ಬೆಂಗಳೂರು: ಪೌರಕಾರ್ಮಿಕರ ಘನತೆಯ ಬದುಕು, ಗೌರವ, ವಸತಿ, ಶಿಕ್ಷಣಕ್ಕಾಗಿ 15 ದಿನಗಳ ಜಾಥಾ

ಘನತೆಯುತ ಬದುಕು, ಗೌರವ, ಕನಿಷ್ಠ ವೇತನ, ಮಕ್ಕಳ ಶಿಕ್ಷಣ, ತಮ್ಮ ಹಕ್ಕುಗಳು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಪೌರಕಾರ್ಮಿಕರು 15 ದಿನಗಳ ಪೌರಕಾರ್ಮಿಕರ ಜಾಥಾ ನಡೆಸುತ್ತಿದ್ದಾರೆ.

ಬಿಬಿಎಂಪಿ ಪೌರಕಾರ್ಮಿಕರ ಸಂಘ, AICCTU ಕರ್ನಾಟಕ ಮತ್ತು CPIML ಕರ್ನಾಟಕ ಸಂಘಟನೆಗಳು ಜಂಟಿಯಾಗಿ ಈ ಜಾಥಾಗೆ ಕರೆ ನೀಡಿದೆ. ಅಕ್ಟೋಬರ್‌ 9 ರಿಂದ ಕೆ.ಆರ್.ಪುರಂ ಮಾರುಕಟ್ಟೆಯಿಂದ ಆರಂಭವಾಗಿರುವ ಜಾಥಾ ಮುಂದಿನ 15 ದಿನಗಳು ನಡೆಯಲಿದೆ. ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಪ್ರತಿ ದಿನ ನಡೆಯಲಿದೆ.

Image

ಇದನ್ನೂ ಓದಿ: ಪೌರಕಾರ್ಮಿಕರಾಗಿ ಕೆಲಸ ಮಾಡಿದ್ದ ಮಹಿಳೆ ಅದೇ ಪಾಲಿಕೆಯಲ್ಲಿ ಕೀಟಶಾಸ್ತ್ರಜ್ಞೆ!

ಜಾಥಾವು ಬೆಂಗಳೂರಿನಾದ್ಯಂತ ನಡೆಯಲಿದ್ದು ಪೌರಕಾರ್ಮಿಕರು ಕೆಲಸ ನಿರ್ವಹಿಸುವ ಸ್ಥಳಗಳಿಗೆ ಮತ್ತು ಅವರ ಮನೆಗಳಿಗೆ ತೆರಳುತ್ತದೆ. ಪೌರಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಎಲ್ಲಾರ ಗಮನಕ್ಕೆ ತರಲಾಗುತ್ತದೆ. ಪೌರಕಾರ್ಮಿಕರನ್ನು ಖಾಯಂಗೊಳಿಸಲು ಮತ್ತು ಅವರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ತಕ್ಷಣ ಕ್ರಮಕೈಗೊಳ್ಳುವಂತೆ ಹಾಗೂ ಅವರ ಎಲ್ಲಾ ಹಕ್ಕುಗಳಿಗಾಗಿ ಒತ್ತಾಯಿಸಲಾಗುವುದು ಎಂದು AICCTU ಕರ್ನಾಟಕ ತಿಳಿಸಿದೆ.

ನಾನುಗೌರಿ.ಕಾಂ ಜೊತೆಗೆ ಮಾತನಾಡಿರುವ  ಬಿಬಿಎಂಪಿ ಪೌರಕಾರ್ಮಿಕರ ಸಂಘದ ಅಧ್ಯಕ್ಷೆ ನಿರ್ಮಲಾ “ಪೌರ ಕಾರ್ಮಿಕರಿಗೆ ಕಳೆದ ಆರು ವರ್ಷಗಳಿಂದ ವೇತನ ಹೆಚ್ಚು ಮಾಡಿಲ್ಲ. 35 ಸಾವಿರ ಕನಿಷ್ಠ ವೇತನ ನೀಡಬೇಕು ಎಂದು ಕೇಳುತ್ತಿದ್ದೇವೆ ಅದಿನ್ನು ಆಗಿಲ್ಲ. ಪೌರಕಾರ್ಮಿರರಿಗೆ ಕೆಲಸ ಖಾಯಂ ಮಾಡಬೇಕು. ಅವರಿಗೆ ವಸತಿ ನೀಡಬೇಕು. ಅವರ ಮಕ್ಕಳಿಗೆ ಉಚಿತ ಉತ್ತಮ ಶಿಕ್ಷಣ ನೀಡಬೇಕು. ಕೆಲಸ ಮಾಡುವ ಜಾಗದಲ್ಲಿ ಕುಡಿಯುವ ನೀರು, ಉತ್ತಮ ಊಟ, ಶೌಚಾಲಯ ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆಗಳನ್ನು ಇಟ್ಟುಕೊಂಡು ಬೆಂಗಳೂರಿನಾದ್ಯಂತ ಜಾಥಾ ಮಾಡುತ್ತಿದ್ದೇವೆ” ಎಂದು ಹೇಳಿದ್ದಾರೆ.

