Homeಕರ್ನಾಟಕEWS ಒಪ್ಪಿದ ಎಲ್ಲ ಪಾರ್ಲಿಮೆಂಟ್ ಸದಸ್ಯರನ್ನು ಸೋಲಿಸಲು ಸಿದ್ಧರಾಗಿ: ಪ್ರೊ.ರವಿವರ್ಮ ಕುಮಾರ್‌

EWS ಒಪ್ಪಿದ ಎಲ್ಲ ಪಾರ್ಲಿಮೆಂಟ್ ಸದಸ್ಯರನ್ನು ಸೋಲಿಸಲು ಸಿದ್ಧರಾಗಿ: ಪ್ರೊ.ರವಿವರ್ಮ ಕುಮಾರ್‌

- Advertisement -
- Advertisement -

“ಇಡಬ್ಲ್ಯೂಎಸ್‌ (ಆರ್ಥಿಕವಾಗಿ ಹಿಂದುಳಿದ ವರ್ಗ) ಮೀಸಲಾತಿ ಮಸೂದೆಗೆ ಒಪ್ಪಿಗೆ ಕೊಟ್ಟ ಎಲ್ಲ ಲೋಕಸಭಾ ಸದಸ್ಯರನ್ನು ಸೋಲಿಸಲು ನಾವು ಸಿದ್ದರಾಗಬೇಕು” ಎಂದು ಕರ್ನಾಟಕ ರಾಜ್ಯ ಸರ್ಕಾರದ ಮಾಜಿ ಅಡ್ವೊಕೇಟ್ ಜನರಲ್‌ ಪ್ರೊ.ರವಿವರ್ಮಕುಮಾರ್‌ ಕರೆ ನೀಡಿದರು.

ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ವತಿಯಿಂದ ಹೊರತರಲಾಗಿರುವ ‘EWS 10% ಮಹಾವಂಚನೆ’ಯನ್ನು ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಎಚ್.ಎನ್.ಮಲ್ಟಿಮೀಡಿಯಾ ಸಭಾಂಗಣದಲ್ಲಿ ಶನಿವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

“ಇಡಬ್ಲ್ಯೂಎಸ್‌ ಸಂವಿಧಾನ ವಿರೋಧಿಯಾಗಿ ಜಾರಿಯಾಗಿದೆ. ದಲಿತ ಸಮುದಾಯದವರಾದ, ಅಂಬೇಡ್ಕರ್‌ ಸಮುದಾಯದವರೆಂದು ಹೇಳಿಕೊಳ್ಳುವ, ನ್ಯಾಯವಾದಿಯೂ ಆಗಿರುವ ಅಂದಿನ ರಾಷ್ಟ್ರಪತಿಯವರಾದರೂ ಈ ಮಸೂದೆಗೆ ಅಂಕಿತ ಹಾಕಬಾರದಿತ್ತು. ಚರ್ಚೆಯಾಗದೆ ಜಾರಿಯಾದ ಮಸೂದೆಯನ್ನು ತಡೆಯಲು ಅವರಿಗೆ ಅವಕಾಶವಿತ್ತು. ಈ ಮಸೂದೆಯನ್ನು ಒಪ್ಪಿದ ಎಲ್ಲ ಪಾರ್ಲಿಮೆಂಟ್ ಸದಸ್ಯರನ್ನು ಮುಂದೆ ಬರುವ ಎಲ್ಲ ಚುನಾವಣೆಯಲ್ಲಿ ಸೋಲಿಸಬೇಕು. ಯಾವ ಪಕ್ಷ ಇಡಬ್ಲ್ಯೂಎಸ್‌ ತೆಗೆದು ಹಾಕಲು ಬದ್ಧವಾಗುವುದಿಲ್ಲವೋ ಅವರನ್ನು ಮಣಿಸಬೇಕು” ಎಂದು ಆಶಿಸಿದರು.

