ಗೋಕರ್ಣ ಮಹಾಬಲೇಶ್ವರ ಸಹಕಾರ ಬ್ಯಾಂಕ್ ಯಾನೆ ಗೋಕರ್ಣ ಅರ್ಬನ್ ಬ್ಯಾಂಕ್ ಪಟ್ಟಭದ್ರರ ಕಪಿಮುಷ್ಠಿಯಲ್ಲಿ ಸಿಕ್ಕಿಬಿದ್ದು ಒದ್ದಾಡುತ್ತಿದೆ. ಸರ್ಕಾರದ ಕಾನೂನು ಕಟ್ಟಳೆ, ಸಹಕಾರ ಇಲಾಖೆಯ ಸೂಚನೆ ಸುತ್ತೋಲೆಗೆಲ್ಲ ಇಲ್ಲಿ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ! ಜನರಲ್ ಮ್ಯಾನೇಜರ್ ಸಾಹೇಬರ ಏಕಪಕ್ಷೀಯ ಆಡಳಿತ, ಗ್ರಾಹಕರು ಮತ್ತು ಸಾರ್ವಜನಿಕರನ್ನು ದಿಗಿಲುಗೊಳಿಸಿಬಿಟ್ಟಿದೆ. ಬುಡಕಟ್ಟು ಹಾಲಕ್ಕಿ ಒಕ್ಕಲಿಗ ಸಮುದಾಯದ ಬಡಪಾಯಿ ಅಟೆಂಡರ್ ಒಬ್ಬರನ್ನು ಬಲಾತ್ಕಾರದಿಂದ ನಿವೃತ್ತಿಗೊಳಿಸಿರುವ ಪ್ರಕರಣವಂತೂ ಸದರಿ ಬ್ಯಾಂಕ್ ಬಗೆಗಿದ್ದ ನಂಬಿಕೆ, ದಿನದಿಂದ ದಿನಕ್ಕೆ ಕುಸಿಯುವಂತೆ ಮಾಡಿಬಿಟ್ಟಿದೆ.
ಬ್ಯಾಂಕಿನಲ್ಲಿ ಬರೋಬ್ಬರಿ 28 ವರ್ಷದಿಂದ ನಿಷ್ಠೆ ನಿಯತ್ತಿನಿಂದ ಚಾಕರಿ ಮಾಡಿಕೊಂಡಿದ್ದ ರಾಮ ತಿಮ್ಮಗೌಡರಿಗೆ ಮೋಸ ಮಾಡಿರುವ ಬ್ಯಾಂಕ್ ಮಂಡಳಿ ನಮ್ಮ ಹಣಕ್ಕೆ ಅದೆಂಥ ಭದ್ರತೆ ಸೌಲಭ್ಯ ಒದಗಿಸಬಹುದೆಂಬ ಆತಂಕದ ವಾದ ಗ್ರಾಹಕರದು. ರಾಮಗೌಡ 1-10-1994ರಂದು ಅಟೆಂಡರ್ ಹುದ್ದೆಗೆ ನೇಮಕಾತಿ ಪಡೆದುಕೊಂಡಿದ್ದರು. ಸಹಕಾರ ಇಲಾಖೆ ಮತ್ತು ಸರ್ಕಾರದ ಹಲವು ನಿಯಮ ನಿರ್ದೇಶನಗಳ ಪ್ರಕಾರ ರಾಮಗೌಡರಿಗೆ 2023ರ ತನಕ ಬ್ಯಾಂಕಲ್ಲಿ ಉದ್ಯೋಗ ಮಾಡುವ ಅವಕಾಶವಿದೆ. ಆದರೆ ಬ್ಯಾಂಕ್‌ನ ಅಷ್ಟೂ ಆಡಳಿತವನ್ನು ತನ್ನಿಚ್ಛೆಯಂತೆ ನಡೆಸುತ್ತಿರುವ ಜನರಲ್ ಮ್ಯಾನೇಜರ್ 29-4-2021 ರಂದು ಗೌಡರಿಗೆ “ನಿವೃತ್ತಿ ಸಂದೇಶ” ರವಾನಿಸಿದ್ದಾರೆ!
