Homeನ್ಯಾಯ ಪಥಪ್ರಶ್ನಿಸುವ ಪಿಶಾಚಿಗಳು; ಸತ್ತಂತೆ ಬದುಕಿದ್ದವರು ಪ್ರಶ್ನಿಸಲಾರರು ಎಂಬುದು ನಿಮ್ಮ ಮನದಿಂಗಿತವೆ?

ಪ್ರಶ್ನಿಸುವ ಪಿಶಾಚಿಗಳು; ಸತ್ತಂತೆ ಬದುಕಿದ್ದವರು ಪ್ರಶ್ನಿಸಲಾರರು ಎಂಬುದು ನಿಮ್ಮ ಮನದಿಂಗಿತವೆ?

- Advertisement -
- Advertisement -

ಈಗಿನ ಭಾರತವನ್ನು ನೋಡಿದ ಪಂಪ-ರನ್ನರ ’ಭಾರತ’ಗಳ ಹಿರೀ ಮರುಳುಗಳೆರಡು, ’ದ್ವಾಪರಯುಗದ ಕುರುಕ್ಷೇತ್ರ ರಣಭೂಮಿಯಲ್ಲಿದ್ದ ಹೆಣಗಳನ್ನು ರಾಶಿ ಹಾಕಿ, “ಲೋಭವಶದಿನತಿದೂರದಿಂದೆ ಬಂದ ಪಿಶಾಚಾ ನಿವಹಕ್ಕೆಲ್ಲಂ [ಶವಂ] ಮಾಂಸವಿಕ್ರಯಂ ಗೆಯ್ದ” ಪರದ ಮರುಳುಗಳು ನಾವು! ಈ ಕಲಿಯುಗದಲ್ಲಿ ನಮಗಿಂತ ಜೋರಾಗಿ ಆಸ್ಪತ್ರೆಗಳು ಹೆಣಗಳ ವ್ಯಾಪಾರವನ್ನು ನಡೆಸುತ್ತಿವೆಯಲ್ಲಾ? ಅಂದು “ನವರಕ್ತರಕ್ತವಸ್ತ್ರಂ
ನವಾಂತ್ರಯಜ್ಞೋಪವೀತಮೆಸೆಯೆ….. ರಕ್ಕಸಪಾರ್ವರ್ ನಮ್ಮ ಸಮೂಹಕ್ಕೆಲ್ಲ ’ಅಡಗುಣಿಮೆಂದು’ ಬೋಧಿಸಿದ್ದರು. ಇಂದು ಶ್ರಾದ್ಧ ಮಾಡುತ್ತಾ, ಮುಕ್ತಿಯ ಮಾರ್ಗ ತೋರುವ ಪಾರ್ವರ್ ಕಾಣುತ್ತಿಲ್ಲವಲ್ಲ! ಹಾಗಾಗಿಯೇ ಅಸ್ಥಿಯ ಬದಲಿಗೆ ಹೆಣಗಳು ನದಿಗಳಲ್ಲಿ ತೇಲುತ್ತಿವೆಯಲ್ಲ? ’ನಾವು ಎಷ್ಟೋ ರಾಜರನ್ನು ನೋಡಿದ್ದೇವೆ. ರಣರಂಗದ ಹೆಣಗಳ ಮೇಲೆ ನಡೆದ ದುರ್ಯೋಧನನಂತಹ ರಾಜನೊಂದಿಗೇ ಮಾತಾಡಿದ್ದೇವೆ. ನಮ್ಮನ್ನು ಬಡಿಯಲು ಗದೆ ಎತ್ತಿದ್ದಕ್ಕೆ, ಬಡಿಗೆಗಳನ್ನು ಹಿಡಿದು, ಗದರಿಸಿದ್ದೆವು. ಈಗಿನ ಜನ ಏನು ಮಾಡುತ್ತಿದ್ದಾರೆ?’ ಎಂದು ಪರಸ್ಪರ ಮಾತಾಡಿಕೊಳ್ಳುತ್ತಿದ್ದವು. ಅಷ್ಟರಲ್ಲಿ ಸರ್ಕಾರ ಬೀಳಿಸಿ, ರಾಜೀನಾಮೆ ಕೊಡುವುದಕ್ಕೆ ಓಡೋಡಿ ಬರುವ ಶಾಸಕರಂತೆ, ಯುಗಯುಗಗಳರಣರಂಗಗಳನ್ನು ಕಂಡಿದ್ದ ಮರುಳುಗಳು ಗುಂಪುಗೊಂಡವು. ನಾಳೆಯಿಂದ ಲಾಕ್‌ಡೌನ್ ಎಂದಾಕ್ಷಣ ಮಾರ್ಕೆಟಿನಲ್ಲಿ ಸೇರುವ ಜನರಂತೆ, ಇಪ್ಪತ್ತೊಂದನೆಯ ಶತಮಾನದ ಮರುಳುಗಳು ಆ ಗುಂಪಿನತ್ತ ಹಾರಿಬಂದವು. ತಮ್ಮನ್ನು ಪರಿಚಯಿಸಿಕೊಂಡವು.