“ಪಕ್ಷಾತೀತವಾಗಿ ಈ ಮಸೂದೆಗೆ ಬೆಂಬಲ ನೀಡಿದರು. ಎಸ್‌ಸಿ, ಎಸ್‌ಟಿ ಮೀಸಲು ಕ್ಷೇತ್ರದಿಂದ ಆಯ್ಕೆಯಾದವರೂ ಇದರ ವಿರುದ್ಧ ಮತಹಾಕಲಿಲ್ಲ. ಈ ವಿಚಾರವನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಇಷ್ಟು ಕ್ಷಿಪ್ರಗತಿಯಲ್ಲಿ ಈ ಮಸೂದೆಯನ್ನು ಜಾರಿಗೊಳಿಸಿದ್ದು ಏಕೆ? ಚುನಾವಣೆಗೆ ಹೋಗುವ ಮೊದಲು, ಲೋಕಸಭೆಯ ಕೊನೆಯ ಅಧಿವೇಷನದಲ್ಲಿ ಮಂಡಿಸುವ ಅನಿವಾರ್ಯತೆ ಏನಿತ್ತು? ಮುಂದಿನ ಚುನಾವಣೆಯಲ್ಲಿ ಏನಾಗುತ್ತದೆಯೋ ಎಂಬ ಅನುಮಾನ ಅವರಿಗೆ ಇದ್ದ ಕಾರಣ ಈ ಕೆಲಸ ಮಾಡಿದರು” ಎಂದು ಅಭಿಪ್ರಾಯಪಟ್ಟರು.

ಭಾರತ್ ಜೋಡೋ ಯಾತ್ರೆಯ ವೇಳೆ ರಾಯಚೂರಿನಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಮಾತನಾಡಿದ್ದನ್ನು ಸ್ಮರಿಸಿದ ಅವರು, “ಸುಮಾರು ಒಂದು ಗಂಟೆ ಅವರ ಜೊತೆ ಮಾತನಾಡಿದೆ. ಖಾಸಗೀ ವಲಯದಲ್ಲಿ ಮೀಸಲಾತಿ, ನ್ಯಾಯಾಂಗದಲ್ಲಿ ಮೀಸಲಾತಿ ಅಗತ್ಯವಿದೆ ಎಂದು ಪ್ರಸ್ತಾಪಿಸಿದ್ದೇನೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದೇನೆ. ಮೀಸಲಾತಿ ಎಸ್‌.ಸಿ., ಎಸ್‌.ಟಿ.ಗಳಿಗೆ ಇರಬೇಕಾದದ್ದು ನ್ಯಾಯ. ಸಾಮಾಜಿಕವಾಗಿ ಪ್ರಬಲರಾದ ಬ್ರಾಹ್ಮಣರಿಗೂ ಮೀಸಲಾತಿ ಕೊಡುವುದು ಸಾಮಾಜಿಕ ನ್ಯಾಯ ಅಲ್ಲ ಎಂದು ತಿಳಿಸಿರುವೆ. ನೀವು ಸಾಮಾಜಿಕ ನ್ಯಾಯದ ಪರವೋ, ಅನ್ಯಾಯದ ಪರವೋ ಎಂದು ತೀರ್ಮಾನಿಸಿ ಎಂದಿದ್ದೇನೆ. ಈ ಕುರಿತು ಅಧ್ಯಯನ ಮಾಡುವುದಾಗಿ ವಾಗ್ದಾನ ನೀಡಿದ್ದಾರೆ. ಇದನ್ನು ಗಮನಿಸೋಣ” ಎಂದರು.

