ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಸರಣಿ ಹತ್ಯೆ ಆರೋಪ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವರ್ಗಾಯಿಸಿ ರಾಜ್ಯ ಸರ್ಕಾರ ಶನಿವಾರ (ಜು.19) ಆದೇಶಿಸಿದೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕ್ರಿಮಿನ್ ಮೊಕದ್ದಮೆ ಸಂಖ್ಯೆ 39/2025 ಕಲಂ 211(ಎ) ಬಿಎನ್‌ಎಸ್, ಈ ಪ್ರಕರಣದ ಸಮಗ್ರ ತನಿಖೆಯನ್ನು ಕೈಗೊಳ್ಳಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ ಎಂದು ಸರ್ಕಾರದ ಆದೇಶ ತಿಳಿಸಿದೆ.
ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾ ನಿರ್ದೇಶಕ ಪ್ರಣವ ಮೊಹಂತಿ ಅವರ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿದ್ದು, ನೇಮಕಾತಿ ವಿಭಾಗದ ಉಪ ಪೊಲೀಸ್ ಮಹಾ ನಿರ್ದೇಶಕ ಎಂ.ಎನ್ ಅನುಚೇತ್, ಸಿಎಆರ್ ಕೇಂದ್ರದ ಉಪ ಪೊಲೀಸ್ ಆಯುಕ್ತೆ ಸೌಮ್ಯಲತಾ ಮತ್ತು ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ತಂಡದ ಸದಸ್ಯರಾಗಿದ್ದಾರೆ.
ಮೇಲೆ ಉಲ್ಲೇಖಿಸಿದ ಪ್ರಕರಣ ಮಾತ್ರವಲ್ಲದೆ, ಅದಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಎಸ್‌ಐಟಿಗೆ ವರ್ಗಾಯಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ಧರ್ಮಸ್ಥಳ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸುವಂತೆ ಕೋರಿ ರಾಜ್ಯ ಮಹಿಳಾ ಆಯೋಗ ಸರ್ಕಾರಕ್ಕೆ ಪತ್ರ ಬರೆದಿತ್ತು. ಅದನ್ನು ಪರಿಗಣಿಸಿ ಸರ್ಕಾರ ಕ್ರಮ ಕೈಗೊಂಡಿದೆ.
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಕೊಲೆಗಳು ನಡೆದಿವೆ. ಅವುಗಳಿಗೆ ಸಂಬಂಧಿಸಿದ ಹೆಣಗಳನ್ನು ಮೇಲಾಧಿಕಾರಿಗಳ ಆದೇಶದಂತೆ ನಾನು ಬೇರೆ ಬೇರೆ ಭಾಗಗಳಲ್ಲಿ ಹೂತು ಹಾಕಿದ್ದೇನೆ ಎಂದು, ಧರ್ಮಸ್ಥಳದಲ್ಲಿ ಸ್ವಚ್ಚತಾ ಕಾರ್ಮಿಕರಾಗಿದ್ದರು ಎನ್ನಲಾದ ವ್ಯಕ್ತಿ ಇತ್ತೀಚಿಗೆ ದೂರು ನೀಡಿದ್ದಾರೆ. ಅಲ್ಲದೆ, ತಲೆಬುರುಡೆಯೊಂದನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಒಪ್ಪಿಸಿ ಹೇಳಿಕೆಯನ್ನೂ ನೀಡಿದ್ದಾರೆ.
ಪೊಲೀಸರು ಹೊರ ತೆಗೆಯುವುದಾದರೆ ತಾನು ಹೆಣಗಳನ್ನು ಹೂತು ಹಾಕಿರುವ ಜಾಗಗಳನ್ನು ತೋರಿಸಲು ಸಿದ್ದ ಎಂದು ಆ ವ್ಯಕ್ತಿ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಹಾಗಾಗಿ, ಈ ಪ್ರಕರಣಗಳ ಬಗ್ಗೆ ತನಿಖೆಗೆ ಎಸ್‌ಐಟಿ ರಚಿಸುವಂತೆ ಭಾರೀ ಆಗ್ರಹಗಳು ವ್ಯಕ್ತವಾಗಿತ್ತು.
ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ


