ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಮತ್ತೊಂದು ವಿವಾದಾತ್ಮಕ ನಿಲುವನ್ನು ತಾಳಿದ್ದಾರೆ.
2021ರ ಸೆಪ್ಟೆಂಬರ್‌ನಲ್ಲಿ “ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು. ಗೋವುಗಳ ರಕ್ಷಣೆ ಹಿಂದೂಗಳ ಮೂಲಭೂತ ಹಕ್ಕು ಎಂದು ಪರಿಗಣಿಸಬೇಕು” ಎಂದು ಶೇಖರ್‌ಕುಮಾರ್ ಯಾದವ್ ಹೇಳಿದ್ದರು.
“ಗೋವು ತನ್ನ ಮುಪ್ಪಿನಲ್ಲೂ ಸಮಾಜಕ್ಕೆ ಉಪಕಾರಿಯಾಗಿದೆ. ಅದರ ಮೂತ್ರವನ್ನು ಕೃಷಿ ಹಾಗೂ ಔಷಧ ತಯಾರಿಕೆಯಲ್ಲಿ ಬಳಸುತ್ತಾರೆ. ಗೋವನ್ನು ತಾಯಿಯೆಂದು ಗೌರವಿಸಲಾಗುತ್ತದೆ. ಗೋವು ಆಕ್ಸಿಜನ್ ಹೊರಗೆ ಬಿಡುವ ಏಕೈಕ ಪ್ರಾಣಿ ಎಂದು ವಿಜ್ಞಾನಿಗಳು ಹೇಳಿದ್ದಾರೆ” ಎಂಬುದಾಗಿ ಯಾದವ್ ಅವರು ಹೇಳಿದ್ದು ಟೀಕೆಗೆ ಒಳಗಾಗಿತ್ತು. ಇವರ ಹೇಳಿಕೆಗೆ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಟೀಕೆಗಳು ವ್ಯಕ್ತವಾಗಿದ್ದವು. ಈಗ ಧಾರ್ಮಿಕ ನಂಬಿಕೆಯ ಹೆಸರಲ್ಲಿ ಮತ್ತೊಂದು ವಿವಾದಾತ್ಮಕ ನಿಲುವು ತಾಳಿದ್ದಾರೆ.
ರಾಮ, ಕೃಷ್ಣನ ಕುರಿತು ಫೇಸ್‌ಬುಕ್‌ನಲ್ಲಿ ಅಶ್ಲೀಲವಾಗಿ ಟೀಕಿಸಿದ್ದ ವ್ಯಕ್ತಿಗೆ ಜಾಮೀನು ನೀಡುವಾಗ ಜಸ್ಟೀಸ್ ಯಾದವ್ ಅವರು, “ದೇವರಾದ ರಾಮ, ಕೃಷ್ಣ, ರಾಮಾಯಣ, ಭಗವದ್ಗೀತೆ, ವಾಲ್ಮೀಕಿ, ವೇದ ವ್ಯಾಸ ಎಲ್ಲರಿಗೂ ಪಾರಂಪರಿಕ ಸ್ಥಾನಮಾನ ನೀಡಲು ಪಾರ್ಲಿಮೆಂಟ್ ಕಾನೂನು ರಚಿಸಬೇಕು” ಎಂದಿದ್ದಾರೆ.
ಇದನ್ನೂ ಓದಿರಿ: ಯಾವುದೇ ಧರ್ಮದ ಸಂಗಾತಿಯ ಆಯ್ಕೆ ವಯಸ್ಕರ ಹಕ್ಕು: ಅಲಹಾಬಾದ್ ಹೈಕೋರ್ಟ್
“ಆರೋಪಿಯ ಹೇಳಿಕೆ ದೇಶದ ಬಹುಸಂಖ್ಯಾತರ ನಂಬಿಕೆಗೆ ಗಾಯಗೊಳಿಸಿದೆ, ಸಮಾಜದಲ್ಲಿ ಶಾಂತಿಯನ್ನು ಕದಡಿದೆ, ಮುಗ್ಧಜನರ ಮೇಲೆ ಅದರ ಭಾರ ಹೊರಿಸಲಾಗಿದೆ” ಎಂದು ನ್ಯಾಯಮೂರ್ತಿಯವರು ವಿಶ್ಲೇಷಿಸಿದ್ದಾರೆ. “ಈ ಪ್ರಕರಣದಲ್ಲಿ ನ್ಯಾಯಾಲಯ ಮೃದು ನಿಲುವು ತಾಳಿದರೆ, ದೇಶದ ಸೌಹಾರ್ದತೆ ಕದಡುವ ಈ ಥರದ ವ್ಯಕ್ತಿಗಳಿಗೆ ನೈತಿಕ ಬಲ ಬಂದುಬಿಡುತ್ತದೆ” ಎಂದು ಹೇಳಿದ್ದಾರೆ.