ಗುಂಪನ್ನುದ್ದೇಶಿಸಿ ಹಿರೀ ಮರುಳು ’ಕೌರವನಿಗೆ ಇದ್ದಂತೆ ರಾಮಭೂಮಿಯಲ್ಲೂ ವಿರೋಧ ಪಕ್ಷಗಳು ಇರಬೇಕಲ್ಲ? ಅವುಗಳು ಏನು ಮಾಡುತ್ತಿವೆ?’ ಎಂದಿತು. ’ಅವುಗಳು ತಮ್ಮ ಜವಾಬ್ದಾರಿಗಳನ್ನು ಮರೆತು ತುಂಬಾ ವರ್ಷಗಳಾಗಿವೆ. ತಮ್ಮಲ್ಲಿದ್ದವರನ್ನೇ ಉಳಿಸಿಕೊಳ್ಳಲಾಗದವು, ಪ್ರಶ್ನಿಸಬಲ್ಲವೆಂದರೆ ನಂಬುತ್ತೀರಾ?’ ಎಂದು ಮೊನ್ನೆಮೊನ್ನೆ ಪ್ರಾಣಬಿಟ್ಟ ಮರುಳು ವ್ಯಂಗ್ಯವಾಡಿತು. ’ಒಟ್ಟಿನಲ್ಲಿ ಸತ್ತಂತೆ ಬದುಕಿದ್ದವರು ಪ್ರಶ್ನಿಸಲಾರರು ಎಂಬುದು ನಿಮ್ಮ ಮನದಿಂಗಿತವೆ?’ ಗುಂಪಲ್ಲಿದ್ದ ದ್ವಾಪರಯುಗದ ಮರುಳು ಕೇಳಿತು. ಹೊಸ ಮರುಳುಗಳು ಒಕ್ಕೊರಲಿನಿಂದ ’ಹೌದು’ ಎಂದವು. ಅಂತಿಮವಾಗಿ ಕೊರೊನಾದಿಂದ ಜೀವವನ್ನು; ಸರ್ಕಾರಗಳಿಂದ ಜೀವ ಮತ್ತು ಜೀವನಗಳನ್ನು ಕಳೆದುಕೊಂಡವರ ಪರವಾಗಿ ’ನಾವೇ ಪ್ರಶ್ನಿಸೋಣ’ ಎಂಬ ತೀರ್ಮಾನಕ್ಕೆ ಬಂದವು.
ಕಳೆದುಹೋಗಿದ್ದ ಜನನಾಯಕನನ್ನು ಪಾಂಡವರಂತೆ ಹುಡುಕಿ, ಹುಡುಕಿ ಮರುಳುಗಳು ದಣಿದವು. ಎಲ್ಲಿಯೂ ಸಿಗದವನ ಮೇಲೆ ಕೋಪ ಕಾರುತ್ತಲೇ, ವಿಶ್ರಾಂತಿಗೆಂದು ಕೂತವು. ನಿನ್ನೆ ದಿನ ಪ್ರಾಣಬಿಟ್ಟ ಪ್ರಾಧ್ಯಾಪಕ ಮರುಳೊಂದು ’ನಾವು-ನೀವು ಕಂಡ ಕಾಲಗಳ ನಡುವೆ ಅಷ್ಟೇನೂ ವ್ಯತ್ಯಾಸವಿಲ್ಲ. ರಾಜರಿಗೆ ಭಟ್ಟಂಗಿಗಳಿದ್ದರು. ಈಗ ಭಟ್ಟಂಗಿಗಳು ಭಕ್ತರಾಗಿದ್ದಾರೆ. ಮಾಧ್ಯಮಗಳು ಟ್ರೋಲ್ ಪಡೆಗಳಾಗಿವೆ. ಅವೋ ಜೋಳದ ಪಾಲಿಗಾಗಿ, ಅವನಿಗೂ ಮೀರಿಸುವಷ್ಟು ಭಯಂಕರ ಕೀರ್ತಿ ಪತಾಕೆಗಳನ್ನು ಹಾರಿಸುತ್ತಿವೆ’ ಎಂದು ದೇಶದ ಅಚ್ಛೇದಿನಗಳನ್ನು ವಿವರಿಸುತ್ತಿತ್ತು. ಮೊದಲೇ ಆಯಾಸಗೊಂಡಿದ್ದ ಮರುಳುಗಳು, ’ಬದುಕಿದ್ದಾಗ ನಿನ್ನ ವಿದ್ಯಾರ್ಥಿಗಳಿಗೆ ಕೊಡದ ಲೆಕ್ಚರರ್‌ಅನ್ನು ನಮಗೆ ಕೊಡುತ್ತಿದ್ದೀಯಲ್ಲ ಎಂಬಂತೆ, ಪ್ರಾಧ್ಯಾಪಕನ ಮಾತುಗಳಿಗೆ ಕಿವಿಯಾಗದೇ ತಿನ್ನಲು ಸುತ್ತಲಿದ್ದ ಹೆಣಗಳ ಮೇಲೆ ಕಣ್ಹಾಯಿಸುತ್ತಿದ್ದವು.