ಬ್ಯಾಂಕ್ ಆಡಳಿತ ಮಂಡಳಿ ಆದೇಶದಂತೆ 31-5-2021ರಂದು ನೌಕರಿಯಿಂದ ಬಿಡುಗಡೆ ಮಾಡಲಾಗುತ್ತದೆಂದು ತಿಳಿಸಿದ್ದಾರೆ. ಈ ಅನಿರೀಕ್ಷಿತ ಆಘಾತದಿಂದ ಹೌಹಾರಿದ ಅಸಹಾಯಕ ಗೌಡರು “ಸರ್, ನನಗಿನ್ನೂ 58 ವರ್ಷ ವಯಸ್ಸು 2ವರ್ಷ ಸೇವಾವಧಿ ಇನ್ನೂ ಬಾಕಿಯಿದೆ ಅನ್ಯಾಯ ಮಾಡಬೇಡಿ” ಎಂದು ಪರಿಪರಿಯಾಗಿ ಅಲವತ್ತುಕೊಂಡಿದ್ದಾರೆ, ಇದ್ಯಾವುದಕ್ಕೂ ಕೇರ್ ಮಾಡದ ಜನರಲ್ ಮ್ಯಾನೇಜರ್ ಹಠದಿಂದ ರಾಮಗೌಡರನ್ನು 31-5-2021 ರಂದು ನಿವೃತ್ತಿಗೊಳಿಸಿ ಆದೇಶ ಕೊಟ್ಟು ಹೊರಹಾಕಿದ್ದಾರೆ!
ನೌಕರರನ್ನು 58 ವರ್ಷಕ್ಕೆ ನಿವೃತ್ತಿಗೊಳಿಸುವ ಸಹಕಾರ ಸಂಘ ಅಥವಾ ಸಹಕಾರ ಬ್ಯಾಂಕ್‌ಗಳ 1960ರ ನಿಯಮ 18(2)ನ್ನು ರಾಜ್ಯ ಸರ್ಕಾರದ ಅಧಿಸೂಚನೆ ಸ.ಸಿಎಲ್‌ಎಮ್/2008 ದಿನಾಂಕ 17-9-2008 ರಂತೆ ಎರಡು ವರ್ಷ ಹೆಚ್ಚಿಗೆ ಸೇವಾವಧಿ ಕಲ್ಪಿಸಿ ಬದಲಾಯಿಸಲಾಗಿದೆ. ಈ ನಿಯಮ ಎಲ್ಲ ಸಹಕಾರಿ ಸಂಘ/ಸಹಕಾರಿ ಬ್ಯಾಂಕ್ ಬೈಲಾದಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಸರ್ಕಾರ ಕಟ್ಟುನಿಟ್ಟಿನ ಸೂಚನೆ ಸಹ ನೀಡಿದ್ದೂ ಇದೆ. ಆದರೆ ಸರ್ಕಾರದ ಈ ನಿಯಮ ಗೋಕರ್ಣ ಅರ್ಬನ್ ಬ್ಯಾಂಕ್ ಆಡಳಿತಗಾರರು ಕಡೆಗಣಿಸಿ 58 ವರ್ಷಕ್ಕೆ ನೌಕರರನ್ನು ಮನೆಗಟ್ಟುತ್ತಿದ್ದಾರೆ!
ಸಹಕಾರ ಸಂಘಗಳ ನಿಬಂಧಕರು ದಿನಾಂಕ 25-9-2008ರಂದು ಹೊರಡಿಸಿದ ಸುತ್ತೋಲೆ ಕ್ರಮ ಸಂಖ್ಯೆ ಆರ್‌ಎಸ್‌ಆರ್/ಎಎಸ್‌ಸಿ/02/2008-09ರಲ್ಲಿ ಎಲ್ಲ ಸಹಕಾರ ಸಂಘ/ಸಹಕಾರ ಬ್ಯಾಂಕ್‌ಗಳು ನೌಕರರ ನಿವೃತ್ತಿ ವಯಸ್ಸಿನಲ್ಲಾದ ಬದಲಾವಣೆ ತಿದ್ದುಪಡಿ ನಿಯಮ ತಮ್ಮ ಸಂಸ್ಥೆಯ ಪೋಟ್ ನಿಯಮದಲ್ಲಿ ಅಳವಡಿಸಿಕೊಳ್ಳಲು ಸೂಚಿಸಿದ ಆದೇಶವನ್ನು ಗೋಕರ್ಣ ಅರ್ಬನ್ ಬ್ಯಾಂಕ್ ಆಡಳಿತ ಅಧಿಕಾರಿಗಳು ಧಿಕ್ಕರಿಸಿ ಕೂತಿದ್ದಾರೆ!!
