ಜರ್ಮನಿಯಲ್ಲಿ ಭಾನುವಾರ (ಫೆ.23) ನಡೆದ ರಾಷ್ಟ್ರೀಯ ಚುನಾವಣೆಯಲ್ಲಿ ಫ್ರೆಡ್ರಿಕ್ ಮರ್ಝ್ ನೇತೃತ್ವದ ಸಂಪ್ರದಾಯವಾದಿ ಮೈತ್ರಿಕೂಟ ಗೆಲುವು ಸಾಧಿಸಿದೆ. ತೀವ್ರ ಬಲಪಂಥೀಯ ಪಕ್ಷ ಆಲ್ಟರ್ನೇಟಿವ್ ಫಾರ್ ಜರ್ಮನಿ (ಎಎಫ್‌ಡಿ) ಮತ ಗಳಿಕೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.
ಅಂತಿಮ ಮತ ಎಣಿಕೆಯ ಫಲಿತಾಂಶದ ಪ್ರಕಾರ, ಎಎಫ್‌ಡಿ ತನ್ನ ಮತ ಗಳಿಕೆಯನ್ನು ಈ ಬಾರಿ ದ್ವಿಗುಣಗೊಳಿಸಿಕೊಂಡಿದ್ದು, ಶೇ.19.5ರಷ್ಟು ಪಡೆದುಕೊಂಡಿದೆ. ಎಎಫ್‌ಡಿ ಜರ್ಮನಿಯ ನಾಗರಿಕರಲ್ಲಿ ಬಿತ್ತಿದ ವಲಸೆ ಮತ್ತು ಭದ್ರತೆ ಕುರಿತ ಆತಂಕ ಮತಗಳಿಕೆ ಹೆಚ್ಚಿಸಲು ಕಾರಣವಾಗಿದೆ ಎಂದು ವರದಿಗಳು ಹೇಳಿವೆ.
ಮೆರ್ಜ್ ಅವರ ಸಿಡಿಯು/ಸಿಎಸ್‌ಯು ಮೈತ್ರಿಕೂಟ ಶೇ.28.5ರಷ್ಟು ಮತಗಳನ್ನು ಪಡೆದುಕೊಂಡು ಗೆಲುವು ಸಾಧಿಸಿದೆ. ನಿರ್ಗಮಿತ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರ ಸೆಂಟರ್-ಲೆಫ್ಟ್ ಸೋಶಿಯಲ್ ಡೆಮಾಕ್ರೇಟ್ಸ್ (ಎಸ್‌ಪಿಡಿ) ಶೇ.16ರಷ್ಟು ಮಗಳನ್ನು ಮಾತ್ರ ಗಳಿಸಲು ಸಫಲವಾಗಿದೆ.
ಮಾಜಿ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರ ಪಕ್ಷದ ದೀರ್ಘಕಾಲದ ಪ್ರತಿಸ್ಪರ್ಧಿ ಮೆರ್ಜ್, ಅಕ್ರಮ ವಲಸೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ತನ್ನ ಕರಾಳ ನಾಜಿ ಇತಿಹಾಸಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಇನ್ನೂ ಪ್ರಯತ್ನಿಸುತ್ತಿರುವ ದೇಶದಲ್ಲಿ ಎಎಫ್‌ಡಿಯ ಮತಗಳಿಕೆ ಎಲ್ಲರನ್ನು ಆಶ್ವರ್ಯಗೊಳಿಸಿದೆ. ಏಕೆಂದರೆ, ಸಿಡಿಯು/ಸಿಎಎಸ್‌ಯು ಸೇರಿದಂತೆ ಎಲ್ಲಾ ಪಕ್ಷಗಳು ಎಎಫ್‌ಡಿ ಹೆಚ್ಚು ಮತಗಳಿಸದಂತೆ ತಡೆಯಲು ಪ್ರಯತ್ನಿಸಿತ್ತು.
ಸದ್ಯಕ್ಕೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮಿತ್ರಪಕ್ಷಗಳ ಬೆಂಬಲವನ್ನು ಹೊಂದಿರುವ ಎಎಫ್‌ಡಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲು ಸಜ್ಜಾಗಿದೆ. ಇತರ ಎಲ್ಲಾ ಪಕ್ಷಗಳು ಅದನ್ನು ಅಧಿಕಾರದಿಂದ ದೂರವಿಡುವ ಪ್ರತಿಜ್ಞೆ ಮಾಡಿತ್ತು.