’ಈ ಹೆಣಗಳನ್ನು ನಾವು ತಿನ್ನೋಣವೆಂದರೆ ಹಲವರು ಧರ್ಮ, ರಕ್ತ, ಜಾತಿ, ಹಣ, ಅಂತಸ್ತುಗಳೆಂಬ ಶ್ರೇಷ್ಠ ಕಾಯಿಲೆಗಳಿಗೆ ತುತ್ತಾದವರು. ಬಡವರ ರಕ್ತ ಕುಡಿಯೋಣವೆಂದರೆ ಪ್ರಭುತ್ವಗಳು ಅದನ್ನೆಲ್ಲಾ ಹೀರಿವೆ. ನರಳುತ್ತಿರುವವರ ರಕ್ತವನ್ನು ಕುಡಿಯಬೇಕೆಂದರೆ ಆಸ್ಪತ್ರೆಗಳು ಆಗಲೇ ಮಾಂಸ-ರಕ್ತದ ಸವಿ ನೋಡುತ್ತಿವೆ. ಇಷ್ಟೆಲ್ಲಾ ಹೆಣಗಳು ಬೀಳಲು ಕಾರಣನಾದ ನರರಾಕ್ಷಸನ ರಕ್ತ ಹೀರೋಣವೆಂದರೆ ಎಲ್ಲಿ ಅಡಗಿದ್ದಾನೋ?’ ಎಂದುಕೊಂಡು ಗಾಳಿ ಬೀಸಿಕೊಳ್ಳುತ್ತಿದ್ದವು. ದೂರದಿಂದ ಕಿಂಕರ ಮರುಳಿನ ರವವೊಂದು ಗುಂಪಿನ ಮೇಲಪ್ಪಳಿಸಿತು. ಕೂಡಲೇ ಆ ದಿಕ್ಕಿನತ್ತ ಹಾರಿದವು. ವೈಶಂಪಾಯನ ಸರೋವರದ ತಳದಲ್ಲಿ ಕದ್ದು ಕೂತ ದುರ್ಯೋಧನನಂತೆ, ಟೈಟ್ ಸೆಕ್ಯುರಿಟಿಯಿರುವ ಅರಮನೆಯ ಅಂಗಳದಲ್ಲಿರುವುದನ್ನು ಕಂಡವು. ’ರಾಮಭೂಮಿ ಲಂಕೆಯಂತೆ ಉರಿಯುತ್ತಿದೆ. ಈ ಪುಣ್ಯಾತ್ಮ ನವಿಲಿಗೆ ಕಾಳು ತಿನ್ನಿಸುತ್ತಾ, ಕಾಲಹರಣ ಮಾಡುತ್ತಿರುವನಲ್ಲಾ?’ ಎಂದು ಕಿಡಿಕಾರಿದವು. ಜನನಾಯಕ ತನ್ನ ಗುರುವನ್ನು ಕಂಡಂತೆ, ಇವುಗಳತ್ತಲೂ ಅಸಡ್ಡೆಯ ನೋಟ ಎಸೆದ.