“ನಮ್ಮ ಬ್ಯಾಂಕಿನಲ್ಲಿ 58 ವರ್ಷಕ್ಕೆ ನಿವೃತ್ತಿಗೊಳಿಸುವ ಪೋಟ್ ನಿಯಮ ಬದಲಾಯಿಸಿಲ್ಲ; ಬದಲಾಯಿಸೋದೂ ಇಲ್ಲ; ನೀನು ಕೆಲಸಕ್ಕೆ ಬರುವುದು ಬೇಡ” ಎಂದು ಪಾಪದ ರಾಮಗೌಡರಿಗೆ ಜನರಲ್ ಮ್ಯಾನೇಜರ್ ಮತ್ತು ಆತನ ಕಣ್ಸನ್ನೆಗೆ ತಕ್ಕಂತೆ ಕುಣಿಯುವ ಕೆಲವು ನಿರ್ದೇಶಕರು ಏರು ಸ್ವರದಲ್ಲಿ ಹೇಳಿ ಹೊರಹಾಕಿದ್ದಾರೆ. ಈ ದಬ್ಬಾಳಿಕೆಯಿಂದ ಹೈರಾಣಾದ ರಾಮಗೌಡ ತನಗಾದ ಅನ್ಯಾಯವನ್ನು ಸಹಕಾರ ಸಂಘಗಳ ಉಪ ನಿಬಂಧಕರಿಗೆ ನಿವೇದಿಸಿಕೊಂಡಿದ್ದಾರೆ.
ದಾವೆ ವಿಚಾರಣೆ ನಡೆಸಿದ ಉಪ ನಿಬಂಧಕರಿಗೆ, ಗೋಕರ್ಣ ಅರ್ಬನ್ ಬ್ಯಾಂಕ್‌ನವರು ಎಲ್ಲ ನಿಯಮ ನೀತಿಗಳನ್ನು ಪ್ರಜ್ಞಾಪೂರ್ವಕವಾಗೇ ಮೂಲೆಗೊತ್ತಿ ರಾಮಗೌಡರನ್ನು ಎರಡು ವರ್ಷ ಮೊದಲೇ ನೀವೃತ್ತಿ ಮಾಡಿದ್ದಾರೆಂದು ಖಾತ್ರಿಯಾಗಿದೆ. ಅಂತೆಯೇ ಬ್ಯಾಂಕ್ ಗೌಡರಿಗೆ ಕೊಟ್ಟಿರುವ ನಿವೃತ್ತಿ ಆದೇಶಕ್ಕೆ ತಡೆಯಾಜ್ಞೆಯನ್ನೂ ಉಪ ನಿಬಂಧಕರು ನೀಡಿದ್ದಾರೆ. ಇಷ್ಟಾದರೂ ಬ್ಯಾಂಕ್‌ನವರು ಮಾತ್ರ ಗೌಡರನ್ನು ಕರ್ತವ್ಯಕ್ಕೆ ಸೇರಿಸಿಕೊಳ್ಳದೆ ಸತಾಯಿಸುತ್ತಿದ್ದಾರೆ. ಬ್ಯಾಂಕಿನ ಅಧ್ಯಕ್ಷರು ಎರಡು ಬಣದ ನಡುವೆ ಸಿಕ್ಕಿಬಿದ್ದಂತೆ ಒದ್ದಾಡುತ್ತಿರುವುದು ಅನೇಕ ಅನುಮಾನಕ್ಕೆ ಎಡೆ ಮಾಡಿದೆ!
