Homeಮುಖಪುಟಬಿಬಿಸಿ ಸಾಕ್ಷ್ಯಚಿತ್ರ ವೀಕ್ಷಣೆ: ರಾಜಸ್ಥಾನ ಕೇಂದ್ರೀಯ ವಿವಿಯಲ್ಲಿ ವಿದ್ಯಾರ್ಥಿಗಳ ಅಮಾನತು

ಬಿಬಿಸಿ ಸಾಕ್ಷ್ಯಚಿತ್ರ ವೀಕ್ಷಣೆ: ರಾಜಸ್ಥಾನ ಕೇಂದ್ರೀಯ ವಿವಿಯಲ್ಲಿ ವಿದ್ಯಾರ್ಥಿಗಳ ಅಮಾನತು

- Advertisement -
- Advertisement -

2002ರ ಗುಜರಾತ್ ಗಲಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರದ ಕುರಿತು ಬಿಬಿಸಿ ರೂಪಿಸಿರುವ ಸಾಕ್ಷ್ಯಚಿತ್ರವನ್ನು ವೀಕ್ಷಿಸಿದ್ದಕ್ಕಾಗಿ ಅಜ್ಮೀರ್‌ನಲ್ಲಿರುವ ರಾಜಸ್ಥಾನದ ಕೇಂದ್ರೀಯ ವಿಶ್ವವಿದ್ಯಾಲಯವು 10 ವಿದ್ಯಾರ್ಥಿಗಳನ್ನು ಅಮಾನತು ಮಾಡಿದೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಶುಕ್ರವಾರ ಇಬ್ಬರು ವಿದ್ಯಾರ್ಥಿಗಳನ್ನು ಮತ್ತು ಶನಿವಾರ ಇನ್ನೂ ಎಂಟು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ. “ಈ ವಿದ್ಯಾರ್ಥಿಗಳು 14 ದಿನಗಳ ಕಾಲ ತರಗತಿಗಳಿಗೆ ಹಾಜರಾಗುವಂತಿಲ್ಲ ಮತ್ತು ಈ ಅವಧಿಯಲ್ಲಿ ಹಾಸ್ಟೆಲ್‌ನಲ್ಲಿಯೂ ಉಳಿಯುವಂತಿಲ್ಲ” ಎಂದು ಆದೇಶಿಸಲಾಗಿದೆ.

ಅಮಾನತುಗೊಂಡ ವಿದ್ಯಾರ್ಥಿಗಳಲ್ಲಿ ಒಬ್ಬರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಪ್ರತಿಕ್ರಿಯಿಸಿದ್ದು, “ನಮ್ಮ ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಸಾಕ್ಷ್ಯಚಿತ್ರವನ್ನು ವೀಕ್ಷಿಸಿದ್ದೇವೆಯೇ ಹೊರತು, ಯಾವುದೇ ಸಾರ್ವಜನಿಕ ಪ್ರದರ್ಶನವನ್ನು ನಡೆಸಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರು ಘೋಷಣೆಗಳನ್ನು ಕೂಗಿ ಸಾಕ್ಷ್ಯಚಿತ್ರ ವೀಕ್ಷಿಸದಂತೆ ತಡೆದಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

‘ಭಾರತ: ಮೋದಿ ಪ್ರಶ್ನೆ’ ಎಂಬ ಶೀರ್ಷಿಕೆಯ ಬಿಬಿಸಿಯ ಎರಡು ಭಾಗಗಳ ಸಾಕ್ಷ್ಯಚಿತ್ರದ ಮೊದಲ ಸಂಚಿಕೆಯು ಜನವರಿ 17ರಂದು ಬಿಡುಗಡೆಯಾಯಿತು. ಗುಜರಾತ್‌ ಗಲಭೆಯ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರು ನಿಷ್ಕ್ರಿಯರಾಗಿದ್ದನ್ನು ಬಿಬಿಸಿ ಪ್ರಸ್ತಾಪಿಸಿದೆ. ಎರಡನೇ ಭಾಗ ಮಂಗಳವಾರ ಬಿಡುಗಡೆಯಾಗಿದೆ. ಮೋದಿಯವರು ಪ್ರಧಾನಿಯಾದ ಬಳಿಕ ದೇಶದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಆಗಿರುವ ಬೆಳವಣಿಗೆಗಳನ್ನು ಎರಡನೇ ಭಾಗ ಚರ್ಚಿಸಿದೆ.