ಆದರೆ, ಎಎಫ್‌ಡಿ ನಾಯಕಿ ಆಲಿಸ್ ವೀಡೆಲ್ ಐತಿಹಾಸಿಕ ಫಲಿತಾಂಶವನ್ನು ಶ್ಲಾಘಿಸಿದ್ದು, ನಮ್ಮ ಪಕ್ಷ ಸಿಡಿಯು/ಸಿಎಸ್‌ಯು ಜೊತೆ ಸೇರಿ ಆಡಳಿತ ನಡೆಸಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ಈಗ ಉಸ್ತುವಾರಿ ಚಾನ್ಸೆಲರ್ ಆಗಿರುವ ನಿರ್ಗಮಿತ ಸ್ಕೋಲ್ಜ್ ಅವರಿಂದ ಅಧಿಕಾರವಹಿಸಿಕೊಳ್ಳಲಿರುವ ಮೆರ್ಜ್ ಅವರು ಹೊಸ ಸಮ್ಮಿಶ್ರ ಸರ್ಕಾರ ರಚಿಸಬೇಕಿದೆ. ಈಸ್ಟರ್ ವೇಳೆಗೆ ಅವರ ಸರ್ಕಾರ ರಚಿಸುವ ಸಾಧ್ಯತೆ ಇದೆ. ಅದುವರೆಗೆ ಜರ್ಮನಿಯ ಸರ್ಕಾರವಿಲ್ಲದೆ ಮುನ್ನಡೆಯಬೇಕಿದೆ.
“ಸಮ್ಮಿಶ್ರ ಸರ್ಕಾರ ರಚಿಸುವ ಸಂಬಂಧ ಸುದೀರ್ಘ ಮಾತುಕತೆ ಮತ್ತು ವಿಳಂಬ ನೀತಿ ಸರಿಯಲ್ಲ. ಹೊರಗಿನ ಜಗತ್ತು ನಮ್ಮನ್ನು ಕಾಯುತ್ತಾ ಕೂತಿಲ್ಲ. ಶೀಘ್ರದಲ್ಲೇ ಸರ್ಕಾರ ರಚಿಸಬೇಕಿದೆ” ಎಂದು ವಿಜಯ ಘೋಷಣೆ ಬಳಿಕ ಮೆರ್ಜ್ ಹೇಳಿದ್ದಾರೆ.
ಬಹುಮತ ಪಡೆಯಲು ಮೆರ್ಜ್ ಅವರು ಮೊದಲು ಎಸ್‌ಪಿಡಿಯನ್ನು ಸಂಪರ್ಕಿಸುವ ಸಾಧ್ಯತೆ ಇದೆ. ಆದರೆ, ಜರ್ಮನಿಯ ಸಾಂಪ್ರದಾಯಿಕ ಕಾರ್ಮಿಕರ ಪಕ್ಷವನ್ನು ಐತಿಹಾಸಿಕವಾಗಿ ಕಳಪೆ ಫಲಿತಾಂಶಕ್ಕೆ ಕೊಂಡೊಯ್ದ ಸ್ಕೋಲ್ಜ್ ಅವರನ್ನು ಹೊರಗಿಟ್ಟು ಮಾತುಕತೆ ನಡೆಯಬಹುದು ಎನ್ನಲಾಗಿದೆ.
ಬಹುಮತ ಪಡೆಯಲು ಸ್ಥಾನಗಳನ್ನು ಪಡೆಯಲು ಮೆರ್ಜ್ ಗ್ರೀನ್ಸ್ ಅನ್ನು ಕೂಡ ಸಂಪರ್ಕಿಸಬಹುದು. ಗ್ರೀನ್ಸ್ ಚುನಾವಣೆಯಲ್ಲಿ ಶೇಖಡ 12 ರಷ್ಟು ಮತಗಳಿಸಿದೆ. ಆದರೆ, ಸಿಡಿಯುನ ಬವೇರಿಯನ್ ಸಹೋದರ ಪಕ್ಷವಾದ ಸಿಎಸ್‌ಯು ಇದಕ್ಕೆ ವಿರೋಧ ವ್ಯಕ್ತಪಡಿಸಿದೆ.