ಆದಾಗ್ಯೂ ಆರೋಪಿಗೆ ಜಾಮೀನನ್ನು ನ್ಯಾಯಮೂರ್ತಿ ನೀಡಿದ್ದಾರೆ. “ವಿಚಾರಣಾಧೀನ ಕೈದಿಯಾಗಿ ಆರೋಪಿಯು 10 ತಿಂಗಳಿನಿಂದ ಜೈಲಿನಲ್ಲಿದ್ದು, ಮುಂದಿನ ದಿನಗಳಲ್ಲಿ ಈ ವಿಚಾರಣೆ ಕೊನೆಗೊಳ್ಳುವ ಸಾಧ್ಯತೆಯಿಲ್ಲ” ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಆರೋಪಿಗೆ ಜಾಮೀನು ಮಂಜೂರು ಮಾಡಲಾಗಿದೆ.
ಬಾಬ್ರಿ ಮಸೀದಿ-ರಾಮ ಜನ್ಮಭೂಮಿ ಪ್ರಕರಣದಲ್ಲಿನ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಯಾದವ್, “ಸುಪ್ರೀಂ ಕೋರ್ಟ್ ಭಗವಾನ್ ರಾಮನನ್ನು ನಂಬುವವರ ಪರವಾಗಿ ತೀರ್ಪು ನೀಡಿದೆ” ಎಂದು ಹೇಳಿದರು. ನ್ಯಾಯಮೂರ್ತಿ ಯಾದವ್ ಅವರು, “ರಾಮ ಪ್ರತಿ ನಾಗರಿಕನ ಹೃದಯದಲ್ಲಿ ನೆಲೆಸಿದ್ದಾನೆ, ಆತ ದೇಶದ ಆತ್ಮ, ಸಾಂಸ್ಕೃತಿಕ ಗುರುತು ಮತ್ತು ಆತನಿಲ್ಲದೆ ಭಾರತ ಅಪೂರ್ಣವಾಗಿದೆ” ಎಂದು ಅಭಿಪ್ರಾಯ ತಾಳಿದ್ದಾರೆ.
ಭಾರತೀಯ ಸಂವಿಧಾನವು ಆಸ್ತಿಕರು ಮತ್ತು ನಾಸ್ತಿಕರಿಗೆ ಸಮಾನವಾದ ಹಕ್ಕುಗಳನ್ನು ನೀಡುತ್ತದೆ ಎಂಬುದನ್ನು ಗುರುತಿಸಿದ ನ್ಯಾಯಮೂರ್ತಿ ಯಾದವ್, ದೇವರುಗಳ ಅಶ್ಲೀಲ ಚಿತ್ರಗಳನ್ನು ಮಾಡಿ ಮತ್ತು ಅವುಗಳನ್ನು ಸಾರ್ವಜನಿಕವಾಗಿ ಪ್ರಸಾರ ಮಾಡುವ ಮೂಲಕ ಈ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಭಾರತದ ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ಕಡ್ಡಾಯವಾಗಿ ಪಾರಂಪರಿಕ ಪಾಠಗಳನ್ನು ಸೇರಿಸಬೇಕೆಂದು ನ್ಯಾಯಮೂರ್ತಿ ಯಾದವ್ ಒತ್ತಾಯಿಸಿದ್ದಾರೆ.
