ಮೊಟ್ಟ ಮೊದಲ ಮಕ್ಕಳ ಕಮರ್ಷಿಯಲ್ ಚಿತ್ರ ‘ಗಿರ್ಮಿಟ್’ ಟ್ರೇಲರ್ ರಿಲೀಸ್ ಆಗಿದೆ. ದೊಡ್ಡವರ ಧಿರಿಸಿನಲ್ಲಿ ಮಕ್ಕಳು ಅಭಿನಯದ ಮೂಲಕ ಮನರಂಜನೆ ಉಣಬಡಿಸಿದ್ದಾರೆ. ಮಕ್ಕಳನ್ನೇ ಮೂಲವಾಗಿರಿಸಿಕೊಂಡು, ನಾಯಕ, ನಾಯಕಿಯರ ಪಾತ್ರದಲ್ಲಿ ಮಿಂಚುವಂತೆ ಮಾಡಿದ್ದಾರೆ ಬಸ್ರೂರು. ‘ಗಿರ್ಮಿಟ್’ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಚಿತ್ರವು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ರಿಲೀಸ್ ಆಗಲಿದೆ.
ವ್ಯವಹಾರಿಕ ಆಯಾಮ ಮತ್ತು ದೃಷ್ಟಿಕೋನವನ್ನಿಟ್ಟುಕೊಂಡ ಮಕ್ಕಳ ಚಿತ್ರ ‘ಗಿರ್ಮಿಟ್’ ಪ್ರೇಕ್ಷಕರಿಗೆ ಮನರಂಜನೆಯ ರಸದೂಟ ಉಣಿಸಲು ತೆರೆಗೆ ಬರಲು ಸಿದ್ಧವಾಗುತ್ತಿದೆ. ಮಕ್ಕಳೇ ಪ್ರಧಾನಪಾತ್ರದಲ್ಲಿ ನಟಿಸಿರುವ ಚಿತ್ರ ಗಿರ್ಮಿಟ್ ಭಾರತೀಯ ಚಿತ್ರರಂಗದಲ್ಲೇ ಮೊದಲ ಪ್ರಯತ್ನ ಎನ್ನಲಾಗಿದೆ. ಶೀರ್ಷಿಕೆಯ ಮೂಲಕವೇ ಗಮನ ಸೆಳೆದಿರುವ ಚಿತ್ರ ನವೆಂಬರ್ 8 ರಂದು ಪ್ರಪಂಚದಾದ್ಯಂತ ಬಿಡುಗಡೆಗೊಳ್ಳುತ್ತಿದೆ.
ಚಿತ್ರದ ಟ್ರೇಲರ್ ನಲ್ಲಿ ನಾಯಕ, ನಾಯಕಿ ಪಾತ್ರದಲ್ಲಿ ಮಕ್ಕಳು ಗಮನಸೆಳೆದಿದ್ದಾರೆ. ನಾಯಕ ಹೇಳುವ ಡೈಲಾಗ್ಸ್, ಪ್ರೇಮ ಸನ್ನಿವೇಶ, ವಿಭಿನ್ನ ಪಾತ್ರಗಳು, ಕೌಟುಂಬಿಕ ಕಲಹ, ನಾಯಕ, ನಾಯಕಿಯ ಮಾಸ್ ಗೀತೆ ಹೀಗೆ ಕಮರ್ಷಿಯಲ್ ಚಿತ್ರದಲ್ಲಿರಬೇಕಾದ ಎಲ್ಲಾ ಅಂಶಗಳೂ ಟ್ರೇಲರ್ ನಲ್ಲಿ ಕಾಣಸಿಗುತ್ತವೆ. ನಟ ಯಶ್, ನಟಿ ರಾಧಿಕಾ ಸೇರಿದಂತೆ ಹಿರಿಯ ಕಲಾವಿದರು ಹಿನ್ನೆಲೆ ಧ್ವನಿ ನೀಡಿದ್ದಾರೆ.
ಚಿತ್ರದ ‘ಆರಂಭವೇ ಆನಂದವೇ’ ಎಂಬ ಲಿರಿಕಲ್ ವಿಡಿಯೋ ಗೀತೆ ಅ.21 ರ ಸಂಜೆ 7 ಕ್ಕೆ ಬಿಡುಗಡೆಯಾಗಿತ್ತು. ಕಿನ್ನಾಳ ರಾಜ್ ಸಾಹಿತ್ಯವಿದ್ದು, ಸಂತೋಷ್ ವೆಂಕಿ ಗೀತೆಗೆ ಧ್ವನಿ ನೀಡಿದ್ದಾರೆ. ಮಕ್ಕಳೇ ಚಿತ್ರವನ್ನು ಚಿತ್ರಿಸಿದ್ದಾರೆ. ನಾಯಕ, ನಾಯಕಿಯ ವಾಗ್ಯುದ್ಧ, ನಾಯಕನ ಖಡಕ್ ಡೈಲಾಗ್, ನಾಯಕ, ನಾಯಕಿಯ ಪ್ರೇಮ ಸಲ್ಲಾಪ ಎಲ್ಲವೂ ಚಿತ್ರದಲ್ಲಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಓಂಕಾರ್ ಮೂವೀಸ್ ಬ್ಯಾನರ್ ಅಡಿ ನಿರ್ಮಾಣವಾಗಿದೆ. ಚಿತ್ರಕ್ಕೆ ಎನ್.ಎಸ್.ರಾಜ್ ಕುಮಾರ್ ಬಂಡವಾಳ ಹೂಡಿದ್ದಾರೆ. ಸೂರಜ್ ಚೌಧರಿ ಮತ್ತು ನರೇನ್ ಚಂದ್ರ ಚೌಧರಿ ಸಹ ನಿರ್ಮಾಪಕರಾಗಿದ್ದಾರೆ. ಪ್ರಮೋದ್ ಮರವಂತೆ, ಕಿನ್ನಲ್ ರಾಜ್, ಸಂದೀಪ್ ಶಿರಸಿ, ಸುಚನ್ ಶೆಟ್ಟಿ ಮತ್ತು ಮಂಜುನಾಥ್ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ಅಶ್ಲೇಷ್ ರಾಜ್, ಶ್ಲಾಘಾ ಸಾಲಿಗ್ರಾಮಾ, ಆರಾಧ್ಯ ಶೆಟ್ಟಿ, ತನಿಶಾ ಕೋನಿ, ಜಯೇಂದ್ರ, ನಾಗರಾಜ್ ಜಪ್ತಿ, ಆದಿತ್ಯ ಕುಂದಾಪುರ ಮತ್ತು ಸಿಂಚನಾ ಕೋಟೇಶ್ವರ ಮೊದಲಾದ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.


