PC: Nedumudi Venu

ತಿರುವನಂತಪುರಂ: ಐದು ನೂರಕ್ಕೂ ಹೆಚ್ಚು ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ, ಎರಡು ಭಾರಿ ರಾಷ್ಟ್ರ ಪ್ರಶಸ್ತಿಗಳನ್ನು, ಹಲವಾರು ಭಾರಿ ಕೇರಳ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದ ಪ್ರತಿಭಾನ್ವಿತ ನಟ ನೆಡುಮುಡಿ ವೇಣು (73) ಸೋಮವಾರ ನಿಧನರಾಗಿದ್ದಾರೆ. ಕೋವಿಡ್ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡ ಬಳಿಕ ಅವರು ಹಲವು ಕಾಯಿಲೆಗಳಿಗೆ ತುತ್ತಾಗಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಅವರು ಸೋಮವಾರ ಮಧ್ಯಾಹ್ನದ ವೇಳೆಗೆ ಕೊನೆಯುಸಿರೆಳೆದರು.

ಅಲಪ್ಪುಜ ನೆಡುಮುಡಿಯಲ್ಲಿ ಪಿ.ಕೆ.ಕೇಶವನ್ ಪಿಳ್ಳೈ ಮತ್ತು ಪಿ.ಕುಂಜಿಕುಟ್ಟಿಯಮ್ಮ ದಂಪತಿಗೆ ಜನಿಸಿದ ಐದು ಮಕ್ಕಳಲ್ಲಿ ಒಬ್ಬರಾದ ವೇಣು ಅವರು 1978ರಲ್ಲಿ ಜಿ.ಅರವಿಂದನ್ ನಿರ್ದೇಶನದ ‘ಥಂಪು’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.

ನೆಡುಮುಡಿ ವೇಣು ಎಂದು ಪ್ರೀತಿಯಿಂದ ಕರೆಯಲ್ಪಡುವ ಕೇಶವನ್ ವೇಣುಗೋಪಾಲ್ ನಾಯರ್ ಅವರು ರಂಗಭೂಮಿಯಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಬಳಿಕ ಚಲನಚಿತ್ರಗಳಲ್ಲಿ ನಟಿಸಿದರು. ನಿರ್ದೇಶಕರಾಗಿ, ಚಿತ್ರಕಥೆಗಾರರಾಗಿ ಚಿತ್ರರಂಗದಲ್ಲಿ ಅಚ್ಚಳಿಯದೆ ಉಳಿದರು.

ಇದನ್ನೂ ಓದಿರಿ: ಪುರುಷ ಪ್ರಧಾನ ನೈತಿಕತೆ ಪ್ರಶ್ನಿಸಿ ನಟಿ ಸಮಂತಾ ಪೋಸ್ಟ್‌; ಆರೋಪಗಳಿಗೆ ಸ್ಪಷ್ಟನೆ

“ಎಲ್ಲರೂ ಒಟ್ಟಾಗಿ ಕೊರೊನಾವನ್ನು ಸೋಲಿಸೋಣ, ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸೋಣ” ಎಂದು ಅವರು ಹಾಡಿರುವ 90 ಸೆಕೆಂಡುಗಳ ಹಾಡು ಇತ್ತೀಚೆಗೆ ವೈರಲ್‌ ಆಗಿತ್ತು. ಈ ಹಾಡನ್ನು ಕೇರಳ ಪೊಲೀಸರು ಫೇಸ್‌ಬುಕ್ ಮತ್ತು ಟ್ವಿಟರ್ ಖಾತೆಗಳಲ್ಲಿ ಅಪ್‌ಲೋಡ್ ಮಾಡಿದ ನಂತರ ಜನಪ್ರಿಯವಾಗಿತ್ತು. ಜಗತ್ತಿನಾದ್ಯಂತ ಇರುವ ನೆಟಿಜನ್‌ಗಳು ಮತ್ತು ಮಲಯಾಳಿಗಳು ವ್ಯಾಪಕವಾಗಿ ಈ ಹಾಡನ್ನು ಹಂಚಿಕೊಂಡಿದ್ದರು.