Photo Courtesy: The Print

ದ್ವಾಪರಯುಗದ ಮರುಳು ’ಸುಳ್ಳಿನ ಪಾಶುಪತಾಸ್ತ್ರ ಹೊಂದಿರುವ ಶೂರನೇ, ಹಿಂದಿನ ದೊಡ್ಡಣ್ಣ ಅರ್ಧಾಸನವನ್ನಿತ್ತನೆಂಬಂತೆ ಅವನ ಜಯಕ್ಕಾಗಿ ಪ್ರಚಾರ ಮಾಡಿದೆ. ಒಂದು ನಮಸ್ಕಾರ ಮಾಡಲು ನೂರುಕೋಟಿ ಸುರಿದೆ. ಬಂಡವಾಳಶಾಹಿಗೆ ರಾಜಗೌರವ ಕೊಟ್ಟೆ. ಕೊರೊನಾ ಹರಡಿಸಿದೆ. ವಿದೇಶಗಳಿಂದ ಪುಷ್ಪಕ ವಿಮಾನಗಳಲ್ಲಿ ಬಂದವರನ್ನೂ ತಡೆಯಲಿಲ್ಲ. ಎಲೆಕ್ಷನ್ ರ್‍ಯಾಲಿಗಳನ್ನು; ಧಾರ್ಮಿಕ ಸಮ್ಮೇಳನಗಳನ್ನು ನಡೆಸಿದೆ. ಕೊರೊನಾದ ಲೆಪ್ಟು-ರೈಟು, ಟಾಪು-ಬಾಟಂ ಚಂಡಾಡಿದ್ದಾಗಿ ನ್ಯೂಸ್ ಮಾಡಿಸಿದೆ. ಜನರಿಂದ ತಟ್ಟೆ ಬಡಿಸಿದೆ. ನೂರಾರು ಮೈಲಿ ನಡೆಸಿದೆ. ಬಡತನದ ಕಡಲಿಗೆ ವಡವಾಗ್ನಿಯಾದೆ. ಶ್ರೀಸಾಮಾನ್ಯರನ್ನು ದಹಿಸುವ ಕಾಡ್ಗಿಚ್ಚಾಗಿ ದಹಿಸಿ, ತೇಲಿಸಿಯೂ ಬಿಟ್ಟೆ! ಸಫಾಯಿಯೇ ಈಗೇಕೆ ನಿರುದ್ಯೋಗಿಯಾಗಿರುವೆ?’ ಎಂದು ತನ್ನ ಹಕ್ಕನ್ನು ಚಲಾಯಿಸಿತು.

