11 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ನಂತರ ರೈಲ್ವೇ ಉದ್ಯೋಗಿಯನ್ನು ಗುರುವಾರ ಮುಂಜಾನೆ ರೈಲಿನಲ್ಲಿದ್ದ ಬಾಲಕಿಯ ಕುಟುಂಬ ಸದಸ್ಯರು ಮತ್ತು ಇತರ ಪ್ರಯಾಣಿಕರು ನವದೆಹಲಿಯಲ್ಲಿ ಹೊಡೆದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಸಿವಾನ್‌ನ ಕುಟುಂಬವೊಂದು ಬುಧವಾರ ಬಿಹಾರದ ಬರೌನಿನಿಂದ ನವದೆಹಲಿಗೆ ಹಮ್‌ಸಫರ್ ಎಕ್ಸ್‌ಪ್ರೆಸ್ ಹತ್ತಿದೆ. ರಾತ್ರಿ 11.30 ರ ಸುಮಾರಿಗೆ, ಗ್ರೂಪ್ ಡಿ ರೈಲ್ವೆ ಉದ್ಯೋಗಿ ಪ್ರಶಾಂತ್ ಕುಮಾರ್ ಕುಟುಂಬದ 11 ವರ್ಷದ ಬಾಲಕಿಯನ್ನು ತನ್ನ ಸೀಟಿನಲ್ಲಿ ಕೂರಿಸಿಕೊಂಡರು. ಬಳಿಕ, ಬಾಲಕಿಯ ತಾಯಿ ವಾಶ್ ರೂಂಗೆ ಹೋದಾಗ ಕುಮಾರ್ ಬಾಲಕಿಗೆ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.
ಮಹಿಳೆ ವಾಶ್ ರೂಂನಿಂದ ಹೊರಬಂದ ತಕ್ಷಣ, ಹುಡುಗಿ ತಾಯಿಯ ಬಳಿಗೆ ಓಡಿ, ಆಕೆಯನ್ನು ತಬ್ಬಿಕೊಂಡು ಅಳಲು ಪ್ರಾರಂಭಿಸಿದಳು. ಅವಳು ತನ್ನ ತಾಯಿಯನ್ನು ವಾಶ್‌ರೂಮ್‌ಗೆ ಕರೆದೊಯ್ದು ನಡೆದದ್ದನ್ನು ಹೇಳಿದಳು. ನಂತರ ತಾಯಿ ರೈಲಿನಲ್ಲಿ ಎಂ1ಕೋಚ್‌ನಲ್ಲಿದ್ದ ತನ್ನ ಪತಿ, ಮಾವ ಮತ್ತು ಇತರ ಪ್ರಯಾಣಿಕರಿಗೆ ಮಾಹಿತಿ ನೀಡಿದರು.
ರೈಲು ಲಕ್ನೋದ ಐಶ್‌ಬಾಗ್ ಜಂಕ್ಷನ್‌ಗೆ ತಲುಪಿದಾಗ ಕೋಪಗೊಂಡ ಪ್ರಯಾಣಿಕರು ಮತ್ತು ಕುಟುಂಬ ಸದಸ್ಯರು ಕುಮಾರ್‌ನನ್ನು ಹಿಡಿದು ಕೋಚ್‌ನ ಬಾಗಿಲಿನ ಸಮೀಪವಿರುವ ಪ್ರದೇಶಕ್ಕೆ ಕರೆದೊಯ್ದು ರೈಲು ಕಾನ್ಪುರ ಸೆಂಟ್ರಲ್ ತಲುಪುವವರೆಗೆ, ಸುಮಾರು ಒಂದೂವರೆ ಗಂಟೆ ಥಳಿಸಿದ್ದಾರೆ ಎನ್ನಲಾಗಿದೆ. ಗುರುವಾರ ಮುಂಜಾನೆ 4.35 ಕ್ಕೆ ರೈಲು ಕಾನ್ಪುರ ಸೆಂಟ್ರಲ್‌ಗೆ ತಲುಪಿದಾಗ, ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಅಧಿಕಾರಿಗಳು ಕುಮಾರ್ ಅವರನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಆತ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಕಿಯ ಕುಟುಂಬದವರು ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದರೆ, ಕುಮಾರ್ ಕುಟುಂಬವು ಕೊಲೆ ಎಂದು ದೂರು ದಾಖಲಿಸಿದೆ.
ಬಿಹಾರದ ಮುಜಾಫರ್‌ಪುರ ಜಿಲ್ಲೆಯ ಸಮಸ್ತ್‌ಪುರ ಗ್ರಾಮದಲ್ಲಿ ವಾಸಿಸುವ ಕುಟುಂಬಕ್ಕೆ ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ ನಂತರ ಅವರನ್ನು ಹೊಡೆದು ಸಾಯಿಸಲಾಗಿದೆ ಎಂದು ಕುಮಾರ್ ಅವರ ಚಿಕ್ಕಪ್ಪ ಪವನ್ ಹೇಳಿದ್ದಾರೆ.
“ಪ್ರಶಾಂತ್ ಅಂತಹ ವ್ಯಕ್ತಿಯಲ್ಲ, ಪಿತೂರಿಯ ಭಾಗವಾಗಿ ಅವನನ್ನು ಕೊಲ್ಲಲಾಗಿದೆ ಎಂದು ತೋರುತ್ತದೆ. ಅವನನ್ನು ಇಷ್ಟು ಜನ ಥಳಿಸಿದ್ದಾರೆ, ಸುತ್ತಲೂ ರೈಲ್ವೆ ಪೊಲೀಸ್ ಪಡೆಯ ಸಿಬ್ಬಂದಿ ಇರಲಿಲ್ಲವೇ” ಎಂದು ಅವರು ಪ್ರಶ್ನಿಸಿದ್ದಾರೆ.
ಪೊಲೀಸ್ ಅಧೀಕ್ಷಕ, ಜಿಆರ್‌ಪಿ (ಪ್ರಯಾಗ್‌ರಾಜ್) ಅಭಿಷೇಕ್ ಯಾದವ್ ಪ್ರತಿಕ್ರಿಯಿಸಿ, “ರೈಲು ಐಶ್‌ಬಾಗ್ ದಾಟಿದಾಗ, ಬಾಲಕಿ ತನಗೆ ಕಿರುಕುಳ ನೀಡಲಾಯಿತು ಎಂದು ಹೇಳಿದರು. ಆಕೆಯ ಕುಟುಂಬ ಸದಸ್ಯರು ಮತ್ತು ಇತರ ಪ್ರಯಾಣಿಕರು ಆರೋಪಿಯನ್ನು ಥಳಿಸಿದ್ದಾರೆ. ಕಾನ್ಪುರ ಸೆಂಟ್ರಲ್‌ನಲ್ಲಿ ಆರೋಪಿಯನ್ನು ಹಸ್ತಾಂತರಿಸಲಾಗಿದೆ. ಜಿಆರ್‌ಪಿ ಮತ್ತು ದೂರು ದಾಖಲಿಸಿದ್ದು, ಆತನನ್ನು ಆಸ್ಪತ್ರೆಗೆ ಸಾಗಿಸಿದಾಗ ಆತ ಮೃತಪಟ್ಟಿದ್ದಾನೆ” ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ; ದೆಹಲಿ ಗಲಭೆ ಪ್ರಕರಣ: ವಿಚಾರಣೆಯಿಲ್ಲದೆ ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್