“ಇಡಬ್ಲ್ಯೂಎಸ್‌ ಜಾರಿಯು ಸಮಯದ ಪಿತೂರಿಯಾಗಿದೆ. ಪಿತೂರಿಗಳ ಸರಮಾಲೆಯಲ್ಲಿ ಇಡಬ್ಲ್ಯೂಎಸ್‌ ಮೀಸಲಾತಿ ಜಾರಿಯಾಗಿದೆ. ವಿವಾದಕ್ಕೆ ಆಸ್ಪದ ಕೊಡದೆ ಗೌಪ್ಯವಾಗಿ ಕಾನೂನು ಜಾರಿ ಮಾಡಲಾಗಿದೆ. ಸಂವಿಧಾನಕ್ಕೆ ತಂದ 103ನೇ ತಿದ್ದುಪಡಿ ಆತಂಕಕಾರಿಯಾದದ್ದು. ಕ್ಷಿಪ್ರಕ್ರಾಂತಿಯ ರೀತಿ ಸ್ಥಾನಪಲ್ಲಟವಾಗುವಂತೆ ತಿದ್ದುಪಡಿ ಜಾರಿಯಾಗಿದೆ” ಎಂದು ವಿಷಾದಿಸಿದರು.

ಇಡಬ್ಲ್ಯೂಎಸ್‌ ಜಾರಿಯಾದಾಗ ಅದನ್ನು ವಿರೋಧಿಸಿ ಪತ್ರಿಕೆಗೆ ನಾನೊಂದು ಹೇಳಿಕೆ ನೀಡಿದೆ. ನಮ್ಮ ರಾಜ್ಯದ ದೊಡ್ಡ ನಾಯಕರೊಬ್ಬರು, ಸಾಮಾಜಿಕ ನ್ಯಾಯದ ಎಲ್ಲ ಚಳವಳಿಯಲ್ಲಿ ನಮ್ಮ ಜೊತೆಯಲ್ಲಿದ್ದವರು ಪ್ರತಿಕ್ರಿಯಿಸಿ, ‘ನಮಗೆ ಮೀಸಲಾತಿ ಕೊಟ್ಟರೆ ನೀವ್ಯಾಕೆ ವಿರೋಧಿಸುತ್ತೀರಾ?’ ಎಂದು ಕೇಳಿದರು. ಸಾಮಾಜಿಕ ನ್ಯಾಯದ ಚಳವಳಿಯಲ್ಲಿದ್ದವರಿಗೂ ಈ ರೀತಿ ಅನ್ನಿಸಬೇಕೆ? ಎಂದು ಪ್ರಶ್ನಿಸಿದರು.

“ಬ್ರಿಟಿಷರು ಭಾರತಕ್ಕೆ ಬಂದಾಗ ಅವರಿಗಿದ್ದ ಕೊಂಡಿ ಬ್ರಾಹ್ಮಣರಾಗಿದ್ದರು. ಅವರ ಮೂಲಕವೇ ಆಡಳಿತ ನಡೆಸಬೇಕಿತ್ತು. ಧರ್ಮದ ಹೆಸರಿನಲ್ಲಿ, ದೇವರ ಹೆಸರಿನಲ್ಲಿ ತಮಗೆ ಅನುಕೂಲವಾಗುವ ರೀತಿ ಕಾನೂನು ರಚಿಸುತ್ತಾ ಹೋದರು. ಸರ್ಕಾರಿ ಸೇವೆಯ ಎಲ್ಲ ಅಧಿಕಾರವನ್ನು ಬ್ರಾಹ್ಮಣರೇ ಹೆಚ್ಚು ಹಿಡಿದುಕೊಂಡಿದ್ದರಿಂದ ದೇಶದಲ್ಲಿ ಬ್ರಾಹ್ಮಣರ ಸಂಖ್ಯೆ ಹೆಚ್ಚಿದೆ ಎಂದು ಭಾವಿಸಲಾಗಿತ್ತು. 1872ರ ಜನಗಣತಿ ಆಗಿತು. ಎಲ್ಲ ಜಾತಿಗಳ ವಿವರ ಹೊರಬಿತ್ತು. ಕರ್ನಾಟಕದಲ್ಲಿ ಆಗಿನ ಮೈಸೂರು ಸಂಸ್ಥಾನದಲ್ಲಿ ಶೇ. 3.4ರಷ್ಟು ಬ್ರಾಹ್ಮಣರಿದ್ದರು. ಶೇ. 100ರಷ್ಟು ಉದ್ಯೋಗಗಳನ್ನು ಇಟ್ಟುಕೊಂಡಿದ್ದರು. ಪೊಲೀಸ್‌ ಇಲಾಖೆಯಲ್ಲಿ ಅವರೇ ಹೆಚ್ಚು ತುಂಬಿಕೊಂಡಿರುವುದನ್ನು ಮೊಟ್ಟಮೊದಲಿಗೆ ಪ್ರಶ್ನಿಸಲಾಯಿತು. 1874ರಲ್ಲಿ ಇನ್‌ಸ್ಪೆಕ್ಟರ್‌, ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಗೆ ಇತರ ಸಮುದಾಯಗಳಿಗೂ ಅವಕಾಶ ನೀಡಲಾಯಿತು” ಎನ್ನುತ್ತಾ ಮೀಸಲಾತಿ ಹೋರಾಟ ನಡೆದುಬಂದ ಹಾದಿಯನ್ನು ನೆನಪಿಸಿದರು.