ಮತ್ತೊಂದು ಮರುಳು ’ಆ ಅರ್ಜುನನಂತೆ ಸಾವುಗಳ ಮೇಲೆ ಸಿಂಹಾಸನವೇರಿದೆ! ಕಾಲಕ್ಕೆ ತಕ್ಕ ವೇಷತೊಟ್ಟೆ. ಮೃಷ್ಟಾನ್ನ ಸವಿದೆ. ಕಾಲಿಟ್ಟಲ್ಲೆಲ್ಲಾ ನೆರವನ್ನು ಹರಿಸಿ, ಆ ಕರ್ಣನನ್ನೇ ಮೀರಿಸಿದ ಮಹಾದಾನಿಯೇ? ನಾವು ಹಸಿವಿನಿಂದ ಸಾಯುವಾಗ ನಿಮ್ಮ ಕಣ್ಣುಗಳಿಗೆ ಕಾಣಲಿಲ್ಲವೆ ಮಹಾಪ್ರಭು?’ ಎನ್ನುತ್ತಲೇ ಮೇಲೆರಗಿತು. ಉಳಿದ ಪಿಶಾಚಿಗಳು ’ಸುಮ್ಮನಿರು ಇನ್ನೂ ನಮ್ಮೆಲ್ಲರ ಪ್ರಶ್ನೆಗಳಿವೆ. ಕೇಳೋಣ’ ಎಂದು ತಡೆದವು. ಇನ್ನೊಂದು ’ದುರ್ಯೋಧನ ಹಿಂದಿನ ಅರಸರಿಗೆ ಅಗೌರವ ತೋರಿದ್ದರಿಂದಾಗಿ, ಪಾಂಡವರನ್ನು ಸೋಲಿಸಲಾಗಲಿಲ್ಲ, ಇಡೀ ಭರತಭೂಮಿಯನ್ನು ಆಳಲಿಲ್ಲ. ನೀನು ಸಹ ಅವನಂತೆ ಮೆರೆಯುತ್ತಾ, ದೇಶ ಕಟ್ಟಿದವರನ್ನು ವ್ಯಂಗ್ಯವಾಡಿದೆ. ಮುಕ್ತ ಮಾಡುತ್ತೇನೆಂವನು, ಗೆಲ್ಲಿಸಿದವರನ್ನೇ ಮುಕ್ತ ಮಾಡುತ್ತಿರುವೆಯಲ್ಲಾ? ರಕ್ತರೇಖೆಯ ಹಸ್ತವನ್ನು ಹೊಂದಿರುವ ಶಾಂತಿದೂತನೇ ಈಗ ಏಕೆ ಮಾತಾಡುತ್ತಿಲ್ಲ?’ ಎಂದು ಗದರಿತು.

’ವ್ಯಾಪಾರಿ ಪಿಶಾಚಿಗಳಾದ ನಾವುಗಳೇ ಜಿಗುಪ್ಸೆಗೊಳ್ಳುವಂತೆ ತೆರಿಗೆ ಹಾಕಿ, ಬೆಲೆ ಏರಿಸಿದೆ. ಜನರನೆತ್ತರನ್ನು ಹೀರಿದೆ. ಜನರ ದುಡ್ಡಲ್ಲಿ ಕಟ್ಟಿದ್ದ ಹೆಮ್ಮರಗಳಂತಹ ಸಂಸ್ಥೆಗಳನ್ನು ಬೇರುಸಹಿತ ಕಿತ್ತುಹಾಕಿದೆ. ಉಕ್ಕೇರುವ ಸಮಸ್ಯೆಗಳ ಸಮುದ್ರದಲ್ಲಿ ಜನರನ್ನು ಮುಳಗಿಸಿ, ಪಟ್ಟಕ್ಕೇರಿಸಿದವರನ್ನು ಚಟ್ಟಕ್ಕೇರಿಸಿದೆ. ಬೇಕಾದವರನ್ನು ತೇಲಿಸಿದೆ. ಹಾರಿಸಿದೆ. ಪ್ರಶ್ನಿಸಿದವರನ್ನು ರಾಕ್ಷಸರೆಂದೆ. ಪುರಾಣದ ದೈವಗಳು ರಾಕ್ಷಸರನ್ನು ಸದೆಬಡಿಯಲು ನರರನ್ನು ಬಳಸಿದಂತೆ, ಇಡಿ-ಏಡಿ-ಪಾಡಿಗಳನ್ನೆಲ್ಲಾ ಬಳಸಿದೆ. ಹೇ! ಜನವೈರಾಣುಗಳೇ ನಿಮ್ಮ ಪರಾಕ್ರಮಗಳನ್ನು ಸಾರಲು, ನಮ್ಮನ್ನೆಲ್ಲಾ ಕೊಲ್ಲುತ್ತಿದ್ದೀರಲ್ಲಾ? ಇನ್ನೆಷ್ಟು ಕಳೇಬರಗಳು ಬೇಕು ನಿಮ್ಮ ಕೀರ್ತಿಸೌಧಗಳನ್ನು ಕಟ್ಟಲು?’ ಎನ್ನುತ್ತಾ ಮರುಳೊಂದು ಹಲ್ಲುಕಡೆಯುತ್ತಿತ್ತು.

