ಮುಂದಿನ ವರ್ಷ ನಡೆಯಲಿರುವ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಭ್ರಷ್ಟ, ಕೋಮುವಾದಿ ಬಿಜೆಪಿಯನ್ನು ಸೋಲಿಸೋಣ ಎಂದು ಗೋವಾ ಫಾರ್ವಾಡ್ ಪಾರ್ಟಿ ಅಧ್ಯಕ್ಷ ವಿಜಯ್ ಸರ್ದೇಸಾಯಿ ಕರೆ ನೀಡಿದ್ದಾರೆ. ಆರು ತಿಂಗಳ ಹಿಂದೆಯಷ್ಟೇ ಬಿಜೆಪಿ ಮೈತ್ರಿಯಿಂದ ಹೊರಬಂದಿರುವ ಅವರು ಇಂದು ಟಿಎಂಸಿ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರನ್ನು ಭೇಟಿಯಾಗಲಿದ್ದಾರೆ.
“ಭ್ರಷ್ಟ, ಕೋಮುವಾದಿ ಬಿಜೆಪಿಯ ಆಳ್ವಿಕೆಯನ್ನು ಕೊನೆಗೊಳಿಸಲು ವಿರೋಧ ಪಕ್ಷಗಳ ಐಕ್ಯತೆ ಅತಿ ಮುಖ್ಯವಾಗಿದೆ. ಹಾಗಾಗಿ 2022ರ ಚುನಾವಣೆ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ. ಮಮತಾ ಬ್ಯಾನರ್ಜಿಯವರ ಆಹ್ವಾನದ ಮೇರೆಗೆ ನಾನು ಮತ್ತು ನಮ್ಮ ಹಿರಿಯ ಸಹೋದ್ಯೋಗಿಗಳು ಇಂದು ಬೆಳಿಗ್ಗೆ 10 ಗಂಟೆಗೆ ಅವರನ್ನು ಭೇಟಿಯಾಗುತ್ತಿದ್ದೇವೆ” ಎಂದು ವಿಜಯ್ ಸರ್ದೇಸಾಯಿ ತಿಳಿಸಿದ್ದಾರೆ.
ಮೂವರು ವಿಧಾನಸಭಾ ಸದಸ್ಯರನ್ನು ಹೊಂದಿರುವ ಗೋವಾ ಫಾರ್ವಾಡ್ ಪಾರ್ಟಿ ಬಿಜೆಪಿಯೊಂದಿಗೆ ಸರ್ಕಾರದ ಭಾಗವಾಗಿತ್ತು. ವಿಜಯ್ ಸರ್ದೇಸಾಯಿ ಉಪ ಮುಖ್ಯಮಂತ್ರಿಯಾಗಿದ್ದರು. ಆದರೆ ಬಿಜೆಪಿಯೊಂದಿಗೆ ಬಿರುಕು ಕಾಣಿಸಿಕೊಂಡ ನಂತರ ಬಿಜೆಪಿಯನ್ನು ಸಮಾಜ ವಿರೋಧ ಪಕ್ಷ ಎಂದು ಕರೆದ ಅವರು 2021ರ ಏಪ್ರಿಲ್‌ನಲ್ಲಿ ಮೈತ್ರಿಯಿಂದ ಹೊರಬಂದಿದ್ದರು.
ಅವರು ಮೊದಲು ಕಾಂಗ್ರೆಸ್‌ನೊಂದಿಗೆ ಮೈತ್ರಿಗೆ ಯತ್ನಿಸಿದ್ದರು. ಆದರೆ ಕಾಂಗ್ರೆಸ್ ಒಪ್ಪದಿದ್ದಾಗ ಟಿಎಂಸಿ ಜೊತೆ ಮಾತುಕತೆಗೆ ಮುಂದಾಗಿದ್ದಾರೆ. ಟಿಎಂಸಿ ಸಹ ಗೋವಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಸ್ಪರ್ಧಿಸಲು ನಿರ್ಧರಿಸಿದೆ. ಮೂರು ದಿನಗಳ ಗೋವಾ ಪ್ರವಾಸದಲ್ಲಿರುವ ಮಮತಾ ಬ್ಯಾನರ್ಜಿ ಭರ್ಜರಿ ಚುನಾವಣಾ ತಯಾರಿ ನಡೆಸಿದ್ದಾರೆ.
ನಿನ್ನೆ ಗೋವಾದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ ‘ಟಿಎಂಸಿ’ ಎಂದರೆ ಟೆಂಪಲ್ (ದೇವಾಲಯ), ಮಸ್ಜಿದ್ (ಮಸೀದಿ), ಚರ್ಚ್ (ಇಗರ್ಜಿ) ಎಂದು ಕರೆದಿದ್ದಾರೆ. ಹಲವು ದೇವಾಲಯಗಳಿಗೆ ಭೇಟಿ ಕೊಟ್ಟಿರುವ ಅವರು, “ನಾನು ನಿಮ್ಮ ಸಹೋದರಿ. ನಿಮ್ಮ ಅಧಿಕಾರ ಹಿಡಿಯಲು ನಾನು ಬಂದಿಲ್ಲ. ಆದರೆ ಜನರು ತೊಂದರೆ ಎದುರಿಸುತ್ತಿರುವಾಗ ಅವರನ್ನು ನೋಡಲು ನನ್ನ ಹೃದಯ ಬಯಸುತ್ತದೆ” ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಟೆನಿಸ್ ತಾರೆ ‘ಲಿಯಾಂಡರ್ ಪೇಸ್’ ಮತ್ತು ನಟಿ, ಕಾರ್ಯಕರ್ತೆ ನಫೀಸಾ ಅಲಿ ಟಿಎಂಸಿ ಸೇರಿರುವುದು ಪಕ್ಷ ಬಲ ತಂದುಕೊಟ್ಟಿದೆ.
40 ಸದಸ್ಯಬಲದ ಗೋವಾ ವಿಧಾನಸಭೆ ಚುನಾವಣೆ ದೇಶದ ಗಮನ ಸೆಳೆದಿದೆ. 2017ರಲ್ಲಿ ನಡೆದ ಚುನವಣೆಯಲ್ಲಿ ಕಾಂಗ್ರೆಸ್ ಪಕ್ಷ 17 ಸ್ಥಾನಗಳಲ್ಲಿ ಜಯಸಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ 13 ಸ್ಥಾನ ಗೆದ್ದಿದ್ದ ಬಿಜೆಪಿಯು ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿದೆ.
ಇದನ್ನೂ ಓದಿ: ಗೋವಾ: ಟಿಎಂಸಿ ಸೇರಿದ ಮಾಜಿ ಟೆನಿಸ್ ತಾರೆ ‘ಲಿಯಾಂಡರ್ ಪೇಸ್’



ದೇಶದ್ರೋಹಿಗಳು ಎಷ್ಟು ಜನ ಒಂದಾದರು ಬಿಜೆಪಿಯನ್ನ ಸೋಲಿಸಲು ಆಗಲ್ಲಾ .