ತಮಿಳುನಾಡು ಮೂಲದ ಬ್ರಾಹ್ಮಣರೇ ಹೆಚ್ಚು ದಿವಾನರಾಗುತ್ತಿದ್ದಾರೆ ಎಂದು ಮೈಸೂರು ಬ್ರಾಹ್ಮಣರಲ್ಲಿ ಗುಸುಗುಸು ಆರಂಭವಾಗಿತ್ತು. ಹೀಗಾಗಿ ವಿಶ್ವೇಶ್ವರಯ್ಯನವರಿಗೆ ದಿವಾನರಾಗುವ ಅವಕಾಶ ದೊರಕಿತು. ಹೀಗಿರುವಾಗ ಬ್ರಾಹ್ಮಣೇತರರ ಮೀಸಲಾತಿ ಚರ್ಚೆ ಮುನ್ನೆಲೆಗೆ ಬಂತು. ಬಸವರಾಜಯ್ಯ ಎಂಬವರು, ಮೈಸೂರು ಅರಸರೊಂದಿಗೆ ಮಾತನಾಡುತ್ತಾ, ‘ಸ್ವಾಮಿ ನಿಮಗೆ ಆದಾಯ ಎಲ್ಲಿಂದ ಬರುತ್ತದೆ? ಸುಂಕದಿಂದಲ್ಲವೇ? ಎಷ್ಟು ಜನ ಬ್ರಾಹ್ಮಣರು ತೆರಿಗೆ ಕೊಟ್ಟಿದ್ದಾರೆ. ತೆರಿಗೆ ಹಣದಲ್ಲಿ ಬ್ರಾಹ್ಮಣರಿಗೆ ಸಂಬಳ ಕೊಡುತ್ತೀರಾ? ನಮಗೆ ಉದ್ಯೋಗವಿಲ್ಲ’ ಎಂದು ಕೇಳುತ್ತಾರೆ. ಆ ನಂತರದಲ್ಲಿ ಮಿಲ್ಲರ್‌ ಆಯೋಗ ರಚನೆಯಾಗುತ್ತದೆ. ಬ್ರಾಹ್ಮಣರು ಅದನ್ನು ಪ್ರಶ್ನಿಸುತ್ತಾರೆ. ಸ್ವಃತ ಖರ್ಚಿನಲ್ಲಿ ಬ್ರಾಹ್ಮಣರು ಓದಿ ಉದ್ಯೋಗ ಪಡೆಯುತ್ತಿದ್ದಾರೆ ಎಂದು ವಾದ ಮಾಡುತ್ತಾರೆ. ವಿಶ್ವೇಶ್ವರಯ್ಯನವರು ರಾಜೀನಾಮೆ ನೀಡುತ್ತಾರೆ. ಜ್ಯೋತಿ ಬಾ ಫುಲೆ, ನಾಲ್ವಡಿ ಕೃಷ್ಣರಾಜ ಒಡೆಯರ್‌, ಶಾಹೂ ಮಹಾರಾಜರು, ಡಾ.ಬಿ.ಆರ್‌.ಅಂಬೇಡ್ಕರ್‌ ಹೋರಾಟದ ಫಲ ಮೀಸಲಾತಿ” ಎಂದು ಬಣ್ಣಿಸಿದರು.

