ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ವಿರುದ್ದ, ‘ರಾಜಕೀಯ ಅರ್ಥವಾಗದಿದ್ದರೆ, ಮನೆಗೋಗಿ ಅಡುಗೆ ಮಾಡು’ ಎಂಬ ಅವಹೇಳನಕಾರಿ, ಮಹಿಳಾ ವಿರೋಧಿ ಹೇಳಿಕೆ ನೀಡಿದ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ ಪಾಟೀಲ್ ವಿರುದ್ಧ ಭಾರೀ ಟೀಕೆ ಕೇಳಿಬಂದಿದೆ.
“ನೀವೇಕೆ ರಾಜಕೀಯದಲ್ಲಿದ್ದೀರಿ? ಮನೆಗೆ ಹೋಗಿ ಅಡುಗೆ ಮಾಡಿ. ದೆಹಲಿಗಾದರೂ ಹೋಗಿ ಅಥವಾ ಸ್ಮಶಾನಕ್ಕೆ ಹೋಗಿ, ಆದರೆ ನಮಗೆ ಒಬಿಸಿ ಕೋಟಾ ಕೊಡಿಸಿ. ಲೋಕಸಭಾ ಸದಸ್ಯರಾಗಿದ್ದರೂ ಒಬ್ಬ ಸಿಎಂ ಅಪಾಯಿಂಟ್ಮೆಂಟ್ ಪಡೆಯುವುದು ಹೇಗೆಂದು ನಿಮಗೆ ತಿಳಿದಿಲ್ಲ” ಎಂದು ಬಿಜೆಪಿ ಅಧ್ಯಕ್ಷ ನಾಲಿಗೆ ಹರಿಯಬಿಟ್ಟಿದ್ದಾರೆ.
ಈ ಮೊದಲು ಸುಪ್ರಿಯಾ ಸುಳೆರವರು, “ಬಿಜೆಪಿ ಆಡಳಿತದ ಮಧ್ಯಪ್ರದೇಶ ಸರ್ಕಾರವು ಸ್ಥಳೀಯ ಚುನಾವಣೆಯಲ್ಲಿ ಒಬಿಸಿ ಮೀಸಲಾತಿಗೆ ಸುಪ್ರೀಂ ಕೋರ್ಟ್ ಅನುಮತಿ ಪಡೆದುಕೊಂಡಿದ್ದು ಹೇಗೆ? ಈ ಕುರಿತು ನವದೆಹಲಿಯಲ್ಲಿ ಮಧ್ಯಪ್ರದೇಶದ ಸಿಎಂರವರನ್ನು ಸಂಪರ್ಕಿಸಿದೆವು, ಆದರೆ ಅವರು ಸಿಗಲಿಲ್ಲ” ಎಂದು ಪಕ್ಷದ ಸಭೆಯಲ್ಲಿ ಮಾತನಾಡಿದ್ದರು.
ಮಧ್ಯಪ್ರದೇಶದ ಮುಖ್ಯಮಂತ್ರಿ ದೆಹಲಿಗೆ ಬಂದರು ಮತ್ತು ಕೆಲವರನ್ನು ಭೇಟಿಯಾದರು. ಅದಾದ ಎರಡೇ ದಿನದಲ್ಲಿ ಅವರು ಸ್ಥಳೀಯ ಚುನಾವಣೆಗೆ ಒಬಿಸಿ ಮೀಸಲಾತಿ ಪಡೆದುಕೊಂಡರು. ಇದು ಹೇಗೆಂದು ನನಗೆ ತಿಳಿಯಲಿಲ್ಲ ಎಂದು ಸುಪ್ರಿಯಾ ಸುಳೆ ಹೇಳಿದ್ದರು.