ಅಲಪ್ಪುಜದ ಸನಾತನ ಧರ್ಮ ಕಾಲೇಜಿನಲ್ಲಿ ಪದವಿ ಪಡೆದ ನಂತರ, ವೇಣು ಅವರು ಕೆಲಕಾಲ ಕಲಕೌಮುಡಿಯಲ್ಲಿ ಪತ್ರಕರ್ತರಾಗಿ, ಸಂಸ್ಥೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದ್ದರು. ‘ಕಟ್ಟತೆ ಕಿಲಿಗೂಡು’, ‘ತೀರ್ಥಂ’, ‘ಶ್ರುತಿ’, ‘ಅಂಬದ ಜ್ಞಾನೆ’, ‘ಒರು ಕಥಾ ಒರು ನನ್ನಕ್ಕಥಾ’, ‘ಸವಿದಂ’ ಮತ್ತು ‘ಅಂಗನೆ ಒರು ಅವಧಿಕಾಲತ್ತ’ ಮುಂತಾದ ಸಿನಿಮಾಗಳಿಗೆ ಅವರು ಸ್ಕ್ರಿಪ್ಟ್ ಬರೆದಿದ್ದಾರೆ. ಅವರು ‘ಪೂರಂ’ ಹೆಸರಿನ ಚಲನಚಿತ್ರವನ್ನೂ ನಿರ್ದೇಶಿಸಿದ್ದಾರೆ.

ಕಮಲ್ ಹಾಸನ್ ಅಭಿಯನದ ‘ಇಂಡಿಯನ್‌’, ವಿಕ್ರಮ್ ಅಭಿನಯದ ‘ಅನ್ನಿಯನ್’ ಸಿನಿಮಾಗಳಲ್ಲಿ ಅಭಿನಯಿಸಿದ ನೆಡುಮುಡಿ ವೇಣು ಅವರಿಗೆ ತಮಿಳು ಚಿತ್ರರಂಗದಲ್ಲಿ ಅಭಿಮಾನಿಗಳು ಸೃಷ್ಟಿಯಾದರು. ಬಳಿಕ ಅವರು ‘ಮೊಗಾಮುಲ್’ (1995) ಮತ್ತು ‘ಸರ್ವಂ ತಾಳ ಮಯಂ’ (2019) ಸಿನಿಮಾಗಳಲ್ಲಿ ಅಭಿನಯಿಸಿದರು.

ಜೀನತ್ ಅಮಾನ್, ವಿಕ್ಟರ್ ಬ್ಯಾನರ್ಜಿ ಮತ್ತು ರೂಪಾ ಗಂಗೂಲಿ ಅವರೊಂದಿಗೆ  ಇಂಗ್ಲಿಷ್ ಭಾಷೆಯ ‘ಚೌರಾಹೆನ್’ ಚಿತ್ರದಲ್ಲೂಅವರು ಅಭಿನಯಿಸಿದರು. ಸೆಪ್ಟೆಂಬರ್ 2007ರಲ್ಲಿ ಜಿಂಬಾಬ್ವೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಸೈರಾ’ ಚಿತ್ರದ ಪಾತ್ರಕ್ಕಾಗಿ ಅವರು ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡರು.

1980ರಲ್ಲಿ ‘ಚಾಮರಂ’ಗಾಗಿ ಅವರು ತಮ್ಮ ಮೊದಲ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು (ಎರಡನೇ ಅತ್ಯುತ್ತಮ ನಟ) ಪಡೆದರು. 1981ರಲ್ಲಿ ‘ವಿದಾಪರಯುಂ ಮುನ್ಪೆ’ ಸಿನಿಮಾಕ್ಕಾಗಿ ‘ಅತ್ಯುತ್ತಮ ನಟ’, 1987ರಲ್ಲಿ ‘ಒರು ಮಿನ್ನಮಿನುಂಗಿಂತೆ ನೂರುಂಗುವೆಟ್ಟಂ’  ಸಿನಿಮಾ ಅಭಿನಯಕ್ಕಾಗಿ ‘ಅತ್ಯುತ್ತಮ ನಟ’ ಪ್ರಶಸ್ತಿಯನ್ನು ಪಡೆದರು.

“ನೆಡುಮುಡಿ ವೇಣು ಅವರ ನಿಧನವು ಭಾರತೀಯ ಚಿತ್ರರಂಗಕ್ಕೆ ತುಂಬಲಾಗದ ನಷ್ಟವಾಗಿದೆ. ಮಲಯಾಳಂನಲ್ಲಿ ನೆಡುಮುಡಿಯವರ ಸ್ಥಾನವನ್ನು ತುಂಬಲು ಯಾವುದೇ ಕಲಾವಿದರಿಗೆ ಸಾಧ್ಯವಿಲ್ಲ. ಸಿನಿಮಾ ಸೆಟ್‌ಗಳಲ್ಲಿ ಅವರು ಇದ್ದರೆಂದರೆ ವಿಶೇಷ ಶಕ್ತಿ ಸಂಚಲನವಾಗುತ್ತಿತ್ತು” ಎಂದು ನಟ ಮಣಿಯನ್ ಪಿಳ್ಳೈ ರಾಜು ಹೇಳಿದ್ದಾರೆ.

 ಇದನ್ನೂ ಓದಿರಿ: ಅಕ್ಟೋಬರ್‌ನಲ್ಲಿ ಒಟಿಟಿ ವೇದಿಕೆಯಲ್ಲಿ ಸಿಗಲಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here