ಮುಂದುವರಿದು, “ಪೌರಕಾರ್ಮಿಕರಿಗೆ ಗೌರವ ನೀಡಬೇಕು. ನಗರ ಸ್ವಚ್ಛಗೊಳಿಸಿ, ಆರೋಗ್ಯ ಕಾಪಾಡುವ ಅವರಿಗೆ ಗೌರವ ಸಿಗುತ್ತಿಲ್ಲ. ಕೆಲಸ ಮಾಡುವ ಸ್ಥಳಗಳಲ್ಲಿ ಕುಡಿಯುವ ನೀರು ಕೇಳಿದರೆ ಶೌಚಾಲಯದ ಜಗ್ಗುಗಳಲ್ಲಿ ನೀರು ನೀಡಲಾಗುತ್ತದೆ. ಈ ವಲಯದಲ್ಲಿ ಹೆಚ್ಚಿನ ಜನ ಹೆಣ್ಣುಮಕ್ಕಳು, ದಲಿತರು ಇರುವ ಕಾರಣ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಮೇಸ್ತ್ರಿಗಳು ಮಹಿಳೆಯರಿಗೆ ಮರ್ಯಾದೆ ನೀಡುತ್ತಿಲ್ಲ. ನಮಗೂ ಎಲಲ್ರಂತೆ ಬದುಕುವ ಹಕ್ಕಿಲ್ಲವೇ..?” ಎಂದು ಪ್ರಶ್ನಿಸಿದ್ದಾರೆ.

ಪೌರಕಾರ್ಮಿಕರ ಸಮಸ್ಯೆಗಳ ಕುರಿತು ಒಂದೊಂದು ಏರಿಯಾಗಳಲ್ಲಿ ಚಲನಚಿತ್ರಗಳ ಪ್ರದರ್ಶನ ಮಾಡುತ್ತಿದ್ದೇವೆ. ಕಾರ್ಮಿಕರು ಕೆಲಸ ಮಾಡುತ್ತಲೇ ಜಾಥಾದಲ್ಲಿ ಪಾಲ್ಗೊಳ್ಳುತ್ತಾರೆ. ಪ್ರತಿದಿನ 5 ರಿಂದ 6 ಜನ ರಜೆ ಹಾಕಿಕೊಂಡು ಜಾಥಾ ಮಾಡುತ್ತಾರೆ. ಸಮಸ್ಯೆಗಳು, ಹಕ್ಕುಗಳು, ಬೇಡಿಕೆಗಳ ಬಗ್ಗೆ ಕರ ಪತ್ರಗಳನ್ನು ಮಾಡಿ ಹಂಚಲಾಗುತ್ತಿದೆ. 15 ದಿನದ ಬಳಿಕ ಬಿಬಿಎಂಪಿಗೆ ಮನವಿ ಪತ್ರ ಸಲ್ಲಿಸಲಾಗುತ್ತದೆ” ಎಂದು ಮಾಹಿತಿ ನೀಡಿದ್ದಾರೆ.

“ಮನೆಯ ಮಾಲೀಕರು ಮನೆ ಬಾಗಿಲಿಗೆ ನೀರು ಹಾಖುತ್ತಾರೋ ಇಲ್ಲವೋ, ಆದರೆ, ನಾವು ರಸ್ತೆಗಳನ್ನು ಗುಡಿಸುತ್ತೇವೆ. ಆದರೂ ನಮಗೆ ಸಮಾನತೆ, ಘನತೆ, ಸಮಯಕ್ಕೆ ಪಾವತಿ ಕೂಡ ಇಲ್ಲ. ಕೆಲಸ ಮಾಡುವ ಜಾಗದಲ್ಲಿ ಕುಡಿಯುವ ನೀರು, ಕುಳಿತು ಊಟ ಮಾಡಲು ಸರಿಯಾದ ಸ್ಥಳ ಕೂಡ ಇಲ್ಲ. ಇನ್ನು ಹೆಚ್ಚಿನ ಮಹಿಳೆಯರೇ ಇರುವ ನಮಗೆ, ನಮ್ಮದೆ ಆದ ಸಮಸ್ಯೆಗಳಿಗೆ ಆದರೆ, ಕೆಲಸದ ಸ್ಥಳಗಳಲ್ಲಿ ಶೌಚಾಲಯ ಇಲ್ಲ. ನಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕೆಂದು ನಾವು ಕೂಡ ಬಯಸುತ್ತೇವೆ. ನಮಗೂ ವಸತಿ ಸಮುಚ್ಛಯ ಬೇಕು. ಸಮಾನತೆಗಾಗಿ ನಾವು ಹೋರಾಡುತ್ತಲೇ ಇರುತ್ತೇವೆ” ಎಂದು ಬಿಬಿಎಂಪಿ ಪೌರಕಾರ್ಮಿಕರ ಸಂಘದ ಕಾರ್ಯದರ್ಶಿ ರತ್ನಮ್ಮ ಹೇಳಿದ್ದಾರೆ.

Image

 


ಇದನ್ನೂ ಓದಿ: ಮದ್ದೂರು ಪೌರಕಾರ್ಮಿಕ ಆತ್ಮಹತ್ಯೆ ಪ್ರಕರಣ: ಇಬ್ಬರು ಪುರಸಭೆ ಅಧಿಕಾರಿಗಳ ಅಮಾನತು

LEAVE A REPLY

Please enter your comment!
Please enter your name here