಂದು ಎಚ್ಚರಿಸಿದೆ.
“ನಾನು ಖಾನ್ ಯೂನಿಸ್ ನಗರದ ಪಶ್ಚಿಮದಲ್ಲಿರುವ ನಾಸರ್ ಆಸ್ಪತ್ರೆಯ ಬಳಿ ವಾಸಿಸುತ್ತಿದ್ದೇನೆ. ಬಹುತೇಕ ಪ್ರತಿದಿನ, ಆಸ್ಪತ್ರೆಯಿಂದ ಧ್ವನಿವರ್ಧಕಗಳಲ್ಲಿ ರಕ್ತದಾನಕ್ಕಾಗಿ ಹತಾಶ ಕರೆಗಳನ್ನು ನಾನು ಕೇಳುತ್ತೇನೆ. ಇದು ಒಂದು ವರ್ಷಕ್ಕೂ ಹೆಚ್ಚು ಕಾಲ ಹಾಗೆ ಇದೆ” ಎಂದು ಪ್ಯಾಲೆಸ್ತೀನಿಯನ್ ಬರಹಗಾರ ಡೋನ್ಯಾ ಅಬು ಸಿಟ್ಟಾ ಅವರು ಅಲ್ ಜಜೀರಾದಲ್ಲಿ ಬರೆದಿದ್ದಾರೆ.
ಈ ವರ್ಷದ ಜೂನ್ ಆರಂಭದಲ್ಲಿ, ಪ್ರಯೋಗಾಲಯ ಮತ್ತು ರಕ್ತ ಬ್ಯಾಂಕಿನ ನಿರ್ದೇಶಕಿ ಡಾ. ಸೋಫಿಯಾ ಝಾರಾಬ್ ಮಾಧ್ಯಮಗಳಿಗೆ ತಿಳಿಸಿದ್ದು, ದಾನ ಮಾಡಿದ ರಕ್ತದ ಘಟಕಗಳ ತೀವ್ರ ಕೊರತೆಯು ‘ಗಂಭೀರ’ ಮಟ್ಟವನ್ನು ತಲುಪಿದೆ. ರೋಗಿಗಳ ಜೀವಕ್ಕೆ ಅಪಾಯವನ್ನುಂಟುಮಾಡುತ್ತಿದೆ, ಅವರಲ್ಲಿ ಹಲವರಿಗೆ ತುರ್ತು ರಕ್ತ ವರ್ಗಾವಣೆಯ ಅಗತ್ಯವಿರುತ್ತದೆ. ಇಡೀ ಗಾಜಾಗೆ ಪ್ರತಿದಿನ 400 ಯೂನಿಟ್‌ಗಳು ರಕ್ತ ಬೇಕಾಗುತ್ತವೆ ಎಂದು ಹೇಳಿದರು.
ಕಳೆದ 24 ಗಂಟೆಗಳಲ್ಲಿ ಗಾಜಾ ಪಟ್ಟಿಯಾದ್ಯಂತ ಇಸ್ರೇಲಿ ದಾಳಿಯಲ್ಲಿ ನೆರವು ಬಯಸುವವರು ಸೇರಿದಂತೆ ಕನಿಷ್ಠ 50 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ. 184 ಜನರು ಗಾಯಗೊಂಡಿದ್ದಾರೆ ಎಂದು ಎನ್ಕ್ಲೇವ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.
ಅಕ್ಟೋಬರ್ 7, 2023 ರಿಂದ ಗಾಜಾದ ಮೇಲೆ ಇಸ್ರೇಲ್ ನಡೆಸಿದ ನರಮೇಧ ಯುದ್ಧವು ಒಟ್ಟು 66,055 ಜನರನ್ನು ಕೊಂದಿದೆ. 168,346 ಜನರನ್ನು ಗಾಯಗೊಳಿಸಿದೆ ಎಂದು ಸಚಿವಾಲಯ ಟೆಲಿಗ್ರಾಮ್‌ನಲ್ಲಿ ಹೇಳಿಕೆಯಲ್ಲಿ ತಿಳಿಸಿದೆ.
‘ಭಾರತೀಯ ಇಲಿಗಳು..’ ಎಂದು ಕೆನಡಾದಲ್ಲಿ ದ್ವೇಷಪೂರಿತ ಗೋಡೆ ಬರಹ: ಖಂಡನೆ