ಸುಪ್ರಿಯಾ ಸುಳೆ ವಿರುದ್ಧ ಅವಹೇಳನಕಾರಿ, ಮಹಿಳಾ ವಿರೋಧಿ ಹೇಳಿಕೆ ನೀಡಿರುವ ಬಿಜೆಪಿ ಮುಖ್ಯಸ್ಥನ ವಿರುದ್ಧ ಎನ್‌ಸಿಪಿ ಮುಗಿಬಿದ್ದಿದೆ. ಮೊದಲು ನೀವು ಚಪಾಟಿ ಲಟ್ಟಿಸುವುದನ್ನು ಕಲಿಯಿರಿ ಮತ್ತು ನಿಮ್ಮ ಪತ್ನಿಗೆ ಅಡುಗೆ ಮಾಡಲು ಸಹಾಯ ಮಾಡಿ ಎಂದು ತಿರುಗೇಟು ನೀಡಿದೆ.
“ಅವರು ಹಾಗೆ ಮಾತನಾಡಬಾರದಿತ್ತು. ನನ್ನ ಸಹೋದರಿಯ ವಿರುದ್ಧ ಆ ರೀತಿ ಕೆಟ್ಟದಾಗಿ ಮಾತನಾಡುವ ಹಕ್ಕು ಅವರಿಗಿಲ್ಲ” ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ತಿಳಿಸಿದ್ದಾರೆ.
This is the Maharashtra BJP President https://t.co/eu2TYNvsDZ speaking about Supriya….I have always maintained that they (BJP) are misogynistic and demean women whenever they can…
— sadanandsule (@sadanandsule) May 25, 2022
ಬಿಜೆಪಿಯು ಸ್ತ್ರೀದ್ವೇಷಿ ಪಕ್ಷ ಎಂದು ಸುಪ್ರಿಯಾ ಸುಳೆ ಪತಿ ಸದಾನಂದ್ ಸುಳೆ ಕಿಡಿಕಾರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, “ಗೃಹಿಣಿ, ತಾಯಿ ಮತ್ತು ಯಶಸ್ವಿ ರಾಜಕಾರಣಿಯಾಗಿರುವ, ಭಾರತದ ಇತರ ಅನೇಕ ಕಠಿಣ ಪರಿಶ್ರಮಿ ಮತ್ತು ಪ್ರತಿಭಾವಂತ ಮಹಿಳೆಯರಲ್ಲಿ ಒಬ್ಬರಾಗಿರುವ ನನ್ನ ಹೆಂಡತಿಯ ಬಗ್ಗೆ ನನಗೆ ಹೆಮ್ಮೆ ಇದೆ… ಆದರೆ ಬಿಜೆಪಿಯು ಸ್ತ್ರೀದ್ವೇಷಿ ಪಕ್ಷವಾಗಿದ್ದು, ಯಾವಾಗಲೂ ಮಹಿಳೆಯನ್ನು ಹೀಯಾಳಿಸುತ್ತದೆ. ಇದು ಎಲ್ಲಾ ಮಹಿಳೆಯರಿಗೆ ಮಾಡಿದ ಅವಮಾನವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಶ್ರದ್ಧಾಂಜಲಿ; ದೊರೆಸ್ವಾಮಿ ಎಂಬ ಅತಿ ಸಾಮಾನ್ಯ ಮಹಾನ್ ವ್ಯಕ್ತಿ
ಭಾರತದಲ್ಲಿ ಸರಿ ಸುಮಾರು 50% ನಷ್ಟು ಮಹಿಳೆಯರಿದ್ದಾರೆ. ಅವರು ಎಲ್ಲಾ ಕ್ಷೇತ್ರಗಳಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾರೆ. ಸಂಸಾರದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಅದರೆ ಮೇಲಿನ ಬಿಜೆಪಿ ಮುಖಂಡನ ಹೇಳಿಕೆ ಮಹಿಳೆಯರನ್ನು ಸಾಮರ್ಥ್ಯವಿಲ್ಲದವರು ಎಂಬ ಪುರಷಾಧಿಪತ್ಯದ ಮನಸ್ಥಿತಿಯಿಂದ ಕೂಡಿದೆ ಎಂಬ ಟೀಕೆಗಳು ಕೇಳಿಬಂದಿವೆ.