“ನನ್ನ ಗುರುಗಳಾದ ಎಲ್.ಜಿ.ಹಾವನೂರು ಅವರು ದಕ್ಷಿಣ ಆಫ್ರಿಕಾದಲ್ಲಿ ‘ಮೀಸಲಾತಿ ಕುರಿತು ಕಾರ್ಯಕ್ರಮ’ವೊಂದರ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ‘ಭಾರತದಲ್ಲಿ ಮೀಸಲಾತಿ ಕೊಡದೆ ಇದ್ದಿದ್ದರೆ, ಸ್ವಾತಂತ್ರ್ಯೋತ್ತರ ಭಾರತದಲ್ಲಿ ರಕ್ತಪಾತವಾಗುತ್ತಿತ್ತು. ಅನ್ಯಾಯಕ್ಕೊಳಗಾದ ಅಸ್ಪೃಶ್ಯ ಸಮುದಾಯ ಸಿಡಿದೇಳುತ್ತಿತ್ತು’ ಎಂದಿದ್ದರು. ನೆಲ್ಸನ್‌ ಮಂಡೇಲಾ ಅವರಲ್ಲಿ ಮೀಸಲಾತಿಯ ಅಗತ್ಯತೆಯನ್ನು ತಿಳಿಸಿದ್ದರು. ನ್ಯಾಯಾಂಗದಲ್ಲೂ ಮೀಸಲಾತಿ ಅಗತ್ಯ ಎಂದು ಸಲಹೆ ನೀಡಿದ್ದರು. ‘ಈ ಕುರಿತು ಸಂವಿಧಾನದಲ್ಲಿ ಅಡಕ ಮಾಡಿ, ಮೀಸಲಾತಿ ವಿಚಾರ ಸಂಬಂಧ ತಮಗನಿಸಿದಂತೆ ವಿಶ್ಲೇಷಣೆ ಮಾಡಲು ಅವಕಾಶ ನೀಡಬೇಡಿ’ ಎಂದು ತಿಳಿಸಿದ್ದರು” ಎಂದು ಮೆಲುಕು ಹಾಕಿದರು.

ಸಾಮಾಜಿಕ ನ್ಯಾಯಕ್ಕೆ ನಮ್ಮ ಸಂವಿಧಾನ ವಿಶ್ವಗುರು: ಪ್ರೊ.ರವಿವರ್ಮ ಕುಮಾರ್‌

“ನಾವು ಸಾಮಾಜಿಕ ನ್ಯಾಯದ ವಿಚಾರದಲ್ಲಿ ವಿಶ್ವಗುರುವಾಗಿದ್ದೇವೆ, ಹೊರತು ಬಂಡವಾಳದ ವಿಚಾರದಲ್ಲಲ್ಲ. ಬಾಬಾ ಸಾಹೇಬರು ನೀಡಿದ ಸಾಮಾಜಿಕ ನ್ಯಾಯದ ಸೂತ್ರಗಳು ವಿಶ್ವಮಾನ್ಯವಾಗಿವೆ. ಸುಮಾರು 20 ರಾಷ್ಟ್ರಗಳು ನಮ್ಮ ಸಂವಿಧಾನದ ಸಾಮಾಜಿಕ ನ್ಯಾಯವನ್ನು ಅಳವಡಿಸಿಕೊಂಡಿವೆ. ನಾವು ವಿಶ್ವಕ್ಕೆ ಕೊಟ್ಟ ಮಾದರಿ ಸಾಮಾಜಿಕ ನ್ಯಾಯ.  ಬಡತನಕ್ಕಾಗಿ ಮೀಸಲಾತಿಯಲ್ಲ, ಹಸಿವು ನೀಗಿಸಲು ಮೀಸಲಾತಿಯಲ್ಲ. ಎಲ್ಲ ವರ್ಗಗಳಿಗೆ ಪ್ರಾತಿನಿಧ್ಯವನ್ನು ಕೊಡಲು ಮೀಸಲಾತಿ ಇದೆ” ಎಂದು ಪ್ರೊ.ರವಿವರ್ಮಕುಮಾರ್‌ ಸ್ಪಷ್ಟಪಡಿಸಿದರು.

