ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಬಗ್ಗೆ ಭಾನುವಾರ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಹುಡುಗಿಯರು ರಾತ್ರಿ ಹೊತ್ತು ಕಾಲೇಜಿನಿಂದ ಹೊರಗೆ ಹೋಗಲು ‘ಅವಕಾಶ ನೀಡಬಾರದು’ ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ದುರ್ಗಾಪುರದ ಘಟನೆಯನ್ನು ‘ಆಘಾತಕಾರಿ’ ಎಂದು ಕರೆದಿದ್ದು, ಅಪರಾಧಿಗಳನ್ನು ಸುಮ್ಮನೆ ಬಿಡುವುದಿಲ್ಲ ಎಂದು ಶಪಥ ಮಾಡಿದ್ದಾರೆ.
“ಇದು ಆಘಾತಕಾರಿ ಘಟನೆ. ಇಂತಹ ಅಪರಾಧಗಳನ್ನು ನಾವು ಸಹಿಸುವುದಿಲ್ಲ. ಮೂವರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಪೊಲೀಸರು ಇತರರಿಗಾಗಿ ಶೋಧ ನಡೆಸುತ್ತಿದ್ದಾರೆ. ಯಾರನ್ನೂ ಸುಮ್ಮನೆ ಬಿಡುವುದಿಲ್ಲ” ಎಂದು ಮಮತಾ ಬ್ಯಾರ್ಜಿ ಹೇಳಿದ್ದಾರೆ.
ಒಡಿಶಾದ ಬಾಲಸೋರ್ ಜಿಲ್ಲೆಯ ಜಲೇಶ್ವರದ ವಿದ್ಯಾರ್ಥಿನಿ ಮೇಲೆ ದುರ್ಗಾಪುರದ ಕಾಲೇಜು ಕ್ಯಾಂಪಸ್‌ನ ಹೊರಗಡೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಖಾಸಗಿ ವೈದ್ಯಕೀಯ ಕಾಲೇಜಿನ ಎರಡನೇ ವರ್ಷದ ವಿದ್ಯಾರ್ಥಿನಿ ಸ್ನೇಹಿತೆಯೊಂದಿಗೆ ಶುಕ್ರವಾರ ರಾತ್ರಿ ಊಟಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.
ಘಟನೆ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ ಮಮತಾ ಬ್ಯಾನರ್ಜಿ, ರಾತ್ರಿ ಹೊತ್ತು ಹುಡುಗಿಯರನ್ನು ಹೊರಗೆ ಹೋಗಲು ಬಿಟ್ಟ ಕಾಲೇಜಿನ ಸಿಬ್ಬಂದಿಯನ್ನು ಟೀಕಿಸಿದ್ದಾರೆ. “ಸಂತ್ರಸ್ತೆ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದಳು. ಹೀಗಿರುವಾಗ ಆಕೆಯ ಜವಾಬ್ದಾರಿ ಯಾರದ್ದು? ಆಕೆ ತಡ ರಾತ್ರಿ 12.30ಕ್ಕೆ ಕ್ಯಾಂಪಸ್‌ನಿಂದ ಹೊರಗೆ ಹೋಗಿದ್ದು ಹೇಗೆ? ಹುಡುಗಿಯರು ರಾತ್ರಿ ಹೊತ್ತು ಕಾಲೇಜು ಕ್ಯಾಂಪಸ್‌ನಿಂದ ಹೊರಗೆ ಹೋಗಲು ಬಿಡಬಾರದು. ಅಲ್ಲದೆ, ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು” ಎಂದು ಹೇಳಿದ್ದಾರೆ.
“ವಿಶೇಷವಾಗಿ ಪಶ್ಚಿಮ ಬಂಗಾಳದ ಹೊರಗಿನ ವಿದ್ಯಾರ್ಥಿಗಳು ಹಾಸ್ಟೆಲ್ ನಿಯಮಗಳನ್ನು ಪಾಲಿಸಬೇಕು. ತಡರಾತ್ರಿಯಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಬೇಕು. ಆದರೂ, ಅವರು ಎಲ್ಲಿ ಬೇಕಾದರೂ ಹೋಗುವ ಮೂಲಭೂತ ಹಕ್ಕನ್ನು ಹೊಂದಿದ್ದಾರೆ” ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ್ದಾರೆ.
“ಪ್ರತಿಯೊಬ್ಬ ವ್ಯಕ್ತಿಯ ಚಲನವಲನಗಳನ್ನು ಮೇಲ್ವಿಚಾರಣೆ ಮಾಡುವಲ್ಲಿ ಪೊಲೀಸರಿಗೆ ಕೆಲವು ಮಿತಿಗಳಿವೆ. ರಾತ್ರಿಯಲ್ಲಿ ಯಾರು ಮನೆಯಿಂದ ಹೊರಹೋಗುತ್ತಿದ್ದಾರೆಂದು ಅಧಿಕಾರಿಗಳಿಗೆ ತಿಳಿದಿರುವುದಿಲ್ಲ. ಅಲ್ಲದೆ, ಪ್ರತಿ ಮನೆಯ ಹೊರಗೆ ಕಾವಲು ಕಾಯಲು ಸಾಧ್ಯವಿಲ್ಲ” ಎಂದಿದ್ದಾರೆ.
ವಿದ್ಯಾರ್ಥಿನಿ ಮೇಲಿನ ಅತ್ಯಾಚಾರಕ್ಕೆ ಕಾಲೇಜನ್ನು ಭಾಗಶಃ ಹೊಣೆ ಮಾಡಿದ ಸಿಎಂ, “ಖಾಸಗಿ ಕಾಲೇಜುಗಳು ತಮ್ಮ ಕ್ಯಾಂಪಸ್‌ಗಳ ಒಳಗೆ ಮತ್ತು ಸುತ್ತಮುತ್ತ ಭದ್ರತೆಯನ್ನು ಖಚಿತಪಡಿಸಿಕೊಳ್ಳಬೇಕು” ಎಂದು ಹೇಳಿದ್ದಾರೆ.
ಈ ನಡುವೆ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಇನ್ನೊಬ್ಬನನ್ನು ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರ ಗುರುತುಗಳನ್ನು ಬಹಿರಂಗಪಡಿಸಿಲ್ಲ.
ವಿದ್ಯಾರ್ಥಿನಿ ಮೇಲೆ ದೌರ್ಜನ್ಯ ನಡೆದ ದುರ್ಗಾಪುರದ ಪರನಾಗಂಜ್ ಕಾಲಿ ಬಾರಿ ಸ್ಮಶಾನದ ಪಕ್ಕದಲ್ಲಿರುವ ಕಾಡಿನಲ್ಲಿ ಭಾನುವಾರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಕಾಲೇಜಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ದೊಡ್ಡ ಮಟ್ಟದ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ. ಹತ್ತಿರದ ಕಾಡುಗಳಲ್ಲಿ ಶೋಧ ನಡೆಸಲು ಡ್ರೋನ್‌ಗಳನ್ನು ಬಳಸಲಾಗಿದೆ ಎಂದು ವರದಿಗಳು ಹೇಳಿವೆ.
‘ತಾಂತ್ರಿಕ ಸಮಸ್ಯೆ’: ಮಹಿಳೆಯರನ್ನು ಪತ್ರಿಕಾಗೋಷ್ಠಿಯಿಂದ ಹೊರಗಿಟ್ಟ ಬಗ್ಗೆ ತಾಲಿಬಾನ್ ಸಚಿವ ಪ್ರತಿಕ್ರಿಯೆ