ಭಾರತದಲ್ಲಿ ಸಾಕ್ಷ್ಯಚಿತ್ರ ಲಭ್ಯವಾಗದಿದ್ದರೂ, ಇದರ ಲಿಂಕ್‌ಗಳನ್ನು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ದೆಹಲಿ ವಿಶ್ವವಿದ್ಯಾಲಯ, ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ, ಅಂಬೇಡ್ಕರ್ ವಿಶ್ವವಿದ್ಯಾಲಯ ಮತ್ತು ಜಾಮಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ, ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಮತ್ತು ಕೋಲ್ಕತ್ತಾದ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ಆಯೋಜಿಸಿದ್ದು ವಿವಾದಕ್ಕೆ ಗುರಿಯಾಗಿದೆ.

ಸಾಕ್ಷ್ಯಚಿತ್ರದ ತುಣುಕುಗಳನ್ನು ಹಂಚಿಕೊಳ್ಳದಂತೆ ನಿರ್ಬಂಧಿಸಲು ಯೂಟ್ಯೂಬ್‌ ಮತ್ತು ಟ್ವಿಟರ್‌ಗೆ ನಿರ್ದೇಶನಗಳನ್ನು ನೀಡಲು ‘ಮಾಹಿತಿ ತಂತ್ರಜ್ಞಾನ ನಿಯಮಗಳು, 2021’ರ ಅಡಿಯಲ್ಲಿ ಲಭ್ಯವಿರುವ ತುರ್ತು ಅಧಿಕಾರವನ್ನು ಸರ್ಕಾರ ಬಳಸಿದೆ.

ರಾಜಸ್ಥಾನದ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಏನಾಯಿತು?

ಜನವರಿ 26ರ ಸಂಜೆ, ಕೆಲವು ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಡಿವೈಸ್‌ಗಳಲ್ಲಿ ಸಾಕ್ಷ್ಯಚಿತ್ರವನ್ನು ವೀಕ್ಷಿಸಲು ವಿಶ್ವವಿದ್ಯಾನಿಲಯದ ಅಂಚೆ ಕಚೇರಿಯ ಬಳಿ ಜಮಾಯಿಸಿದ್ದರು ಎಂದು ಅಮಾನತುಗೊಂಡ ವಿದ್ಯಾರ್ಥಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್‌’ಗೆ ತಿಳಿಸಿದ್ದಾರೆ. ಆದರೆ, ಆರ್‌ಎಸ್‌ಎಸ್‌ನ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿ ಸದಸ್ಯರು ಘೋಷಣೆಗಳನ್ನು ಕೂಗಲು ಆರಂಭಿಸಿದ್ದರಿಂದ ವಿದ್ಯಾರ್ಥಿಗಳು ಅಲ್ಲಿಂದ ತೆರಳಿದ್ದಾರೆ.

“ನಂತರ ಎಬಿವಿಪಿ ಸದಸ್ಯರು ಕಾಲೇಜಿನ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಸಂದೇಶಗಳನ್ನು ಹರಿಬಿಟ್ಟು ಬ್ಯಾಸ್ಕೆಟ್‌ಬಾಲ್ ಅಂಕಣದಲ್ಲಿ ವಿದ್ಯಾರ್ಥಿಗಳನ್ನು ಸೇರುವಂತೆ ಹೇಳಿದ್ದಾರೆ” ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ನಂತರ ಎಬಿವಿಪಿ ಸದಸ್ಯರು ಘೋಷಣೆಗಳನ್ನು ಕೂಗಿದರು, ಸಾಕ್ಷ್ಯಚಿತ್ರವನ್ನು ವೀಕ್ಷಿಸಿದವರ ಹಾಸ್ಟೆಲ್‌ಗಳಿಗೆ ನುಗ್ಗಿದರು ಮತ್ತು ಅವರ ಬಾಗಿಲುಗಳನ್ನು ಝಾಡಿಸಿ ಒದ್ದರು ಎಂದು ಅಮಾನತುಗೊಂಡ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