ಇಡಬ್ಲ್ಯೂಎಸ್‌ ಕೋಟಾ ವಿರೋಧಿಸಿ ವಾದ ಮಂಡಿಸಿದ ಅನುಭವಗಳನ್ನು ಹಂಚಿಕೊಂಡ ಅವರು, “ನಮಾಜ್ ಮಾಡಲು ಹೋಗಿ ಮುಲ್ಲಾ ಮಸೀದಿ ಕೆಡವಿಕೊಂಡಂತೆ ಆಯಿತು. ನ್ಯಾಯಮೂರ್ತಿಯೊಬ್ಬರು ಮೀಸಲಾತಿ ಯಾರಿಗೂ ಕೊಡಬಾರದು ಎಂದರೆ, ಇನ್ನೊಬ್ಬರು ಡಾ.ಬಿ.ಆರ್‌.ಅಂಬೇಡ್ಕರ್‌ ಅವರೇ ಹತ್ತು ವರ್ಷದ ಮೇಲೆ ಮೀಸಲಾತಿ ನೀಡಬಾರದು ಎಂದಿದ್ದಾರೆಂದು ಸುಳ್ಳು ಹೇಳಿದರು” ಎಂದು ಬೇಸರ ವ್ಯಕ್ತಪಡಿಸಿದರು.

ಹಿರಿಯ ಪತ್ರಕರ್ತರಾದ ಡಿ.ಉಮಾಪತಿಯವರು ಕೃತಿ ಕುರಿತು ಮಾತನಾಡಿ, “ಜನಪ್ರತಿನಿಧಿಗಳು ಕರ್ತವ್ಯಗಳನ್ನು ಬೋಧಿಸುತ್ತಿದ್ದಾರೆ, ಹಕ್ಕುಗಳನ್ನು ತುಳಿಯುತ್ತಿದ್ದಾರೆ. ಕರ್ತವ್ಯ ಪಾಲನೆ ಹಾಗೂ ಹಕ್ಕುಗಳ ಸಂರಕ್ಷಣೆ ಏಕಕಾಲದಲ್ಲಿ ಆಗಬೇಕು” ಎಂದು ತಿಳಿಸಿದರು.

ಹಿರಿಯ ಪತ್ರಕರ್ತರಾದ ಡಿ.ಉಮಾಪತಿಯವರು ಕೃತಿ ಕುರಿತು ಮಾತನಾಡಿದರು.

