ಟಿವಿ ಚರ್ಚೆಯೊಂದರಲ್ಲಿ ಬಿಜೆಪಿಯ ಸಂಬಿತ್ ಪಾತ್ರರನ್ನು ಟ್ರಿಲಿಯನ್‌ಗೆ ಎಷ್ಟು ಸೊನ್ನೆ ಎಂದು ಕೇಳಿ ಗಮನಸೆಳೆದಿದ್ದ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಗೌರವ್ ವಲ್ಲಭ್ ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಬರುವ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ಗೌರವ್ ವಲ್ಲಭ್ ಜಾರ್ಖಂಡ್ ಮುಖ್ಯಮಂತ್ರಿ ವಿರುದ್ಧ ಸ್ಪರ್ಧಿಸಲಿದ್ದಾರೆ.

ಜಾರ್ಖಂಡ್ ಐದು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೊದಲನೆಯದು ನವೆಂಬರ್ 30 ರಂದು ಮತ್ತು ಕೊನೆಯದು ಡಿಸೆಂಬರ್ 20 ರಂದು ನಡೆಯಲಿದೆ. ಡಿಸೆಂಬರ್ 23 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು.
ಇದನ್ನೂ ಓದಿ: ಟಿವಿ ಚರ್ಚೆಯಲ್ಲಿ ಬಿಜೆಪಿಯ ಸಂಬಿತ್ ಪಾತ್ರನಿಗೆ ಮುಖಭಂಗ ಮಾಡಿದ ಗೌರವ್ ವಲ್ಲಭ್ ಯಾರು ಗೊತ್ತೆ?
ಜಾರ್ಖಂಡ್ ಮುಖ್ಯಮಂತ್ರಿ ರಘುವರ್ ದಾಸ್ ಅವರನ್ನು ಜೆಮ್‌ಶೆಡ್‌ಪುರ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಎದುರಿಸಲು ಕಾಂಗ್ರೆಸ್ ತನ್ನ ರಾಷ್ಟ್ರೀಯ ವಕ್ತಾರ ಗೌರವ್ ವಲ್ಲಭ್ ಅವರನ್ನು ಶನಿವಾರ ಕಣಕ್ಕಿಳಿಸಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಲ್ಲಭ್ ಅವರ ಉಮೇದುವಾರಿಕೆಯನ್ನು ಅಂಗೀಕರಿಸಿದ್ದಾರೆ. ಇದರೊಂದಿಗೆ ಜಾರ್ಖಂಡ್ ಚುನಾವಣೆಗೆ ಕಾಂಗ್ರೆಸ್ ಈವರೆಗೆ ಘೋಷಿಸಿದ ಒಟ್ಟು ಅಭ್ಯರ್ಥಿಗಳ ಸಂಖ್ಯೆ 27 ಆಗಿದೆ.
ರಾಜಸ್ಥಾನದ ಪಾಲಿ ನಗರದ ನಿವಾಸಿಯಾದ 42 ವರ್ಷದ ಗೌರವ್ ವಲ್ಲಭ್, ಪಾಲಿಯಲ್ಲಿ ಶಾಲಾ ಶಿಕ್ಷಣದ ನಂತರ ಜೈಪುರದಿಂದ ಸಿಎ ಅಧ್ಯಯನ ಮಾಡಿದರು. ಗೌರವ್ ಅವರ ಪೋಷಕರು ಪಾಲಿಯ ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಗೌರವ್ 2000-2003ರವರೆಗೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕ್ ಮ್ಯಾನೇಜ್‌ಮೆಂಟ್ ಪೂನಾದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ಇದರೊಂದಿಗೆ ಅವರು ಮಹರ್ಷಿ ದಯಾನಂದ್ ಸರಸ್ವತಿ ವಿಶ್ವವಿದ್ಯಾಲಯದ ಅಜ್ಮೀರ್‌ನಿಂದ ಎಂ.ಕಾಂನಲ್ಲಿ ‘ಚಿನ್ನದ ಪದಕ’ವನ್ನು ಗಳಿಸಿದ್ದಾರೆ.