“ಸಾಕ್ಷ್ಯಚಿತ್ರವನ್ನು ವೀಕ್ಷಿಸದಂತೆ ನಮ್ಮ ಸಂಘಟನೆಯ ಸದಸ್ಯರು, ಕಾಲೇಜು ಆಡಳಿತ ಮಂಡಳಿ ಮತ್ತು ಪೊಲೀಸರು ವಿದ್ಯಾರ್ಥಿಗಳನ್ನು ಕೇಳಿಕೊಂಡರೂ ಅವರು ಮಣಿಯಲಿಲ್ಲ” ಎಂದು ವಿಶ್ವವಿದ್ಯಾಲಯದ ಎಬಿವಿಪಿ ಮುಖ್ಯಸ್ಥ ವಿಕಾಶ್ ಪಾಠಕ್ ಹೇಳಿದ್ದಾರೆ.

ವಿದ್ಯಾರ್ಥಿಗಳ ಶಿಸ್ತಿಗೆ ಸಂಬಂಧಿಸಿದಂತೆ ವಿಶ್ವವಿದ್ಯಾನಿಲಯದ ಸುಗ್ರೀವಾಜ್ಞೆ 47 ರ ಕಲಂ 3.3 ಮತ್ತು 3.5 ರ ಅಡಿಯಲ್ಲಿ 10 ವಿದ್ಯಾರ್ಥಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಮಾನತು ಆದೇಶದ ಪ್ರತಿ ತಿಳಿಸಿದೆ.

ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್‌ನ ರಾಜಸ್ಥಾನ ಘಟಕವು ವಿಶ್ವವಿದ್ಯಾನಿಲಯದ ಕುಲಪತಿಯವರಿಗೆ ಪತ್ರ ಬರೆದಿದ್ದು, ಕೋಮು ಕೇಂದ್ರಿತವಾಗಿ ಅಮಾನತು ಆದೇಶ ಹೊರಡಿಸಲಾಗಿದೆ ಎಂದು ಟೀಕಿಸಿದೆ. ಅಮಾನತುಗೊಂಡ 10 ವಿದ್ಯಾರ್ಥಿಗಳಲ್ಲಿ ಎಂಟು ಮಂದಿ ಮುಸ್ಲಿಮರು ಮತ್ತು ಒಬ್ಬರು ಕ್ರಿಶ್ಚಿಯನ್ ಎಂದು ಸಂಸ್ಥೆಯು ತನ್ನ ಪತ್ರದಲ್ಲಿ ಉಲ್ಲೇಖಿಸಿದೆ.

ಅಮಾನತು ಆದೇಶಗಳನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಒತ್ತಾಯಿಸಲಾಗಿದೆ. “…ವಿದ್ಯಾರ್ಥಿಗಳ ಪ್ರತಿಕ್ರಿಯೆ ಪಡೆದಿಲ್ಲ. ಯಾವುದೇ ವಿಚಾರಣೆ ಮಾಡದೆ, ಶೋಕಾಸ್ ನೋಟಿಸ್ ನೀಡದೆ, ಅವರನ್ನು ವಿಶ್ವವಿದ್ಯಾಲಯ ಮತ್ತು ಹಾಸ್ಟೆಲ್‌ನಿಂದ 15 ದಿನಗಳವರೆಗೆ ಹೊರಹಾಕಲಾಗಿದೆ” ಎಂದು ಆಕ್ಷೇಪ ವ್ಯಕ್ತಪಡಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...