ಉತ್ತರ ಅಮೆರಿಕದ ಮೆಕ್ಸಿಕೋ ದೇಶದಾದ್ಯಂತ ‘ಜೆನ್ ಝೀ’ ಪ್ರತಿಭಟನೆ ತೀವ್ರಗೊಂಡಿದೆ. ಸಾವಿರಾರು ಯುವಜನರು ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಅವರ ಸರ್ಕಾರ ವಿರುದ್ದ ಬೀದಿಗಿಳಿದಿದ್ದಾರೆ ಎಂದು ವರದಿಯಾಗಿದೆ.
ಭಾನುವಾರ (ನವೆಂಬರ್ 16) ಯುವಜನರ ಪ್ರತಿಭಟನೆ ವೇಳೆ ಸುಮಾರು 12 ಜನರು ಗಾಯಗೊಂಡಿದ್ದಾರೆ. ಈ ಪೈಕಿ ಹೆಚ್ಚಿನವರು ಪೊಲೀಸ್ ಅಧಿಕಾರಿಗಳು ಎಂದು ವರದಿಗಳು ವಿವರಿಸಿವೆ.
ಮೆಕ್ಸಿಕನ್ ಮೇಯರ್ ಹತ್ಯೆ ಜೆನ್ ಝೀ ಆಕ್ರೋಶಕ್ಕೆ ಕಾರಣ
ಮೆಕ್ಸಿಕೋದ ಡ್ರಗ್ ಗ್ಯಾಂಗ್‌ಗಳ ಮಿತಿ ಮೀರಿದ ಹಿಂಸಾಚಾರ (Cartel violence), ಭ್ರಷ್ಟಾಚಾರ ಮತ್ತು ಮುಖ್ಯವಾಗಿ ನವೆಂಬರ್ 1ರಂದು ನಡೆದ ಮೈಕೋವಕನ್ ರಾಜ್ಯದ ಉರುಪಾನ್ ನಗರದ ಮೇಯರ್ ಕಾರ್ಲೋಸ್ ಆಲ್ಬರ್ಟೊ ಮಂಜೊ ರೊಡ್ರಿಗಸ್ ಅವರ ಹತ್ಯೆ ಯುವಜನರ ಆಕ್ರೋಶಕ್ಕೆ ಕಾರಣ ಎಂದು ವರದಿಯಾಗಿದೆ.
ಮೇಯರ್ ಕಾರ್ಲೋಸ್ ಆಲ್ಬರ್ಟೊ ಅವರು ಅಪರಾಧ ವಿರೋಧಿ ನಿಲುವು ಹೊಂದಿದ್ದರು. ಮಾದಕವಸ್ತುಗಳ ಕಳ್ಳಸಾಗಣೆ ಗ್ಯಾಂಗ್‌ಗಳು ಮತ್ತು ಕಾರ್ಟೆಲ್ ಹಿಂಸಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಕರೆ ನೀಡಿದ್ದರು. ಈ ಬೆನ್ನಲ್ಲೇ ಅವರನ್ನು ಡೇ ಆಫ್ ದಿ ಡೆಡ್ ಉತ್ಸವದಲ್ಲಿ ಹತ್ಯೆ ಮಾಡಲಾಗಿದೆ.
“ಡ್ರಗ್ ಗ್ಯಾಂಗ್‌ಗಳ ವಿರುದ್ಧ ಹೋರಾಡಲು ಪರ್ವತ ಪ್ರದೇಶಗಳಿಗೆ ಅಧಿಕಾರಿಗಳನ್ನು ಕಳುಹಿಸುತ್ತಿದ್ದ ವ್ಯಕ್ತಿಯಾಗಿದ್ದರಿಂದ ಮೇಯರ್ ಕಾರ್ಲೋಸ್ ಆಲ್ಬರ್ಟೊ ಅವರನ್ನು ಕೊಲ್ಲಲಾಗಿದೆ ಎಂದು 65 ವರ್ಷದ ರಿಯಲ್ ಎಸ್ಟೇಟ್ ಏಜೆಂಟ್ ಒಬ್ಬರು ಹೇಳಿದ್ದಾಗಿ ಗಾರ್ಡಿಯನ್ ವರದಿ ಮಾಡಿದೆ.
ಪ್ರತಿಭಟನಾ ನಿರತ ಯುವಜನರು ಮೃತ ಮೇಯರ್‌ಗೆ ಬೆಂಬಲ ಸೂಚಿಸಿದ್ದಾರೆ. “ನಾವೆಲ್ಲರೂ ಕಾರ್ಲೋಸ್ ಮಂಜೊ” ಎಂಬ ಬ್ಯಾನರ್‌ಗಳನ್ನು ಪ್ರತಿಭಟನೆ ವೇಳೆ ಅವರು ಪ್ರದರ್ಶಿಸಿದ್ದಾರೆ.
“ಜೆನ್ ಝೀ ಪ್ರತಿಭಟನೆಗಳು ಶಾಂತಿಯುತವಾಗಿ ಪ್ರಾರಂಭವಾದರೂ, ಮುಸುಕುದಾರಿ ವ್ಯಕ್ತಿಗಳ ಗುಂಪು ಹಿಂಸಾಚಾರ ಪ್ರಾರಂಭಿಸಿತು. ಪ್ರತಿಭಟನೆ ವೇಳೆ ದರೋಡೆಯಿಂದ ಹಿಡಿದು ಹಲ್ಲೆಯವರೆಗಿನ ಅಪರಾಧಗಳಿಗೆ ಈಗಾಗಲೇ 20 ಜನರನ್ನು ಬಂಧಿಸಲಾಗಿದೆ” ಎಂದು ಮೆಕ್ಸಿಕೋ ನಗರದ ಭದ್ರತಾ ಮುಖ್ಯಸ್ಥ ಪ್ಯಾಬ್ಲೊ ವಾಜ್ಕ್ವೆಜ್ ತಿಳಿಸಿದ್ದಾರೆ.
ರಾಯಿಟರ್ಸ್ ವರದಿಯ ಪ್ರಕಾರ, ಪ್ರತಿಭಟನಾ ನಿರತರು ಅಧ್ಯಕ್ಷೆ ಶೀನ್‌ಬಾಮ್ ವಾಸಿಸುವ ನ್ಯಾಷನಲ್ ಪ್ಯಾಲೆಸ್ ಸುತ್ತಲಿನ ಲೋಹದ ಬೇಲಿಗಳನ್ನು ಕಿತ್ತುಹಾಕುವ ಮೂಲಕ ಹಿಂಸಾತ್ಮ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಅವರನ್ನು ತಡೆಯಲು ಪೊಲೀಸರು ಅಶ್ರುವಾಯಿ ಸಿಡಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ನಡೆದಿದೆ. ಹಲವರು ಗಾಯಗೊಂಡಿದ್ದಾರೆ.
ಅಧ್ಯಕ್ಷೆಯ ಅರಮನೆ ಸುತ್ತ ಭದ್ರತಾ ಪಡೆಗಳು ಭದ್ರ ಕೋಟೆಯನ್ನು ನಿರ್ಮಿಸಿ ರಕ್ಷಣೆ ಒದಗಿಸಿವೆ. ಇದರ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು, “ನೀವು ಮೇಯರ್ ಕಾರ್ಲೋಸ್ ಅವರಿಗೂ ಇದೇ ರೀತಿಯ ಭದ್ರತೆ ಒದಗಿಸಬೇಕಿತ್ತು” ಎಂದು ಹೇಳಿದ್ದಾರೆ ಎಂದು ವರದಿಗಳು ವಿವರಿಸಿವೆ.
ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಏನು ಹೇಳುತ್ತಿದ್ದಾರೆ?
ನಮ್ಮ ಸರ್ಕಾರದ ವಿರೋಧಿ ಬಲಪಂಥೀಯ ಗುಂಪಿನ ರಾಜಕಾರಣಿಗಳು ಬೀದಿಗಳಲ್ಲಿ ಗಲಭೆ ಎಬ್ಬಿಸಿದ್ದಾರೆ. ಜೆನ್ ಝೀ ಗುಂಪುಗಳು ಆಯೋಜಿಸಿರುವ ಪ್ರತಿಭಟನೆಗಳಿಗೆ ಅವರು ಹಣಕಾಸು ಒದಗಿಸಿದ್ದಾರೆ ಎಂದು ಹೇಳಿದ್ದಾರೆ.
‘ನಮ್ಮ ಭೂಮಿ ಮಾರಾಟಕ್ಕಿಲ್ಲ’ : ಬ್ರೆಝಿಲ್ ಹವಾಮಾನ ಶೃಂಗಸಭೆಗೆ ನುಗ್ಗಿ ಸ್ಥಳೀಯ ಬುಡಕಟ್ಟು ಜನರಿಂದ ಪ್ರತಿಭಟನೆ