ಹೆಣ್ಣು ಪಿಶಾಚಿಯೊಂದು ’ನಾವು ಬದುಕಿದ್ದಾಗ ನಿಮಗೇನು ಬೇಕೆಂದು ಕೇಳದವನೆ, ಸಕಲ ನಿರ್ಧಾರಕನೆ, ನಮ್ಮನ್ನು ಎಲ್ಲೆಂದರಲ್ಲ್ಲಿ ಕ್ಯೂ ನಿಲ್ಲಿಸಿದೆ. ನಿಂತೆವು. ಸತ್ತೆವು. ಸಾಯುತ್ತಲೇ ಇದ್ದಾಗಲೂ ಶಾಂತಮೂರ್ತಿಯಾಗಿರುವೆ! ನಿಮ್ಮವರೋ- ಆಕ್ಸಿಜನ್ ಕೇಳಿದರೆ ಕೋರ್ಟ್‌ಗೆ ಹೋಗುತ್ತಾರೆ. ಅಕ್ಕಿ ಕೇಳಿದರೆ ಸಾಯಿರಿ, ನೋಟ್ ಪ್ರಿಂಟ್ ಮಾಡ್ತೀವಾ? ಅನ್ತಾರೆ. ಒಂದು ಸಾವಿಗೂ ನೊಂದುಕೊಳ್ಳದ ಹೃದಯಹೀನರು ಸಾವುಗಳ ಲೆಕ್ಕ ಬರೆಯುತ್ತಾರೆ. ಬೆಡ್ ಕೇಳಿದರೆ, ದಂಧೆ ನಡೆಸ್ತಾರೆ… ಲಸಿಕೆ ಕೇಳಿದರೆ ಬೊಬ್ಬೆಯೊಡೆಯಬೇಡಿ, ನಾವೇನು ನೇಣು ಹಾಕಿಕೊಳ್ಳಬೇಕೆ? ಎಂದೆಲ್ಲಾ ಹೆದರಿಸುತ್ತಾರೆ. ನಾವೇನು ಪಾಪ ಮಾಡಿದ್ದೆವು…’ ಎನ್ನುತ್ತಾ ಮಣ್ಣು ತೂರಿ, ಬೆರಳ ಲಟಿಕೆ ಮುರಿಯುತ್ತಾ ಶಾಪ ಹಾಕಿತು.

ಮಗದೊಂದು ಪಿಶಾಚಿ ’ನೀವೆಲ್ಲರೂ ಲೆಕ್ಕಕೊಡಿ ಅಂತ ಹಿಂದಿನವರ ಬೆನ್ನು ಬಿದ್ದಿದ್ದು. ನಮ್ಮ ದಾಖಲೆಗಳನ್ನು ಕೇಳಿದ್ದು. ಈಗ ನಮ್ಮ ಸಾವಿನ ಲೆಕ್ಕನಾದರೂ ಸರಿಯಾಗಿ ಕೊಡ್ರೀ.. ಚುನಾವಣಾ ಪ್ರಚಾರದಲ್ಲಿ ಉಚಿತ ಲಸಿಕೆ ಕೊಡುತ್ತೇವೆನ್ನುತ್ತಲೇ… ವಿಶ್ವಗುರುವಾಗುವ ಚಟದಲ್ಲಿ ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ಏಕೆ ಕಳಿಸಿದೆ? ಈ ಗುಣಗಳಲ್ಲಿ ನಿಮ್ಮಂಥವರನ್ನು ಮೀರಿಸುವವರಾರು? “ಆರಯೆ ನೃಪರಾರುಂ ವಾಕ್ಸಾರರ್ ಕರ್ತವ್ಯಸಾರರರಲ್ಲದಂತೆ”ಂಬ ಮಾತನ್ನು ದಿಟಗೊಳಿಸಿದೆ.