ವಕೀಲರ ವಲಯದಿಂದ ಆಯ್ಕೆಯಾಗಿ ನ್ಯಾಯಾಧೀಶರಾದ ಯಾದವ್ ಅವರು, ಹೆಚ್ಚುವರಿ ನ್ಯಾಯಾಧೀಶರಾಗಿ ಡಿಸೆಂಬರ್ 12, 2019 ರಂದು ನೇಮಕವಾದರು. ಈ ವರ್ಷ ಮಾರ್ಚ್ 26ರಂದು ಖಾಯಂ ನ್ಯಾಯಾಧೀಶರಾಗಿ ನೇಮಕವಾಗಿದ್ದಾರೆ. ಅವರು ಏಪ್ರಿಲ್ 15, 2026 ರಂದು ನಿವೃತ್ತರಾಗುತ್ತಾರೆ ಎಂದು ‘ದಿ ವೈರ್’ ಸುದ್ದಿ ಜಾಲತಾಣ ವರದಿ ಮಾಡಿದೆ.
2014ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎ.ಆರ್.ದಾವೆ ಅವರು ಸಾರ್ವಜನಿಕವಾಗಿ ಮಾತನಾಡುತ್ತಾ, ಶಾಲೆಯಲ್ಲಿ ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಭಗವದ್ಗೀತೆ ಮತ್ತು ಮಹಾಭಾರತವನ್ನು ಕಡ್ಡಾಯವಾಗಿ ಬೋಧಿಸಬೇಕೆಂದು ಹೇಳಿಕೆ ನೀಡಿದ್ದರು. ಅವರ ಹೇಳಿಕೆಯನ್ನು ಅಂದಿನ ಪ್ರೆಸ್ ಕೌನ್ಸಿಲ್‌ನ ಆಗಿನ ಅಧ್ಯಕ್ಷರಾಗಿದ್ದ ಜಸ್ಟೀಸ್ ಮಾರ್ಕಂಡೇಯ ಕಟ್ಜು ಅವರು ಕಟುವಾಗಿ ಟೀಕಿಸಿದ್ದರು. “ಇದು ಭಾರತದ ಜಾತ್ಯತೀತ ನಿಲುವಿಗೆ ವಿರುದ್ಧವಾಗಿದೆ” ಎಂದು ಖಂಡಿಸಿದ್ದರು.
ಬಾರ್ ಅಂಡ್ ಬೆಂಚ್ ಕೂಡ ಅಲಹಾಬಾದ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಗೋವಿಂದ್ ಮಾಥುರ್ ಅವರ ಟೀಕೆಯನ್ನು ಉಲ್ಲೇಖಿಸಿ ಜಸ್ಟೀಸ್ ಯಾದವ್ ನಿಲುವನ್ನು ಟೀಕಿಸಿದೆ. “ಯಾದವ್ ಅವರು ತಮ್ಮ ಐಡಿಯಾಲಜಿ, ನಂಬಿಕೆ, ತತ್ವಶಾಸ್ತ್ರವನ್ನು ಇನ್ನೊಬ್ಬರ ಮೇಲೆ ಹೇರಿಕೆ ಮಾಡಲು ನ್ಯಾಯಾಲಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜಾಮೀನು ನೀಡಬೇಕಾದಾಗ ಪ್ರಕರಣವನ್ನು ಕೈಗೆತ್ತುಕೊಳ್ಳಲು ವಿಳಂಬ ಮಾಡಿದ್ದಾರೆ. ಹಿಂದಿಯಲ್ಲಿನ ಆದೇಶವನ್ನು ಇಂಗ್ಲಿಷ್ ಅನುವಾದವಿಲ್ಲದೆ ಅಪ್‌ಲೋಡ್ ಮಾಡಲಾಗಿದೆ” ಎಂದು ಮಾಥುರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿರಿ: ‘ಆಮ್ಲಜನಕವನ್ನು ಹೊರಬಿಡುವ ಏಕೈಕ ಪ್ರಾಣಿ ದನ’- ಅಲಹಾಬಾದ್ ಹೈಕೋರ್ಟ್ ವಿಚಿತ್ರ ಹೇಳಿಕೆ