“ಪುಷ್ಯಶುಂಗನ ಪ್ರತಿಕ್ರಾಂತಿಗೆ ಬಾಬಾ ಸಾಹೇಬರ ಸಂವಿಧಾನದಿಂದ ಹಿನ್ನೆಡೆಯಾಗಿತ್ತು. ಆದರೆ ಪುಷ್ಯಶುಂಗನ ಪ್ರತಿಕ್ರಾಂತಿ ಮತ್ತೆ ಮುನ್ನೆಲೆಗೆ ಬಂದಿದೆ. ಅದೀಗ ಶಿಖರವನ್ನು ಮುಟ್ಟಿದೆ. ಹಳೆಯ ಕಾಂಗ್ರೆಸ್‌ ಜಾಗದಲ್ಲಿ ಬಿಜೆಪಿ ಇದೆ. ಈ ಕೃತಿಯುದ್ದಕ್ಕೂ ಇಡಬ್ಲ್ಯೂಎಸ್‌ಅನ್ನು ಹಿಂದುತ್ವದ ಪ್ರತಿಕ್ರಾಂತಿ ಎಂದು ಉಲ್ಲೇಖಿಸಿರುವುದು ಸೂಕ್ತವಾಗಿದೆ. ಬ್ರಾಹ್ಮಣರ ಬಹುದೊಡ್ಡ ಪ್ರತಿಕ್ರಾಂತಿ ಪೂನಾ ಒಪ್ಪಂದದ ಸಂದರ್ಭದಲ್ಲಾದರೇ ಇಡಬ್ಲ್ಯೂಎಸ್‌ ಎರಡನೇ ಅತಿದೊಡ್ಡ ಪ್ರತಿಕ್ರಾಂತಿಯಾಗಿದೆ. ಏನೂ ಇಲ್ಲದಿದ್ದಾಗ ಒಂದು ಕಂದೀಲಾಗಿ ಈ ಕೃತಿ ಹೊರಬಂದಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ದಲಿತ ಮುಖಂಡರಾದ ಮಾವಳ್ಳಿ ಶಂಕರ್‌, “ಡಬ್ಬಲ್‌ ಎಂಜಿನ್ ಸರ್ಕಾರ ಎನ್ನುತ್ತಾರೆ. ಎಲ್ಲಿದೆ ಡಬ್ಬಲ್‌ ಎಂಜಿನ್‌? ವಿಧಾನಸೌಧದ ಮೂರನೇ ಮಹಡಿಯಲ್ಲಿ ಒಂದು ಎಂಜಿನ್ ಇದ್ದರೆ, ಕೇಶವ ಕೃಪಾದಲ್ಲಿ ಮತ್ತೊಂದು ಎಂಜಿನ್‌ ಇದೆ” ಎಂದು ಟೀಕಿಸಿದರು.

“ಕಾಂಗ್ರೆಸ್ಸಾದಿಯಾಗಿ ಎಲ್ಲ ಪಕ್ಷಗಳೂ ಇಡಬ್ಲ್ಯೂಎಸ್‌ ಸ್ವಾಗತಿಸಿದವು. ಬಹುಜನರ ಪಕ್ಷ ಎಂದು ಹೇಳುವ ಬಿಎಸ್‌ಪಿ ಕೂಡ ಸ್ವಾಗತಿಸಿದ್ದು ಆಶ್ಚರ್ಯ ಉಂಟು ಮಾಡಿತು. ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸದಿದ್ದದ್ದು ಏತಕ್ಕೆಂದು ಅರ್ಥವಾಗಲಿಲ್ಲ” ಎಂದು ಹೇಳಿದರು.

“ಚಿಂತಕರಾದ ಶ್ರೀಪಾದ್ ಭಟ್ ಈ ಕೃತಿ ಬರಲು ಪ್ರಮುಖ ಕಾರಣ. ಈ ದೇಶದಲ್ಲಿ ನಡೆದಿರುವ ಕ್ರಾಂತಿ ಮತ್ತು ಪ್ರತಿಕ್ರಾಂತಿಯನ್ನು ಈ ಕೃತಿ ಚರ್ಚಿಸಿದೆ. ಮುಂದಿನ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಮೀಸಲಾತಿ ಅಷ್ಟೇ ಅಲ್ಲ, ಸಂವಿಧಾನವೇ ಬುಡಮೇಲಾಗುತ್ತದೆ” ಎಂದು ಎಚ್ಚರಿಸಿದರು.

ಪ್ರಾಧ್ಯಾಪಕರಾದ ಬಾಬು ಮ್ಯಾಥ್ಯೂ, ದಲಿತ ಮುಖಂಡರಾದ ವಿ.ನಾಗರಾಜ್, ವಕೀಲರಾದ ಅಶ್ವಿನಿ ಓಬುಳೇಶ್‌, ಕೃತಿ ಸಂಪಾದಕರಾದ ಬಿ.ಶ್ರೀಪಾದ ಭಟ್, ವಿಕಾಸ್ ಆರ್‌. ಮೌರ್ಯ ಹಾಜರಿದ್ದರು. ಲೇಖಕರಾದ ರವಿಕುಮಾರ್‌ ಬಾಗಿ ಕಾರ್ಯಕ್ರಮವನ್ನು ನಿರೂಪಿಸಿದರು, ಕಾರಳ್ಳಿ ಶ್ರೀನಿವಾಸ್ ವಂದಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...