ಗುಜರಾತ್ ಮಾದರಿ
Photo Courtesy: PTI

’ಮನದ ಮಾತುಗಳಲ್ಲಿ ಬಡಾಯಿ ಕೊಚ್ಚುವ ಉತ್ತರಕುಮಾರನೆ, ರಾಮರಾಜ್ಯವೆಲ್ಲಿ? ಪಾಸಿಟಿವ್ ಕಥೆಗಾರನೆ…. ಸಾನಿಟೈಸರ್‌ನಿಂದ ಜವಾಬ್ದಾರಿಗಳನ್ನೆಲ್ಲಾ ತೊಳೆದುಕೊಂಡೆ. ಮೊಸಳೆ ಕಣ್ಣೀರು ಸುರಿಸಿದೆ. ನಾವೆಲ್ಲಾ ನರಳುವಾಗ ಚುನಾವಣೆ ಏನಾದರೂ ಇದ್ದಿದ್ದರೆ ಆಸ್ಪತ್ರೆಗಳಲ್ಲಿ ವೆಂಟಿಲೇಟರ್  ಬದಲಿಗೆ ಇ.ವಿ.ಎಂ. ಮಿಷನ್‌ಗಳ ವ್ಯವಸ್ಥೆ ಮಾಡಿಸಿ, ಓಟಿಂಗ್ ಬೂತನ್ನಾಗಿಸಲೂ ಅಂಜದ ಚಕ್ರೇಶ್ವರನಲ್ಲವೆ ನೀನು? ವ್ಯಂಗ್ಯಚಿತ್ರಕಾರ ಪಿಶಾಚಿಯೊಂದು ತನ್ನ ಗೆರೆಯಿಂದ ತಿಕಕ್ಕೆ ಬರೆ ಎಳೆದಂತೆ ಪ್ರಶ್ನಿಸಿತು.

ಕಾಮ್ರೇಡ್ ಪಿಶಾಚಿಯೊಂದು ’ಪತ್ರಿಕಾಗೋಷ್ಠಿಯನ್ನು ಜಯಿಸದ ಮಹಾಪರಾಕ್ರಮಿ ಚೌಕಿದಾರನೇ, ಪ್ರಧಾನ ಸೇವಕನೆಂಬ ಬಿರುದನ್ನು ಉಳಿಸಿಕೊಳ್ಳಲೇಬೇಕೆಂದರೆ ಮೊದಲು ಅದನ್ನು ಎದುರಿಸು. ಅಸಾಧ್ಯವಾದರೆ ಆರೋಗ್ಯ-ಶಿಕ್ಷಣಗಳನ್ನು ರಾಷ್ಟ್ರೀಕರಣ ಮಾಡಿ ಚಾರಿತ್ರ್ಯವನ್ನು ಕಾಪಾಡಿಕೊ. ಆಗದಿದ್ದರೆ ಕುರ್ಚಿ ಬಿಟ್ಟಿಳಿ. ಬದುಕಿದ್ದವರಿಗೆ ತುರ್ತಾಗಿ ಒಂದು ಸರ್ಕಾರ ಬೇಕಿದೆ.. ಇಲ್ಲವಾದರೆ ಮುಂದಿನ ಚುನಾವಣೆಯಲ್ಲಿ ಓಟು ಕೇಳುವ ನಿನ್ನ ಪಡೆಯನ್ನು “ಬಡಿಗೊಂಡು ಗೋಣಿಪಣ್ಣಂ ಬಡಿವಂತಿರೆ… ಪೆಂಕುಳಿನಾಯಂ ಬಡಿವಂತಿರೆ, ಪಾೞುಡುವಂ ಬಡಿವಂತಿರೆ” ಜನರು ಬಡಿಯಬಹುದೆ’ನ್ನುತ್ತಾ ಉರಿವ ಆಕ್ರೋಶವನ್ನು ಹೊರಹಾಕಿತು.

