ಗುಜರಾತ್‌ನ ಜುನಾಗಢದಲ್ಲಿ ಸ್ಥಳೀಯ ಎನ್‌ಎಸ್‌ಯುಐ ನಾಯಕ, ದಲಿತ ಸಮುದಾಯಕ್ಕೆ ಸೇರಿದ ಯುವಕನನ್ನು ಅಪಹರಿಸಿ ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಆರೋಪದಲ್ಲಿ ಗುಜರಾತ್ ಬಿಜೆಪಿ ಶಾಸಕಿ ಗೀತಾಬಾ ಜಡೇಜಾ ಅವರ ಪುತ್ರ ಗಣೇಶ್ ಜಡೇಜಾ ಮತ್ತು ಇತರರ ವಿರುದ್ಧ ಅಪಹರಣ ಮತ್ತು ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.
ಬಿಜೆಪಿ ಶಾಸಕಿ ಗೀತಾಬಾ ಜಡೇಜಾ ರಾಜ್‌ಕೋಟ್ ಜಿಲ್ಲೆಯ ಗೊಂಡಲ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಮಗನ ದುಷ್ಕೃತ್ಯದ ಬಗ್ಗೆ ಶಾಸಕಿ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ಶಾಸಕಿ ಗೀತಾಬಾ ಜಡೇಜಾ ಅವರ ಪುತ್ರ ಗಣೇಶ್ ಜಡೇಜಾ ಹಾಗೂ ಆತನ ಸಹಚರರು ಶುಕ್ರವಾರ ಮುಂಜಾನೆ ಬೈಕ್‌ನಲ್ಲಿ ತೆರಳುತ್ತಿದ್ದ ಸಂಜಯ್ ಸೋಲಂಕಿಯನ್ನು ಕಾರಿನಲ್ಲಿ ಹಿಂಬಾಲಿಸಿದ್ದು, ಸಂಜಯ್ ಬೈಕ್‌ಗೆ ಕಾರಿನಲ್ಲಿ ಹಿಂಬದಿಯಿಂದ ಢಿಕ್ಕಿ ಹೊಡೆದಿದ್ದಾರೆ. ಸೋಲಂಕಿ ಬೈಕ್‌ನಿಂದ ಕೆಳಕ್ಕೆ ಬಿದ್ದಾಗ, ಕಾರಿನಿಂದ ಕೆಳಗಿಳಿದಿರುವ ಆರೋಪಿಗಳು ಸೋಳಂಕಿಗೆ ದೊಣ್ಣೆಗಳಿಂದ ಥಳಿಸಿದ್ದಾರೆ. ಬಳಿಕ ಅವರನ್ನು ಗೊಂಡಾಲ್‌ನಲ್ಲಿರುವ ಗಣೇಶ್ ಜಡೇಜಾ ಅವರ ನಿವಾಸಕ್ಕೆ ಕರೆದೊಯ್ದು ಅಲ್ಲಿ ಗಣೇಶ್ ಮತ್ತು ಇತರರು ನಿರ್ದಯವಾಗಿ ಥಳಿಸಿ ಎನ್‌ಎಸ್‌ಯುಐ ತೊರೆಯುವಂತೆ ಬೆದರಿಸಿದ್ದಾರೆ. ಬಳಿಕ ಬೆಳಿಗ್ಗೆ ಆರೋಪಿಗಳು ಸೋಲಂಕಿಯನ್ನು ಭೇಸನ್ ಕ್ರಾಸ್‌ರೋಡ್‌ನಲ್ಲಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಎನ್‌ಎಸ್‌ಯುಐ ನಗರ ಘಟಕದ ಮುಖ್ಯಸ್ಥರಾಗಿರುವ ಸಂಜಯ್ ಸೋಲಂಕಿ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆರೋಪಿಗಳ ವಿರುದ್ಧ ಈಗಾಗಲೇ ಕೊಲೆಯತ್ನ, ಅಪಹರಣ, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಸೇರಿ ವಿವಿಧ ಸೆಕ್ಸನ್‌ಗಳಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಈ ಕುರಿತು ಜುನಾಗಢ ಎ ವಿಭಾಗದ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿ ಜೆ ಸವಾಝ್ ಪ್ರತಿಕ್ರಿಯಿಸಿದ್ದು, ಶುಕ್ರವಾರ ಮುಂಜಾನೆ ಈ ಘಟನೆ ನಡೆದಿದೆ. ಗಣೇಶ್ ಜಡೇಜಾ ಮತ್ತು ಆತನ ಸಹಚರರ ವಿರುದ್ಧ ನಾವು ಎಫ್‌ಐಆರ್ ದಾಖಲಿಸಿದ್ದೇವೆ. ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ. ಈ ಕುರಿತು ಹೆಚ್ಚಿನ ತನಿಖೆ ನಡೆಸಿ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಸಂತ್ರಸ್ತನ ತಂದೆ ರಾಜುಭಾಯಿ ಸೋಲಂಕಿ ಈ ಕುರಿತು ಹೇಳಿಕೆಯನ್ನು ನೀಡಿದ್ದು, ಗಣೇಶ್ ಜಡೇಜಾ ಮತ್ತು ಸಹಚರರು ಮೂರು ಕಾರುಗಳಲ್ಲಿ ಜುನಾಗಢ್ ದಾತಾರ್ ರಸ್ತೆ ಪ್ರದೇಶದಿಂದ ನನ್ನ ಮಗನನ್ನು ಅಪಹರಿಸಿ ಬೆತ್ತಲೆಗೊಳಿಸಿ ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಡಿವೈಎಸ್ಪಿ ಹಿತೇಶ್ ಧಾಂಧಲ್ಯಾ, ಗಣೇಶ್ ಜಡೇಜಾ ಸೇರಿದಂತೆ 10 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ‘ಧ್ಯಾನ’ಕ್ಕೆ ಹೊರಡುವ ಮೊದಲು ಕೊನೆಯ ಸಭೆಯಲ್ಲೂ ಸುಳ್ಳು ಹೇಳಿದ್ದ ಮೋದಿ: ಪ್ರಧಾನಿಯ 2024ರ ಚುನಾವಣಾ ಪ್ರಚಾರ ಹೇಗಿತ್ತು?