ರಾಮಗೌಡ ದಿನವೂ ಡಿಆರ್ ಕೋರ್ಟಿನ ತಡೆಯಾಜ್ಞೆ ಹಿಡಿದುಕೊಂಡು ಬ್ಯಾಂಕಿಗೆ ಉದ್ಯೋಗಕ್ಕೆಂದು ಹೋಗುತ್ತಿದ್ದಾರೆ. ಆದರೆ ಅವರಿಗೆ ಒಳಗೆ ಬಿಟ್ಟುಕೊಳ್ಳುತ್ತಿಲ್ಲ. ಅವರು ಬೆಳಗಿಂದ ಸಂಜೆವರೆಗೆ ಬ್ಯಾಂಕಿನ ಮೂಲೆಯಲ್ಲಿ ಕುಳಿತು ಎದ್ದು ಬರುತ್ತಿದ್ದಾರೆ. ಈಗ ಅವರಿಗೆ ಬ್ಯಾಂಕಿನ ಬ್ಯಾಚ್, ಸಮವಸ್ತ್ರ ಧರಿಸದಂತೆ ಜಿಎಂ ಸಾಹೇಬರು ಧಮಕಿ ಹಾಕಹತ್ತಿದ್ದಾರೆ ಎಂದು ಕೂಡ ಆರೋಪಿಸಲಾಗಿದೆ. ಬ್ಯಾಂಕಿನ ಆವರಣದಲ್ಲಿ ಅಹಿತಕರ ಘಟನೆ ಸಂಭವಿಸುವ ದುಗುಡದ ವಾತಾವರಣ ಸೃಷ್ಟಿಯಾಗಿದೆ!
ಧ್ವನಿಯಿಲ್ಲದ ಬುಡಕಟ್ಟು ಸಮುದಾಯದ ರಾಮಗೌಡ ಅಧಿಕಾರಸ್ಥರ ದರ್ಪಕ್ಕೆ ಕಂಗಾಲಾಗಿದ್ದಾರೆ. ಹಾಲಕ್ಕಿ ಒಕ್ಕಲು ಸಮುದಾಯದವರು ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಅಥವಾ ಸಹಕಾರ ಸಂಘದಂಥ ಸಂಸ್ಥೆಗಳಲ್ಲಿ ನೌಕರಿ ಗಿಟ್ಟಿಸುವುದೇ ಅಪರೂಪ. ಅಂಥದ್ದರಲ್ಲಿ ಶೋಷಿತ ಜನಾಂಗದ ಅಮಾಯಕನ ಹೊಟ್ಟೆಪಾಡಿನ ಉದ್ಯೋಗವೇ ಕಸಿಯುವ ಕ್ರೌರ್ಯಕ್ಕೆ ಗೋಕರ್ಣ ಅರ್ಬನ್ ಬ್ಯಾಂಕ್ ಆಡಳಿತಗಾರರು ಕೈ ಹಾಕಿರುವುದು ಘೋರ ದುರಂತ ಎಂದು ಅಂತಃಕರಣವುಳ್ಳ ಜನರ ಆಕ್ರೋಶವಾಗಿದೆ.
ಅಷ್ಟಕ್ಕೂ ಈ ಅನ್ಯಾಯದ ನಿವೃತ್ತಿ ಮಸಲತ್ತಿನ ಅಸಲಿಯತ್ತೇನೆಂದು ಹುಡುಕುತ್ತ ಹೋದರೆ, ಹೊಸ ನೇಮಕಾತಿ ಹರಾಜು ಹಾಕಿದರೆ ದೊಡ್ಡ ಗಂಟು ದಕ್ಕುತ್ತದೆಂಬ ಆಸೆ ಇರಬಹುದಾ ಎಂಬ ಪ್ರಶ್ನೆಗಳು ಕೂಡ ಏಳುತ್ತವೆ.
ಸಹಕಾರ ಇಲಾಖೆಯ ಅಧಿಕಾರಿಗಳು ಗೋಕರ್ಣ ಅರ್ಬನ್ ಬ್ಯಾಂಕ್‌ನತ್ತ ಕಣ್ಣಗಲಿಸಿ ನೋಡಬೇಕಿದೆ; ಮುಗ್ಧ ರಾಮಗೌಡರಿಗೆ ನ್ಯಾಯ ಒದಗಿಸಬೇಕಿದೆ.