ತನ್ನ ಸರದಿ ಬಂದಾಗ ಕವಿಪಿಶಾಚಿಯೊಂದು “ನವಭೂತಭಾಷೆಯಿಂ ಕುಱುಪುವೇೞ್ದು…..”
ಧನಿಕರಿಗಿದು ಕಾಲ
ಮೂಢರಿಲ್ಲಿ ವಿಜ್ಞಾನಿಗಳು
ಜನನಾಯಕರಿಗಿದು ಲಾಭದ ದಾರಿ
ಪ್ರಶ್ನಿಸಿದವರಿಲ್ಲಿ ಬಂಧಿಗಳು
ಭಟ್ಟಂಗಿ ಭಕ್ತರಿಗಿದು ಸುವರ್ಣಾವಕಾಶ
ವಿದ್ಯಾವಂತರಿಲ್ಲಿ ನಿರುದ್ಯೋಗಿಗಳು…

ಗೋಗ್ರಹಣಗಳಲ್ಲಿ ಅಮಾಯಕರನ್ನು ಕೊಂದಾಗ
ಹೆಣ್ಣುಗಳ ಮಾನ ಹರಾಜಾದಾಗ
ನೆರೆದೇಶವೊಂದು ಗಡಿಯನ್ನು ಒತ್ತಿದ್ದಾಗ
ಊರೂರುಗಳಲ್ಲಿ ಹೆಣಗಳು ಉರುಳುವಾಗ
ಮರೆಯಾಗುವ ನಾಯಕರ
ಗಂಡಸ್ತನ ಇರುವುದೇ ’ಸಿ.ಡಿ’ಗಳಲ್ಲಿ!
ಚರಕ ತಿರುಗಿಸಿದರೆ ನೀನೇನು ಮಹಾತ್ಮನೆ?

ಆತ್ಮನಿರ್ಭರ ಜನರು ತೊಟ್ಟ ಬಟ್ಟೆಯಿಂದ ಹತ್ತಿ ತೆಗೆದೆಯಲ್ಲಾ?
ಗಡ್ಡಬಿಟ್ಟು ಕೋಟು ತೊಟ್ಟರೆ ನೀನೇನು ಟಾಗೋರನೆ?
ಆಯುಷ್ಮಾನ್ ನೆಲದಲ್ಲಿ ಸಾವಿನ ಮಹಾಕಾವ್ಯ ಬರೆದೆಯಲ್ಲಾ?
ಬಡವರು ಸುಡುಗಾಡ ಬೇಗೆಯಲಿ

ಬೆಂದು ಬೇಸರಿಸಿ ನಡೆದ ಭಾರತವ ನೀನು ಕಟ್ಟಿದೆ…? ಎಂಬ ಅಡ್ಡಗವಿತೆಯನ್ನು ಹಾಡಿತು. ’ನಮ್ಮ ಸಾವಿಗೆ ನಾವು ಕಾರಣರೆ?
ನಮಗೆ ಪುನರ್ಜನ್ಮವಿದೆಯೇ? ಹಾಗಾಗಿ ಪ್ರಜಾಪ್ರಭುತ್ವವೂ ಕಿತ್ತು ತಿನ್ನುವ ನರರಾಕ್ಷಸರನ್ನು ನಾಯಕರನ್ನಾಗಿಸಬಲ್ಲದು ಎಂಬುದಕ್ಕೆ ನೀನೇ ಕೊನೆಯಾಗು’ ಎಂದು ಶಪಿಸಿ ಪಿಶಾಚಿ ಸಮೂಹವು ಮಾಯವಾಯಿತು.

ಡಾ. ರವಿ ಎಂ.
ಶಿವಮೊಗ್ಗದ ಸಿದ್ಲಿಪುರದವರು. ಕುವೆಂಪು ವಿಶ್ವವಿದ್ಯಾಲಯದಿಂದ ’ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ’ ಎಂಬ ಅಧ್ಯಯನಕ್ಕೆ ಪಿಎಚ್.ಡಿ. ಪದವಿ. ’ಪರ್ಯಾಯ’, ’ಪಿ. ಲಂಕೇಶ್, ’ಶಾಸನ ಓದು’ ಪ್ರಕಟಿತ ಕೃತಿಗಳು. ಹಳಗನ್ನಡ ಸಾಹಿತ್ಯ ರವಿಯವರ ಆಸಕ್ತಿ ಕ್ಷೇತ್ರವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...