ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ) ವಿಧೇಯಕ-2025 ವಿಧಾನಸಭೆಯ ಮಂಗಳವಾರ (ಆ.19) ಅಂಗೀಕಾರಗೊಂಡಿದೆ.
ಗಿಗ್ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ಈ ವಿಧೇಯಕ ಸಾಮಾಜಿಕ ಭದ್ರತೆ, ಔದ್ಯೋಗಿಕ ಆರೋಗ್ಯ ಮತ್ತು ಗಿಗ್ ಕಾರ್ಮಿಕರ ಸುರಕ್ಷತೆಗಾಗಿ ಅಗ್ರಿಗೇಟರ್‌ಗಳ ಮೇಲೆ ಜವಾಬ್ದಾರಿಗಳನ್ನು ಹೇರುವ ಗುರಿಯನ್ನು ಹೊಂದಿದೆ. ಇದು ರಾಜ್ಯಾದ್ಯಂತ ವಿವಿಧ ವೇದಿಕೆಗಳಲ್ಲಿ ಕೆಲಸ ಮಾಡುವ ಸುಮಾರು 4 ಲಕ್ಷ ಗಿಗ್ ಕಾರ್ಮಿಕರನ್ನು ಒಳಗೊಳ್ಳುತ್ತದೆ.
ವಿಧಾನಸಭೆ ಶಾಸನ ರಚನೆ ಕಲಾಪದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿಧೇಯಕವನ್ನು ಮಂಡಿಸಿದರು. ಬಳಿಕ ವಿವರಣೆ ನೀಡಿದ ಅವರು, ಇದು ಸವಾರಿ ಹಂಚಿಕೆ, ಆಹಾರ ಮತ್ತು ಕಿರಾಣಿ ವಿತರಣೆ, ಲಾಜಿಸ್ಟಿಕ್ಸ್ ಸೇವೆಗಳು, ಇ-ಮಾರುಕಟ್ಟೆ, ವೃತ್ತಿಪರ ಸೇವೆಗಳನ್ನು ಒದಗಿಸುವವರು, ಆರೋಗ್ಯ ಸಂರಕ್ಷಣೆ, ಪ್ರವಾಸ ಮತ್ತು ಆತಿಥ್ಯ, ವಿಷಯ ಮತ್ತು ಮಾಧ್ಯಮ ಸೇವೆಗಳು ಸೇರಿ ಒಟ್ಟು ಎಂಟು ಸೇವೆಗಳಿಗೆ ಅನ್ವಯಿಸುತ್ತದೆ ಎಂದು ತಿಳಿಸಿದರು.
ಈ ಮಸೂದೆಯು ಸರ್ಕಾರ ಗಿಗ್ ಕಾರ್ಮಿಕರ ಕಲ್ಯಾಣ ನಿಧಿಗಾಗಿ ಅಗ್ರಿಗೇಟರ್‌ಗಳ ಮೇಲೆ ಶೇಕಡಾ 1 ರಿಂದ 5 ರವರೆಗೆ ಕಲ್ಯಾಣ ಶುಲ್ಕವನ್ನು ವಿಧಿಸಲು ಅವಕಾಶ ನೀಡುತ್ತದೆ. ಈ ಶುಲ್ಕವನ್ನು ಏಕರೂಪವಾಗಿ ಜಾರಿಗೊಳಿಸಲು ಸಾಧ್ಯವಿಲ್ಲ. ಹಾಗಾಗಿ, ನಿಯಮಗಳನ್ನು ರೂಪಿಸಿದಾಗ ಸರ್ಕಾರವು ಕಲ್ಯಾಣ ಶುಲ್ಕವನ್ನು ಸಹ ನಿರ್ಧರಿಸುತ್ತದೆ” ಎಂದು ಸಂತೋಷ್ ಲಾಡ್ ಹೇಳಿದರು.