‘2017ರವರೆಗೆ ನಾನು ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡುತ್ತಿದೆ, ಆನಂತರ ಭಾರತಕ್ಕೆ ಮರಳಿದೆ. ನಮ್ಮ ದೇಶದಲ್ಲಿ ಮಾಬ್ ಲಿಂಚಿಂಗ್ (ಗುಂಪು ಹಲ್ಲೆ) ಹೆಸರಿನಲ್ಲಿ ಜನರನ್ನು ದ್ವೇಷಕ್ಕೆ ಸಜ್ಜುಗೊಳಿಸಲಾಗುತ್ತಿದೆ. ಇದರ ವಿರುದ್ಧ ಹೋರಾಡಲು ನಾನು ಕಾಂಗ್ರೆಸ್ ಪಕ್ಷದ ಸಿದ್ಧಾಂತದೊಂದಿಗೆ ಸಂಪರ್ಕ ಹೊಂದಿದ್ದೇನೆ. ಆದ್ದರಿಂದ 2018 ರವರೆಗೆ ಪ್ಯಾನೆಲಿಸ್ಟ್ ಆಗಿ ಕೆಲಸ ಮಾಡಿದೆ, ಈ ವರ್ಷದ ಜನವರಿಯಲ್ಲಿ ರಾಷ್ಟ್ರೀಯ ವಕ್ತಾರನಾಗಿದ್ದೇನೆ ಎನ್ನುತ್ತಾರೆ.
ಇದನ್ನೂ ಓದಿ: ಜಾರ್ಖಂಡ್ ವಿಧಾನಸಭೆ ಚುನಾವಣೆ ಘೋಷಣೆ: 81 ಕ್ಷೇತ್ರಗಳಿಗೆ 5 ಹಂತಗಳಲ್ಲಿ ಚುನಾವಣೆ..
“ಸಿಎಂ ರಘುವರ್ ದಾಸ್ ಜಿ ವಿರುದ್ಧ ಜಾರ್ಖಂಡ್‌ನ ಜೆಮ್‌ಶೆಡ್‌ಪುರ ಪೂರ್ವ ಅಸೆಂಬ್ಲಿ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷ ನನ್ನನ್ನು ಅಭ್ಯರ್ಥಿ ಎಂದು ಘೋಷಿಸಿದೆ. ಮುಖ್ಯಮಂತ್ರಿ ಎದುರು ಸ್ಪರ್ಧಿಸುವ ಸವಾಲಿಗೆ ನಾನು ಸಿದ್ಧ. ಇಷ್ಟು ದಿನ ಜಾರ್ಖಂಡ್ ಜನರನ್ನು ಮೋಸಗೊಳಿಸಲಾಗಿದೆ ಮತ್ತು ಈ ಚುನಾವಣಾ ಸ್ಪರ್ಧೆಯಲ್ಲಿ ನಾನು ವಿಜಯಶಾಲಿಯಾಗುತ್ತೇನೆ. ನನ್ನ ಮೇಲೆ ನಂಬಿಕೆಯನ್ನು ಇಟ್ಟ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತ ಮತ್ತು ಪದಾಧಿಕಾರಿಗಳಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ನಿಮ್ಮ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ” ಎಂದು ಗೌರವ್ ವಲ್ಲಭ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.
कांग्रेस पार्टी ने मुझे झारखंड के जमशेदपुर पूर्वी विधानसभा सीट से सीएम रघुवर दास जी के खिलाफ उम्मीदवार घोषित किया है। मैं पार्टी के एक-एक कार्यकर्ता व पदाधिकारियों का मुझ पर भरोसा जताने के लिए कोटि-कोटि आभार प्रकट करता हूं।भरोसा दिलाता हूँ की आपके विश्वास पर हमेशा खरा उतरूँगा।
— Prof. Gourav Vallabh (@GouravVallabh) November 16, 2019
ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್‌ರವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ಕಾಂಗ್ರೆಸ್ ಮತ್ತು ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾದಳ ಇತ್ತೀಚೆಗೆ ಚುನಾವಣಾ ಪೂರ್ವ ಒಪ್ಪಂದವನ್ನು ಘೋಷಿಸಿವೆ.
ಇದನ್ನೂ ಓದಿ: ಐದು ಟ್ರಿಲಿಯನ್ ಡಾಲರ್ ನಲ್ಲಿ ಎಷ್ಟು ಸೊನ್ನೆಯಿವೆ ಹೇಳಿ ನೋಡೋಣ??
ಜಾರ್ಖಂಡ್ ವಿಧಾನಸಭೆಯಲ್ಲಿ 81 ಸ್ಥಾನಗಳಲ್ಲಿ 31 ಸ್ಥಾನಗಳನ್ನು ಕಾಂಗ್ರೆಸ್ ಸ್ಪರ್ಧಿಸಲಿದೆ. ಆರ್‌ಜೆಡಿ ಏಳು ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಮೈತ್ರಿಕೂಟದ ಬಹುಪಾಲು ಪಾಲು ಜೆಎಂಎಂಗೆ ಹೋಗಿದ್ದು ಅದು 43 ಸ್ಥಾನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಬಿಜೆಪಿ ಏಕಾಂಗಿಯಾಗಿ ಕಣಕ್ಕಿಳಿದಿದೆ.