ವಿರೋಧ ಪಕ್ಷದ ಉಪ ನಾಯಕ ಅರವಿಂದ್ ಬೆಲ್ಲದ್ ಮಾತನಾಡಿ, ವಿವಿಧ ಅಗ್ರಿಗೇಟರ್‌ಗಳಿಗೆ ಶುಲ್ಕದಲ್ಲಿನ ವ್ಯತ್ಯಾಸವು ಭ್ರಷ್ಟಾಚಾರಕ್ಕೆ ಕಾರಣವಾಗಬಹುದು ಎಂದು ಹೇಳಿದರು. ಒಂದೇ ರೀತಿಯ ದರ ನಿಗದಿಪಡಿಸುವುದು ಸೂಕ್ತ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂತೋಷ್ ಲಾಡ್, ವಿವಿಧ ಅಗ್ರಿಗೇಟರ್‌ಗಳಲ್ಲಿ ವ್ಯತ್ಯಾಸಗಳಿರುವುದರಿಂದ ಹಾಗೆ ಮಾಡಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ : ನಮ್ಮ ಯಾತ್ರಿ (ರೈಡ್-ಹೇಲಿಂಗ್ ಅಪ್ಲಿಕೇಶನ್) ನೇರವಾಗಿ ವಿಧಿಸುವ ಮೊತ್ತವನ್ನು (ಚಾಲಕರಿಗೆ) ವರ್ಗಾಯಿಸುತ್ತದೆ. ಹಾಗಾದರೆ, ನಾವು ಅದನ್ನು ಬಳಕೆದಾರ ಶುಲ್ಕದಿಂದ ತೆಗೆದುಕೊಳ್ಳಬೇಕೇ? ಅರ್ಬನ್ ಕ್ಲಾಪ್‌ನಂತಹ ಕಂಪನಿಗಳು ಸೇವಾ ಮತ್ತು ಸಾರಿಗೆ ಶುಲ್ಕವನ್ನು ಪಾವತಿಸುತ್ತವೆ. ಅದನ್ನು ಅವರಿಂದ ಹೇಗೆ ಸಂಗ್ರಹಿಸಬೇಕು?” ಎಂದು ಪ್ರಶ್ನಿಸಿದರು. ಶುಲ್ಕವನ್ನು ಅಂತಿಮಗೊಳಿಸಲು ಸರ್ಕಾರ ತಜ್ಞರೊಂದಿಗೆ ಚರ್ಚೆ ನಡೆಸಿದೆ ಎಂದು ತಿಳಿಸಿದರು.
ವಿಧೇಯಕದ ಅಗತ್ಯವನ್ನು ವಿವರಿಸಿದ ಸಚಿವರು, ಕೆಲವು ಗಿಗ್ ಕಾರ್ಮಿಕರು ಸುಮಾರು 1,600 ರಿಂದ 1,800 ರೂ. ಗಳಿಸಲು 16 ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ರೀತಿಯ ಕೆಲಸದ ಕಾರಣದಿಂದಾಗಿ, ಈ ಕಾರ್ಮಿಕರು ಭವಿಷ್ಯದಲ್ಲಿ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಬಿಜೆಪಿ ಶಾಸಕ ಧೀರಜ್ ಮುನಿರಾಜು ಮಾತನಾಡಿ, “ಸರ್ಕಾರ ಗಿಗ್ ಕಾರ್ಮಿಕರಿಗೆ ಕನಿಷ್ಠ ವೇತನ ಮತ್ತು ಗರಿಷ್ಠ ಕೆಲಸದ ಸಮಯವನ್ನು ನಿಗದಿಪಡಿಸಬಹುದೇ? ಎಂದು ಕೇಳಿದರು. ಎಲ್ಲಾ ಗಿಗ್ ಕೆಲಸಗಾರರನ್ನು ‘ಫ್ಲೆಕ್ಸಿ-ಹವರ್ ಆಧಾರದ ಮೇಲೆ’ ನೇಮಿಸಿಕೊಳ್ಳಲಾಗುತ್ತದೆ ಮತ್ತು ಅವರು ಬಯಸಿದಷ್ಟು ಕೆಲಸ ಮಾಡಲು ಸ್ವತಂತ್ರರು ಎಂದು ಸಚಿವರು ಉತ್ತರಿಸಿರು. ಅವರಿಗೆ ಕೆಲಸವನ್ನು ನಿರಾಕರಿಸುವ ಹಕ್ಕಿದೆ’ಎಂದು ತಿಳಿಸಿದರು.
ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆಯುದಕ್ಕೂ ಮೊದಲು ಸರ್ಕಾರ ಈ ವರ್ಷದ ಆರಂಭದಲ್ಲಿ ಇದನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿತ್ತು.
ಧರ್ಮಸ್ಥಳದಲ್ಲಿ ಶವ ಶೋಧ ಮುಂದುವರಿಸಬೇಕೆ ಬೇಡವೇ ಎಂದು ಎಸ್‌ಐಟಿ ತೀರ್ಮಾನಿಸುತ್ತದೆ: ಗೃಹ ಸಚಿವ ಪರಮೇಶ್ವರ್


